ಸುವರ್ಣ ಸಿರಿ

ಸುವರ್ಣ ಸಿರಿ
Updated on: 

ಮಳೆ ಕೊರತೆ, ನೀರಿನ ಅಭಾವದಿಂದ ಬೆಳೆ ಬೆಳೆಯಲು ತೊಡಕುಂಟಾಗುತ್ತಿರುವ ಇಂದಿನ ದಿನಗಳಲ್ಲಿ ಸಿಗುವಷ್ಟು ನೀರು ಬಳಸಿ ಬೆಳೆ ಬೆಳೆಯುವುದು ಹಾಗೂ ಬೆಳೆ ಉಳಿಸಿಕೊಳ್ಳುವುದು ಕಷ್ಟ. ಇಂಥ ಸ್ಥಿತಿಯಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ವಿಭಾಗವು ಬೆಳೆಗಾರರಿಗಾಗಿ ಹೊಸ ಪದ್ಧತಿ ಕಂಡುಹಿಡಿದಿದೆ.
ಅದುವೇ ಸಿರಿ ಸುವರ್ಣ ಪದ್ಧತಿ. ರೇಷ್ಮೆ ಬೆಳೆಗಾರರಿಗೆ ಅನ್ವಯಿಸುವ ಈ ಪದ್ಧತಿಯಿಂದ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಬಹುದು.

ಪೋಷಕಾಂಶಗಳ ಭಂಡಾರ
ಈ ತಂತ್ರವನ್ನು ಹಿಪ್ಪುನೇರಳೆ ತೋಟಗಳಿಗೆ ರೂಪಾಂತರಿಸಲು ಮೊದಲು ಒಂದು ಸಾಲು ಗುಂಡಿ (1/2ಅಡಿ) ತೆಗೆದು ಸಾವಯವ, ಹಸಿರೆಲೆ ಇತ್ಯಾದಿ ಜೈವಿಕ ಗೊಬ್ಬರವನ್ನು ಪದರವಾಗಿ ತುಂಬುವುದು. ಹಾಗೆ ಮಾಡಿದಲ್ಲಿ ಅದು ಗಿಡಗಳಿಗೆ ಪೋಷಕಾಂಶಗಳ ಭಂಡಾರವಾಗಲಿದೆ. ಪಕ್ಕದಲ್ಲಿ ಮತ್ತೊಂದು ಸಾಲು ಗುಂಡಿ ತೆಗೆದರೆ ತೇವಾಂಶ ಹೆಚ್ಚಿರುತ್ತದೆ. ಗುಂಡಿಯನ್ನು ವ್ಯವಸ್ಥಿತವಾಗಿ ತೆಗೆಯಬೇಕು.

ಪದ್ಧತಿ ಹೇಗೆ?
ಪ್ರತಿವರ್ಷ ಬೀಳುವ ಮಳೆ ನೀರು ಹರಿದುಹೋಗದಂತೆ ಅದೇ ಜಮೀನಿನಲ್ಲಿ ಶೇಖರಿಸುವುದು/ ಇಂಗಿಸುವುದು. ಅದಕ್ಕಾಗಿ ಆ ಜಮೀನಿನಲ್ಲಿ ಸಾಲಾಗಿ ಇಂಗುಗುಂಡಿ ತೆಗೆಯುವುದು. ಇಂಗಿಸಿದ ನೀರಿನ ತೇವಾಂಶ ಹೆಚ್ಚು ದಿನ ಇರುವಂತೆ ಎಚ್ಚರ ವಹಿಸುವುದು. ಆ ನೀರು ಇಂಗಿದ ಸಾಲಿನಲ್ಲಿ ಜೈವಿಕ/ ಹಸಿರೆಲೆ ಹೊದಿಸಿ ತೇವಾಂಶ ಆವಿಯಾಗದಂತೆ ಕಾಪಾಡುವುದು. ಇದರಿಂದ ಬೆಳೆಯ ಇಳುವರಿ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ.

ಶೋಧ
ರೇಷ್ಮೆ ವಿಭಾಗದ ವಿಜ್ಞಾನಿ, ಪ್ರಾಧ್ಯಾಪಕ ಡಾ. ಕೆ.ಪಿ. ಚಿನ್ನಸ್ವಾಮಿ, ಮಣ್ಣು ತಜ್ಞರಾದ ಡಾ. ಶ್ರೀನಿವಾಸಮೂರ್ತಿ, ವಿಸ್ತೀರ್ಣ ವಿಭಾಗದ ಮಾರ್ಗದರ್ಶಕ ಡಾ. ಕೆ.ಸಿ. ಲಲಿತಾ ಅವರ ನೇತೃತ್ವದಲ್ಲಿ ಇಂಥದ್ದೊಂದು ವಿನೂತನ ಪದ್ಧತಿ ಶೋಧಿಸಿದ್ದಾರೆ. ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸಿಕೊಟ್ಟು, ಅವರಿಂದ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಕೃಷಿ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ 160 ವಿದ್ಯಾರ್ಥಿಗಳ 10 ಮಂದಿಯ ತಂಡ ಹಳ್ಳಿಗಳಿಗೆ ಹೋಗಿ ಈ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಎಲ್ಲೆಲ್ಲಿ ಅಳವಡಿಕೆ?
ಹೊಸಕೋಟೆ ತಾಲೂಕು, ಅನುಗೊಂಡನಹಳ್ಳಿಯ ಮುತ್ಕೂರ್ ಗ್ರಾಮ, ಕೋಲಾರ, ಬಂಗಾರಪೇಟೆ, ಟೇಕಲ್ ಹಾಗೂ ಇತರೆಡೆ ರೈತರಿಗೆ ಅರಿವು ಮೂಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಚಿನ್ನಸ್ವಾಮಿ ಮೊ. 9448085722.

ಕಡಿಮೆ ಖರ್ಚು
ಇದು ನೂತನ ತಂತ್ರಜ್ಞಾನ. ಸುಲಭ ಹಾಗೂ ಕಡಿಮೆ ಖರ್ಚು. ಹೆಚ್ಚು ಇಳುವರಿ ಸಿಗುತ್ತದೆ. ಬೇಸಿಗೆಯಲ್ಲಿ ಹೆಚ್ಚು ನೀರು ಬೇಕಾಗುವುದಿಲ್ಲ.
- ಡಾ. ಕೆ.ಪಿ. ಚಿನ್ನಸ್ವಾಮಿ, ವಿಜ್ಞಾನಿ

ವಿದ್ಯಾರ್ಥಿಗಳಿಂದ ಅರಿವು
ನಮ್ಮ ಜಮೀನಿನಲ್ಲಿ ಸಿರಿ ಸುವರ್ಣ ಪದ್ಧತಿ ಅಳವಡಿಸಲಾಗಿದೆ. ಕೃಷಿ ವಿವಿಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಬಂದು ನಮಗೆ ಈ ಬಗ್ಗೆ ಅರಿವು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪದ್ಧತಿ ಅಳವಡಿಸಲಾಗುವುದು.
- ನಾಗರಾಜು, ರೈತ

- ಶಾಂತ ತಮ್ಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com