

ಸಾಫ್ಟ್‌ವೇರ್ ಉದ್ಯೋಗಿ ಚಂದ್ರಶೇಖರ ಗಟ್ಟಿ (38) ವೃತ್ತಿಗೆ ವಿದಾಯ ಹೇಳಿ ಐದು ವರುಷವಾಯಿತು. ಐಟಿಯಾಗಿರುತ್ತಾ ಕೃಷಿಯನ್ನು ಒಪ್ಪಿ ಅಪ್ಪಿಕೊಂಡರು. ಮಣ್ಣಿನ ಒಲವು ಬಾಲ್ಯದ ನಂಟು. ಬದುಕಿನಲ್ಲಿ ಹೊಸತನ್ನು ಸಾಧಿಸಬೇಕೆನ್ನುವ ಯೋಜನೆ, ಯೋಚನೆ. ಪಿತ್ರಾರ್ಜಿತವಾಗಿ ಬಂದ ಕೃಷಿ ಭೂಮಿಯಲ್ಲಿ ಎರಡಕ್ರೆ ತೆಂಗಿನ ತೋಟ ಹೊಂದುವ ಕನಸು.
ಮಂಗಳೂರು ತಾಲೂಕಿನ ಕೊಂಡಾಣದಲ್ಲಿದೆ ಗಟ್ಟಿಯವರ ಕೃಷಿ ಕ್ಷೇತ್ರ. ತಂದೆ ನಾರಾಯಣ ಗಟ್ಟಿ, ಅಜ್ಜ ಸುಂದರ ಗಟ್ಟಿಯವರ ಮಾರ್ಗದರ್ಶನ. ಸ್ವತಃ ಕೃಷಿಕನಾಗುವ ಛಲ. ಹಿರಿಯರೊಂದಿಗಿದ್ದು ಮೈಗೂಡಿಸಿಕೊಂಡಿದ್ದ ಮಣ್ಣಿನ ಸಂಬಂಧ. ಸಂಪಾದನೆಯೆಲ್ಲಾ ತೆಂಗಿನ ತೋಟಕ್ಕೆ ವಿನಿಯೋಗ.
ಕರ್ನಾಟಕ, ಕೇರಳದ ಬಹುತೇಕ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ತೆಂಗು ಕೃಷಿಕರನ್ನು ಚಂದ್ರಶೇಖರ್ ಸಂಪರ್ಕಿಸಿ ತಳಿಗಳ ಅಧ್ಯಯನ. ಕೃಷಿ ಕ್ರಮ, ಇಳುವರಿ, ಮಾರುಕಟ್ಟೆಯತ್ತ ಸಮಾಲೋಚನೆ. ಎರಡೆಕ್ರೆಯಲ್ಲಿ ಇನ್ನೂರು ಸಸಿಗಳ ನಾಟಿ. ಪ್ರೀತಿಯ ಆರೈಕೆ. ಈಗವು ಹದಿನೇಳು ವರುಷದ ಜವ್ವನಿಗ. ದಶಕದಿಂದ ಇಳುವರಿ.
ಮಲಯನ್‌ಯಲ್ಲೋ ಕುಬ್ಜ ತಳಿ, ಮಲಯನ್ ಆರೆಂಜ್ ಕುಬ್ಜ, ಚವಕ್ಕಾಡ್ ಕುಬ್ಬ ತಳಿಗಳ ನೂರು ಮರಗಳು. ಸ್ಥಳೀಯ ಮತ್ತು ಹೈಬ್ರಿಡ್ ತಳಿಗಳದ್ದು ನೂರು, ಅಲ್ಲದೆ ತೋಟದ ಮಧ್ಯ, ಸರಹದ್ದಿನಲ್ಲಿ ಸ್ಥಳೀಯ ಸುಮಾರು ನೂರೈವತ್ತು ಮರಗಳು. ಹೀಗೆ ಮುನ್ನೂರೈವತ್ತಕ್ಕೂ ಮಿಕ್ಕಿದ ತೆಂಗಿನ ಕಲ್ಪವೃಕ್ಷ ಲೋಕ.
ಎಳೆಯ ತೆಂಗಿಗೆ (ಎಳನೀರು, ಬೊಂಡ) ಉತ್ತಮ ಮಾರುಕಟ್ಟೆ. ಮಂಗಳೂರಿನ ವಿಶ್ವಾಸಿಗ ವ್ಯಾಪಾರಿಯೊಬ್ಬರಿಗೆ ಮಾರಾಟ. ತಿಂಗಳಿಗೊಮ್ಮೆ ಸಹಾಯಕರೊಂದಿಗೆ ಬಂದು ಕೊಯ್ದು ಲಾರಿಯೇರಿಸಿ ಒಯ್ಯುತ್ತಾರೆ. ನನಗೆ ಕಾಯಿ ಲೆಕ್ಕ ಮಾಡಿ ಹಣ ಪಡೆದರೆ ಆಯಿತು. ಮೊದಲು ನಾನೇ ಮಾರುಕಟ್ಟೆಗೆ ಒಯ್ಯುತ್ತಿದ್ದೆ. ನಮ್ಮದೇ ಲೇಬರ್. ಕೊನೆಕೊನೆಗೆ ಕಾರ್ಮಿಕ ಸಮಸ್ಯೆ ಬಿಗಡಾಯಿಸಿತು. ಹಾಗಾಗಿ ಕೊಯ್ಯುವ ಜವಾಬ್ದಾರಿಯನ್ನು ಅವರಿಗೆ ನೀಡಿದ್ದೇನೆ. ಚಿಕ್ಕ ಮರವಾದ್ದರಿಂದ ಏಣಿಯಲ್ಲಿ ಏರಿ ಕಾಯಿ ಕೊಯ್ಯವುದರಿಂದ ಮರಕ್ಕೆ ಡ್ಯಾಮೇಜ್ ಆಗುವುದಿಲ್ಲ, ಎನ್ನುತ್ತಾರೆ.
ಕುಬ್ಜ ತಳಿಯ (ಗೆಂದಾಳಿ) ಬೊಂಡವನ್ನು ಸ್ಥಳದಲ್ಲೇ ಖರೀದಿಸಿದರೆ ಹದಿನಾರು ರುಪಾಯಿ ದರ. ವಾಹನದಲ್ಲಿ ಕೊಂಡು ಹೋಗಿ ನೀಡಿದರೆ ಇಪ್ಪತ್ತು. ನಾಗರಪಂಚಮಿ ಹಬ್ಬದ ಸಮಯದಲ್ಲಿ ಏರು ದರ. ವಾರಕ್ಕೆ ಒಂದೆರಡು ಸಲ ಕೊಯಿಲು ಮಾಡಿದ್ದೂ ಉಂಟು. ಸ್ಥಳೀಯ ಬೊಂಡಕ್ಕೆ ಸರಾಸರಿ ಹತ್ತು ರುಪಾಯಿ. ನಾಗಮಂಡಲದ ಸೀಸನ್ನಿನಲ್ಲಿ ಕಾಯಿ ಬೆಳೆಯಲು ಪುರುಸೊತ್ತಿಲ್ಲ. ಬಂದು ಬಿಡುತ್ತಾರೆ. ಮಂಟಪದ ಅಲಂಕಾರಕ್ಕಾಗಿ ಎಳೆಯ ಕಾಯನ್ನು ಬಯಸುತ್ತಾರೆ. ಹೇಳಿದಷ್ಟು ರೇಟ್, ಎನ್ನುವಾಗ ಚಂದ್ರಶೇಖರ್ ಖುಷ್.
ಬಿದ್ದ ಒಣ ತೆಂಗಿನ ಗರಿಗಳನ್ನು ತುಂಡರಿಸಿ ಮರದ ಬುಡಕ್ಕೆ ಪೇರಿಸುತ್ತಾರೆ. ತೋಟದ ಸುತ್ತ ಬೇಲಿ (ಚೈನ್ ಲಿಂಕ್ಡ್) ಅಳವಡಿಕೆಯಿಂದಾಗಿ ಹಂದಿಗಳ ಕಾಟ ಕಡಿಮೆ. ಹಾಗಾಗಿ ಮರದ ಬುಡಗಳಲ್ಲಿ ಎರೆ ಸಂಸಾರ ಹೇರಳವಾಗಿದೆ. ಮುಳ್ಳು ಹಂದಿಗಳು ಕೆಲವೊಮ್ಮೆ ನುಸುಳಿ ಬರುವುದುಂಟು. ಪ್ರತಿ ಮರಕ್ಕೆ ವರುಷಕ್ಕೊಮ್ಮೆ ಎರಡು ಕಿಲೋ ಸುಣ್ಣ ಉಣಿಕೆ. ಪೊಟ್ಯಾಷ್ ಕೊರತೆಯಾದರೆ ಮರ ತೆಳ್ಳಗಾಗುತ್ತದೆ. ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತದೆ. ಮರದಲ್ಲಿ ಗರಿಗಳು ಬಾಗಿರುತ್ತದೆ, ಅನುಭವದ ಮಾತು.
ಮರದಿಂದ ಮರಕ್ಕೆ 15 ಅಡಿ ಅಂತರದಲ್ಲಿ ನಾಟಿ. ಸ್ಪ್ರಿಂಕ್ಲರ್ ಮೂಲಕ ನೀರಾವರಿ. ಏಪ್ರಿಲ್ ಬಳಿಕ ಬಾವಿಯಲ್ಲಿ ನೀರು ಅಷ್ಟಕ್ಕಷ್ಟೆ. ಲಭ್ಯ ನೀರುಣಿಸಿ ಬೇಸಿಗೆಯಲ್ಲಿ ಅಡಕೆಯ ಉಸಿರು ನಿಲ್ಲದಂತೆ ಎಚ್ಚರ. ಆ ಸಮಯದಲ್ಲಿ ತೆಂಗಿಗೆ ಉಪವಾಸ. ಒಂದು ಮರದಿಂದ ವರುಷಕ್ಕೆ ಸರಾಸರಿ 125-150 ಕಾಯಿ ಖಚಿತ ಕೊಯ್ಯಬಹುದು. ತೆಂಗಿನ ಸಸಿಯ ನರ್ಸರಿ ಅಭಿವೃದ್ಧಿ ಮಾಡುತ್ತಿದ್ದಾರೆ. ಬೇರೆ ಬೇರೆ ವಯಸ್ಸಿನ ಗಿಡಗಳು ಲಭ್ಯ. ದೂರದ ಕುಂದಾಪುರದವರೆಗೂ ಸಸಿ ಖರೀದಿಸುವ ಗ್ರಾಹಕರಿದ್ದಾರೆ.
2010ರಲ್ಲಿ ಭಾರತ ಕೃಷಿ ಮಂತ್ರಾಲಯದ ತೆಂಗು ಅಭಿವೃದ್ಧಿ ಮಂಡಳಿಯು ಚಂದ್ರಶೇಖರ ಗಟ್ಟಿ ಅವರಿಗೆ ರಾಷ್ಟ್ರೀಯ ವಿಶೇಷ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಪ್ರಶಸ್ತಿ ಆಯ್ಕೆಗಾಗಿ ಇಲಾಖೆಯ ವರಿಷ್ಠರು ಬಂದಾಗ ಮಲಯನ್‌ಯಲ್ಲೋ ಕುಬ್ಜ ತಳಿಯ ಮರವೊಂದರಲ್ಲಿ 350 ಕಾಯಿಗಳಿದ್ದವೆಂದು ನೆನಪಿಸುತ್ತಾರೆ.
ಎರಡೆಕ್ರೆ ಅಡಕೆ, ಜಾಯಿಕಾಯಿ, ಹಣ್ಣಿನ ಗಿಡಗಳೊಂದಿಗೆ ಆಡು ಸಾಕಣೆ ಹೊಸೆದಿದೆ. ನಾಟಿ ಕೋಳಿಗಳ ಕುಟುಂಬ ವೃದ್ಧಿಸುತ್ತಿದೆ. ಸ್ವಾವಲಂಬಿಯಾಗಿ ಬದುಕಲು ಬೇಕಾದ ಎಲ್ಲ ವ್ಯವಸ್ಥೆ ತಮ್ಮಲ್ಲಿರಬೇಕೆಂಬ ದೂರದೃಷ್ಟಿ. ಕೃಷಿಗೆ ಇಳಿದ ಮೇಲೂ ಕೈತುಂಬಾ ಹಣ ತರುವ ಐಟಿ ನೆನಪಾಗುತ್ತಿದೆಯೇ ಇಲ್ಲವೇ ಇಲ್ಲ. ಸಾಫ್ಟ್‌ವೇರ್ ಉದ್ಯೋಗದಲ್ಲಿ ನೆಮ್ಮದಿಯಿಲ್ಲ. ಒತ್ತಡದ ಬದುಕು. ನಿದ್ರೆಯಿಲ್ಲ. ಚಿತ್ತ ಸ್ಥಿತಿ ಕೆಡುವ ದಿವಸಗಳೇ ಅಧಿಕ. ಇದರಿಂದಾಗಿ ಆರೋಗ್ಯ ಕುಸಿಯುತ್ತದೆ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ ಕೃಷಿಯೇ ವಾಸಿ. ನನಗಂತೂ ಖುಷಿ ನೀಡಿದೆ ಎನ್ನುತ್ತಾರೆ ಚಂದ್ರಶೇಖರ್.
= ನಾ. ಕಾರಂತ ಪೆರಾಜೆ