

ಕಠಿಣ ಪರಿಶ್ರಮ, ಆಸಕ್ತಿ ಇದ್ದರೆ ಸಾಧನೆ ಮಾಡಲು ಸಾಧ್ಯ.
ಇದಕ್ಕೊಂದು ಉದಾಹರಣೆ ಇಲ್ಲಿದೆ. ಈತನದು ಕೃಷಿಯ ಹಿನ್ನೆಲೆಯ ಕುಟುಂಬ. ತಂದೆಯ ಸರ್ಕಾರಿ ನೌಕರಿ ಈ ಯುವಕನನ್ನು ನೆಲದ ನಂಟಿನಿಂದ ದೂರ ಸರಿಸಿತ್ತು. ತಂದೆಯ ನಿವೃತ್ತಿಯೊಂದಿಗೆ ತನ್ನೂರಿಗೆ ಮರಳಿದ. ಸಂಬಂಧಿಗಳು ಮಾಡುತ್ತಿದ್ದ ಅವೈಜ್ಞಾನಿಕ ಕೃಷಿಗೆ ಅಪಸ್ವರ ಎತ್ತಿದ. ಸಾವಯವದತ್ತ ಸೆಳೆಯಲು ಕಸರತ್ತು ನಡೆಸಿದರು. ಇದರಿಂದ ಅತೃಪ್ತರಾದ ಕುಟುಂಬ ಇಡೀ ಕೃಷಿಯ ಜವಾಬ್ದಾರಿಯನ್ನೇ ಇವರ ಹೆಗಲೇರಿಸಿತು.
ಬೇಸಾಯದ ಗಂಧ- ಗಾಳಿ ಗೊತ್ತಿಲ್ಲದ ಆ ಯುವಕ ಬಂದ ಅವಕಾಶ, ಸವಾಲು ಒಪ್ಪಿ ಸಾವಯವ ಕೃಷಿ ಅಪ್ಪಿಕೊಂಡ. ಪರಿಣಾಮ ಇಂದು ಈತ ಒಬ್ಬ ಯಶಸ್ವಿ ಕೃಷಿಕ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನ ಗುಡಿಯ ಪ್ರಸನ್ನ ಯು.ಎಸ್. ಸಾಧನೆ ಮಾಡಿದ ಛಲದಂಕ ಮಲ್ಲ. 10 ವರ್ಷದ ಹಿಂದೆ ಕೃಷಿಗೆ ಪದಾರ್ಪಣೆ.
ಕಲ್ಲು- ಮುಳ್ಳಿನ ಹಾದಿ
ಅಂದಹಾಗೆ ಅಂದು ಪ್ರಸನ್ನ ನೇಗಿಲು ಹಿಡಿದ ವೇಳೆ ಎಲ್ಲವೂ ಸರಾಗವಿರಲಿಲ್ಲ. ಅವರದು 9 ಎಕರೆ ಜಮೀನು. ಬಸವಣ್ಣ ಕಾಲುವೆಯ ನೀರಾವರಿಗೆ ಒಳಪಟ್ಟ ಜಮೀನಿನಲ್ಲಿ 4 ಎಕರೆ ಆಗಾಗ್ಗೆ ಪ್ರವಾಹಕ್ಕೆ ತುತ್ತಾಗುತ್ತಿತ್ತು. ಇದರಿಂದ ಬಿತ್ತಿದ ಬೆಳೆ ಕೈಗೆ ಸಿಗುತ್ತಿರಲಿಲ್ಲ. ಉಳಿದ ಜಮೀನು ರಾಸಾಯನಿಕಗಳ ಬಳಕೆಯಿಂದ ಸತ್ವ ಕಳೆದುಕೊಂಡಿತ್ತು. ಮತ್ತೊಂದೆಡೆ ಪಟ್ಟಣಕ್ಕೆ ಅಂಟಿಕೊಂಡಿದ್ದ ಹೊಲದ ಫಲಕ್ಕೆ ಕಳ್ಳಕಾಕರ ಉಪಟಳ.
ಮಾರುಕಟ್ಟೆ
ಹಾಲು, ಹೈನುಗಾರಿಕೆ ಉತ್ಪನ್ನ, ಸೊಪ್ಪು, ತರಕಾರಿ ಮಾರಾಟಕ್ಕಾಗಿ ವ್ಯಕ್ತಿ, ಮಾರುಕಟ್ಟೆ ಆಶ್ರಯಿಸಿಲ್ಲ. ಬದಲಾಗಿ ಸ್ವಂತ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಕಾಯಂ ಗಿರಾಕಿಗಳು ಉಂಟು. ಗ್ರಾಹಕರ ಮನೆ ಬಾಗಿಲಿಗೇ ನಿತ್ಯ ಮುಟ್ಟಿಸಿ, ಒಳ್ಳೆಯ ಬೆಲೆಗೆ ಮಾರಾಟ ಮಾಡುತ್ತಾರೆ.
ಕೃಷಿಕರ ಚೇತನ
ಪ್ರಸನ್ನ ಅವರು ಸಾವಯವ ಕೃಷಿಕರ ಸಂತತಿ ಬೆಳೆಸುವ ಸಂಕಲ್ಪ ತೊಟ್ಟಿದ್ದಾರೆ. ಇದಕ್ಕಾಗಿ ಕಳೆದ ವರ್ಷ ಸಮಾನ ಮನಸ್ಕರೊಂದಿಗೆ 'ನೈಜ ಚೇತನ ಸಾವಯವ ಸೇವಾ ಸಂಸ್ಥೆ' ಹುಟ್ಟು ಹಾಕಿದ್ದು, ಇದರ ಮುಖೇನ ಕೃಷಿಕರಲ್ಲಿ ಸಾವಯವ ಕೃಷಿ ಮಹತ್ವ ಮೂಡಿಸುತ್ತಿದ್ದಾರೆ. ಸಂಪರ್ಕಕ್ಕೆ ಮೊ. 9448482527.
ಬಂಪರ್ ಲಾಭ
ಜಾನುವಾರುಗಳ ಸಗಣಿ, ಗಂಜಲನ್ನು ಭೂಮಿಗೆ ಹಾಕುತ್ತಾರೆ. ಜಮೀನಿಗೆ ನಿರಂತರವಾಗಿ ಇದನ್ನು ನೀಡುತ್ತಿರುವುದರಿಂದ ಫಲವತ್ತತೆ ಹೆಚ್ಚಿ ಬೆಳೆ ಸಮೃದ್ಧಿಯಾಗಿದೆ. ಪ್ರತ್ಯೇಕ ತೊಟ್ಟಿ ನಿರ್ಮಿಸಿ ಎರೆಹುಳು ಗೊಬ್ಬರ ತಯಾರಿಸುವುದು ವಿಶೇಷ. ಒಂದೆಡೆ ತರಗೆಲೆ, ಕೊಟ್ಟಿಗೆ ತ್ಯಾಜ್ಯ ಗುಡ್ಡೆ ಮಾಡಿ ಅದನ್ನು ತೆಂಗಿನ ಗರಿಗಳಿಂದ ಮುಚ್ಚುತ್ತಾರೆ. ಅದರಲ್ಲಿ ಎರೆಹುಳು ಬಿಟ್ಟು, ಕಾಲ- ಕಾಲಕ್ಕೆ ಮಿತ ಪ್ರಮಾಣದಲ್ಲಿ ನೀರು ಹಾಕಿ, ತೇವಾಂಶ ಕಾಪಿಡುತ್ತಾರೆ. ಇದರಿಂದ ಕ್ಷಿಪ್ರಗತಿಯಲ್ಲಿ ಎರೆಹುಳು ಗೊಬ್ಬರ ಉತ್ಪತ್ತಿಯಾಗುತ್ತದೆ. ಇದನ್ನು ಹೊಲಕ್ಕೆ ಬಳಸಿ ಮಿಕ್ಕಿದ್ದನ್ನು ಮಾರುತ್ತಾರೆ. ಹೀಗಾಗಿ ಇಂದು ಇವರ ಹೊಲದಲೆಲ್ಲಾ ಎರೆಹುಳುಗಳಿವೆ.
ಹಸಿರೆಲೆ ಗೊಬ್ಬರ
ಇನ್ನು 20 ಸೆಂಟ್ಸ್ನಲ್ಲಿ ಸಾವಯವ ವಿಧಾನದಲ್ಲಿ ಕಬ್ಬು ಬೆಳೆದು, ಬೆಲ್ಲ ಮಾಡುತ್ತಾರೆ. ಬೆಳೆಯ ನಡುವಿನ ಕಳೆಯನ್ನು ಪದೇ ಪದೇ ತೆಗೆಸುವುದಿಲ್ಲ. ಸೊಂಪಾಗಿ ಕಳೆ ಬೆಳೆದರೆ ಭೂಮಿಯು ತೇವಾಂಶ ಹಿಡಿದಿಡುತ್ತದೆ. ಜತೆಗೆ ಒಮ್ಮೆಗೆ ಅದನ್ನು ಕಟಾವು ಮಾಡಿ, ಮಲ್ಚಿಂಗ್ ಮಾಡಿದರೆ ಈ ಭಾಗದಲ್ಲಿ ಯಥೇಚ್ಛವಾಗಿ ಸಿಗುವ ಕಬ್ಬಿನ ಸೋಗೆ ಬೆಳೆಯ ನಡುವೆ ಹರಡಿದರೆ ಭೂಮಿಗೆ ಒಳ್ಳೆಯ ಹಸಿರೆಲೆ ಗೊಬ್ಬರವಾಗುತ್ತದೆ. ಇದರ ನಡುವೆ ಅಲ್ಲಲ್ಲಿ ಬಗೆ- ಬಗೆಯ ಸೊಪ್ಪು, ತರಕಾರಿ ಬೆಳೆಯುತ್ತಾರೆ. ಬದುವಿನಲ್ಲಿ ಅಲ್ಪ ಪ್ರಮಾಣದಲ್ಲಿ ತೆಂಗು, ನಿಂಬೆ, ಅರಿಶಿಣ, ಬದನೆ, ಗುಲಾಬಿ, ಭಟ್ಕಳ ಮಲ್ಲಿಗೆ, ಮಾವು, ಹಲಸು ಇತ್ಯಾದಿ ಬೆಳೆಯುತ್ತಾರೆ. ಈ ಬೆಳೆಗಳ ರೋಗ ನಿಯಂತ್ರಣಕ್ಕೆ ಜೀವಾಮೃತ, ಹುಳಿ ಮಜ್ಜಿಗೆ ಸಿಂಪಡಿಸುತ್ತಾರೆ. ಒಟ್ಟಿನಲ್ಲಿ ಪ್ರಸನ್ನ ಸರಳ ವಿಧಾನದಲ್ಲಿ ಬಂಪರ್ ಲಾಭ ಕಾಣುತ್ತಿದ್ದಾರೆ.
ತರಬೇತಿ
ಬೆಂಗಳೂರಿನ ಹೆಸರಘಟ್ಟದಲ್ಲಿ ಡೈರಿ ಟ್ರೈನಿಂಗ್, ಬೇರೆಡೆ ನರ್ಸರಿ ಗ್ರೀನ್ಹೌಸ್ ಟೆಕ್ನಾಲಜಿಯಲ್ಲಿ ತರಬೇತಿ. ವಿವಿಧ ಬೆಳೆ ಬೆಳೆಯುವುದನ್ನು ನಿಲ್ಲಿಸಿ, ಜಮೀನಿಗೆಲ್ಲಾ ಭಾಗಶಃ ಹುಲ್ಲು ತುಂಬಿಸಿದರು. ಮಿತ ಖರ್ಚಿನಲ್ಲಿ ಕೊಟ್ಟಿಗೆ ನಿರ್ಮಾಣ. ಪ್ರಾರಂಭದಲ್ಲಿ ಕಸಾಯಿಖಾನೆಯ ಜಾಡು ಹಿಡಿದಿದ್ದ ಕೆಲ ದೇಸಿ ಆಕಳು ತಂದು ಜೋಪಾನ ಮಾಡಿದರು. ದಿನ ಕಳೆದಂತೆ ಕೊಟ್ಟಿಗೆಗೆ ಹೊಸ ಹೊಸ ಸದಸ್ಯರ ಸೇರ್ಪಡೆ. ಫಲವಾಗಿ ಇಂದು ಪ್ರಸನ್ನನ ಕೊಟ್ಟಿಗೆಯಲ್ಲಿ ಜವಾರಿ ಆಕಳು, ಎಮ್ಮೆಗಳ ಸಂಖ್ಯೆ 20ರ ಗಡಿ ದಾಟಿದೆ. ದೇವಣಿ, ಗಿರ್, ಹಳ್ಳಿಕಾರ್, ಕಾಂಕ್ರೀಜ್, ಶಾಹಿವಾಲ್, ಮುರ್ರಾ... ಇಷ್ಟೆಲ್ಲಾ ಜಾತಿಯ ಜಾನುವಾರುಗಳಿದ್ದು, ಇವುಗಳಿಂದ ನಿತ್ಯ 40- 50 ಲೀಟರ್ ಹಾಲು ಪಡೆಯುತ್ತಾರೆ.
= ಸ್ವರೂಪಾನಂದ ಎಂ. ಕೊಟ್ಟೂರು