ವೃಕ್ಷ ಲಕ್ಷ

ವೃಕ್ಷ ಲಕ್ಷ
Updated on: 

ರೇವಣ್ಣಪ್ಪ ಈ ಇಳಿ ವಯಸ್ಸಿನಲ್ಲಿ ಮನೆಯಲ್ಲಿ ತಣ್ಣಗೆ ಕುಳಿತು ಪಿಂಚಣಿ ಹಣದಲ್ಲಿ ಹಾಯಾಗಿ ಇರಬಹುದಿತ್ತು. ಆದರೆ, ಮಣ್ಣಿನ ನಂಟು ಕೃಷಿಯಿಂದ ಅವರನ್ನು ವಿಮುಖಗೊಳಿಸಲಿಲ್ಲ. ಹಾಗಾಗಿಯೇ ಅವರನ್ನು ಒಬ್ಬ ಯಶಸ್ವಿ ಕೃಷಿಕರನ್ನಾಗಿ ರೂಪಿಸಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ನಿವೃತ್ತ ಶಿಕ್ಷಕ ಕೆ.ವಿ. ರೇವಣ್ಣಪ್ಪ ಅವರು ಶಿಕ್ಷಕ ವೃತ್ತಿಯಲ್ಲಿದ್ದಾಗ ಕೃಷಿಯನ್ನು ಪಾರ್ಟ್ ಟೈಮ್ ಮಾಡಿಕೊಂಡಿದ್ದರು. ನಿವೃತ್ತರಾದ ಕೂಡಲೇ ಫುಲ್ ಟೈಮ್ ಕೃಷಿಕ. ಅವರ ಜಮೀನು ಕೃಷಿಕರ ಅಧ್ಯಯನ ಕೇಂದ್ರವಾಗಿದ್ದು ಮತ್ತೊಂದು ವಿಶೇಷ.
ಸಾಂಪ್ರದಾಯಿಕ ಬೇಸಾಯದ ಜತೆಗೆ ವೃಕ್ಷ ಕೃಷಿ ಮಾಡಿದ್ದರಿಂದ ಇಂದು ರೇವಣ್ಣಪ್ಪ ಅಪ್ಪಟ ವೃಕ್ಷ ಕೃಷಿಯ ಋಷಿ. ಅವರ ಜಮೀನಿನ ಒಂದು ಭಾಗ ವಿವಿಧ ಜಾತಿ ಮರ- ಗಿಡಗಳಿವೆ. ಜಮೀನು ಹಣ ನೀಡುವ ಅಕ್ಷಯ ಪಾತ್ರೆ.
ಪಾಠದ ಜತೆ ಕೃಷಿ
ಕೆ.ವಿ ರೇವಣ್ಣಪ್ಪ ಅವರು ಕೃಷಿಗೆ ಬಂದಿದ್ದೂ ಆಕಸ್ಮಿಕ. ನಾಲ್ಕೈದು ದಶಕದ ಹಿಂದೆ ಪಟ್ಟಣದ ಬೆಂಗಳೂರು ರಸ್ತೆಯಲ್ಲಿ ಐದು ಎಕರೆ ಖುಷ್ಕಿ, ಸವಳು ಜಮೀನು ಮಾರಾಟಕ್ಕೆ ಅಣಿಯಾಗಿತ್ತು. ಇಂತಹ ಸಾರರಹಿತ ಭೂಮಿ ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಈ ವೇಳೆ ರೇವಣ್ಣಪ್ಪ ತಮ್ಮ ಸಂಬಳದಲ್ಲಿ ಕೂಡಿಟ್ಟ ಹಣದಿಂದ ಭೂಮಿ ಖರೀದಿಸಿದರು. ಖರೀದಿಸಿದ ಮೇಲೆ ಬೀಳು ಬಿಟ್ಟರೆ ಜಮೀನಿಗೆ ಶೋಭೆಯಲ್ಲ ಎಂದು ನಿರ್ಧರಿಸಿದರು. ಆದರೆ, ಅದರಲ್ಲಿ ಹುಲ್ಲು ಸಹ ಹುಲುಸಾಗಿ ಬೆಳೆಯುವುದು ಅಸಾಧ್ಯ ಎನ್ನುವಂತಿತ್ತು. ಹಾಗಂತ ರೇವಣ್ಣಪ್ಪ ಕೈ ಚೆಲ್ಲಲಿಲ್ಲ. ಇವರ ಇಚ್ಛಾಶಕ್ತಿ, ದೃಢಸಂಕಲ್ಪ ಕೆಲಸ ಮಾಡಿತು.
ನಿರಂತರ ಪರಿಶ್ರಮ
ರೇವಣ್ಣಪ್ಪ ಅವರು ಬಿಡುವಿನ ವೇಳೆ, ರಜಾ ದಿನಗಳಲ್ಲಿ ಸಮೀಪದ ಕೆ.ಕೆ. ಹಟ್ಟಿ ಕೆರೆ, ಹಳ್ಳದಿಂದ ಫಲವತ್ತಾದ ಮಣ್ಣನ್ನು ಹಗಲಿರುಳು ಎನ್ನದೆ ಹೊಲಕ್ಕೆ ತಂದು ಚೆಲ್ಲಿದರು. ಇದಕ್ಕೆ ಮಗ ಕೊಟ್ರೇಶ್ ಕೈಜೋಡಿಸಿದರು. ಕೊಟ್ಟಿಗೆ, ಕುರಿ ಗೊಬ್ಬರ ಕೊಂಡು ಹಾಕಿದರು. ಇದರಿಂದ ಸವುಳು ಭೂಮಿ ಫಲವತ್ತಾಯಿತು. ಮೊದಲು ಮಳೆಯಾಶ್ರಿತ ಬೆಳೆ ಪ್ರಾರಂಭಿಸಿದರು. ಬಳಿಕ ರೇವಣ್ಣಪ್ಪ ಬೋರವೆಲ್ ಹಾಕಿಸಿದರು. ಸಾಂಪ್ರದಾಯಿಕ ಬೆಳೆ ಜತೆಗೆ ವಾಣಿಜ್ಯ ಬೆಳೆಗತ್ತ ಮುಖ ಮಾಡಿದರು. ಸತತ 12 ವರ್ಷ ಕಬ್ಬು ಬೆಳೆದರು. ಇದರಲ್ಲಿ ವೈಜ್ಞಾನಿಕ, ಹೊಸ ತಂತ್ರ ಅನುಸರಿಸಿದ್ದರಿಂದ ಬಂಪರ್ ಇಳುವರಿ ಬಂದಿತು. ಶಿಕ್ಷಕರ ಈ ಸಾಧನೆ ಕೇಳಿ ಕಬ್ಬು ನೋಡಲು ಅನೇಕ ರೈತರು ಇವರ ಹೊಲದೆಡೆಗೆ ಬಂದು ರೇವಣ್ಣಪ್ಪರ ಹಾದಿ ತುಳಿದು ಯಶಸ್ಸನ್ನೂ ಕಂಡರು. ಕೃಷಿಯಲ್ಲಿ ಹಿಡಿತ ಸಿಕ್ಕ ಮೇಲೆ ಹಲವು ಪ್ರಯೋಗ ಮಾಡಿದರು. ಅಂತಹ ಪ್ರಯೋಗಗಳಲ್ಲಿ ವೃಕ್ಷ ಕೃಷಿಯೂ ಒಂದು.
ಮಿನಿ ಫಾರೆಸ್ಟ್
ರಟ್ಟೆಯಲ್ಲಿ ಕಸುವು ಇದ್ದುದರಿಂದ ಸತತ ಮೂರು ದಶಕ ಶ್ರಮ ವಹಿಸಿ ದುಡಿದರು. ಮುಂದೆ ಈಗಿನಷ್ಟು ಬೇಸಾಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲವೆಂಬ ಸತ್ಯ ಮನವರಿಕೆಯಾಗಿತು. ಇದರ ಫಲವೇ ಇಂದು ಇವರ ಹೊಲದ ಒಂದು ಭಾಗದ ಮಿನಿ ಫಾರೆಸ್ಟ್. ಇದಕ್ಕೆಂದೇ ಒಂದು ಎಕರೆ ಮೀಸಲಿಟ್ಟಿದ್ದಾರೆ.
ಯಾವ್ಯಾವ ಗಿಡ-ಮರಗಳಿವೆ?
ಮಗ ಕೊಟ್ರೇಶ್‌ನ ಸಾಥ್‌ನಿಂದ ಮಿತ ನೀರು, ಶ್ರಮ ಬೇಡುವ ಆದರೆ, ಗರಿಷ್ಠ ಲಾಭ ನೀಡುವ ಸಾಗುವಾನಿ ಸಸಿ ತಂದು 10್ಢ10 ಅಂತರದಲ್ಲಿ 220 ಸಸಿ ನೆಟ್ಟರು. 60 ತಿಪಟೂರು ತೆಂಗು, 20 ನಿಂಬೆ, 30 ಕರಿಬೇವು, 6 ಮಾವು, 10 ಹುಣಸೆ ಸಸಿ ಹಾಕಿದರು. ಇವುಗಳಿಗೆ ಕೆಮ್ಮಣ್ಣು, ಮರಳು, ಕುರಿ, ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ಕಾಲ ಕಾಲಕ್ಕೆ ಹಾಕಿದರು.
ನಿರ್ವಹಣೆ
ಗಿಡಗಳ ಮಧ್ಯೆ ಯಥೇಚ್ಛವಾಗಿ ಮಳೆ ನೀರು ಇಂಗುವ ವ್ಯವಸ್ಥೆ ಮಾಡಿದರು. ಇದರಿಂದ ಅಂತರ್ಜಲ ವೃದ್ಧಿಯಾಗಿ, ಇವೆಲ್ಲಾ ಮೂರ್ನಾಲ್ಕು ವರ್ಷಗಳಲ್ಲಿ ನೀರು ಬೇಡದೆ ಕೇವಲ ಮಳೆ, ಅಂತರ್ಜಲ ಬಳಸಿ ಸೊಂಪಾಗಿ ಬೆಳೆದವು. ಟೀಕ್ ಸಸಿ ನೆಟ್ಟ ಪ್ರಾರಂಭದಲ್ಲಿ ನಡುವೆ ಸೌತೆ, ಬದನೆ, ಮೆಣಸಿನಕಾಯಿ ಹೀಗೆ ಸತತ ಮೂರು ವರ್ಷ ತರೇಹವಾರಿ ತರಕಾರಿ ಬೆಳೆದು ಹಣ ಗಳಿಸಿದ್ದಾರೆ. ಇದರಿಂದ ಟೀಕ್ ಸಸಿಗೆ ಮಾಡಿದ ಖರ್ಚನ್ನು ಮಿಶ್ರ ಬೆಳೆಯಿಂದಲೇ ತೆಗೆದಿದ್ದಾರೆ. ತೇಗ ಬೆಳೆದಂತೆಲ್ಲಾ ಅದರ ತರಗೆಲೆಗಳು ಬಿದ್ದ ಜಾಗದಲ್ಲಿಯೇ ಮಣ್ಣಾಗುವಂತೆ ಮಾಡಿದರು. ಇದರಿಂದ ಮಣ್ಣು ತೇವಾಂಶ ಕಾಪಿಡುವುದರ ಜತೆಗೆ ಎರೆಹುಳ ಗೊಬ್ಬರ ಉತ್ಪತ್ತಿಯಾಗಿ ಗಿಡಗಳ ಬೆಳವಣಿಗೆ ಸಹಕಾರಿಯಾಗಿದೆ.

ಭಾರಿ ಆದಾಯ ನಿರೀಕ್ಷೆ
ರೇವಣ್ಣಪ್ಪ ಅವರ ವೃಕ್ಷ ಕೃಷಿಯಲ್ಲಿ ಬೆಳೆಸಿದ ತೇಗದ ಮರಗಳ ಆಯುಷ್ಯವೀಗ 18 ವರ್ಷ. ಇನ್ನೇನು ಐದಾರು ವರ್ಷ ಬಿಟ್ಟರೆ ಈ ತೇಗಕ್ಕೆ ಭಾರಿ ಬೆಲೆ ಸಿಗಲಿದೆ. ಈಗ ಮಾರುಕಟ್ಟೆಯಲ್ಲಿ 1 ಘನ ಅಡಿಗೆ 2800- 2900 ರವರೆಗೆ ಇದೆ. ಹೀಗಾಗಿ ಇವರ ತೋಟದ ಟೀಕ್‌ಗೆ ಲಕ್ಷಗಟ್ಟಲೇ ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದಾರೆ. ಇನ್ನು ತೆಂಗಿನಿಂದ ವರ್ಷಕ್ಕೆ ಕನಿಷ್ಠ 30,000, ಹುಣಸೆ ಮರಗಳಿಂದ 10,000 ಆದಾಯವಿದೆ. ನಿಂಬೆ, ಮಾವು, ಕರಿಬೇವುಗಳದ್ದೇ ಬೇರೆ ಲೆಕ್ಕ. ಈ ವೃಕ್ಷಗಳ ಆರೈಕೆಯನ್ನು ಇಂದಿಗೂ ತಾವೇ ಮಾಡುವ ರೇವಣ್ಣಪ್ಪ(ಮೊ. 9449950482) ಉಳಿದ ಜಮೀನಿನ ಕೆಲಸವನ್ನು ಆಳುಗಳಿಂದ ಮಾಡಿಸುತ್ತಾರೆ. ಈ ವಯಸ್ಸಿನಲ್ಲಿಯೂ ದಿನದಲ್ಲಿ ಕನಿಷ್ಠ 10 ಗಂಟೆ ಹೊಲದಲ್ಲಿಯೇ ಕಳೆಯುವ ಇವರು ಮೇಟಿ ವಿದ್ಯೆಯೇ ಮೇಲು ಎನ್ನುತ್ತಾರೆ.

= ಸ್ವರೂಪಾನಂದ ಎಂ. ಕೊಟ್ಟೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com