

ಸೀತಾಫಲ ಕಾಡು ಬೆಳೆ. ಅಂದರೆ ಕಾಡಿನಲ್ಲಿ ಗಿಡ- ಮರ ಯಾವುದೇ ನಿರ್ವಹಣೆ ಇಲ್ಲದೆ ಹೇಗೆ ಬೆಳೆಯುತ್ತವೆಯೋ ಹಾಗೆ ಇದನ್ನು ಬೆಳೆಯಬಹುದು. ನಿರ್ವಹಣಾ ಕ್ರಮ ಕೈಗೊಂಡರೆ ಇಳುವರಿ ಜಾಸ್ತಿ ಬರುತ್ತದೆ. ಇದರಲ್ಲಿ ವಿಟಮಿನ್ ಎ, ಇ ಮತ್ತು ಸಿ ಅಂಶ ಇದೆ.
ಬೆಳೆಯುವ ವಿಧಾನ
ಸಸಿಯನ್ನು ಮೊದಲು 15x15 ಅಡಿ ಅಂತರದಲ್ಲಿ ಮತ್ತು 1್ಢ1 ಅಡಿ ಅಂತರದಲ್ಲಿ ಗುಂಡಿ ತೋಡಿ ನಾಟಿ ಮಾಡಬೇಕು. ನಾಟಿ ಪೂರ್ವದಲ್ಲಿ ಅಗತ್ಯಕ್ಕೆ ತಕ್ಕಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು. ಇನ್ನು ನಿಯಮಿತವಾಗಿ ನೀರು ಹಾಯಿಸಲೇಬೇಕಿಲ್ಲ. ಮಳೆಯ ನೀರಿನಿಂದಲೇ ಬೆಳೆಯುತ್ತದೆ. ಜಾಸ್ತಿ ನಿರ್ವಹಣೆಯನ್ನೂ ಬಯಸುವುದಿಲ್ಲ. ಅಲ್ಲದೆ, ರೋಗ, ಕೀಟಗಳ ಹಾವಳಿ ಇದಕ್ಕಿಲ್ಲ. ನಾಟಿ ಮಾಡಿದ 3ನೇ ವರ್ಷದಿಂದ ಫಸಲು ನೀಡಲಾರಂಭಿಸುತ್ತದೆ. ಇನ್ನು ಸಸಿ ನಾಟಿ ಮಾಡಿದ 5- 6 ವರ್ಷದವರೆಗೆ ಅಂತರ ಬೆಳೆಯಾಗಿ ತರಕಾರಿ ಬೆಳೆಯಬಹುದು. ಇದರಿಂದ ಸೀತಾಫಲ ಗಿಡಕ್ಕೆ ಬೇಕಾಗುವ ಸಾರಜನಕವೂ ಸಿಗುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ವರ್ಷಕ್ಕೆ ಪ್ರತಿ ಗಿಡದಿಂದ 5- 10 ಕೆಜಿ ಇಳುವರಿ ಪಡೆಯಬಹುದು. ಅಲ್ಲದೆ, 15- 20 ವರ್ಷದವರೆಗೆ ಗಿಡ ಬಾಳಿಕೆ ಬರುತ್ತದೆ.
ತಳಿಗಳು
ಇದರಲ್ಲಿ ಬಾಲನಗರ್, ಕೆಂಪು ತಳಿ, ಮಮ್ಮೈತ್, ಚೆರಿಮೋಯ್ ಮೊದಲಾದ ತಳಿಗಳು ಬಳಕೆಯಲ್ಲಿವೆ.
ಮಣ್ಣು
ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತದೆ. ಇದಕ್ಕೆ ಬರ ನಿರೋಧಕ ಶಕ್ತಿ ಇದೆ. ಹಾಗಾಗಿಯೇ ಇದು ಕಡಿಮೆ ಫಲವತ್ತತೆ ಮತ್ತು ಕಡಿಮೆ ಮಳೆಯಾಗುವ ಪ್ರದೇಶದಲ್ಲೂ ಬೆಳೆಯುತ್ತದೆ.
ಉಪಯೋಗ
ಸೀತಾಫಲ ಬರೀ ಹಣ್ಣು ಅಷ್ಟೇ ಅಲ್ಲದೆ, ಮರದ ಪ್ರತಿಯೊಂದು ಭಾಗದಿಂದಲೂ ಉಪಯೋಗವಿದೆ. ಅದರ ಎಲೆಯಿಂದ ಔಷಧ ತಯಾರಿಸಬಹುದು. ಕಾಂಡದಿಂದ ಪೀಠೋಪಕರಣ ಮತ್ತು ಬೀಜದಿಂದ ಸಾಬೂನು, ಕೀಟನಾಶಕ ತಯಾರಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹನುಮಾಪುರದೊಡ್ಡಿಯ ಆರ್. ಶಿವರಾಜು (9980751919) ಅವರನ್ನು ಸಂಪರ್ಕಿಸಬಹುದು.
ಮಹೇಶ್ ಅರಳಿ