

ಅಣಬೆಯನ್ನು ಹಲವರು ಮಾಂಸಾಹಾರವೆಂದು ಬಗೆದು ಆಹಾರದಲ್ಲಿ ವರ್ಜ್ಯಿಸುತ್ತಾರೆ. ಆದರೆ ಅಣಬೆಯೇ ಒಂದು ಬಗೆಯ ಸಸ್ಯ. ಅಂದ ಮೇಲೆ ಇದು ಸಸ್ಯಾಹಾರವಲ್ಲವೇ? ಬೃಹದಾಕಾರದ ಮರಗಳೂ ಇರುವಂತೆ ಅತಿ ಸೂಕ್ಷ್ಮ ಗಾತ್ರದ ಸಸ್ಯಗಳು ಸಹ ಇವೆ. ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ಬೆಳೆಯುವ, ಸ್ವತಂತ್ರವಾಗಿ ಆಹಾರ ತಯಾರಿಸಿಕೊಳ್ಳಲು ಬೇಕಾದ ಪತ್ರಹರಿತ್ತನ್ನು ಹೊಂದಿಲ್ಲದ ಸಸ್ಯಗಳ ವರ್ಗಗಳಲ್ಲಿ ಅಣಬೆಯೂ ಒಂದು.
ಇಂದು ಸುಮಾರು ನಾಲ್ಕು ರೀತಿಯ ಅಣಬೆಗಳನ್ನು ವಾಣಿಜ್ಯ ಮಟ್ಟದಲ್ಲಿ ಬೆಳೆಸಲಾಗುತ್ತಿದೆ. ಅವುಗಳಲ್ಲಿ ತುಂಬಾ ಜನಪ್ರಿಯವಾದುದು ಚಿಪ್ಪು ಅಣಬೆ, ಇದನ್ನು ಪ್ಲುರೋಟಿಸ್ ಎಂದು ಕರೆಯುತ್ತಾರೆ. ಇದು ಗೃಹಿಣಿಯರಿಗೆ ಉತ್ತಮ ಆದಾಯದ ಮೂಲವಾಗಬಲ್ಲದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ಬೆಳೆಯಬಹುದು.
ಬೇಕಾಗುವ ಸಾಮಗ್ರಿ
12್ಢ16, 12್ಢ18 ಅಥವಾ 12್ಢ24 ಇಂಚು ಪಾಲಿಪ್ರೊಪಲೀನ್ ಪ್ಲಾಸ್ಟಿಕ್ ಚೀಲಗಳು (80 ಗೇಜ್), ಆದಷ್ಟು ಹೊಸದಾದ ಬತ್ತದ ಹುಲ್ಲು, ಅಣಬೆ ಬೀಜಗಳು, ರಬ್ಬರ್ಬ್ಯಾಂಡ್ ಅಥವಾ ದಾರ ಮತ್ತು ಬ್ಲೇಡ್.
ಬೆಳೆಯುವ ಬಗೆ
ಪಾಲಿಪ್ರೋಪಲೀನ್ ಚೀಲಗಳಿಗೆ ಪಂಚಿಂಗ್ ಯಂತ್ರದ ಸಹಾಯದಿಂದ ಒಂದು ಸೆಂಮೀ ವ್ಯಾಸದ ರಂಧ್ರ ಮಾಡಿ. ಚೆನ್ನಾಗಿ ಒಣಗಿರುವ ಬತ್ತದ ಹುಲ್ಲನ್ನು 1- 2 ಇಂಚು ಉದ್ದ ಕತ್ತರಿಸಿ, ತಣ್ಣನೆಯ ನೀರಿನಲ್ಲಿ 6- 8 ಗಂಟೆಗಳ ಕಾಲ ನೆನೆಸಿಡಿ. ನಂತರ ಹುಲ್ಲನ್ನು ನೀರಿನಿಂದ ತೆಗೆದು ಕುದಿಯುವ ನೀರಿನಲ್ಲಿ ಅರ್ಧ ಗಂಟೆ ಕಾಲ ಬೇಯಿಸಿ, ಹೀಗೆ ಸಮ ಪ್ರಮಾಣದ ಉಷ್ಣತೆಯಲ್ಲಿ ನಿರ್ದಿಷ್ಟ ಅವಧಿಯವರೆಗೆ ಬೇಯಿಸುವುದರಿಂದ ಅಣಬೆಗೆ ತಗುಲುವ ಹಸಿರು ಪಾಚಿ ತಡೆಗಟ್ಟಬಹುದು. ಹುಲ್ಲನ್ನು ತೆಗೆದು ನೆರಳಿನಲ್ಲಿ ಒಣಗಿಸಿ.
ಪಾಲಿಪ್ರೋಪಲೀನ್ ಚೀಲ ತೆಗೆದುಕೊಂಡು ತಳಭಾಗಕ್ಕೆ ಸುಮಾರು 5- 6 ಇಂಚಿನವರೆಗೆ ಹುಲ್ಲನ್ನು ಒತ್ತಿ ಒತ್ತಿ ತುಂಬಿ. ಬಾಟಲಿಯಲ್ಲಿ ಸಿಗುವ ಅಣಬೆ ಬೀಜ ತೆಗೆದು ಹುಲ್ಲಿನ ಅಂಚಿನ ಭಾಗದಲ್ಲಿ ಉದುರಿಸಿ. ಇದೇ ರೀತಿ 3- 4 ಪದರ ಮತ್ತೆ 3- 4 ಇಂಚು ಹುಲ್ಲನ್ನು ಹಾಕಿ ಬೀಜವನ್ನು ಅಂಚಿನಲ್ಲಿ ಚೆಲ್ಲಿರಿ. ಹೀಗೆಯೆ ಪದರ ಪದರವಾಗಿ ತುಂಬಿ ಬೀಜವನ್ನು ಅಂಚಿನಲ್ಲಿ ಮಾತ್ರ ಉದುರಿಸಿ. ಕೊನೆಯ ಪದರಕ್ಕೆ ಮಾತ್ರ ಅಂಚಿನಲ್ಲಿ ಮತ್ತು ಮೇಲ್ಭಾಗದಲ್ಲಿ ಬೀಜ ಹಾಕಿ ಚೀಲವನ್ನು ಬಿಗಿಯಾಗಿ ರಬ್ಬರ್ಬ್ಯಾಂಡ್ ಅಥವಾ ದಾರದ ಸಹಾಯದಿಂದ ಕಟ್ಟಿ ತಂಪಾದ ಹಾಗೂ ತೇವವಾದ ಸ್ಥಳದಲ್ಲಿಡಿ.
ಸುಮಾರು 15- 20 ದಿನಗಳಲ್ಲಿ ಚೀಲದೊಳಗೆಲ್ಲಾ ಬಿಳಿ ಹತ್ತಿಯಂಥ ವಸ್ತು ಕಾಣಬಂದಾಗ ಚೀಲವನ್ನು ನಿಧಾನವಾಗಿ ಕತ್ತರಿಸಿ ತೆಗೆದು ಆ ಹುಲ್ಲಿನ ಮುದ್ದೆಗೆ ಬೆಳಗ್ಗೆ ಮತ್ತು ಸಾಯಂಕಾಲ ನೀರನ್ನು ಚಿಮುಕಿಸಿ ಕತ್ತಲೆ ಕೋಣೆಯೊಳಗೆ ಇಡಿ.
ಕಟಾವು ವಿಧಾನ
ನಂತರ ಒಂದೆರೆಡು ದಿನಗಳಲ್ಲಿ ಅಣಬೆಗಳ ಕಟಾವನ್ನು ಶುರು ಮಾಡಬಹುದು. ಕೈಯಿಂದ ಕಿತ್ತು ತೆಗೆದರೆ ಎಳೆ ಅಣಬೆಗಳಿಗೆ ತೊಂದರೆಯಾಗುತ್ತದೆ. ಅದ್ದರಿಂದ ಬೆಳೆದ ಅಣಬೆಗಳನ್ನು ಚಾಕು ಸಹಾಯದಿಂದ ಕಟಾವು ಮಾಡಬಹುದು. ಈ ರೀತಿ ಮೊದಲ ಬೆಳೆ ತೆಗೆದ ನಂತರ ಮತ್ತೆರಡು ಕೂಳೆ ಬೆಳೆಗಳನ್ನು ತೆಗೆಯಬಹುದು. ಎರಡನೇ ಬೆಳೆ ಬೇಕಾದಲ್ಲಿ ಮೊದಲ ಬೆಳೆ ಕಟಾವಾದ ನಂತರ ಮುದ್ದೆಯನ್ನು ನೀರು ಹಾಕದೆ ಬಿಡಿ. ನಂತರ ಹೊರ ಭಾಗದ ಹುಲ್ಲನ್ನು ತೆಗೆದು ನೀರನ್ನು ಸಿಂಪಡಿಸುತ್ತಾ ಇದ್ದರೆ 2-3 ದಿನಗಳಲ್ಲಿ ಅಣಬೆಗಳು ಬರುತ್ತವೆ. ಮೂರನೇ ಬೆಳೆಗೆ ಪದರ ಬಿಡಿಸಿ ತೆಳುವಾಗಿ ಹರಡಿ ನೀರನ್ನು ಸಿಂಪಡಿಸಿರಿ. 3 ದಿನಗಳಲ್ಲಿ ಅಣಬೆಗಳು ಕಾಣಿಸಿಕೊಳ್ಳುತ್ತವೆ.
ಕಟಾವು ಮಾಡಿದ ಅಣಬೆಗಳನ್ನು ಒಂದು ದಿನದೊಳಗೆ ಬಳಸಬೇಕು. ಫ್ರಿಡ್ಜ್ನಲ್ಲಿ 3- 4 ದಿನಗಳವರೆಗೆ ಇಡಬಹುದು. ಬಿಸಿಲಿನಲ್ಲಿ ಒಣಗಿಸಿಯೂ ಇಡಬಹುದು.
- ಸುನೀತಾ ಸಿ/ ನಿರ್ಮಲ ಕೆ.ಎಸ್.