ಹಸಿರು ರಕ್ಷಕ

ಈತನ ಹೆಸರು ಭಟ್ರಹಳ್ಳಿ ಗೂಳೆಪ್ಪ. ಪಾದರಸದಂಥ ವ್ಯಕ್ತಿತ್ವ. ಈತ ಕಾಡಿನಲ್ಲಿ...
ಹಸಿರು ರಕ್ಷಕ
Updated on: 

ಪರಿಸರ ರಕ್ಷಣೆ ಎಲ್ಲರ ಹೊಣೆ ಎಂದು ನಾವೆಲ್ಲ ಕೇಳಿರುತ್ತೇವೆ. ಆದರೆ, ಎಷ್ಟು ಮಂದಿ ಇದನ್ನು ಅನುಷ್ಠಾನಕ್ಕೆ ತರುತ್ತಾರೆ? ಆದರೆ, ಇಲ್ಲೊಬ್ಬ ವ್ಯಕ್ತಿ ಸ್ವಯಂಪ್ರೇರಿತರಾಗಿ ಹಸಿರು ರಕ್ಷಣೆ ದೀಕ್ಷೆ ತೊಟ್ಟಿದ್ದಾನೆ. ಆ ಮೂಲಕ ಯಾರ ನೆರವು ಬಯಸದೇ ನೂರಾರು ಗಿಡ ನೆಟ್ಟು, ಅವುಗಳನ್ನು ತನ್ನ ಕುಟುಂಬದ ಸದಸ್ಯರಂತೆ ಪೋಷಿಸುತ್ತಿದ್ದಾನೆ.

ಪ್ರಾಣಿಗಳ ನಿವಾಸ
ಈತ ನಿರಂತರ 22 ವರ್ಷಗಳಿಂದ ತಾನೇ ನೆಟ್ಟ ಗಿಡ ಬೆಳೆಸುತ್ತಿದ್ದಾನೆ. ಇಂದಿಗೂ ಸರ್ಕಾರದ ಬಿಡಿಗಾಸು ಬಯಸದೆ 50ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವಲ್ಲದೆ, ಇತರೆ ನೂರಾರು ಹೆಕ್ಟೇರ್ ಬೆಟ್ಟ, ಗುಡ್ಡದ ನೈಸರ್ಗಿಕ ಅರಣ್ಯ ರಕ್ಷಿಸುತ್ತಾ ಬಂದಿದ್ದಾನೆ. ಈತ ಬೆಳೆಸಿದ ಪೊಗದಸ್ತಾದ ಅರಣ್ಯದಲ್ಲಿ ನೂರಾರು ಕರಡಿ, ಕಾಡು ಹಂದಿಗಳು, ನೂರಾರು ಜಾತಿಯ ಪ್ರಾಣಿ, ಪಕ್ಷಿಗಳು ವಾಸಿಸುತ್ತವೆ.

ಪಾದರಸದಂಥ ವ್ಯಕ್ತಿತ್ವ
ಈತನ ಹೆಸರು ಭಟ್ರಹಳ್ಳಿ ಗೂಳೆಪ್ಪ. ಪಾದರಸದಂಥ ವ್ಯಕ್ತಿತ್ವ. ಈತ ಕಾಡಿನಲ್ಲಿ ಜಿಂಕೆಯಂತೆ ಓಡಾಡುವ ಪರಿ ನೋಡಿದರೆ ಕ್ಷಣಕಾಲ ಎಲ್ಲರಿಗೂ ತಬ್ಬಿಬ್ಬಾಗುತ್ತದೆ. ತಾನಾಯ್ತು ತಾನು ಬೆಳೆಸಿದ ಅರಣ್ಯವಾಯ್ತು, ಅಷ್ಟೇ ಈತನ ಜೀವನ. ಅರಣ್ಯವೇ ಈತನ ಉಸಿರು. ಅನಕ್ಷರಸ್ಥನಾದರೂ ಅದ್ಹೇಗೆ ಅರಣ್ಯ ಬೆಳೆಸಿದ ಪರಿ ನಿಜಕ್ಕೂ ಬೆರಗು ಮೂಡಿಸುವಂಥದ್ದು.

ಕಾವಲುಗಾರ
ಈತ ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಭಟ್ರಹಳ್ಳಿ ಗ್ರಾಮದವ. ಈತ ಕಾಯುತ್ತಿರುವ ಅರಣ್ಯ ಮಾತ್ರ ಪಕ್ಕದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ರಾಯಪುರ ಮತ್ತು ಹಾಲಸಾಗರದ್ದು. ಯಾರಾದರೂ ಮರ ಕಡಿಯಲು ರಾತ್ರಿ ಈತನ ಕಾಡಿಗೆ ಹೋದ್ರೆ ಗಿಡಗಳ ಬುಡದಲ್ಲಿ ಮಲಗಿ 'ಮೊದ್ಲು ನನ್ನ ಕಡೀರಿ. ನಂತರ ಮರ ಕಡೀರಿ' ಎನ್ನುತ್ತಾನೆ. ಹೀಗಾಗಿ ಸುತ್ತ ಹತ್ತಾರು ಹಳ್ಳಿಯಲ್ಲಿ ಗೂಳೆಪ್ಪನ ಅರಣ್ಯಕ್ಕೆ ಯಾರೂ ಕಾಲಿಡಲ್ಲ ಎನ್ನುತ್ತಾನೆ ರಾಯಪುರದ ಓಬಣ್ಣ.
ಇಲ್ಲಿಯ ಗಿಡ ಮರ, ಪೊದೆಗಳಲ್ಲಿ ವಾಸಿಸುವ ನೂರಾರು ಕರಡಿ, ಹಂದಿ ಸೇರಿದಂತೆ ನೂರಾರು ಪ್ರಾಣಿ- ಪಕ್ಷಿಗಳಿಗೆ ಗೂಳೆಪ್ಪನ ಪರಿಚಯವಿದೆ. ಸದಾ ಗಿಡ- ಮರ, ಪ್ರಾಣಿಗಳ ಜತೆಯಲ್ಲೇ ಕಾಲ ಕಳೆಯುವ ಗೂಳೆಪ್ಪನಿಗೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಇಂಚಿಂಚು ಜಾಗವೂ ಗೊತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಅರಣ್ಯ ಕಾಯುವುದನ್ನು ಬಿಟ್ಟಿಲ್ಲ.

ಮುರುಕು ಮನೆಯಲ್ಲೇ ವಾಸ

ಆತನಿಗೆ ನಾಲ್ವರು ಗಂಡು ಮಕ್ಕಳಿದ್ದಾರೆ. ಇರುವ ಒಂದು ಎಕರೆ ಜಮೀನಿನಲ್ಲಿ ಉಳುಮೆ ಮಾಡಿ ಜೀವನ ಸಾಗಿಸುವ ಈ ಕುಟುಂಬ ಮುರುಕು ಮನೆಯಲ್ಲೇ ವಾಸಿಸುತ್ತದೆ. 'ಒಮ್ಮೊಮ್ಮೆ ಅರಾಂ ಇರಲಿಲ್ಲ ಅಂದ್ರೆ ನನ್ನ ಮಕ್ಕಳು, ಹೆಂಡ್ತಿ ಅರಣ್ಯ ಕಾಯಾಕ ಹೋಗ್ತಾರೆ ಸಾರ್‌' ಎನ್ನುತ್ತಾನೆ ಭಟ್ರಹಳ್ಳಿ ಗೂಳೆಪ್ಪ.

ನೂರಾರು ಜಾತಿಯ ಮರಗಳು
ಭಟ್ರಹಳ್ಳಿಯಿಂದ 3 ಕಿ.ಮೀ. ದೂರದಲ್ಲಿರುವ ಈ 50 ಹೆಕ್ಟೇರ್ ಪ್ರದೇಶದಲ್ಲಿ ಹಾಸು, ತುಗ್ಗಲಿ, ಆಲದ ಮರಗಳು, ಬೇವು ಹೀಗೆ ನೂರಾರು ಜಾತಿಯ ಮರಗಳಿವೆ. ಒಂದೊಂದು ಮರ ಸಾವಿರಾರು ರುಪಾಯಿ ಬೆಲೆ ಬಾಳುತ್ತವೆ. ಯಾರಾದ್ರೂ ಅಪ್ಪಿತಪ್ಪಿ ಅರಣ್ಯಕ್ಕೆ ಕಾಲಿಟ್ರೆ ಗೂಳೆಪ್ಪನ ಸಿಳ್ಳೆ, ಅವಾಜ್ ಅಲ್ಲಿ ಮೊಳಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳೇ ಈತನ ಕರ್ತವ್ಯ ನಿಷ್ಠೆ, ಪರಿಸರ ಪ್ರಜ್ಞೆಗೆ ಮಾರುಹೋಗಿದ್ದಾರೆ. 'ನಾನೀಗ ಅರಣ್ಯ ಕಾಯುತ್ತಿರುವ ಕೆಲ್ಸವನ್ನೇ ಸರ್ಕಾರ ನನ್ನ ಒಬ್ಬ ಮಗನಿಗೆ ಕಾಯಂ ಮಾಡಿಬಿಟ್ರೆ ಅಷ್ಟೇ ಸಾಕು, ನಾನು ಹಾಗೂ ನನ್ನ ಕುಟುಂಬ ನೆಮ್ಮದಿಯಾಗಿ ಜೀವನ ಮಾಡ್ಕೊಂಡು ಇರ್ತೀವಿ' ಎನ್ನುತ್ತಾನೆ ಭಟ್ರಹಳ್ಳಿ ಗೂಳೆಪ್ಪ (ಮೊ. 9632940385).

ಬರೋದು ಹೀಗೆ...
ನೀವು ಭಟ್ರಹಳ್ಳಿ ಗೂಳೆಪ್ಪನ ಅರಣ್ಯವನ್ನು ಕೂಡ್ಲಿಗಿ ಅಥವಾ ಮೊಳಕಾಲ್ಮುರಿಗೆ ಬಂದರೆ ಅಲ್ಲಿಂದ ಭಟ್ರಹಳ್ಳಿಗೆ ಬಂದು  ಹಾಲಸಾಗರ ಅರಣ್ಯ ಪ್ರದೇಶಕ್ಕೆ ಹೋಗಬಹುದು. ವಿದ್ಯಾರ್ಥಿಗಳಿಗಂತೂ ಒಂದು ದಿನದ ಪರಿಸರ ತಾಣದ ಪ್ರವಾಸದ ಅನುಭವ ಆಗುತ್ತದೆ.

- ಚಿತ್ರ ಲೇಖನ: ಭೀಮಣ್ಣ ಗಜಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com