ಕಂಡಿರಾ ಗೋ ಕೃಷಿ

ಕಂಡಿರಾ ಗೋ ಕೃಷಿ
Updated on: 

ಲಾಭ ಇದ್ದರೆ ಕೃಷಿ ಮಾಡಬೇಕು, ಇಲ್ಲದಿದ್ದರೆ ಅದರ ಉಸಾಬರಿ ನಮಗೇಕೆ ಎಂಬುದು ಹಲವರ ಅನಿಸಿಕೆ. ಆದರೆ, ಇಲ್ಲೊಬ್ಬ ರೈತ ದಂಪತಿ ಲಾಭ ಬದಿಗಿರಿಸಿ ಕೃಷಿಯನ್ನೇ ಬದುಕಾಗಿಸಿಕೊಂಡಿದ್ದಾರೆ, ಅಷ್ಟೇ ಅಲ್ಲ, ಪರಿಸರಕ್ಕೆ ಒಂಚೂರು ಹಾನಿ ಮಾಡದೆ ಅದರಡಿಯೇ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಆ ದಂಪತಿಯ ಕೃಷಿ ಬದುಕು ಪರಿಸರಸ್ನೇಹಿ ಬೇಸಾಯದ ಪಾಠದಂತಿದೆ.
ಅವರು ಗೋಪಾಲಕೃಷ್ಣ ಹೆಗಡೆ ಮತ್ತು ವಿಮಲಾ. ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿ. ಗೋಪಾಲಕೃಷ್ಣ ಅವರು ಓದಿದ್ದು ಬರೀ 7ನೇ ಕ್ಲಾಸು. ಮೊದಲೇ ಅವರದು ಕೃಷಿ ಹಿನ್ನೆಲೆಯ ಕುಟುಂಬ. ಆಗ ಅವರ ತಂದೆ ಓದು ಸಾಕು, ಕೃಷಿಯಲ್ಲಿ ಮುಂದುವರಿ ಅಂದರು. ಅವರ ಆದೇಶ ಪಾಲಿಸಿದ ಮಗ ಗೋಪಾಲಕೃಷ್ಣ ಅಂದಿನಿಂದಲೇ ಕೃಷಿಯಲ್ಲಿ ಸಕ್ರಿಯ.
ಪರಿಸರಸ್ನೇಹಿ ಕೃಷಿ
ಮೊದಲೇ ಹೇಳಿದಂತೆ ಅವರದು ಪರಿಸರಸ್ನೇಹಿ ಕೃಷಿ. ಅಂದರೆ ಹೊಲದಲ್ಲಿ ಒಂಚೂರು ರಾಸಾಯನಿಕ ಗೊಬ್ಬರ, ಔಷಧಿ ಬಳಸಲ್ಲ. 4 ಎಕರೆ ಜಮೀನಿನಲ್ಲಿ ಸಮೃದ್ಧ ಬದುಕು ಕಂಡುಕೊಂಡಿದ್ದಾರೆ. ಬೋರ್‌ವೆಲ್ ಕೊರೆಸಿಲ್ಲ, ಜಮೀನಿನ ಪಕ್ಕವೇ ಕೆರೆಯಿದೆ, ಅದರ ನೀರನ್ನೇ ಜಮೀನಿಗೆ ಉಣಿಸುತ್ತಾರೆ. ಗೊಬ್ಬರಕ್ಕಾಗಿ ಹಸುಗಳನ್ನು ಆಶ್ರಯಿಸಿದ್ದಾರೆ.
ಏನೇನು ಬೆಳೆಯುತ್ತಾರೆ?
ಜಮೀನಿನಲ್ಲಿ ಮುಖ್ಯವಾಗಿ ಬತ್ತ ಬೆಳೆಯುತ್ತಾರೆ. ಜತೆಗೆ ಶೇಂಗಾ, ಅಲಸಂದೆ, ಅಡಕೆ, ತೆಂಗು, ಗೋಡಂಬಿ, ಮಾವು ಹಲವು ತರಕಾರಿ ಬೆಳೆಯುತ್ತಾರೆ. ವಾರ್ಷಿಕ ರು. 1.5 ಲಕ್ಷ ಆದಾಯ ಸಿಗುತ್ತಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಖುಷಿ, ನೆಮ್ಮದಿ ಸಿಗುತ್ತಿದೆ ಅಂತಾರೆ ಈ ದಂಪತಿ.
50 ವರ್ಷದ ಪಯಣ
ಗೋಪಾಲಕೃಷ್ಣ ಅವರು ಕೃಷಿಗೆ ಪದಾರ್ಪಣೆ ಮಾಡಿದ್ದು ಬರೀ ಐದಾರು ವರ್ಷದಿಂದಲ್ಲ. ಅವರ ಕೃಷಿ ಬದುಕಿಗೆ 5 ದಶಕಗಳ ಇತಿಹಾಸವಿದೆ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಜನ ಸಿಗೋದು ತೀರಾ ವಿರಳ. ಯಾಕೆಂದರೆ ಬಹಳಷ್ಟು ಜನ ಕೃಷಿಯನ್ನು ನೋಡೋದು ಲಾಭದ ದೃಷ್ಟಿಯಿಂದಲೇ. ಆದರೆ, ಗೋಪಾಲಕೃಷ್ಣ ಕೃಷಿಯನ್ನೇ ಬದುಕನ್ನಾಗಿ ಸ್ವೀಕರಿಸಿದವರು. ಗೋಪಾಲಕೃಷ್ಣರಿಗೆ 65 ವಯಸ್ಸು. ನಿತ್ಯ 10- 12 ತಾಸು ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕೆಲಸ ಮಾಡಲು ಅವರ ವಯಸ್ಸು ಅಡ್ಡ ಬರುತ್ತಿರುವುದರಿಂದ ಉಳುಮೆ ಯಂತ್ರವನ್ನು ಮಾತ್ರ ಬಳಸುತ್ತಿದ್ದಾರೆ. ಅದನ್ನು ಬಿಟ್ಟರೆ ಬೇರಾವುದೇ ಯಂತ್ರವನ್ನು ಅವರು ಮುಟ್ಟಲ್ಲ. ಗೋಪಾಲಕೃಷ್ಣರ ಕೈಂಕರ್ಯಕ್ಕೆ ಪತ್ನಿಯೂ ಸಾಥ್ ನೀಡುತ್ತಾರೆ. ಅವರು ಯಾವತ್ತೂ ಲಾಭಕ್ಕೆ ಆದ್ಯತೆ ಕೊಡಲೇ ಇಲ್ಲ, ಭೂತಾಯಿ ನಮಗೆ ಅನ್ನ ಕೊಡುತ್ತಾಳೆ. ಆದರೆ ಒತ್ತಾಯಪೂರ್ವಕ (ರಾಸಾಯನಿಕ ಬಳಸಿ) ಇಳುವರಿ ಹೆಚ್ಚು ಮಾಡಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಬಾರದು ಎಂಬುದು ಅವರ ನಿಲುವು.
ಪ್ರಶಸ್ತಿಗಳ ಸರದಾರ
ಗೋಪಾಲಕೃಷ್ಣ ಕೃಷಿ ಸಾಧನೆ ಅರಸಿ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ. ಇತ್ತೀಚೆಗೆ ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನವು ಗೋಪಾಲಕೃಷ್ಣ ಹೆಗಡೆ ದಂಪತಿಯನ್ನು ಸನ್ಮಾನಿಸಿತು. ಕೃಷಿ ಜಯಂತಿಯಂದು ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಹೆಗಡೆ ದಂಪತಿಯನ್ನು ಸನ್ಮಾನಿಸಿದರು. ಅಲ್ಲದೆ, ಹಲವಾರು ಸಂಘ- ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

=  ಡಾ. ಕೋಮಲಾ ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com