

ಜುಲೈ ಹಸಿರಿನ ತಿಂಗಳು. ವನಮಹೋತ್ಸವ ಪರ್ವ. ಇಲಾಖೆಗಳಲ್ಲಿ ಫೈಲುಗಳ ಓಡಾಟಗಳ ರಿಂಗಣ. ನಾಡೊಳಗೆ ನಲಿವ ಕಾಡುಮರಗಳು. ಶಾಲೆಗಳಲ್ಲಿ ಹಸಿರಿನ ಪಾಠ. ವನಮಹೋತ್ಸವಕ್ಕೆ ರೂಪುರೇಷೆ. ಗಣಿತ, ವಿಜ್ಞಾನದೊಳಗೆ ಹುದುಗಿದ್ದ ಮನಸ್ಸುಗಳಿಗೆ ಹಸಿರನ್ನು ಅಪ್ಪಿಕೊಳ್ಳುವತ್ತ ಒತ್ತಡ. ಹಸಿರಿಲ್ಲದ ಶಾಲಾವರಣ ನುಣುಪಾಗಿರುವುದರಿಂದ ನಾಲ್ಕು ಗೋಡೆಗಳ ಮಧ್ಯೆ ಪರಿಸರದ ಅದ್ಭುತ ಪಾಠ, ಸ್ಪರ್ಧೆಗಳು, ಬಹುಮಾನಗಳು, ಪುರಸ್ಕಾರಗಳು. ಅಬ್ಬಬ್ಬಾ.. ಒಂದೇ ದಿನದಲ್ಲಿ ಧುಮ್ಮಿಕ್ಕುವ ಹಸಿರ ಪ್ರೀತಿ!
ಶಾಲೆಗಳಲ್ಲಿ ಪರಿಸರ ಸಂಘಗಳಿವೆ, ಕ್ಲಬ್ಬುಗಳಿವೆ. ಉದ್ಘಾಟನೆಯೊಂದಿಗೆ ಸಮಾರೋಪ ಕೆಲವು ಉಸಿರೆಳೆಯುತ್ತಾ ವರ್ಷ ಪೂರೈಸುತ್ತವೆ. ಶಾಲಾರಂಭದಲ್ಲಿ ಮರುಜೀವಗೊಂಡು ಅಲ್ಲಿಂದಿಲ್ಲಿಂದ ಹೆಕ್ಕಿ ಪೋಣಿಸಿದ ವಿಚಾರಗಳನ್ನು ಪ್ರಬಂಧದ ಮೂಲಕವೋ, ಭಾಷಣಗಳ ಮೂಲಕವೋ ಪ್ರಸ್ತುತಪಡಿಸಿದರೆ ಮುಗಿಯಿತು. ಪತ್ರಿಕೆಗಳಲ್ಲಿ ವರದಿ ಪ್ರಕಟವಾದಲ್ಲಿಗೆ ಪರಿಸರಾಕ್ಷರ ಅನಾವರಣ.
ವಾರಕ್ಕೊಂದು ಅವಧಿಯಲ್ಲಾದರೂ ಪರಿಸರದ ನೇರ ಪಾಠ ಮಕ್ಕಳಿಗೆ ಸಿಗಬೇಕು. ವಿದ್ಯಾರ್ಥಿಗಳ ಪಾಲಿಗೆ ಪರಿಸರ, ಹಸಿರಿನ ಕುರಿತಾದ ವಿಚಾರಗಳು ವೇದಿಕೆಯ ಸರಕಾಗಕೂಡದು. ಉರು ಹೊಡೆವ ಸ್ಪರ್ಧೆಗಳು ಬರಿಗುಲ್ಲು ನಿದ್ದೆಗೇಡು. ಗಿಡಗಳನ್ನು ಗುರುತಿಸುವ, ಕೃಷಿಯ ಕನಿಷ್ಠ ಜ್ಞಾನ ನೀಡುವ, ಹಣ್ಣುಗಳು- ಕಾಯಿಗಳನ್ನು ನೋಡುವ- ತಿನ್ನುವ ಪರಿಪಾಠ ಶಾಲಾವಧಿಯಲ್ಲಿ ರೂಪುಗೊಂಡರೆ ಪ್ರೌಢರಾದಾಗ ಒದ್ದಾಡಬೇಕಾಗಿಲ್ಲ. ಕೆಲವು ಶಾಲೆಗಳು ಪರಿಸರ ಶಿಕ್ಷಣಕ್ಕೆ ಒತ್ತು ಕೊಡುತ್ತಿರುವುದು ಶ್ಲಾಘ್ಯ.
ಪಠ್ಯಪುಸ್ತಕ ಹೀಗಿರಬೇಕು ಎಂದು ದಿನಕ್ಕೊಂದು ಹೇಳಿಕೆಯಡಿ ಬೊಬ್ಬಿಡುವ ಅಕ್ಷರಪ್ರೇಮಿಗಳಿಗೆ ಪರಿಸರ ಕಾಣುತ್ತಿಲ್ಲ. ಅವರ ಪಾಲಿಗೆ ಹಸಿರು ಮಸುಕು. ಹಸಿರಿನ ಪಾಠ ಪಠ್ಯದಲ್ಲಿ ಸೇರಲೇಬೇಕು ಎಂದು ಒತ್ತಾಯಿಸುವ ಮನಸ್ಸುಗಳು ವಿಧಾನಸೌಧದಲ್ಲಿ ನಿದ್ದೆಯ ಮಂಪರಿನಲ್ಲಿದ್ದಾರೆ. ಎಲ್ಲದಕ್ಕೂ ರಾಜಕಾರಣವನ್ನು ತುರುಕಿ, ಗೊಂದಲವಾದಾಗ ಜಾರಿಕೊಳ್ಳುವ ಪತನಸುಖಿಗಳ ಸಾಮ್ರಾಜ್ಯದಲ್ಲಿ ಅಕ್ಷರಗಳಿಗೆ, ಹಸಿರಿಗೆ ಎಲ್ಲಿದೆ ಮಾನ- ಸಮ್ಮಾನ ಅಕ್ಷರಸ್ಥರಾಗಿದ್ದೂ ಅನಕ್ಷರಸ್ಥರಂತೆ ವರ್ತಿಸುವ ಜನನಾಯಕರಿಂದ ಬೇಕಾದ್ದನ್ನು ನಿರೀಕ್ಷಿಸುವಂತಿಲ್ಲ. ವಿದ್ಯಾರ್ಥಿಗಳಲ್ಲಿ ಭವಿಷ್ಯದ ಕನಸು ಬಿತ್ತುವ, ನೀರೆರೆದು ಪೋಷಿಸುವ ಯೋಜನೆಗಳಿಗೆ ಬೇಕಾಗಿರುವುದು ಒಂದು ಸಹಿ ಮಾತ್ರ. ಅದಕ್ಕೂ ಭ್ರಷ್ಟತೆಯ ಕೊಳಕು.
ಇನ್ನು ಇಲಾಖೆಗಳತ್ತ ಮುಖ ಮಾಡಿದರೆ ಅದೇ ಆಕಳಿಕೆಯ ಚಾಳಿ. ಜುಲೈ ಹತ್ತಿರವಾದಾಗ ಹಸಿರು ಮೈಗಂಟುತ್ತದೆ. ಗಿಡಗಳ ಹುಟುಕಾಟ. ಹತ್ತಿಪ್ಪತ್ತು ಗಿಡಗಳನ್ನು ನೀಡಿ ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ ನೀಡಿದ್ದೇವೆ ಎಂದು ಕಂಠತ್ರಾಣ ಒತ್ತೆಯಿಟ್ಟು ಭಾಷಣ ಬಿಗಿದಲ್ಲಿಗೆ ಕಲಾಪಕ್ಕೆ ಕೊನೆ ಬಿಂದು. ಕೃಷಿಕನು ಸದ್ದಿಲ್ಲದೆ ತನ್ನ ಜ್ಞಾನದ ನಿಲುಕಿನಲ್ಲಿ ಗುಡ್ಡದೆಲ್ಲೆಡೆ ಗಿಡಗಳನ್ನು ನೆಟ್ಟು ಪೋಷಿಸುತ್ತಾನೆ, ಸಲಹುತ್ತಾನೆ. ನಮ್ಮ ವ್ಯವಸ್ಥೆಯಲ್ಲಿ ಅದನ್ನು ಅನುಭವಿಸಲು ಆತನಿಗೆ ಹಕ್ಕಿಲ್ಲ ಬಿಡಿ. ನೂರಲ್ಲ ಸಾವಿರ ಅಡಚಣೆಗಳು.
ಕಳೆದ ವರುಷ ವನಮಹೋತ್ಸವದಂದು ನೆಟ್ಟ ಹೊಂಡಕ್ಕೆ ಪುನಃ ಗಿಡ ನೆಡುವ ದೌರ್ಭಾಗ್ಯ. ಅದೇ ಜಾಗದಲ್ಲಿ ಈ ವರುಷವೂ ಫೋಟೋ ಕ್ಲಿಕ್ಕಿಸಬೇಕಾದ ಸ್ಥಿತಿ. ಗಿಡ ನೆಡುವ ವ್ಯಕ್ತಿ ಮತ್ತು ಗಿಡಗಳು ಮಾತ್ರ ಬದಲು. ಅಧಿಕಾರಿಗಳು, ನೆಲ, ಹೊಂಡ ಎಲ್ಲವೂ ಹಳೆಯದೆ. ಮರುದಿವಸ ಪತ್ರಿಕೆಗಳಲ್ಲಿ ಫೋಟೋ ಸಹಿತ ವರದಿ ಬರಲೇಬೇಕು. ಅಲ್ಲಿಗೆ ನಿಸರ್ಗ ಹಸಿರುಡುಗೆ ತೊಟ್ಟು ನಗುತ್ತಿರುತ್ತದೆ. ನೆಟ್ಟ ಗಿಡದ ಪಾಲನೆ, ಪೋಷಣೆಗಳು ಕಡತದೊಳಗೆ ಬೆಚ್ಚಗೆ ಮಲಗಿರುತ್ತದೆ. ಅಪರೂಪಕ್ಕೆಂಬಂತೆ ನೆಟ್ಟ ಗಿಡಗಳನ್ನು ಪೋಷಿಸುವ, ಜೋಪಾನವಾಗಿಡುವ, ಗಿಡಗಳನ್ನು ನೆಡಿ ಎಂಬ ಅರಿವು ಮೂಡಿಸುವ ಮನಸ್ಸುಗಳು ಇಲಾಖೆಯಲ್ಲಿರುವುದರಿಂದ ಇಷ್ಟಾದರೂ ಹಸುರು ಉಸಿರಾಡುತ್ತಿವೆ.
ಜುಲೈನಲ್ಲಿ ನರ್ಸರಿಗಳು (ಗಿಡಗಳ ಅಂಗಡಿ) ರಂಗುರಂಗಲ್ಲಿ ತೆರೆಯುತ್ತವೆ. ಹೊಸ ಹೊಸ ಗಿಡಗಳನ್ನು ತರಿಸುತ್ತವೆ. ಗಿಡಗಳ ಜಾತಕವನ್ನು ಪಟಪಟನೆ ಉದುರಿಸುವ ಯಜಮಾನನ ಕೈಗೆ ನೂರೋ ಇನ್ನೂರೋ ತೆತ್ತು ಗಿಡಗಳನ್ನು ತರುತ್ತೇವೆ, ನೆಡುತ್ತೇವೆ, ಮರೆತುಬಿಡುತ್ತೇವೆ. ಮುಂದಿನ ಜುಲೈ ಬಂದಾಗ ಮತ್ತೆ ನರ್ಸರಿ ನೆನಪಾಗುತ್ತದೆ. ಮೊದಲಿನ ಹೊಂಡದಲ್ಲೇ ಪುನಃ ವನಮಹೋತ್ಸವ!
ಗಿಡಗಳನ್ನು ನೆಡುವ ಪ್ರಕ್ರಿಯೆ ಮನೆಯಿಂದ ಆರಂಭವಾಗಬೇಕು. ಅದಕ್ಕಾಗಿ ಮನ ಸಜ್ಜಾಗಬೇಕು. ಪಕ್ಕದ ಮನೆಯವನ ಮುಂದೆ ಸುಭಗನಾಗುವುದಕ್ಕೆ ನಾಲ್ಕಾರು ಗಿಡಗಳನ್ನು ತಂದು ನೆಟ್ಟಲ್ಲಿಗೆ ಹಸಿರು ಪ್ರೀತಿ ಅನಾವರಣವಾಗದು.
- ನಾ. ಕಾರಂತ ಪೆರಾಜೆ