ಗ್ರೇಪ್ ಸಾಬ್

ಬಯಲುಸೀಮೆಯಲ್ಲಿ ದ್ರಾಕ್ಷಿ ಬೆಳೆಯಬಹುದೇ? ಎಂಬುದು ಬಹಳಷ್ಟು ರೈತರ ಪ್ರಶ್ನೆ. ಧಾರಾಳವಾಗಿ ಬೆಳೆಯಬಹುದು...
ಗ್ರೇಪ್ ಸಾಬ್
Updated on: 

ಬಯಲುಸೀಮೆಯಲ್ಲಿ ದ್ರಾಕ್ಷಿ ಬೆಳೆಯಬಹುದೇ? ಎಂಬುದು ಬಹಳಷ್ಟು ರೈತರ ಪ್ರಶ್ನೆ. ಧಾರಾಳವಾಗಿ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾನೆ ಈ ರೈತ. ಹೌದು, ದಾಳಿಂಬೆ ಬೆಳೆದ ನೆಲದಲ್ಲಿ ಇಲ್ಲೊಬ್ಬ ಯವಕ ದ್ರಾಕ್ಷಿ ಬೆಳೆದು ಸೈ ಎನಿಸಿಕೊಂಡಿದ್ದಾನೆ. ಅವರೇ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದ ರೈತ ರಾಜಸಾಬ್ ನದಾಫ್.
ಅಚ್ಚುಕಟ್ಟು
ರಾಜಸಾಬ್ ಅಚ್ಚುಕಟ್ಟಾಗಿ ವ್ಯವಸಾಯ ಮಾಡುತ್ತಿದ್ದಾರೆ. ಓದಿದ್ದು ಎಸ್ಸೆಸ್ಸೆಲ್ಸಿ. ಮುಂದೆ ಶಿಕ್ಷಣ ಪಡೆಯಲು ಆಗಲಿಲ್ಲ. ಇತ್ತ ತೋಟ ನಡೆಸಿಕೊಂಡು ಹೋದರೆ ಸಾಕೆಂಬ ಯೋಚನೆ ಮನೆಮಾಡಿತ್ತು. ಭೂತಾಯಿಯೊಂದಿಗೆ ಕೈಜೋಡಿಸಿ ಬೇಸಾಯಕ್ಕೆ ಮುಂದಾದರು. ಭೂಮಿ ಹಸಿರಿದ್ದರೆ ಬಾಳು ಹಸನು ಎಂಬುದನ್ನು ಅರಿತರು. ಜಮೀನಿನಲ್ಲೇ ಮನೆ ಮಾಡಿಕೊಂಡು ಬದುಕನ್ನು ಸರಳವಾಗಿ ಸಾಗಿಸುವುದನ್ನು ಕರಗತ ಮಾಡಿಕೊಂಡರು. ಇವರಿಗೆ ಇರುವುದು 4 ಎಕರೆ ಜಮೀನು. ಆದರೆ, ಅಲ್ಪ ಪ್ರಮಾಣ ಮಟ್ಟದಲ್ಲಿ ನೀರಿದೆ. ತೋಟದಲ್ಲಿ ದ್ರಾಕ್ಷಿಯು ಹಸಿರಿಂದ ಕುಣಿಯುತ್ತದೆ. ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ತೋಟಗಾರಿಕೆ ಇಲಾಖೆ ಮೂಲಕ ಸಹಾಯಧನ ಪಡೆದಿದ್ದಾರೆ. ಇತ್ತ ಒಣದ್ರಾಕ್ಷಿಯ ಘಟಕ ಸ್ಥಾಪಿಸಿದ್ದಾರೆ. ಇದರಿಂದ ಉತ್ತಮ ಆದಾಯ ಪಡೆದ ಕೀರ್ತಿ ಇವರದು.
ಥಾಮ್ಸನ್ ತಳಿ
ರಾಜಾಸಾಬ್ ಅವರು ನಂ.1 ಆಗಿರುವ ಥಾಮ್ಸನ್ ತಳಿಯ ದ್ರಾಕ್ಷಿ ನಾಟಿ ಮಾಡಿದ್ದಾರೆ. ಇದರಿಂದ ಉತ್ತಮ ಫಸಲಿನ ಜತೆಗೆ ಒಳ್ಳೆಯ ಲಾಭ ಪಡೆದಿದ್ದಾರೆ. ವರ್ಷಕ್ಕೆ ಖರ್ಚು- ವೆಚ್ಚ ತೆಗೆದರೂ 2-3 ಲಕ್ಷ ಆದಾಯ ಸಿಗುತ್ತದೆ ಎನ್ನುತ್ತಾರೆ.
ಅಣ್ಣನ ಸಹಕಾರ
ರಾಜಸಾಬ್‌ಗೆ ಅಣ್ಣ ಷರೀಫ್‌ರ ಪ್ರೇರಣೆ ಇದೆ. ಅವರು ಆಗಾಗ ಜಮೀನಿಗೆ ಬಂದು ಸಲಹೆ ನೀಡುತ್ತಾರೆ. ಇದರಿಂದ ರಾಜಸಾಬ್ ದಿನದ ಹೆಚ್ಚಿನ ಅವಧಿಯನ್ನು ತೋಟದಲ್ಲಿ ಕಳೆಯುತ್ತಾರೆ. ನಮಗೆ ತೋಟವು ಪಾಠಶಾಲೆಯಂತಾಗಿದೆ ಎಂದು ಕಿರುನಗೆ ಬೀರುತ್ತಾರೆ.
ಬೆಳೆಯುವ ವಿಧ
ಮೊದಲಿಗೆ ಭೂಮಿಯನ್ನು ಸ್ವಚ್ಛಗೊಳಿಸಿ ಹದ ಮಾಡಬೇಕು. ನಂತರ ಕೊಟ್ಟಿಗೆ ಗೊಬ್ಬರ ಚೆಲ್ಲಬೇಕು. ತದನಂತರ ಡ್ರಿಪ್ ಹಾಕಿ ಸಸಿಗಳನ್ನು 10 ್ಢ 5 ಸಾಲಿನಿಂದ ಸಾಲಿಗೆ ಗಿಡದಿಂದ ಗಿಡಕ್ಕೆ 10 ಅಡಿಯಂತೆ ನೆಡಬೇಕು. ಮಾರ್ಚ್ ವೇಳೆಯಲ್ಲಿ ಡ್ರಾಗೇಜ್ ಮಾಡಬೇಕು. 6 ತಿಂಗಳವರೆಗೆ ಹಾಗೆ ಬಿಡಬೇಕು. ಇದಾದ ಬಳಿಕ ಚಿಗುರು ಬರುತ್ತದೆ. ನಂತರ ಹ್ಯಾಂಗಲ್ ಪದ್ಧತಿ ಮಾಡಿಕೊಂಡು ನವೆಂಬರ್‌ನಲ್ಲಿ ಹಚ್ಚ ಹಸಿರಿಗೆ ಬರುತ್ತದೆ. ನಿಯಮಿತವಾಗಿ ನೀರು ಕೊಡಬೇಕು. ಅನಂತರ ಫಸಲು ಕೈಗೆ ಬರುತ್ತದೆ. ಹೆಚ್ಚಿನ ಮಾಹಿತಿಗೆ ಮೊ. 9740547995.


ನದಾಫನ ದ್ರಾಕ್ಷಿ ತೋಟ



ಆರಂಭದಲ್ಲಿ ಉತ್ತರ ಕರ್ನಾಟದಲ್ಲಿ ಹೆಸರುವಾಸಿ ಬೆಳೆಗಳಾದ ಸಜ್ಜೆ, ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಮಡಿಕೆ, ಹೆಸರು ಬೆಳೆಯುತ್ತಾ ಜೀವನ ಸಾಗಿಸಿದೆ. ಆದರೆ, ಹೊಸ ಹಾದಿ ಹಿಡಿಯಬೇಕೆನಿಸಿತು. ಆಗ ದ್ರಾಕ್ಷಿ ಕೃಷಿ ಆರಂಭಿಸಿದೆ. ಅದು ನನ್ನ ಕೈಹಿಡಿಯಿತು.
- ರಾಜಸಾಬ್

  -ದೇವರಾಜ ಮ್ಯಾದ್ನೇರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com