

ಸುಡು ಬಿಸಿಲಿಗೆ ಮನುಷ್ಯರೆ ಒಣಗುತ್ತಿರುವಾಗ, ಹೂವು, ಹಣ್ಣು ತರಕಾರಿಗಳು ಯಾವ ಲೆಕ್ಕ ಅಲ್ಲವೇ?
ಮನೆಗೆ ತಂದಿಟ್ಟ ಮರುಗಳಿಗೆಯಲ್ಲೇ ಅವು ಬಾಡಿ, ಬಸವಳಿದು ಹೋಗುತ್ತವೆ. ಶೀತಲ ಪೆಟ್ಟಿಗೆಯಲ್ಲಿಡಲು ವಿದ್ಯುತ್ ಅಭಾವ, ಆರೋಗ್ಯಕ್ಕೂ ಮಾರಕ.
ಗ್ರಾಮೀಣ ಪರಿಸರದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಸಾಮಾನ್ಯ. ರೈತರ ಮನೆಗಳಲ್ಲಿ ಸುಲಭವಾಗಿ ನಿರ್ಮಿಸಬಹುದಾದ ತಂಪು ತೊಟ್ಟಿ ಕಿಸೆಗೂ ಹಗುರ, ಆರೋಗ್ಯಕ್ಕೂ ಉತ್ತಮ ಹಾಗೂ ಪರಿಸರಕ್ಕೂ ಪೂರಕ. ಇಂಥ ತೊಟ್ಟಿಯನ್ನು ಎರಡು ವರ್ಷಗಳ ಹಿಂದೆ ನಿರ್ಮಿಸಿ ಸದುಪಯೋಗ ಪಡೆಯುತ್ತಿರುವವರು ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶಿವಲಿಂಗಪ್ಪ ಸುಳ್ಳನ್ನವರ.
ನಿರ್ಮಾಣ ವಿಧಾನ
ಐದೂವರೆ ಅಡಿ ಉದ್ದ, 5 ಅಡಿ ಅಗಲ ಹಾಗೂ 2 ಅಡಿ ಎತ್ತರ ಹೊಂದಿದ ಪೆಟ್ಟಿಗೆಯಾಕಾರದ ರಚನೆ ಇದು. ಇಟ್ಟಿಗೆ, ಸಿಮೆಂಟ್ ಹಾಗೂ ಉಸುಕು ಬಳಸಿ ಕಟ್ಟಲಾಗುತ್ತದೆ. ಉಸುಕಿನ ರಾಡಿಯಿಂದ ಪೆಟ್ಟಿಗೆಯ ಒಳ ಹಾಗೂ ಹೊರ ಮೈಯನ್ನು ಗಿಲಾವು ಮಾಡಲಾಗಿದೆ. ಪೆಟ್ಟಿಗೆ ಮೇಲಿನ ಚೌಕು ಭಾಗವನ್ನು ಸಿಮೆಂಟ್ ಗಿಲಾವು ಮಾಡಿದ್ದಾರೆ. ಕಟ್ಟುವಾಗ ಗರಸು ಭೂಮಿ ಇದ್ದರೆ ಸಿಮೆಂಟ್ ಬೆಡ್ ಹಾಕುವುದು ಅವಶ್ಯವಿಲ್ಲ. ಮೃದು ನೆಲವಿದ್ದರೆ ಹಾಕುವುದು ಉತ್ತಮ. 4ರಿಂದ 5 ಬುಟ್ಟಿ ಉಸುಕು ಹಾಕಿ ಅದರ ಮೇಲೆ ತರಕಾರಿ, ಹಣ್ಣುಗಳನ್ನಿಡಬಹುದು. ಇದನ್ನು ಕಟ್ಟಲು 200ರಿಂದ 250 ಇಟ್ಟಂಗಿ, 45ರಿಂದ 50 ಬುಟ್ಟಿ ಉಸುಕು ಹಾಗೂ ಅರ್ಧ ಚೀಲ ಸಿಮೆಂಟ್ ಸಾಕು. ಕಟ್ಟಲು 2000ರಿಂದ 2500 ಖರ್ಚು ಬರುತ್ತದೆ.
ವಾರದವರೆಗೂ ಕೆಡಲ್ಲ
ತೊಟ್ಟಿಯನ್ನು ಸದಾ ತಂಪಾಗಿಡಲು ಬಿದಿರಿನ ತಟ್ಟೆಯ ಮುಚ್ಚಳ ಅದರ ಮೇಲೆ ತೋಯಿಸಿದ ದಪ್ಪನೆಯ ಗೋಣಿ ಚೀಲವಿದೆ. ದಿನಕ್ಕೆರಡು ಬಾರಿ ನೀರು ಹಾಕಿದರೆ ಸಾಕು. ಬೇಸಿಗೆಯಲ್ಲಿ ತುಸು ಹೆಚ್ಚಿಗೆ ನೀರು ಹಾಕಿದಲ್ಲಿ ತಂಪು ತೊಟ್ಟಿ ಕಾರ್ಯ ಚೆನ್ನಾಗಿರುತ್ತದೆ ಎನ್ನುತ್ತಾರೆ ಶಿವಲಿಂಗಪ್ಪ. ತಪ್ಪಲು ಪಲ್ಯೆ, ತರಕಾರಿ, ಹಣ್ಣು, ಹೂವು ಇಟ್ಟರೆ ವಾರದವರೆಗೂ ಕೆಡದಂತೆ ಇರುತ್ತವೆ. ತರಕಾರಿ ಹೆಚ್ಚಿದ್ದರೆ ಮದ್ಯದಲ್ಲಿ ಅರ್ಧ ಗೋಡೆ ನಿರ್ಮಿಸಿ ವಿಭಾಗ ಮಾಡಿ ಬೇರೆ ಬೇರೆಯಾಗಿ ಇಡಬಹುದು. ಬಿಸಿಲಿಗೆ ಬೇಗನೆ ಬಾಡುವ ಕೊತ್ತಂಬರಿ, ಮೆಂತೆಸೊಪ್ಪು ಇದರಲ್ಲಿ 4ರಿಂದ 5 ದಿನದವರೆಗೆ ತಾಜಾ ಇರುತ್ತದೆ. ತರಕಾರಿ ಹಣ್ಣುಗಳನ್ನು ಬಾಡದಂತೆ ತಾಜಾತನ ಕಾಯ್ದುಕೊಳ್ಳಬೇಕಿದ್ದರೆ ತಡವೇಕೆ? ಮಾಡಿ ನೋಡಿ ತಂಪು ತೊಟ್ಟಿ. ಮಾಹಿತಿಗೆ ಶಿವಲಿಂಗಪ್ಪ ಸುಳ್ಳನ್ನವರ ಅವರ ಮೊ. 9886104899.
- ಶೈಲಜಾ ಬೆಳ್ಳಂಕಿಮಠ