ಭಾಷಾ ಪಾಂಡಿತ್ಯ!

ಭಾಷಾ ಪಾಂಡಿತ್ಯ!
Updated on: 

ಚರಂಡಿ ನೀರು ಹರಿದು ಹಗರಿಯನ್ನು ಸೇರುತ್ತಿತ್ತು. ಹೀಗೆ ವ್ಯರ್ಥವಾಗುವ ನೀರನ್ನೇ ಬಳಸಿ ಏನಾದರೊಂದು ಬೆಳೆ ಬೆಳೆಯಬೇಕೆಂದುಕೊಂಡರು ಆದಂ ಭಾಷಾ.
ಭಾಷಾ ಹಗರಿಬೊಮ್ಮನಹಳ್ಳಿಯವರು. ಮೊದಲು ಜಾಲಿ ಮುಳ್ಳು, ಗಿಡ- ಗಂಟಿ ಕಡಿದರು. ಜೆಸಿಬಿಯಿಂದ ಎತ್ತರದಲ್ಲಿದ್ದ ಮಣ್ಣನ್ನು ತಗ್ಗಿನ ಪ್ರದೇಶಕ್ಕೆ ಎಳೆಸಿದರು. ಟ್ರ್ಯಾಕ್ಟರ್‌ನಿಂದ ಭೂಮಿ ಸಮಗೊಳಿಸಿದರು. ಜಮೀನನ್ನು ಉಳುಮೆ ಯೋಗ್ಯವಾಗುವಂತೆ ಮಾಡಿದರು. ನಂತರ ಕನಕಾಂಬರ ಗಿಡ ನಾಟಿ ಮಾಡಿದರು. ಚರಂಡಿಯ ನೀರು ಹೊಂಡದಲ್ಲಿ ನಿಲ್ಲುವಂತೆ ಮಾಡಿದರು. ಅದನ್ನು ಬೆಳೆಗೂ ಬಳಸಿಕೊಂಡರು. ಇನ್ನೇನು ಗಿಡಗಳು ಹೂವು ಬಿಡುವ ಹಂತದಲ್ಲಿದ್ದವು. ಆದರೆ, ಅದೇ ವರ್ಷ ಸುರಿದ ಮಳೆಯಿಂದಾಗಿ ಮಾಲವಿ ಜಲಾಶಯವೂ ತುಂಬಿತ್ತು. ಕಾರಣ ಹೆಚ್ಚುವರಿ ನೀರನ್ನು ಹೊರ ಬಿಡಲಾಯಿತು. ನೀರಿನ ರಭಸಕ್ಕೆ ಹೂವಿನ ಗಿಡಗಳು ನೀರು ಪಾಲಾದವು. ಇದರಿಂದ ವಿಧಿಯಿಲ್ಲದೆ ಒಂದು ಲಕ್ಷ ರು. ನಷ್ಟವಾಯಿತು. ಮತ್ತೆ ಹಗರಿಯ ಕಡೆ ಮುಖ ಮಾಡದೆ ತಾವು ಮಾಡುತ್ತಿದ್ದ ಹಣ್ಣಿನ ವ್ಯಾಪಾರವನ್ನೇ ಮುಂದುವರಿಸಿದರು.
ಚಿಗುರಿದ ಕನಸು
ಇಷ್ಟಾದರೂ ಸೋಲುಂಡ ಜಾಗದಲ್ಲೇ ಗೆಲವು ಕಾಣಬೇಕೆಂಬ ಆಸೆ ಮಾತ್ರ ಮನದಲ್ಲಿ ಚಿಗುರುತ್ತಲೇ ಇತ್ತು. ಐದು ವರ್ಷದ ಹಿಂದೆ ಕೈಸುಟ್ಟುಕೊಂಡು ಮತ್ತೆ ಕೃಷಿ ಮಾಡುತ್ತೇನೆಂದ ಇವರಿಗೆ ಈ ಬಾರಿ ಮನೆಯವರ ಸಹಕಾರವೂ ಸಿಗಲಿಲ್ಲ. ಎಮ್ಮೆ ಮಾರಿ ಇಟ್ಟುಕೊಂಡಿದ್ದ ಹಣವನ್ನೇ ಖರ್ಚು ಮಾಡಿ ಮನೆಯವರಿಗೂ ಗೊತ್ತಾಗದಂತೆ ಭೂಮಿಯನ್ನು ಉಳುಮೆ ಯೋಗ್ಯವಾಗಿಸಿದರು. ಮನೆಯವರ ವಿರೋಧದ ನಡುವೆಯೂ ಕನಕಾಂಬರ ಬೆಳೆದು ದಿನವೂ ಆದಾಯ ಗಳಿಸುವಲ್ಲಿ ಯಶಸ್ವಿಯಾದರು.
ಹೊಂಡ ನಿರ್ಮಾಣ
ಚರಂಡಿಯ ನೀರು ಹರಿದು ಹೊಂಡದಲ್ಲಿ ನಿಲ್ಲುವಂತೆ ಮಾಡಿದರು. ಹೊಂಡವನ್ನು ಎತ್ತರದ ಪ್ರದೇಶದಲ್ಲಿ ನಿರ್ಮಿಸಿರುವುದರಿಂದ ನೀರು ಹಾಯಿಸುವುದೂ ಸುಲಭ. ಹೊಂಡದಲ್ಲಿರುವ ನೀರು ಪೈಪ್ ಮೂಲಕ ಹರಿದು ಬರುವಂತೆ ಮಾಡಿ ಅಲ್ಲೊಂದು ವಾಲ್ವ್ ಮಾಡಿಕೊಂಡಿದ್ದಾರೆ. ರಾತ್ರಿಯಿಂದ ಬೆಳಗಿನವರೆಗೂ ಹರಿದು ಬರುವ ನೀರು ಹೊಂಡದಲ್ಲಿ ನಿಂತಿರುತ್ತದೆ. ಮಳೆಗಾಲದಲ್ಲಿ ನೀರು ಬೇಡವಾದಾಗ ಹೊಂಡಕ್ಕೆ ನೀರು ಬರದಂತೆ ಒಡ್ಡು ಹಾಕುತ್ತಾರೆ.
ಬೆಳೆಯುವ ವಿಧಾನ
ಮೊದಲಿಗೆ ಭೂಮಿ ಹರಗಿ ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರದಲ್ಲಿ ಸಾಲು ಮಾಡುತ್ತಾರೆ. ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರದಲ್ಲಿ ಕನಕಾಂಬರ ಸಸಿ ನಾಟಿ ಮಾಡಿದ್ದಾರೆ. ಭೂಮಿಯಲ್ಲಿ ಐದು ಪ್ಲಾಟು ಮಾಡಿ ಕಾಲ ಕಾಲಕ್ಕೆ ನೀರು ಬಿಟ್ಟು ಡಿಎಪಿಯನ್ನು ಮೇಲುಗೊಬ್ಬರವಾಗಿ ನೀಡಿದ್ದಾರೆ. ಚರಂಡಿ ನೀರಿನಲ್ಲೇ ಸಾಕಷ್ಟು ಪೋಷಕಾಂಶ ಇರುವುದರಿಂದ ಗಿಡಗಳು ಸಹಜವಾಗಿಯೇ ಸೊಂಪಾಗಿ ಬೆಳೆದು ನಿಂತಿವೆ. ಮರಳು ಮಿಶ್ರಿತ ಕಪ್ಪು ಮಣ್ಣು ಒಳ್ಳೆಯ ಬೆಳೆ ಬರಲು ಕಾರಣ.
ಆದಾಯ ಎಷ್ಟು?
ನಾಟಿ ಮಾಡಿದ ಮೂರು ತಿಂಗಳಿನಿಂದಲೇ ಹೂವು ಬಿಡುತ್ತಿರುವ ಗಿಡಗಳು ನಿರಂತರ ಆದಾಯ ತಂದುಕೊಡುತ್ತಿವೆ. ದಿನವೂ ಒಂದೊಂದು ಪ್ಲಾಟ್‌ನಲ್ಲಿ ಐದರಿಂದ ಆರು ಕೆಜಿ ಹೂವು ಸಿಗುತ್ತಿದೆ. ಹರಿದ ಹೂವುಗಳನ್ನು ಕೆಜಿ ಲೆಕ್ಕದಲ್ಲಿ ಕಟ್ಟಲು ಕೊಡುತ್ತಾರೆ. ಕಟ್ಟಿದ ಹೂವುಗಳನ್ನು ಮಗ ರಿಯಾಜ್ ಹೊಸಪೇಟೆಗೆ ಹೋಗಿ ಮಾರಿ ಬರುತ್ತಾನೆ. ಇವರೇ ಬೆಳೆದು ಹೂವು ಕಟ್ಟಿಸಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ. ನಿತ್ಯವೂ ಎಲ್ಲ ಖರ್ಚು ಕಳೆದು ಸಾವಿರ ರು. ಉಳಿಯುತ್ತದೆ. ಹಬ್ಬ- ಹರಿದಿನಗಳಲ್ಲಿ ಭಾರಿ ಆದಾಯ ಸಿಗುತ್ತದೆ. ಹೀಗೆ ನಿರಂತರವಾಗಿ ಒಂಬತ್ತು ತಿಂಗಲು ಸಿಗುವ ಹೂವಿನಿಂದ ರು. 2.70 ಲಕ್ಷ ಉಳಿಯುತ್ತದೆ. ಖರ್ಚು ಮಾಡಿದ ರು. 60- ರು. 70 ಸಾವಿರ ತೆಗೆದರೂ ರು. 2 ಲಕ್ಷ ಸಿಗುತ್ತದೆ ಎನ್ನುತ್ತಾರೆ ಆದಂ ಭಾಷಾ. (ಮೊ. 8496002722).

=  ಸಿದ್ದೇಶ್ ಸಣ್ಣಗಿರಿ ಕೊಟ್ಟೂರು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com