ಜೀವಂತ ಮುಚ್ಚಿಗೆ

ಜೀವಂತ ಮುಚ್ಚಿಗೆ
Updated on: 

ಈ ಸಲದ ಬೇಸಿಗೆಯಲ್ಲಿ ತೋಟಕ್ಕೆ ಒಂದು ದಿನವೂ ನೀರು ಹಾಯಿಸಲಿಲ್ಲ, ಯಾವಾಗಲೂ ತಂಪು ಇರ್ತಾ ಇತ್ತು, ಬಾಳೆ ಇಳುವರಿನೂ ಕಡಿಮೆ ಆಗ್ಲಿಲ್ಲ ಅಂದರು ಗುಬ್ಬಿ ತಾಲೂಕು ಅಮ್ಮನಘಟ್ಟದ ಮಹೇಶ್. ಅರೆರೆ ಎಲ್ಲರೂ ನೀರಿನ ಸಮಸ್ಯೆ ಬಗ್ಗೆಯೇ ಮಾತಾಡುತ್ತಿದ್ದಾರೆ, ಕೊಳವೆ ಬಾವಿಗಳು ಸಾವಿರ ಅಡಿ ಆಳಕ್ಕಿಳಿದಿವೆ, ಸಾಲು- ಸಾಲು ಅಡಕೆ- ತೆಂಗಿನ ತೋಟಗಳು ಒಣಗಿ ನಿಂತಿವೆ, ಇವರು ನೋಡಿದರೆ ಬೇಸಿಗೆಯಲ್ಲೂ ತೋಟಕ್ಕೆ ನೀರು ಕಟ್ಟಲಿಲ್ಲ ಎನ್ನುತ್ತಾರಲ್ಲ, ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವೇ?
ಮೂರು ವರ್ಷಗಳ ಹಿಂದೆ ಪರಿಚಯದ ರೈತರಿಂದ ಅರ್ಧ ಕಿಲೋ ಬೀಜ ತಂದ ಮಹೇಶ್ ತಮ್ಮ ಮುಕ್ಕಾಲು ಎಕರೆ ತೋಟಕ್ಕೆ ಎರಚಿ ಉಳುಮೆ ಮಾಡಿದರು. ಅಂದಿನಿಂದ ತೋಟವನ್ನು ಬಿಸಿಲು ಮತ್ತು ಕಳೆಗಳಿಂದ ರಕ್ಷಿಸುತ್ತಿದೆ ಕಾಡು ಹೆಸರು. ಜತೆಗೆ ಎಲೆಯುದುರಿಸುತ್ತಾ ಉತ್ಕೃಷ್ಟ ಗೊಬ್ಬರವನ್ನೂ ಕೊಡುತ್ತಿದೆ. ಎಷ್ಟೇ ಬಿರುಸಾಗಿ ಮಳೆ ಹುಯ್ದರೂ ನೆಲದಲ್ಲಿ ಇಂಗುತ್ತದೆ. ಆಚೆ ಹರಿದು ಹೋಗುವುದಿಲ್ಲ ಎನ್ನುತ್ತಾರೆ ಮಹೇಶ್ ಮಡದಿ ಮಂಜುಳಾ. ಈ ತೋಟದಲ್ಲಿ ಅಡಕೆ ಮತ್ತು ಬಾಳೆ ಹಾಕಿದ್ದಾರೆ. ಅಡಕೆ ಇನ್ನೂ ಫಲ ಕೊಡುತ್ತಿಲ್ಲ, ನಡುವೆ ಹಾಕಿರುವ ಬಾಳೆ ಮಾತ್ರ ಮೂರು ವರ್ಷದಿಂದ ಫಸಲು ಕೊಡುತ್ತಲೇ ಇದೆ. ಕಾಡು ಹೆಸರು ದ್ವಿದಳ ಜಾತಿಯ ಸಸ್ಯವಾದ್ದರಿಂದ ಬೇರಿನ ಗಂಟುಗಳಲ್ಲಿ ಸಾರಜನಕ ಸ್ಥಿರೀಕರಿಸಿ ಮಣ್ಣಿಗೆ ಕೊಡುತ್ತದೆ. ಹಾಗಾಗಿ ತುಸುವೇ ಗೊಬ್ಬರ ಕೊಟ್ಟರೂ ಸಾಕು.
ಮಹೇಶ್ ಮಂಜುಳಾ ದಂಪತಿ ಹಲವು ವರ್ಷಗಳಿಂದ ಸುಸ್ಥಿರ ಕೃಷಿಯಲ್ಲಿ ತೊಡಗಿದ್ದಾರೆ. ಜೀವಂತ ಮುಚ್ಚಿಗೆ ಬೆಳೆ ಹಾಕುವುದು ಇವರ ವಿಶೇಷ. ನಾಲ್ಕೈದು ಕಡೆ ಇವರ ಹೊಲಗಳಿದ್ದು, ಪ್ರತಿಯೊಂದು ಕಡೆ ಅಲಸಂದೆ, ಹೆಸರು, ವೆಲ್ವೆಟ್ ಬೀನ್ಸ್ ಮುಂತಾದ ವಿವಿಧ ರೀತಿಯ ಮುಚ್ಚಿಗೆ ಬೆಳೆ ಹಾಕುತ್ತಾರೆ. 2010ರಲ್ಲಿ ಬೇರೆಯವರ ತೋಟಕ್ಕೆ ಹೋಗಿದ್ದಾಗ ಕಾಡು ಹೆಸರು ಇವರ ಕಣ್ಣಿಗೆ ಬಿದ್ದಿತು. ಅವರಿಂದ ಬೀಜ ತಂದು ಬಿತ್ತಿದರು. ಕಾಡು ಹೆಸರು ಎಂದು ಸ್ಥಳೀಯವಾಗಿ ಕರೆಯುವ ಇದಕ್ಕೆ ಇಂಗ್ಲಿಷ್‌ನಲ್ಲಿ ಪ್ಯುರೇರಿಯ ಎನ್ನಲಾಗುತ್ತದೆ. ರಬ್ಬರ್ ತೋಟಗಳಲ್ಲಿ ಮುಚ್ಚಿಗೆ ಬೆಳೆಯಾಗಿ ವ್ಯಾಪಕ ಬಳಕೆಯಲ್ಲಿದೆ.
ಪ್ಯುರೇರಿಯ ಬಗ್ಗೆ ಕಿರು ಮಾಹಿತಿ
=     ಇದು ದ್ವಿದಳ ಧಾನ್ಯ ಜಾತಿಯ ಬಹುವಾರ್ಷಿಕ ಸಸ್ಯ.
=     ಬಳ್ಳಿಯಾಗಿ ಹಬ್ಬುತ್ತದೆ.
=     ಭೂಮಿಯಲ್ಲಿ ಸಾರಜನಕ ಸ್ಥಿರೀಕರಿಸುತ್ತದೆ.
=     ಉತ್ತಮ ಕಳೆ ನಿಯಂತ್ರಕ.
=     ಮಣ್ಣಿನ ಸವಕಳಿ ತಡೆಯುತ್ತದೆ.
=     ಮಣ್ಣಿನಲ್ಲಿ ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ.
=     ಎಲೆ ಮತ್ತು ಕಾಂಡಗಳು ಉದುರಿ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
=     ಮುಂಗಾರು ಮಳೆ ಬಂದಾಗ ತೋಟದಲ್ಲಿ ಬಿತ್ತಬೇಕು.
=     ಎಕರೆಗೆ 2 ಕೆಜಿ ಬೀಜ ಬೇಕಾಗುತ್ತದೆ.
=     ತೋಟಕ್ಕೆ ಬೀಜ ಎರಚಿ ಉಳುಮೆ ಮಾಡಬಹುದು ಅಥವಾ ಸಾಲು ಬಿತ್ತನೆ ಮಾಡಬಹುದು ಅಥವಾ ಗಿಡಗಳ ಬುಡದಲ್ಲಿ ಬಿತ್ತಬಹುದು.
ಇದರ ಮೈನಸ್ ಪಾಯಿಂಟ್ ಅಂದ್ರೆ ಬೇರೆ ಯಾವುದೇ ಬೆಳೆಗಳನ್ನು ಬೆಳೆಯಗೊಡುವುದಿಲ್ಲ ಎನ್ನುತ್ತಾರೆ ಹತ್ತಾರು ಮುಚ್ಚಿಗೆ ಬೆಳೆಗಳನ್ನು ಹಾಕಿ ಅನುಭವವಿರುವ ಶಿವಮೊಗ್ಗದ ಚುರ್ಚ್‌ಗುಂಡಿಯ ನಂದೀಶ್. ಅಲ್ಲದೆ ಬಾಳೆ, ಅಡಕೆ ಮರಗಳ ತುದಿಯವರೆಗೂ ಹಬ್ಬದಂತೆ ಇದನ್ನು ನಿಯಂತ್ರಿಸಬೇಕು, ಇಲ್ಲವಾದರೆ ಸುಳಿಯವರೆಗೂ ಹಬ್ಬಿ ಬೆಳವಣಿಗೆಗೆ ತೊಡಕಾಗುತ್ತದೆ ಎಂಬುದು ಇವರ ಅನಿಸಿಕೆ. ಕಂಟ್ರೋಲ್‌ನಲ್ಲಿ ಇಟ್ಕೊಂಡ್ರೆ ಇದರಂಥ ಉತ್ತಮ ಮುಚ್ಚಿಗೆ ಬೆಳೆ ಇನ್ನೊಂದಿಲ್ಲ ಎಂಬುದು ಮಹೇಶ್ ಅನುಭವ. <

= ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com