

ಸೃಷ್ಟಿ ವೈಚಿತ್ರ್ಯಗಳಿಗೆ ಲೆಕ್ಕವೇ ಇಲ್ಲ. ಆಗಾಗ ಜರುಗುವ ಇಂಥ ಅಪರೂಪದ ವಿದ್ಯಮಾನಗಳು ಮಾನವನನ್ನು ಅಚ್ಚರಿಗೊಳಿಸುತ್ತಿವೆ. ನೋಡುಗರನ್ನು ಚಕಿತಗೊಳಿಸುತ್ತವೆ. ಸ್ವಾರ್ಥಕ್ಕಾಗಿ ನಿಸರ್ಗ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದರೂ ಯಾವುದಾದರೊಂದು ಮೂಲದಿಂದ ನಮಗೆ ನೀರು, ಗಾಳಿಯನ್ನು ಯಥೇಚ್ಛವಾಗಿ ನಿಸರ್ಗ ನೀಡುತ್ತಲೇ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲವೆಡೆ ಇಂಥ ಸೃಷ್ಟಿ ವೈಚಿತ್ರ್ಯಕ್ಕೆ ಸಾಕ್ಷಿಯಾಗಿ ಜೀವಂತ ಸಿಹಿ ನೀರಿನ ಬುಗ್ಗೆಗಳು ದಶಕಗಳಿಂದ ಇಲ್ಲಿನವರ ದಾಹ ತೀರಿಸುತ್ತಿವೆ. ಅಪರೂಪಕ್ಕೊಮ್ಮೆ ಮಳೆ ಬಂದಾಗ ಮಾತ್ರ ಗೋಚರಿಸುವ ಜಲಪಾತಗಳು, ಬಾದಾಮಿ ಪಕ್ಕದ ಸಿಹಿ ನೀರಿನ ಕೊಳವೆ ಬಾವಿ, ಬಾದಾಮಿಯ ಕಲ್ಲು ಬಂಡೆಗಳಿಂದಾಗಿ ಆದಾಗ್ಯೂ 'ಬರದ ನಾಡು' ಎಂದೇ ಖ್ಯಾತಿ ಪಡೆದು, ಕೃಷ್ಣಾ ಹಿನ್ನೀರಿನಿಂದ ಸದಾ ಪ್ರವಾಹಕ್ಕೆ ಬೇಸತ್ತ ಜಿಲ್ಲೆ ಇದೀಗ ನಿರಂತರ ಹರಿಯುವ ನೀರಿನ ಒರತೆಯಿಂದಾಗಿ ಮತ್ತೆ ಸುದ್ದಿಯಲ್ಲಿದೆ.
ಸದಾ ನೀರು
ಬಾದಾಮಿ ತಾಲೂಕಿನ ಗುಳೇದಗುಡ್ಡ ಸಮೀಪದ ಮುರಡಿ ಗ್ರಾಮದ ಹೊರವಲಯದಲ್ಲಿ 3 ಗುಂಡಿಗಳು ಹಾಗೂ ಹಲಕುರ್ಕಿ ಗ್ರಾಮದ ಪಾರುಳೇಶ್ವರ (ಮಾರುತಿ) ದೇಗುಲ ಗುಡ್ಡದಲ್ಲಿ 2 ಸಿಹಿ ನೀರಿನ ಬುಗ್ಗೆಗಳಿಂದ ಸದಾ ನೀರು ಚಿಮ್ಮುತ್ತಿದೆ. ಶತಮಾನಗಳಿಂದ ಇವೆ ಎನ್ನಲಾದ ಈ ಬುಗ್ಗೆಗಳು ಮುರುಡಿಯ 200ಕ್ಕೂ ಹೆಚ್ಚು ಕುಟುಂಬಗಳು, ಕುರಿಗಾರರು ಹಾಗೂ ದನಕರುಗಳು ಈ ಗುಂಡಿಗಳನ್ನೇ ಆಶ್ರಯಿಸಿವೆ.
ಕಂದಕ ನಿರ್ಮಾಣವಾಗಿದ್ದು ಹೇಗೆ?
ಶತಮಾನಗಳ ಹಿಂದೆ ಭಾರಿ ಸಿಡಿಲೊಂದು ಅಪ್ಪಳಿಸಿದ್ದರಿಂದ ಗುಂಡಿಗಳು ನಿರ್ಮಾಣವಾಗಿರಬಹುದು ಎಂದು ಗ್ರಾಮದ ಹಿರಿಯರೊಬ್ಬರ ಅಭಿಪ್ರಾಯ. ಆದರೆ, ಅದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ. ಏನೇ ಆಗಲಿ, ಭೂಮಿಯಿಂದ ತಿಳಿಯಾದ ಸಿಹಿನೀರು ಬರುತ್ತಿರುವುದಂತೂ ಸತ್ಯ.
ನೀರಿನ ಕೊರತೆ ಇಲ್ಲ
ಬೇಸಿಗೆಯಲ್ಲಿ ಅಕ್ಕಪಕ್ಕದ ಗ್ರಾಮಗಳಲ್ಲಿ ನೀರಿಗೆ ಬರ ಉಂಟಾದರೂ ಮುರುಡಿಯಲ್ಲಿ ಮಾತ್ರ ನೀರಿನ ಕೊರತೆ ಇರದು. ಬೇಸಿಗೆ ಇರಲಿ, ಮಳೆಗಾಲವೇ ಇರಲಿ... ವರ್ಷದುದ್ದಕ್ಕೂ ಬಂಡೆಗಳ ನಡುವಿನ ಗುಂಡಿಗಳಿಂದ ನೀರು ಹರಿಯುವುದನ್ನು ನೋಡುವುದೇ ಆನಂದ. ನಿರಂತರ ಹರಿಯುವ ಜುಳು ಜುಳು ನೀರು ಪ್ರಾಣಿ, ಪಕ್ಷಿಗಳ ದಾಹ ನೀಗಿಸುತ್ತಿರುವುದು ಗಮನಾರ್ಹ.
ವಿಸ್ಮಯಗಳ ಆಗರ
ನೂರಾರು ವರ್ಷಗಳಿಂದ ಇದೆ ಎನ್ನಲಾದ ಈ ನೀರಿನ ಬುಗ್ಗೆಗಳು ಸ್ಥಳೀಯರಷ್ಟೇ ಅಲ್ಲದೆ ಪ್ರವಾಸಿಗರ ಪಾಲಿಗೂ ವಿಸ್ಮಯ ಹುಟ್ಟಿಸಿದೆ. ಮೊದಲ ಗುಂಡಿ 6 ಅಡಿ ಉದ್ದ, 3 ಅಡಿ ಅಗಲ ಹಾಗೂ 3 ಅಡಿ ಆಳವಾಗಿದೆ. ಗಾತ್ರ ಚಿಕ್ಕದಾದರೂ ಗ್ರಾಮದ ಜನರ ದಾಹ ನೀಗಿಸುತ್ತಿದೆ. ಎರಡನೇ ಗುಂಡಿ ಅಗಲ 4 ಅಡಿ, ಉದ್ದ 6 ಅಡಿ, ಆಳ ಸುಮಾರು 5 ಅಡಿ ಇದ್ದು, ನೀರಿನ ಸೆಲೆಯ ಕೇಂದ್ರ ಸ್ಥಾನ ಎಂದು ಹೇಳಬಹುದು.
ಈ ನೀರು ಪವಿತ್ರ ಎಂದು ನಂಬಿರುವ ಭಕ್ತರು ಕಾಲ್ನಡಿಗೆಯಲ್ಲೇ ಮುರುಡಿಗೆ ತೆರಳಿ ನೀರನ್ನು ಕೊಂಡೊಯ್ಯುವುದು ವಾಡಿಕೆ. ನೈಸರ್ಗಿಕವಾಗಿ ದೊರೆಯುತ್ತಿರುವ ನೀರಿನ ಮೂಲ ರಕ್ಷಿಸುವುದು ಸಂಬಂಧಪಟ್ಟ ಇಲಾಖೆಯ ಕರ್ತವ್ಯ. ಹೀಗೆ ಬಿಟ್ಟರೆ ಇದರಲ್ಲಿ ಕಸ- ಕಡ್ಡಿ ಬಿದ್ದು, ನೀರಿನ ಸೆಲೆಗೆ ಧಕ್ಕೆಯಾಗುವ ಅಪಾಯವಿದೆ ಎಂದು ಪರಿಸರಪ್ರೇಮಿ ಬಸವರಾಜ್ ಯಂಡಿಗೇರಿ ಆತಂಕ ಸೂಚಿಸುತ್ತಾರೆ.
-ಪ್ರವೀಣರಾಜು ಸೊನ್ನದಚಿತ್ರ: ಶಿವು ವಾಲಿಕಾರ್ ಮುರುಡಿ