

ಬೇಸಾಯದಲ್ಲಿ ನೀರಿನ ಅನುಕೂಲತೆ ಸಿಕ್ಕ ತಕ್ಷಣ ವಾಣಿಜ್ಯ ಬೆಳೆಗಳಿಗೆ ಬದಲಾಗುವ ಹಲವಾರು ಕೃಷಿಕರನ್ನು ಕಾಣಬಹುದು. ಇಂಥ ಪರಿಸ್ಥಿತಿಯಲ್ಲಿ ಕಳೆದು ಹೋಗುತ್ತಿರುವ ಜೀವ ವೈವಿಧ್ಯ ಉಳಿಸುವ, ಸಂರಕ್ಷಿಸುವ ದಿಶೆಯಲ್ಲಿ ಮುನ್ನಡೆ ಸಾಧಿಸುವವರೂ ಸಿಗುತ್ತಾರೆ. ಅಂಥವರಲ್ಲಿ ಒಬ್ಬರು ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ.
ಸಾವಯವ ವಿಧಾನ
ಅವರ 5 ಎಕರೆ ಜಮೀನಿನಲ್ಲಿ 20 ಜೋಳದ ತಳಿಗಳನ್ನು ಕಾಣಬಹುದು. ಎರಡು ವರ್ಷದಿಂದ ಸಾವಯವ ಕೃಷಿ ಅನುಸರಿಸುತ್ತಿದ್ದಾರೆ. ಒಂದು ಎಕರೆಯಲ್ಲಿ ಜವಾರಿ ಟೊಮೆಟೊ, ತರಕಾರಿ, ಸೋಯಾ ಅವರೆ, ಗೋವಿನಜೋಳ ಬೆಳೆಯುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ತೃಣ ಧಾನ್ಯಗಳಾದ ಸಾವೆ, ನವಣೆ, ಬರಗು ಬೆಳೆಯುತ್ತಾರೆ. ಅಲ್ಲದೆ, ಹಾರಕ, ಅರ್ಕ ಮೊದಲಾದ ಧಾನ್ಯ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ.
ತಳಿ ಸಂರಕ್ಷಣೆ
ರಾಸಾಯನಿಕ ಬಳಕೆಯಿಂದಾಗಿ ಇಳುವರಿಯಲ್ಲಿ ಕ್ರಮೇಣ ಇಳಿಮುಖ ಕಂಡು ಬರುವುದನ್ನು ಮನಗಂಡ ಕಲ್ಲಪ್ಪ ಸಾವಯವ ಕೃಷಿಯೆಡೆಗೆ ವಾಲಿದರು. ಅವರ ತಂದೆಯವರ ಕಾಲದಿಂದ ಹಲವು ಜೋಳದ ತಳಿಗಳನ್ನು ಬೆಳೆಯುತ್ತ ಬಂದಿದ್ದಾರೆ. ಅವುಗಳನ್ನು ಉಳಿಸಿಕೊಳ್ಳುವ ಜತೆಗೆ ಕಳೆದು ಹೋಗುತ್ತಿರುವ ಹಲವು ತಳಿಗಳನ್ನು ಬಾಗಲಕೋಟೆ, ಬಿಜಾಪುರ, ಮುಧೋಳ, ಜಮಖಂಡಿ ಹಾಗೂ ರಾಜ್ಯದ ವಿವಿಧೆಡೆಗಳಿಂದ ಸಂಗ್ರಹಿಸಿ ತಮ್ಮ ಹೊಲದಲ್ಲಿ ಬಿತ್ತನೆ ಮಾಡಿ ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರಮುಖ ತಳಿಗಳು
ಜೋಳದ ತಳಿಗಳಾದ ಬಾರ್ಶಿ, ಕೆಂಪು ಕಡಬಿನ ಜೋಳ, ಸಕ್ರಿಮುಕ್ರಿ ಜೋಳ, ಗಟ್ಟಿದನಿ, ಬೀಸಗಟ್ಟಿದನಿ, ಕಣ್ಣಮುಚ್ಚುಗ, ದೋಸೆಜೋಳ, ಪುಟಾಣಿ ಜೋಳ, ಫುಲೆ ಯಶೋದಾ, ಪಿಂಜರ ಅಥವಾ ಚೌರಿ ಜೋಳ, ಕಾಲಾಗುಂಡ, ಸೇಡಂ ಜೋಳ, ಮೂಗುತಿ, ಮಾಲ್ದಂಡಿ, ಕೋಡಮುರಕ, ಕಾಗಿ ಮೋತಿ, ಶೇಡಬಾಳ ಮತ್ತು ಕಾರಜೋಳ ಮೊದಲಾದವುಗಳನ್ನು ಕಲ್ಲಪ್ಪ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ.
ಪ್ರತಿ ತಳಿಯನ್ನು ಮುತುವರ್ಜಿ ವಹಿಸಿ ಕೈಯಿಂದ ರಾಶಿ ಮಾಡುತ್ತಾರೆ. ಕೃಷಿ ಮೇಳ, ಕೃಷಿ ಉತ್ಸವ ಹಾಗೂ ಕೃಷಿ ಸಂಬಂಧಿತ ಸಭೆ- ಸಮಾರಂಭಗಳಲ್ಲಿ ತಪ್ಪದೆ ಭಾಗವಹಿಸಿ ಬೀಜ ಸಂರಕ್ಷಣೆಯ ಮಹತ್ವ ತಿಳಿಹೇಳುತ್ತಾರೆ. ರುಚಿ- ರುಚಿಯಾದ ರೊಟ್ಟಿ, ಬಾನ, ನುಚ್ಚು, ಅಂಬಲಿ, ಮುದ್ದೆ, ಕಡಬು, ಅರಳು ಹೀಗೆ ಹಲವು ಬಗೆಯ ಖಾದ್ಯ ತಯಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸುವ ಜೋಳವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ ಎನ್ನುವುದು ಅವರ ಕಾಳಜಿ.
ಮಾರುಕಟ್ಟೆ ಸಮಸ್ಯೆ ಇಲ್ಲ
ಈ ಎಲ್ಲ ತಳಿಗಳಿಗೆ ಸುತ್ತಲಿನ ಹಾಗೂ ಇತರ ರೈತರಿಂದ ಬೇಡಿಕೆ ಹೆಚ್ಚಿದೆ. ಅಲ್ಲದೆ, ಮಾರಾಟದ ಚಿಂತೆ ಇಲ್ಲ ಅಂತಾರೆ ಕಲ್ಲಪ್ಪ. 2013ರ ಧಾರವಾಡ ಕೃಷಿ ಮೇಳದಲ್ಲಿ 28000 ಮೌಲ್ಯದ ಬೀಜ ಮಾರಾಟವಾಗಿವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಬೇಡಿಕೆಗನುಗುಣವಾಗಿ ಹೆಚ್ಚಿನ ರೈತರಿಗೆ ಕಾಳು ಪೂರೈಸಲು ಆಗದ ಕಾರಣ ಬಿತ್ತನೆ ಬೀಜಗಳನ್ನು ಆಸಕ್ತ ರೈತರಿಗೆ ಹಂಚಿ ತಳಿ ಸಂರಕ್ಷಣಾ ಜಾಗೃತಿ ವಹಿಸುತ್ತಿದ್ದಾರೆ ಕಲ್ಲಪ್ಪ ನೇಗಿನಹಾಳ(9980634062).
-ಶೈಲಜಾ ಬೆಳ್ಳಂಕಿಮಠ