ರಾಮನ ಚೆಂಡು

ರಾಮನ ಚೆಂಡು
Updated on: 

ಅಲ್ಪ ಭೂಮಿ, ಕಡಿಮೆ ನೀರಿನಲ್ಲೂ ಉತ್ತಮ ಲಾಭದಾಯಕ ಬೆಳೆ ಮಾಡುವುದು ಹೇಗೆ? ಇದಕ್ಕೆ ಉತ್ತರ ಇಲ್ಲುಂಟು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜಾಪೂರದ ರಾಮಚಂದ್ರ ಲಕ್ಷ್ಮಣ ಗುಂಡಪ್ಪಗೋಳ ಇಂಥದ್ದೊಂದು ಸಾಧನೆ ಮಾಡಿದ ರೈತ. ಕೇವಲ 5 ತಿಂಗಳ ಅವಧಿಯಲ್ಲಿ 1 ಎಕರೆ 10 ಗುಂಟೆ ಭೂಮಿಯಲ್ಲಿ 10ಟನ್‌ಕ್ಕಿಂತ ಹೆಚ್ಚು ಚೆಂಡು ಹೂವು ಬೆಳೆದಿದ್ದಾರೆ. ಆ ಮೂಲಕ ಸುಮಾರು 8 ಲಕ್ಷ ಭರ್ಜರಿ ಆದಾಯ ಗಳಿಸಿ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ.

ಸಾಮಾನ್ಯ ರೈತನ ಮಗನಾಗಿರುವ ಇವರು ಬಿಎ ಪದವೀಧರ. ರಾಮಚಂದ್ರ ಅವರಿಗೆ ಕೃಷಿ ಕ್ಷೇತ್ರದಲ್ಲಿ ಏನಾದರೊಂದು ಸಾಧಿಸಬೇಕು ಎಂಬ ತವಕ. ಅದಕ್ಕಾಗಿ 2003ರಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಹಾಗೂ ಕೃಷಿ ತಜ್ಞರ ಸಲಹೆ ಸಹಕಾರದಿಂದ ಹಂತ-ಹಂತವಾಗಿ ಹೂವು ಬೀಜ ತಂದು ಬೆಳೆಸಲಾರಂಭಿಸಿದರು. ಪ್ರಾರಂಭದಲ್ಲಿ ಸ್ವಲ್ಪ ತೊಂದರೆಯಾದರೂ ಇದೊಂದು ಅಲ್ಪ ನೀರು, ಕಡಿಮೆ ಶ್ರಮದಲ್ಲಿ ಹೆಚ್ಚು ಇಳುವರಿ ಬರುವ ಉತ್ತಮ ಲಾಭದಾಯಕ ಬೆಳೆ ಎಂಬುದನ್ನು ಅರಿತರು. ಹಾಗಾಗಿ ಅವರು ಹೂವು ಬೆಳೆಯುವುದೇ ಪ್ರಮುಖ ಗುರಿಯನ್ನಾಗಿಸಿಕೊಂಡರು.

'ಮಹಾ' ಬೇಡಿಕೆ
ಕಣ್ಮನಗಳಿಗೆ ಮುದ ನೀಡುವ ಹಾಗೂ ಹೆಚ್ಚು ಇಳುವರಿ ಬರುವ 2 ತಳಿಯ ಚೆಂಡು ಹೂವುಗಳಿಗೆ ಮಹಾರಾಷ್ಟ್ರದಲ್ಲಿ ಹಬ್ಬ- ಹರಿದಿನಗಳಲ್ಲಿ ಭಾರಿ ಬೇಡಿಕೆ. ಹೆಚ್ಚಾಗಿ ಈ ಹೂವುಗಳನ್ನು ಮುಂಬೈನ ಹೂವು ಸಗಟು ಮಾರಾಟಗಾರರು ಇದ್ದಲ್ಲಿಗೆ ಬಂದು ಒಯ್ಯುತ್ತಾರೆ. ನಿತ್ಯ ಹೂವುಗಳ ಬೆಲೆ ಏರುಪೇರಾಗುತ್ತಿದ್ದು, ಹಬ್ಬದ ದಿನಗಳಿರುವುದರಿಂದ ಸದ್ಯ ಮುಂಬೈ ಮಾರುಕಟ್ಟೆಯಲ್ಲಿ ಹೂವುಗಳಿಗೆ ಒಂದು ಕ್ವಿಂಟಲ್‌ಗೆ 80 ಸಾವಿರ ಸಿಗುತ್ತಿದೆ. ಈ ಭಾಗದಲ್ಲಿ ಬಹುತೇಕ ರೈತರು ಕಬ್ಬು ಬೆಳೆಯನ್ನೇ ಅವಲಂಭಿಸಿದ್ದಾರೆ. ಆದರೆ ರಾಮಚಂದ್ರ ಹೆಚ್ಚು ಆದಾಯ ತರುವ ತೋಟಗಾರಿಕೆ ಬೆಳೆ ನಂಬಿದ್ದಾರೆ. ಅವರಿಗೆ 6 ಎಕರೆ ಜಮೀನಿದೆ. ಅದರಲ್ಲಿ 1.10 ಎಕರೆಯಲ್ಲಿ ಚೆಂಡು ಹೂವು, 1 ಎಕರೆಯಲ್ಲಿ ಬಾಳೆ, 1 ಎಕರೆಯಲ್ಲಿ ರೇಷ್ಮೆ ಹಾಗೂ ಇನ್ನುಳಿದ ಜಮೀನನಲ್ಲಿ ಕಬ್ಬು ಬೆಳೆದಿದ್ದಾರೆ.

ಭಾರಿ ಇಳುವರಿ
ಸಾಮಾನ್ಯವಾಗಿ ಅತಿ ಕಡಿಮೆ ಎಂದರೆ ಒಂದು ಎಕರೆಗೆ 10ಟನ್ ಇಳುವರಿ ಬರುವ ಈ ಬೆಳೆಗೆ ಯಾವುದೇ ರೋಗ ತಾಗದಿದ್ದರೆ ಒಂದು ಎಕರೆಗೆ 16ರಿಂದ 18ಟನ್ ಇಳುವರಿ ಬರಬಹುದು ಎನ್ನುತ್ತಾರೆ. ಪ್ರತಿ ಸಾಲಿನ ನಡುವೆ 5 ಅಡಿ ಅಂತರದಲ್ಲಿ ಸಸಿ ನೆಟ್ಟಿದ್ದಾರೆ. 5 ತಿಂಗಳದ ಒಂದು ಪ್ಲಾಟಿಗೆ ಹೂವು ಕಟಾವು ಮಾಡಿ ಮಾರುಕಟ್ಟೆಗೆ ತಲುಪಿಸುವವರೆಗೆ ಅಂದಾಜು 50ರಿಂದ 60 ಸಾವಿರ ಖರ್ಚು ಬರುತ್ತದೆ. ಒಂದು ವರ್ಷದಲ್ಲಿ ಎರಡು ಪ್ಲಾಟ್ ಮಾಡಬಹುದು. ನಾಗರಪಂಚಮಿ, ಗಣೇಶ ಚತುರ್ಥಿ ಹಾಗೂ ದೀಪಾವಳಿಯಲ್ಲಂತೂ ಹೂವುಗಳಿಗೆ ಬಂಗಾರದ ಬೆಲೆ ಗ್ಯಾರಂಟಿ. ಹಬ್ಬ ಹರಿದಿನಗಳಲ್ಲಿದ ಸಂದರ್ಭದಲ್ಲಿ ಮಾತ್ರ ಹೂವುಗಳಿಗೆ ಸ್ವಲ್ಪ ಬೇಡಿಕೆ ಕಡಿಮೆಯಾಗುತ್ತದೆ. ಸಂಪರ್ಕಕ್ಕೆ (ಮೊ. 9916616034)

-ಜೆ.ಎಸ್. ರಜಪೂತ ಘಟಪ್ರಭಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com