

ಭಾರತ ಹಾಗೂ ಮೆಕ್ಸಿಕೋ ದೇಶದವರು ಖಾರ ತಿನ್ನುವಷ್ಟು ಇನ್ನಾವ ರಾಷ್ಟ್ರದಲ್ಲೂ ತಿನ್ನುವುದಿಲ್ಲ ಬಿಡಿ. ಪ್ರಪಂಚದಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಬೆಳೆದವರು ಭಾರತೀಯರು ಅಥವಾ ಮೆಕ್ಸಿಕನ್ ಎಂದು ನೀವು ಭಾವಿಸಿರಬಹುದಲ್ಲವೇ?
ನಿಮ್ಮ ಊಹೆ ಖಂಡಿತಾ ತಪ್ಪು. ಜೆರಾಲ್ಡ್ ಫೌಲರ್ ಎಂಬ ಬ್ರಿಟಿಷ್ ರೈತ ನಾಗವೈಪರ್ ಕ್ಯಾಪ್ಸಿಕಮ್ (ಚಿನೆನ್ಸ್) ಎಂಬ ಹೆಸರಿನ ಅತ್ಯಂತ ಖಾರವಿರುವ ಮೆಣಸಿನಕಾಯಿ ಬೆಳೆದಿದ್ದಾನೆ.
ಗಿನ್ನೆಸ್ ದಾಖಲೆ
ಇದು ಇಡೀ ಪ್ರಪಂಚದಲ್ಲೇ ಅತ್ಯಂತ ಖಾರದ ಮೆಣಸಿನಕಾಯಿ ಎಂಬ ಗಿನ್ನೆಸ್ ದಾಖಲೆಯ ಹೆಗ್ಗಳಿಕೆ ಹೊಂದಿದೆ. ಹಿಂದಿನ ವಿಶ್ವದಾಖಲೆ ಅತಿ ಖಾರದ ತಳಿ ಘೋಸ್ಟ್ ಪೆಪ್ಪರ್, ನಾಗಾ ಮೊರಿಚಿ ಮತ್ತು ಟ್ರಿನಿದಾದ್ ಸ್ಕಾಪರ್ಯನ್ ಎನ್ನುವ ಮೂರು ಬಗೆಯ ಭಾರಿ ಖಾರದ ತಳಿಗಳನ್ನು ಸೇರಿಸಿ ನಾಗವೈಪರ್ ಅನ್ನು ಕಂಟ್ರಿಯಾ ಊರಿನ ಬಳಿಯಲ್ಲಿರುವ ತನ್ನ ಹೊಲದಲ್ಲಿ ಈತ ಬೆಳೆದಿದ್ದಾನೆ.
ಅಳತೆಗೋಲು
ಮೆಣಸಿನಕಾಯಿಯಲ್ಲಿನ ಖಾರವನ್ನು ಹೇಗೆ ಅಳೆಯುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದಲ್ಲವೇ?
ಅದಕ್ಕೊಂದು ವಿಶೇಷ ಬಗೆಯ ಸ್ಕೊವಿಲ್ಲಿ ಸ್ಕೇಲ್ ಎಂಬ ಸಾಧನವಿದೆ. ಮೆಣಸಿನಕಾಯಿಯಲ್ಲಿನ ಕ್ಯಾಪ್ಸಸಿನ್ ಎಂಬ ಅಂಶವು ಅದರಲ್ಲಿರುವ ಖಾರ ನಿರ್ಧರಿಸುತ್ತದೆ. ಆ ಸ್ಕೇಲ್ನಲ್ಲಿ ಸ್ಕೊವಿಲ್ಲಿ ಹೀಟ್ ಯೂನಿಟ್ಗಳ ಸಂಖ್ಯೆಯು ಕ್ಯಾಪ್ಸಸಿನ್ ಅಂಶ ಸೂಚಿಸುತ್ತದೆ. ಅದರಂತೆ ಭುಟ್ಜೊಲೊಕಿಯಾ ತಳಿ 1,001,304 ಯೂನಿಟ್ಗಳಾದರೆ ನಾಗ ವೈಪರ್ ತಳಿಯದ್ದು 1,359,000 ಯೂನಿಟ್ಗಳು.
ವಿಪರೀತ ಉರಿ
ಇದನ್ನು ಬೆಳೆದ ಫೌಲರ್ನ ಪ್ರಕಾರ, ಈ ಮೆಣಸಿನಕಾಯಿ ತಿನ್ನುವವರು ಅತಿ ನೋವನ್ನು ಅನುಭವಿಸುತ್ತಾರೆ. ಇದು ನಾಲಗೆಯನ್ನು ಮರಗಟ್ಟಿಸುತ್ತದೆ. ನಂತರ ಗಂಟಲಿನ ಕೆಳಭಾಗವೆಲ್ಲ ಉರಿಯಲಾರಂಭಿಸುತ್ತದೆ. ಈ ವೇಳೆಯಲ್ಲಿ ನೀವು ಯಾರೊಂದಿಗೂ ಮಾತನಾಡಲಾಗುವುದಿಲ್ಲ ಹಾಗೂ ಏನನ್ನೂ ಮಾಡಲಾಗುವುದಿಲ್ಲ.
ನೋವಿನ ಪರಾಕಾಷ್ಠೆ
ಇದೊಂದು ರೀತಿಯ ಅತ್ಯದ್ಭುತ ನೋವಿನ ಪರಾಕಾಷ್ಠೆಯ ಅನುಭವವಂತೆ. ಇನ್ನೂ ಒಂದು ಕುತೂಹಲಕಾರಿಯಾದ ವಿಷಯವೇನೆಂದರೆ ನಮ್ಮ ಶೌಚ ಸ್ವಾಸ್ಥ್ಯಕ್ಕೆ ನಾವೇ ಹೊಣೆ ಎಂಬ ಕರಾರುಪತ್ರಕ್ಕೆ ಸಹಿ ಹಾಕಿದ ಮೇಲೆಯೇ ಜೆರಾಲ್ಡ್ ಫೌಲರ್ ತಾನು ಬೆಳೆದ ನಾಗ ವೈಪರ್ ಮೆಣಸಿನಕಾಯಿ ರುಚಿ ನೋಡಲು ಕೊಡುತ್ತಾನಂತೆ.
= ವಿನಯ್ಕುಮಾರ್ ಬಿ.ಎಚ್.