

ಮಿರಾಕಲ್ ಫ್ರುಟ್ (ಪವಾಡ ಹಣ್ಣು) ಹಣ್ಣು ಚೆನ್ನಾಗಿದೆ. ಹುಳಿ ಮಿಶ್ರಿತ ಸಿಹಿ ರುಚಿ. ಕಳೆದ ವರುಷ ಕೆಲವೇ ಕೆಲವು ಕಾಯಿ ಬಿಟ್ಟಿತ್ತಷ್ಟೇ. ಈ ವರುಷ ಸಾಕಷ್ಟಿದೆ. ಒಮ್ಮೆ ತಿಂದರೆ ಅದರ ಸ್ವಾದ ಗಂಟೆಗಟ್ಟಲೆ ಉಳಿದುಕೊಳ್ಳುತ್ತದೆ ಎಂದು ಖುಷಿ ಹಂಚಿಕೊಂಡರು ಕೃಷಿಕ ಅನಿಲ್ ಬಳೆಂಜ (32). ಕರುನಾಡಿಗಿದು ಅಪರೂಪದ ಹಣ್ಣು. ಸ್ನೇಹಿತರಿಗೆ, ಆಪ್ತರಿಗೆ ಹಂಚಿ ಹಿಮ್ಮಾಹಿತಿ ಪಡೆಯುತ್ತಿದ್ದಾರೆ.
ಮರುಳಾ ಫ್ರುಟ್ ಹೊಸ ಸೇರ್ಪಡೆ. ಇದರ ಹಣ್ಣಿಗೆ ನಿದ್ದೆ ತರಿಸುವ ಗುಣವಿದೆಯಂತೆ. ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದೋ ಏನೋ. ಇನ್ನೊಂದು ಹೊಸ ಸುದ್ದಿ ಹೇಳಿದರು. ಮರುಳಾ ಫ್ರುಟ್ ಯಶಸ್ಸಾದರೆ, ತಳಿ ಅಭಿವೃದ್ಧಿಯಾದರೆ ಅದಕ್ಕೆ ಹೆಚ್ಚು ಡಿಮ್ಯಾಂಡ್ ಬರಬಹುದು. ಯಾಕೆ ಹೇಳಿ? ಮಂಗ, ಹಂದಿಗಳ ಉಪದ್ರದಿಂದ ಮುಕ್ತಿ ಹೊಂದಲು! ಕಾದು ನೋಡೋಣ.
ಅಪರೂಪದ್ದಾದ ಹಣ್ಣಿನ ತಳಿ ಅರಸುವುದು ಅನಿಲ್ ಹವ್ಯಾಸ. ಎಳವೆಯಲ್ಲೇ ಕೃಷಿಯನ್ನು ತಂದೆ ಕೃಷ್ಣ ಭಟ್ಟರ ಪ್ರೇರಣೆಯೊಂದಿಗೆ ಹೆಗಲಿಗೇರಿಸಿಕೊಂಡರು. ಕೃಷಿಯೊಂದಿಗೆ ತಳಿ ಹುಡುಕಾಟ ರೂಢಿ. ಹೊಸತರ ಹುಡುಕಾಟ. ಹಲವು ಮಂದಿ ಕೃಷಿಕರ, ಹಣ್ಣುಪ್ರಿಯರ ಸಂಪರ್ಕ. ಪರಿಣಾಮ, ಸುಮಾರು ಇನ್ನೂರರ ಹತ್ತಿರ ಹೊಸ ಹಣ್ಣುಗಳ ತಳಿ ತಿಜೋರಿ ಹಿರಿದಾಗುತ್ತಿದೆ.
ಅನಿಲ್ ಎಲ್ಲೇ ಪ್ರವಾಸಕ್ಕೆ ಹೋಗಲಿ, ಅವರ ಜೇಬಿನಲ್ಲೊಂದು ಸಣ್ಣ ಚೂರಿಯಿರುತ್ತದೆ. ದೇಹ ರಕ್ಷಣೆಗಲ್ಲ, ತನ್ನಲ್ಲಿಲ್ಲದ ಹೊಸ ತಳಿ ಗೋಚರಕ್ಕೆ ಬಿದ್ದರೆ ಸಾಕು, ಕುಡಿಯನ್ನು ಆಯ್ದುಕೊಳ್ಳುತ್ತಾರೆ. ಅದನ್ನು ಅಭಿವೃದ್ಧಿಪಡಿಸುತ್ತಾರೆ. ಸ್ನೇಹಿತರಿಗೆ, ಆಪ್ತರಲ್ಲಿ ಅನುಭವ ಹಂಚಿಕೊಳ್ಳುತ್ತಾರೆ. ಈ ಹವ್ಯಾಸವು ಸಾಕಷ್ಟು ಮಂದಿ ತಳಿಪ್ರಿಯರನ್ನು ಅವರಿಗೆ ಒದಗಿಸಿಕೊಟ್ಟಿದೆ.
ಕೃಷಿ ಪತ್ರಿಕೆಗಳ ಕಾಯಂ ಓದುಗ. ಜತೆಗೆ ಪತ್ರಿಕಾ ಓದು. ಅದರಲ್ಲಿ ಕೃಷಿ ಪುರವಣಿಗಳಿಗೆ ಆದ್ಯತೆ. ಕೃಷಿ ಪುಟಗಳಲ್ಲಿ ಪ್ರಕಟಗೊಳ್ಳುವ ಹೊಸತರ ಮಾಹಿತಿಯನ್ನು ಬೆನ್ನಟ್ಟುತ್ತಾರೆ. ಮೊದಲಿಗೆ ಮಾಹಿತಿಯ ಸಾಚಾತನದ ಪರೀಕ್ಷೆ. ಮೊದಲ ಮಾತುಕತೆಯಲ್ಲೇ ಪರೀಕ್ಷೆ ಮುಗಿದುಹೋಗುತ್ತದೆ ಎನ್ನುತ್ತಾರೆ. ವಿಶೇಷ ಎಂದಾದರೆ ಎಷ್ಟೇ ದೂರವಾದರೂ ಅನಿಲ್ ಹಿಂಜರಿಯುವುದಿಲ್ಲ. ಅದನ್ನು ಪಡೆದು, ಆರೈಕೆ ಮಾಡಿ ಅಭಿವೃದ್ಧಿಪಡಿಸುತ್ತಾರೆ. ಹೊಸ ಸುಳಿವು ಸಿಕ್ಕರೆ ಅದನ್ನು ದಾಖಲಿಸಿಡುತ್ತಾರೆ.
ಬೆಂಗಳೂರಿಗೆ ಹೋದಾಗಲೆಲ್ಲಾ ಅಲ್ಲಿರುವ ಮಾಲ್, ಬಿಗ್ ಬಜಾರಿಗೆ ಕಾಯಂ ಭೇಟಿ. ಹಣ್ಣು ವ್ಯಾಪಾರಿಗಳೊಂದಿಗೆ ಸಂಪರ್ಕ. ಇಲ್ಲಿಗೆ ಹೊರ ರಾಜ್ಯ, ದೇಶಗಳ ಹಣ್ಣುಗಳು ಸಾಕಷ್ಟು ಬರುತ್ತವೆ. ಹಣ್ಣು ಖರೀದಿಸಿದರೆ ಬೀಜವೂ ಲಭ್ಯ ತಾನೆ? ಹೀಗೆ ಹೋದುದರಿಂದ ನ್ಯೂಜಿಲೆಂಡಿನ ಕಿವಿ ಹಣ್ಣು, ಮ್ಯಾಂಡರಿನ್ ಕಿತ್ತಳೆ, ಲಾಂಗಾನ್.. ಮೊದಲಾದ ಹಣ್ಣಿನ ಸಂಗ್ರಹವಾಯಿತು ಎನ್ನುತ್ತಾರೆ.
ಹೊಸ ಮಾಹಿತಿಗಳಿಗಾಗಿ ನರ್ಸರಿಗಳ ಸದಾ ಸಂಪರ್ಕ ಹೊಂದಿದ್ದಾರೆ. ತನ್ನೂರಿನಿಂದ ರಬ್ಬರ್ ಗಿಡಗಳಿಗಾಗಿ ಕೇರಳಕ್ಕೆ ನರ್ಸರಿಯವರು ಆಗಾಗ್ಗೆ ಪ್ರಯಾಣ ಮಾಡುತ್ತಿರುತ್ತಾರೆ. ಅವರ ಸ್ನೇಹ ಸಂಪಾದನೆ. ಅಲ್ಲಿಂದ ಹಣ್ಣುಗಳ ಗಿಡಗಳನ್ನು ತರಿಸಿಕೊಳ್ಳುತ್ತಾರೆ. ಸಾಂಟಾಲ್, ಪಿಸ್ತಾ, ನಿಂಬೆ, ಪೇರಳೆ, ಮಿಲ್ಕಿ ಹಣ್ಣುಗಳು ಕೇರಳದಿಂದ ಅನಿಲ್ ಹಿತ್ತಿಲಿಗೆ ಬಂದಿವೆ.
ಅನಿಲ್ ಪ್ರವಾಸ ಹೋಗುವಾಗಲೆಲ್ಲಾ ಕ್ಯಾಮೆರಾ ಕೈಯಲ್ಲಿರುತ್ತದೆ. ಹೊಸ ಹಣ್ಣುಗಳು ಪತ್ತೆಯಾದರೆ ಕ್ಲಿಕ್ಕಿಸಿ ಅದರ ಜಾತಕ ಜಾಲಾಡುತ್ತಾರೆ. ಜಾಲತಾಣಗಳಲ್ಲೂ ಹುಡುಕುತ್ತಾರೆ. ಹೀಗೆ ಬಳಿಗೆ ಬಂದಿದೆ, ಪೆಪಿನೋ. ಸಾಮಾನ್ಯವಾಗಿ ಸೀಮೆ ಬದನೆಯನ್ನು ಹೋಲುವ ಕಾಯಿ. ಹಣ್ಣಾದಾಗ ಟೊಮೆಟೊವನ್ನು ನೆನಪಿಸುತ್ತದಂತೆ. ಹಿಂದಿನ ವರುಷ ಯಥೇಚ್ಛ ಕಾಯಿಗಳಾಗಿದ್ದವು. ಕಳೆದ ಋತುವಿನಲ್ಲಿ ವಿಪರೀತ ಮಳೆಯಿಂದಾಗಿ ಬೆಳವಣಿಗೆ ಅಷ್ಟಕ್ಕಷ್ಟೇ. ಈಗ ಪುನಃ ಚೇತರಿಸುತ್ತಿದೆ.
ಜ್ಯೂಸಿಗೆ ಆಗುವಂತಹ ಚೈನಾ ಆರೆಂಜ್, ಬಾರ್ಬಡೋಸ್ ಚೆರ್ರಿ, ಸಿಹಿ ಪುನರ್ಪುಳಿ, ಪುಲಾಸಾನ್, ಬೀಜರಹಿತ ನೇರಳೆ, ಥಾಯ್ಲ್ಯಾಂಡ್ ಚಕ್ಕೋತ, ಆಲದ ಪೇರಳೆ, ಕಂಬಳಿ ಹಣ್ಣು, ಟ್ರೀ ಟೊಮೆಟೋ, ಕುಮ್ಕಾಟ್, ಕಿನೋ, ಡ್ರಾಗನ್ಫ್ರುಟ್, ಕೆಂಪು ಹುಣಸೆ, ಮೆಕೆಡೆಮಿಯಾ, ವೆಲ್ವೆಟ್ ಆಪಲ್, ರೆಡ್ ಆಪಲ್, ಕೋಲಾನಟ್, ಸಿಹಿಕರಂಡೆ, ಸಕ್ಕರೆ ಬಾದಾಮಿ, ಸ್ವೀಟ್ ಲುವಿ, ಬಿಳಿ ಸಪೋಟ, ಕೈಮಿತೋ... ಹೀಗೆ ಒಂದೇ ಎರಡೇ.. ಪರಿಚಿತವಲ್ಲದ ಹಣ್ಣುಗಳ ತಿಜೋರಿ. ಗಿಡಗಳ ಹುಚ್ಚು ಇರುವವರಿಗೆ ಕಸಿ ಕಟ್ಟುವ ವಿದೈಯೂ ಗೊತ್ತಿರಬೇಕು. ಆಗ ತಳಿ ಸಂರಕ್ಷಣೆ ಮಾಡಲು ಸುಲಭ ಎನ್ನುವುದು ಅನಿಲ್ ಅನುಭವ. ಕೇಪು (ದ.ಕ.) ಹಲಸುಸ್ನೇಹಿ ಕೂಟದ ಹಲಸು ಆಂದೋಳನದಲ್ಲಿ ಅನಿಲ್ ಸಕ್ರಿಯ. ಇವರ ಸಂಪರ್ಕದಿಂದಾಗಿ ತನ್ನ ತೋಟದಲ್ಲಿ ಎಪ್ಪತ್ತೈದಕ್ಕೂ ಮಿಕ್ಕಿ ಹಲಸಿನ ವೆರೈಟಿ ಸಲಹುತ್ತಿದ್ದಾರೆ. ಮನೆಯ ಸುತ್ತಲಿನ ಒಂದೆಕ್ರೆಯಲ್ಲಿ ಕನಸಿನ ಹಣ್ಣಿನ ತೋಟ ರೂಪುಗೊಳ್ಳುತ್ತಿದೆ. ಹಣವೊಂದೇ ಬದುಕು ಅಲ್ಲ. ಬದುಕಿನೊಂದಿಗೆ ಪ್ರಕೃತಿಸ್ನೇಹಿ ಹವ್ಯಾಸಗಳಿರಬೇಕು- ಅನಿಲ್ ಆಗಾಗ್ಗೆ ಹೇಳುವ ಮಾತು.
ಯುವ ಕೃಷಿಕರ ಅನಿಲ್ ಬಳೆಂಜರ ಮೂರನೇ ಕಣ್ಣು ಸದಾ ಜಾಗೃತ. ಕಿರು ವಯಸ್ಸಲ್ಲಿ ಹಿರಿ ಹೆಜ್ಜೆಯಿಡುವ ಯತ್ನ. ಅವರ ಆಸಕ್ತಿ, ಪ್ರೀತಿ, ದೂರದೃಷ್ಟಿ ಮತ್ತು ಬದುಕಿನ ಕುರಿತಾದ ನಿರ್ದಿಷ್ಟ ನೋಟಗಳು ಅವರ ಯತ್ನಪಥದ ಮೈಲಿಕಲ್ಲುಗಳು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೆಂದರೆ ಇವೆಲ್ಲವೂ ತನ್ನ ಆಸಕ್ತಿಗಾಗಿ ಮಾತ್ರ ಬೆಳೆಯುತ್ತಿದ್ದಾರೆ. ಮಾರುಕಟ್ಟೆಗಾಗಿ ಅಲ್ಲ.
= ನಾ. ಕಾರಂತ ಪೆರಾಜೆ