ಮಳೆಕಾಡುಗಳ ಮರೆ

ಮಳೆಕಾಡುಗಳ ಮರೆ
Updated on: 

ಸದಾ ಹಸಿರಾಗಿರುವ ದಟ್ಟಾರಣ್ಯವೇ ಮಳೆಕಾಡು. ಭೂಮಿಯ ಶೇ.6ರಷ್ಟು ಭಾಗ ವ್ಯಾಪಿಸಿರುವ ಮಳೆಕಾಡುಗಳನ್ನು ಜಗತ್ತಿನ ಶ್ವಾಸಕೋಶ, ಭೂಮಿಯ ಆಭರಣ ಅಥವಾ ಅತಿ ದೊಡ್ಡ ನೈಸರ್ಗಿಕ ಔಷಧ ಶಾಲೆ ಎಂದೂ ಬಣ್ಣಿಸಲಾಗುತ್ತದೆ. ಏಕೆಂದರೆ, ಈ ಮಳೆಕಾಡು ದ್ಯುತಿ ಸಂಶ್ಲೇಷಣೆ ಕ್ರಿಯೆ ಮೂಲಕ ಅತಿ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ, ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತದೆ. ಜೀವಿಗಳಿಗೆ ಬೇಕಾಗುವ ಶೇ.28ರಷ್ಟು ಆಮ್ಲಜನಕ ಮಳೆಕಾಡಿನಲ್ಲೇ ಉತ್ಪತ್ಪಿಯಾಗುತ್ತದೆ. ಜತೆಗೆ ಮಳೆಕಾಡು ಬೃಹತ್ ಪ್ರಮಾಣದಲ್ಲಿ ನೀರನ್ನು ಶುದ್ಧೀಕರಿಸುತ್ತದೆ.
ಉಷ್ಣವಲಯದ ಕಾಡು
ಮಳೆಕಾಡಿನಲ್ಲಿ ಪ್ರಮುಖವಾಗಿ ಎರಡು ವಿಭಾಗಗಳಿವೆ. ಉಷ್ಣವಲಯದ ಮಳೆಕಾಡು ಹಾಗೂ ಸಮಶೀತೋಷ್ಣ ವಲಯದ ಮಳೆಕಾಡು. ಉಷ್ಣವಲಯದ ಮಳೆಕಾಡಿನಲ್ಲಿ ವಾರ್ಷಿಕ ಸರಾಸರಿ 1750- 2000 ಮಿಮೀ (68- 78 ಇಂಚು) ಮಳೆ ಬೀಳುತ್ತದೆ. ವರ್ಷಾವಧಿ ಬೆಚ್ಚಗೆ, ತೇವಾಂಶದಿಂದ ಕೂಡಿರುತ್ತದೆ. ತೀರಾ ಉಷ್ಣತೆಯಾಗಲಿ, ತಂಪಾಗಲಿ ಆಗುವುದೇ ಇಲ್ಲ. ಅಂದರೆ ವರ್ಷಾವಧಿ ಇಲ್ಲಿನ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಆಸುಪಾಸು ಇರುತ್ತದೆ. ಜಗತ್ತಿನ ಶೇ. 50ಕ್ಕಿಂತ ಹೆಚ್ಚು ಜೀವ, ಸಸ್ಯ ಪ್ರಭೇದಗಳು ಈ ಕಾನನಗಳಲ್ಲಿವೆ. ಪ್ರಪಂಚದ ಮೂರರಲ್ಲಿ ಎರಡು ಭಾಗದಷ್ಟು ಹೂವಿನ ಜಾತಿಗಳು ಇಲ್ಲಿವೆ. 30 ಮಿಲಿಯನ್ ಜೀವ, ಸಸ್ಯ ವೈವಿಧ್ಯಗಳಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಮನುಷ್ಯನ ಕಣ್ಣಿಗೆ ಕಾಣಿಸಿಕೊಳ್ಳದ, ಸಂಶೋಧನೆಗೆ ಒಳಪಡದ ಅದೆಷ್ಟೋ ಜೀವಿಗಳು, ಸಸ್ಯಗಳು ಇಲ್ಲಿವೆ.
ವ್ಯಾಪ್ತಿ
ಭೂಮಧ್ಯ ರೇಖೆಯವರೆಗೆ ಉಷ್ಣವಲಯ ಮಳೆಕಾಡು ವ್ಯಾಪಿಸಿದೆ. ಅಂದರೆ ದಕ್ಷಿಣ ಅಮೆರಿಕ, ಮಧ್ಯ ಅಮೆರಿಕದ ಅಮೆಜಾನ್ ಕಾಡುಗಳು, ದಕ್ಷಿಣ ಆಫ್ರಿಕ, ಮಧ್ಯ ಆಫ್ರಿಕದ ಕೆಮರೂನ್, ಕಾಂಗೋ, ಮಡಗಾಸ್ಕರ್ ಕಾಡುಗಳು, ದಕ್ಷಿಣ ಏಷ್ಯಾ ಭಾರತ, ಮ್ಯಾನ್ಮಾರ್, ಫಿಲಿಫೈನ್ಸ್, ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ, ಆಸ್ಟ್ರೇಲಿಯಾಗಳಲ್ಲಿ ಮಳೆಕಾಡುಗಳಿವೆ. ಪ್ರತಿ ಕಾಡುಗಳೂ ತನ್ನದೇ ವೈಶಿಷ್ಟ್ಯ, ವೈವಿಧ್ಯ ಹೊಂದಿವೆ. ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳು ಜಗತ್ತಿನಲ್ಲಿಯೇ ಅತಿ ದೊಡ್ಡ ಮಳೆಕಾಡು.
ಮಧ್ಯ ಆಫ್ರಿಕದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಮಳೆಕಾಡಿದೆ. ಪ್ರಪಂಚದಲ್ಲಿ ಬೇರೆಲ್ಲೂ ಕಂಡುಬರದ ಅಪರೂಪದ ಸಸ್ಯ, ಪ್ರಾಣಿಗಳು ಮಡಗಾಸ್ಕರ್‌ನಲ್ಲಿವೆ. ದಕ್ಷಿಣ ಭಾರತ, ಮ್ಯಾನ್ಮಾರ್, ಮಲೇಷ್ಯಾ, ಜಾವಾ, ಬಾಂಗ್ಲಾದೇಶಗಲ್ಲಿ ಬೇರೆಲ್ಲೂ ಕಂಡುಬರದ ಮ್ಯಾನ್‌ಗ್ರೋವ್ ಕಾಡುಗಳಿವೆ. ಇಲ್ಲಿ ಕಾಂಡ್ಲಾದಂಥ ಗಿಡಗಳು ನದಿ ತೀರದಲ್ಲಿ ಭಾಗಶಃ ನೀರಿನಲ್ಲಿ ಬೇರುಗಳನ್ನು ಮೇಲೆ ಚಾಚಿ ಬೆಳೆಯುತ್ತವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕಾಡುಗಳಲ್ಲಿ ಅತಿ ಅಪರೂಪದ ಪ್ರಾಣಿ ವೈವಿಧ್ಯಗಳು ಕಂಡುಬರುತ್ತವೆ.
ಮಳೆಕಾಡು ಜಗತ್ತಿನ ಅತಿ ದೊಡ್ಡ ಔಷಧ ಶಾಲೆ ಎಂದು ಕರೆಯುತ್ತಾರೆ. ಏಕೆಂದರೆ, ಹಲವು ಔಷಧ ಮೂಲಗಳನ್ನು ಇಲ್ಲೇ ಸಂಶೋಧಿಸಲಾಗಿದೆ. ಸಾಮಾನ್ಯವಾಗಿ ಬಳಸುವ ಜ್ವರ, ಸೋಂಕು ಜ್ವರ, ಗಾಯ, ಉದರ ಸಂಬಂಧಿ ಕಾಯಿಲೆಗಳು, ನೋವು, ಉಸಿರಾಟದ ತೊಂದರೆಗೆ ಬಳಸುವ ಔಷಧಗಳನ್ನು ಮಳೆಕಾಡಿನ ಸಸ್ಯಗಳಿಂದ ಪಡೆಯಲಾಗುತ್ತಿದೆ. ಅಲ್ಲದೆ ಹಲವು ಆಹಾರ ಉತ್ಪನ್ನಗಳನ್ನೂ ಮಳೆಕಾಡಿನಿಂದ ಪಡೆಯಲಾಗುತ್ತದೆ.
ಸಮಶೀತೋಷ್ಣ ವಲಯದ ಮಳೆಕಾಡು
ಉತ್ತರ ಅಮೆರಿಕ, ಬ್ರಿಟಿಷ್ ಕೊಲಂಬಿಯಾ ಕರಾವಳಿ, ಸ್ಪೇನ್‌ನ ಕಡಲತೀರ, ಐರ್ಲೆಂಡ್, ನಾರ್ವೆ, ದಕ್ಷಿಣ ಚೀನಾ, ತೈವಾನ್, ಜಪಾನ್, ಕೊರಿಯಾ, ದಕ್ಷಿಣ ಅಮೆರಿಕದ ಚಿಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳಲ್ಲಿ ಸಮಶೀತೋಷ್ಣ ವಲಯದ ಮಳೆಕಾಡುಗಳಿವೆ. ಇಲ್ಲಿ ವಾರ್ಷಿಕ ಸರಾಸರಿ 170-200 ಮಿಮೀ ಮಳೆಯಾಗುತ್ತದೆ. ಇಲ್ಲಿಯ ಕಾಡು ವರ್ಷದ ಕೆಲಭಾಗ ತಂಪು, ಹಸಿರಾಗಿದ್ದರೆ, ಉಳಿದ ಭಾಗ ಒಣಗಿರುತ್ತದೆ.
ಅಳಿವಿನತ್ತ ಮಳೆಕಾಡು
ಜಗತ್ತಿನಾದ್ಯಂತ ಮಳೆಕಾಡುಗಳು ಅಳಿವಿನಂಚಿನಲ್ಲಿವೆ. ಪ್ರತಿ ಗಂಟೆಗೆ 6000 ಎಕರೆ ಅರಣ್ಯ ನಾಶ ಹೊಂದುತ್ತಿದೆ. ಕೃಷಿ, ನಗರೀಕರಣ, ಕೈಗಾರಿಕೆಗಳಿಂದಾಗಿ ಉಷ್ಣ, ಸಮಶೀತೋಷ್ಣ ವಲಯದ ಮಳೆಕಾಡುಗಳು 20ನೇ ಶತಮಾನದಲ್ಲಿ ಅತಿ ಹೆಚ್ಚು ನಾಶ ಹೊಂದಿದವು. ಪ್ರತಿವರ್ಷ 50 ಸಾವಿರಕ್ಕೂ ಹೆಚ್ಚು ಕಾಡುಪ್ರಾಣಿಗಳು ಅಸಹಜ ಸಾವು ಕಾಣುತ್ತಿವೆ. ಪಶ್ಚಿಮ ಆಫ್ರಿಕದ ಶೇ.90ರಷ್ಟು ಮಳೆಕಾಡು ಈಗಾಗಲೇ ನಾಶ ಹೊಂದಿದೆ. ಮಡಗಾಸ್ಕರ್‌ನಲ್ಲಿ ಮೂರರಲ್ಲಿ ಎರಡು ಪಾಲು ಕಾಡು ಈಗಿಲ್ಲ. ಇಂಡೋನೇಷ್ಯಾ, ಮಲೇಷ್ಯಾಗಳಲ್ಲಿ ಭಾರಿ ಪ್ರಮಾಣದಲ್ಲಿ ಕಾಡು ಕಡಿದು, ಮನುಷ್ಯನ ಆಹಾರ, ಇಂಧನಕ್ಕೆ ಬಳಸುವ ಎಣ್ಣೆಗಾಗಿ ಪಾಮ್ ಮರ ಬೆಳೆಸಲಾಗುತ್ತಿದೆ. ಇಂಡೋನೇಷ್ಯಾದಲ್ಲಿ 9 ಮಿಲಿಯನ್ ಹೆಕ್ಟೇರ್ ಪ್ರದೇಶದ ಕಾಡು ಕಡಿದು ಪಾಮ್ ಬೆಳೆಯಲಾಗುತ್ತಿದೆ. ಮಲೇಷ್ಯಾದಲ್ಲಿ ಜಗತ್ತಿನ ಶೇ. 85ರಷ್ಟು ಪಾಮ್ ಎಣ್ಣೆ ಉತ್ಪಾದಿಸಲಾಗುತ್ತಿದೆ. ಹಲವು ದೇಶಗಳಲ್ಲಿ ರಬ್ಬರ್, ಕಾಫಿ ತೋಟ ನಿರ್ಮಿಸಲಾಗಿದೆ. ಬ್ರೆಜಿಲ್‌ನಲ್ಲಿ ಕಾಡು ನಾಶ ತಡೆ ತುರ್ತು ಅಗತ್ಯ ಎಂದು ಘೋಷಿಸಲಾಗಿದೆ. 2030ರ ಹೊತ್ತಿಗೆ ಅಮೆಜಾನ್ ಕಾಡು ಶೇ. 60ರಷ್ಟು ನಾಶವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಅಲ್ಲಿನ ಸರ್ಕಾರಿ ಅಂಕಿ ಅಂಶಗಳೇ ಅದನ್ನು ಹೇಳುತ್ತಿವೆ. ಮಳೆಕಾಡುಗಳು ಹೀಗೆ ನಾಶವಾದರೆ ತಾಪಮಾನ ಏರಿಕೆ, ನೀರಿನ ಕೊರತೆ, ಮಾರಣಾಂತಿಕ ಕಾಯಿಲೆಗಳಿಗೆ ಔಷಧ ಕೊರತೆ ಉಂಟಾಗಬಲ್ಲದು.


-ಮಧುಕರ ಭಟ್ಟ
 madhu@kannadaprabha.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com