

ಕಡಿಮೆ ನೀರು ಮತ್ತು ಕಡಿಮೆ ಫಲವತ್ತತೆ ಮಣ್ಣಲ್ಲಿ ಭತ್ತ ಬೆಳೆಯೋದು ಹೇಗೆಂಬುದು ಬಹಳಷ್ಟು ರೈತರ ಪ್ರಶ್ನೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಹಲವು ರೈತರು ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಆ ಮೂಲಕ ಬರನಿರೋಧಕ ತಳಿಯ ಬತ್ತ ನಾಟಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಅಕ್ಕಿಯ ರಫ್ತಿನಲ್ಲಿ ಭಾರತ ಜಗತ್ತಿನಲ್ಲೇ 4ನೇ ಸ್ಥಾನದಲ್ಲಿದೆ. ದೇಶದಲ್ಲಿ ಮುಖ್ಯವಾಗಿ 445ಕ್ಕೂ ಅಧಿಕ ಭತ್ತದ ತಳಿಗಳು ಬಳಕೆಯಲ್ಲಿವೆ. ಇದರ ವೈಜ್ಞಾನಿಕ ಹೆಸರು ಕ್ಠಣಣಛ ಡಛಡ್ಝಿಢಛ.
ಬೆಳೆಯುವ ವಿಧಾನ
ಮೊದಲು ಜಮೀನು ಹದಗೊಳಿಸಿದ ಬಳಿಕ ಬೀಜೋಪಚಾರ ಮಾಡಿದ ಬೀಜವನ್ನು ಕೂರಿಗೆ ಅಥವಾ ರಂಟೆಯಿಂದ ಬಿತ್ತಬೇಕು. ಸಾಲಿನಿಂದ ಸಾಲಿಗೆ 12- 14 ಇಂಚು ಅಂತರವಿರಬೇಕು. ಬೀಜದಿಂದ 1 ಇಂಚು ಅಂತರ ಸಾಕು. ಬಿತ್ತಿದ 15 ದಿನದೊಳಗೆ ಯಡೆ (ಸಾಲು ಮಾಡುವುದು) ಹೊಡೆಯಬೇಕು. ಈ ರೀತಿ ಎರಡ್ಮೂರು ಬಾರಿ ಮಾಡಬೇಕು. ಹೀಗೆ ಮಾಡುವುದರಿಂದ ಸಸಿ ಸದೃಢವಾಗಿ ಬೆಳೆಯಲು, ಕಳೆ ನಿಯಂತ್ರಣವಾಗುತ್ತದೆ. ಬಿತ್ತಲು ಎಕರೆಗೆ 8- 12 ಕೆಜಿ ಬೀಜ ಬೇಕಾಗುತ್ತದೆ. ಬಿತ್ತಿದ ನಾಲ್ಕು ತಿಂಗಳಿಗೆ ಇಳುವರಿ ಕೈಗೆ ಸಿಗುತ್ತದೆ. ಮೇ ಅಂತ್ಯದಿಂದ ಆಗಸ್ಟ್ ಮಧ್ಯದವರೆಗೆ ಬಿತ್ತನೆಗೆ ಸಕಾಲ. ಎಕರೆಗೆ 10- 18 ಕ್ವಿಂಟಲ್ವರೆಗೆ ಇಳುವರಿ ಬರುತ್ತದೆ.
ತಳಿಗಳು
ದಡಿಗ್ಯಾ, ನವಲಿಸಾಳಿ, ಕರಿಕಾಲಗಡಿಗ್ಯಾ, ಕೊತ್ತಂಬರಿಸಾಳಿ, ಕೆಂಪಕ್ಸಾಳಿ, ಸೆಂಡಿಕ್ಯಾಮುಗಲ್, ನೆಲಂತರಸಾಳಿ ಇವು ಪ್ರಮುಖ ಬರೋನಿರೋಧಕ ಭತ್ತದ ತಳಿಗಳಾಗಿವೆ.
ಮಣ್ಣು
ಕೆಂಪು ಮಣ್ಣು, ಮಸಾರೆ, ಕಪ್ಪು ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ಜೇಡಿಮಣ್ಣಿನಲ್ಲಿ ಬರನಿರೋಧಕ ತಳಿಯ ಭತ್ತ ಉತ್ತಮವಾಗಿ ಬೆಳೆಯುತ್ತದೆ.
ಹೆಚ್ಚಿನ ಮಾಹಿತಿಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿಯ ಶಂಕರ ಲಂಗಟಿ (ಮೊ. 9972150378) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ