ಮೇವು ಭದ್ರತೆ

ಜಾನುವಾರುಗಳು ಕೃಷಿ, ಕೃಷಿಕರ ಜೀವನಾಡಿಯಿದ್ದಂತೆ. ನಮಗೆ ಎಷ್ಟು ಆಹಾರದ ಅಗತ್ಯ ಇರುತ್ತೋ,...
ಮೇವು ಭದ್ರತೆ
Updated on: 

ಜಾನುವಾರುಗಳು ಕೃಷಿ, ಕೃಷಿಕರ ಜೀವನಾಡಿಯಿದ್ದಂತೆ. ನಮಗೆ ಎಷ್ಟು ಆಹಾರದ ಅಗತ್ಯ ಇರುತ್ತೋ, ಅವುಗಳಿಗೂ ಅಷ್ಟೇ ಅಗತ್ಯ. ಮೇವಿನ ಬಗ್ಗೆ ಹಿಂದೆಂದಿಗಿಂತ ಹೆಚ್ಚು ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಆಪತ್ತು ತಪ್ಪಿದ್ದಲ್ಲ.
ಬಹಳಷ್ಟು ರೈತರು ಮಳೆಗಾಲದಲ್ಲಿ ಬೆಳೆದ ಮೇವನು ಬೇಸಿಗೆಗಾಗಿ ಸಂಸ್ಕರಣೆ ಮಾಡಿ ಸಂರಕ್ಷಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾರಣ, ರೈತರಿಗೆ ವೈಜ್ಞಾನಿಕವಾಗಿ ಮೇವು ಸಂರಕ್ಷಣೆ ಗೊತ್ತಿಲ್ಲದಿರುವುದು. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.

ರಸಮೇವು ತಯಾರಿಕೆ
ದಪ್ಪ ದಂಟಿನ ಜೋಳ ಮತ್ತು ಗೋವಿನ ಜೋಳದಿಂದ ರಸಮೇವು ತಯಾರಿಸಬಹುದು. ರಸಮೇವಿನಲ್ಲಿ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಬಹುದಿನದವರೆಗೆ ಮೇವು ಕೆಡದಂತೆ ಸುರಕ್ಷಿತವಾಗಿಡುತ್ತದೆ. ರೈತರು ಅವಶ್ಯಕತೆಗೆ ಅನುಸಾರವಾಗಿ ಮಳೆನೀರು ಒಳಗೆ ನುಗ್ಗದ ಜಾಗದಲ್ಲಿ ಗುಂಡಿ ತೋಡಿ ರಸಮೇವು ತಯಾರಿಸಬಹುದು. ಗುಂಡಿ ದುಂಡಗೆ ಅಥವಾ ಚೌಕಾಕಾರವಾಗಿರಬೇಕು. ಗುಂಡಿಯ ಅಳತೆಯನು ಮೇವಿನ ಪ್ರಮಾಣ ಮತ್ತು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ನಿರ್ಧರಿಸಬೇಕು. ಸಾಮಾನ್ಯವಾಗಿ 4-10 ಅಡಿ ಆಳ ಇರಬೇಕು ಮತ್ತು ಒಂದು ಘನ ಅಡಿ ಜಾಗದಲ್ಲಿ ಅಂದಾಜು 20 ಕಿ.ಗ್ರಾಂ. ಕತ್ತರಿಸಿದ ಮೇವನು ಶೇಖರಿಸಬಹುದು. ಗುಂಡಿಯ ಒಳಭಾಗವನು ಸಿಮೆಂಟಿನಿಂದ ಪ್ಲಾಸ್ಟರ್ ಮಾಡಬೇಕು. ಇಲ್ಲವಾದರೆ ದಪ್ಪ ಪ್ಲಾಸ್ಟಿಕ್ ಹಾಳೆ ಬಳಸಬಹುದು.

ತಯಾರಿಕೆ ಹಂತ
ಮೇವಿನಲ್ಲಿ ಶೇ.70ರಷ್ಟು ತೇವಾಂಶವಿರುವಾಗ ಹಾಗೂ ಗೋವಿನ ಜೋಳದಲ್ಲಿ ತೆನೆಯಲ್ಲಿ ಹಾಲ್ಗಾಳುಗಳಾದಾಗ ಮೇವನು ಕಟಾವು ಮಾಡಬೇಕು. ಈ ಮೇವನು ಒಂದರಿಂದ ಒಂದೂವರೆ ಅಂಗುಲ ಉದ್ದವಿರುವಂತೆ ಯಂತ್ರದ ಸಹಾಯದಿಂದ ಕತ್ತರಿಸಬೇಕು. ಮೇವನು ನೇರವಾಗಿ ಗುಂಡಿಯಲ್ಲಿ ಬೀಳುವಂತೆ ಕತ್ತರಿಸುವುದು ಉತ್ತಮ. ನಂತರ ಕತ್ತರಿಸಿದ ಮೇವನು ಸಮನಾಗಿ ಹರಡುವುದು, ಇದಕ್ಕೆ ಮೊದಲು ಗುಂಡಿಯಲ್ಲಿ ತೆಳುವಾಗಿ ಉಪ್ಪನು ಸಿಂಪಡಿಸಬೇಕು. ಕತ್ತರಿಸಿದ ಮೇವಿನ ಮೇಲೆ ಶೇ.1ರ ಪ್ರಮಾಣದಲ್ಲಿ ಮೇವು ಕತ್ತರಿಸುತ್ತಿದ್ದಂತೆ ಪ್ರತಿ ಪದರ ಮೇಲೂ ಸಿಂಪಡಿಸಬೇಕು. ಕತ್ತರಿಸಿ ತುಂಬಿದ ಮೇವನು ಚೆನಾಗಿ ತುಳಿದು ಮೇವಿನ ಮಧ್ಯ ಗಾಳಿ ಉಳಿಯದಂತೆ ನೋಡಿಕೊಳ್ಳಬೇಕು. ಗುಂಡಿಯಲ್ಲಿ ಸುಮಾರು 3 ಅಡಿ ಎತ್ತರದವರೆಗೂ ಮೇವನು ತುಂಬಿ ನಂತರ ಮೇಲ್ಭಾಗವನು ಒಣ ಮೇವಿನಿಂದಾಗಲಿ ಅಥವಾ ಕತ್ತರಿಸದ ಉದ್ದ ಮೇವಿನಿಂದ ಮುಚ್ಚಬೇಕು. ನಂತರ ಪ್ಲಾಸ್ಟಿಕ್ ಹಾಳೆಯಿಂದ ಸಂಪೂರ್ಣವಾಗಿ ಮುಚ್ಚಿ ಮೇಲೆ ಭಾರಕ್ಕಾಗಿ ದಿಂಡು ಕಲ್ಲು ಹೇರಬೇಕು. ಮುಚ್ಚಿದ ಗುಂಡಿಯಲ್ಲಿ ಒಂದೆರಡು ವಾರದಲ್ಲಿ ಮೇವು ಕುಸಿದು ಅಲ್ಲಲ್ಲಿ ಬಿರುಕು ಬರುತ್ತವೆ. ಈ ರೀತಿಯ ಬಿರುಕನು ಮಣ್ಣಿನಿಂದ ಮುಚ್ಚಬೇಕು. ಹೀಗೆ ಮುಚ್ಚಿದ ಮೇವಿನಲ್ಲಿ ಸೂಕ್ಷ್ಮಾಣು ಜೀವಿಗಳು ಮೇವಿನಲ್ಲಿರುವ ಪಿಷ್ಟ ಪದಾರ್ಥ ಉಪಯೋಗಿಸಿ ಲ್ಯಾಕ್ಟಿಕ್ ಆಮ್ಲ ಉತ್ಪಾದಿಸುತ್ತವೆ. ಲ್ಯಾಕ್ಟಿಕ್ ಆಮ್ಲವು ಮೇವನು ಕೆಡದಂತೆ ಕಾಪಾಡುವುದು. ಸರಿಯಾಗಿ ಗಾಳಿ ಹೊರತೆಗೆಯದಿದ್ದರೆ ಅಥವಾ ಗಾಳಿ ಆಡಲು ಬಿಟ್ಟರೆ ಮೇವು ಕೆಡುವುದು ಮತ್ತು ಅದರ ಗುಣಮಟ್ಟ ಕಳಪೆಯಾಗುವುದು.

ಒಣ ಮೇವು ತಯಾರಿಕೆ
ತೆಳು ಕಾಂಡ ಮತ್ತು ಹೆಚ್ಚು ಎಲೆ, ಗರಿಗಳಿಂದ ಕೂಡಿರುವ ರೋಡ್ಸ್ ಹುಲ್ಲು, ಅಂಜನ್ ಹುಲ್ಲನು ಒಣಗಿಸಿ ಇಟ್ಟುಕೊಳ್ಳಬೇಕು. ಏಕದಳ ಬೆಳೆಗಳನು ತೆನೆ ಬಿಡುತ್ತಿದ್ದಂತೆ ಮತ್ತು ದ್ವಿದಳ ಬೆಳೆಗಳು ಹೂವು ಕಾಣಿಸಿಕೊಂಡಾಗ ಕತ್ತರಿಸಿ ಬಯಲಿನಲ್ಲಿ ಶೇ.12ರಷ್ಟು ತೇವಾಂಶ ಬರೋವರೆಗೆ ಒಣಗಿಸಬೇಕು. ರೈತರು ಒಂದು ಹಿಡಿಯಷ್ಟು ಮೇವನು ತೆಗೆದುಕೊಂಡು ಸುರುಳಿ ಮಾಡಿ ಹಿಂಡಿ ತೇವಾಂಶ ಪರಿಶೀಲಿಸಬಹುದು. ಈ ರೀತಿ ಒಣಗಿಸಿದ ಹುಲ್ಲನು ನೀರು, ಮಳೆ ಬಿದ್ದು ನೆನೆಯದಂತೆ ಶೇಖರಿಸಿಟ್ಟುಕೊಳ್ಳಬೇಕು. ಹಸಿರು ಮೇವನು ಈ ರೀತಿ ಒಣಗಿಸಿಡುವುದರಿಂದ ಅದರ ಪೌಷ್ಟಿಕಾಂಶ ಉಳಿಸಿಕೊಂಡು ಬೇಸಿಗೆಯಲ್ಲಿ ದನಕರುಗಳಿಗೆ ತಿನಿಸಬಹುದು.

ಒಣಮೇವಿನ ಸಂಸ್ಕರಣೆ ಬಗೆ
ಕಾಳನು ಅಥವಾ ತೆನೆ ತೆಗೆದ ನಂತರ ಕಡಿಮೆ ಪೌಷ್ಟಿಕತೆಯ ಜೋಳ, ಗೋವಿನಜೋಳ, ಭತ್ತದ ಹುಲ್ಲು ಮತ್ತು ರಾಗಿ ಹುಲ್ಲಿನಿಂದ ತಯಾರಿಸುತ್ತಾರೆ. ಇದರಲ್ಲಿ ನಾರಿನ ಅಂಶ ಜಾಸ್ತಿ ಮತ್ತು ಪೌಷ್ಟಿಕಾಂಶ ಕಡಿಮೆ ಇದ್ದು, ಜಾನುವಾರುಗಳಲ್ಲಿ ಹೆಚ್ಚಿನ ಪ್ರಮಾಣವು ಜೀರ್ಣವಾಗದೆ ಹಾಗೆ ಉಳಿಯುವುದು. ಆದ್ದರಿಂದ ಇವುಗಳನು ಹೆಚ್ಚು ಉಪಯುಕ್ತವನಾಗಿ ಮಾಡಲು ಸಂಸ್ಕರಣೆ ಮಾಡಿ ಬಳಸುವುದು ಸೂಕ್ತ.
ಇವುಗಳಲ್ಲಿ ಯೂರಿಯಾ ಸಿಂಪಡಿಸುವುದು ಹೆಚ್ಚು ಫಲಕಾರಿಯಾಗಿ ಕಂಡುಬರುತ್ತದೆ. ಒಣಗಿದ ಹುಲ್ಲನು ಗಟ್ಟಿಯಾದ ನೆಲದ ಮೇಲೆ ಅಥವಾ ಸಿಮೆಂಟ್ ಕಾಂಕ್ರಿಟ್ ನೆಲದ ಮೇಲೆ ತೆಳ್ಳಗೆ ಹರಡಿ ನಂತರ ಶೇ.4ರ ಪ್ರಮಾಣದಲ್ಲಿ ಯೂರಿಯಾ ದ್ರಾವಣವನು ಮೇವಿನ ಮೇಲೆ ಸಿಂಪಡಿಸಬೇಕು. ಇಂಥ ಹುಲ್ಲನು ಸಣ್ಣ- ಸಣ್ಣ ಗುಂಡಿಗಳಲ್ಲಿ ಹಾಕಿ ಅದುಮಿ ಮೇಲೆ ಪ್ಲಾಸ್ಟಿಕ್ ಹಾಳೆ ಮುಚ್ಚಿ 15 ದಿನಗಳವರೆಗೆ ಬಿಡಬೇಕು. ಯೂರಿಯಾ ಅಮೋನಿಯಾ ಆಗಿ ಪರಿವರ್ತನೆಗೊಂಡು ಮೇವಿನ ಪೌಷ್ಟಿಕಾಂಶಗಳನು ಲಿಗಿನ್ ಹೊದಿಕೆಯಿಂದ ಬಿಡುಗಡೆ ಮಾಡಿ ಮೇವಿನ ಗುಣಮಟ್ಟ ಉತ್ತಮಪಡಿಸುತ್ತವೆ. ಪ್ರತಿದಿನಕ್ಕೆ ಬೇಕಾದ ಹುಲ್ಲನು ಬೇರೆ ಬೇರೆ ಪ್ಲಾಸ್ಟಿಕ್ ಅಥವಾ ಗೋಣಿ ಚೀಲದಲ್ಲಿ ಹಾಕಿ ಶೇಖರಿಸಿಟ್ಟು ಬಳಸಬಹುದು. ಇಂಥ ಸಂಸ್ಕರಿಸಿದ ಹುಲ್ಲನು ಕೊಡುವುದರಿಂದ ದನಗಳು ಹೆಚ್ಚು ಒಣಮೇವನು ತಿನುತ್ತವೆ ಮತ್ತು ನಾರಿನಂಶ ಹೆಚ್ಚು ಜೀರ್ಣ ಶಕ್ತಿ ಸುಧಾರಿಸುವುದು.

- ಡಾ. ರಾಜು ಬ. ಮೇತ್ರಿ(ಮೊ. 9844528892)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com