

ಕೃಷಿಯಲ್ಲಿ ಅಧಿಕ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲವೇ, ಅದರಿಂದ ನೆಮ್ಮದಿಯ ಜೀವನ ಸಾಗಿಸಲು ಆಗುತ್ತಿಲ್ಲವೆ, ಕೃಷಿಯ ಜತೆಗೆ ಯಾವುದಾದರೂ ಅರೆಕಾಲಿಕ ಉದ್ಯೋಗ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೀರಾ? ಹಾಗಾದರೆ ಅದಕ್ಕಿರುವ ಸರಳ ಉಪಾಯ ಹೈನುಗಾರಿಕೆ. ಏಕೆಂದರೆ ಕೃಷಿಯ ಜತೆಗೆ ಎಮ್ಮೆ ಸಾಕಾಣಿಕೆಯಲ್ಲಿ ತೊಡಗಿ ಅಧಿಕ ಲಾಭ ಗಳಿಸುತ್ತಿದ್ದಾರೆ ಗುಲ್ಬರ್ಗ ಜಿಲ್ಲೆಯ ಮಲಕೂಡ ಗ್ರಾಮದ ಬಸವರಾಜ ನೀಲಿ.
ಹೌದು, ಬಸವರಾಜ ನೀಲಿ ಕೇವಲ ಕಳೆದ ಆರು ತಿಂಗಳ ಹಿಂದೆಯಷ್ಟೇ ಎಮ್ಮೆ ಸಾಕಾಣಿಕೆ ನೆಚ್ಚಿಕೊಂಡಿದ್ದರೂ ಲಾಭದ ರುಚಿ ನೋಡುತ್ತಿದ್ದಾರೆ. ಗೆಳೆಯರ ಸಲಹೆ- ಸಹಕಾರದಿಂದ ಮೊದಮೊದಲು ಹತ್ತು ಎಮ್ಮೆಗಳನ್ನು ಖರೀದಿ ಮಾಡಿ ಪ್ರಯೋಗ ಮಾಡಿದ ಇವರು ಲಾಭ ಬರುವ ಸೂಚನೆ ಕಂಡು ಮತ್ತೆ ಹತ್ತು ಎಮ್ಮೆ ಖರೀದಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
ನಿರ್ವಹಣೆ ಹೇಗೆ?
ಒಣ ಹುಲ್ಲು, ಹಸಿ ಹುಲ್ಲು, ಬೂಸಾ ಇವುಗಳ ಸಾಮಾನ್ಯ ಆಹಾರ. ದಿನಕ್ಕೆ ಎರಡು ಬಾರಿ ನೀರು ಮತ್ತು ಮೂರು ಬಾರಿ ಆಹಾರ ನೀಡಬೇಕು. ಇವುಗಳ ವಾಸಕ್ಕಾಗಿ ಸಣ್ಣದೊಂದು ಶೆಡ್ ಆದೀತು. ಅಂದ ಹಾಗೆ ಒಂದು ಎಮ್ಮೆಯ ಬೆಲೆ 60- 65 ಸಾವಿರ. ಎಮ್ಮೆ ಸಾಕಾಣಿಕೆಗಾಗಿ ಹಲವು ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳಬಹುದು.
ಯಾವ ತಳಿ?
ಇವರು ತಂದಿರುವ ಎಮ್ಮೆಗಳ ತಳಿಯು ಹರಿಯಾಣ ತಳಿಯಾಗಿದ್ದು, ಅಧಿಕ ಹಾಲು ನೀಡುವುದು ಇವುಗಳ ವಿಶೇಷ. ಈ ಎಮ್ಮೆಗಳು ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಪುಣೆಗಳಲ್ಲಿ ಅಧಿಕವಾಗಿ ಸಿಗುತ್ತವೆ. ಅಲ್ಲದೆ, ಈ ತಳಿಯ ಎಮ್ಮೆಗಳು ವರ್ಷದಲ್ಲಿ 9-10 ತಿಂಗಳು ಹಾಲು ಕೊಡುತ್ತವೆ. ಯಾವ ವಾತಾವರಣಕ್ಕೂ ಒಗ್ಗಿಕೊಳ್ಳುತ್ತವೆಯಾದ್ದರಿಂದ ಕರ್ನಾಟಕದ ಯಾವ ಪ್ರದೇಶಗಳಲ್ಲಿಯೂ ಸಾಕಬಹುದು.
ಲಾಭ ಹೇಗೆ?
ಇಪ್ಪತ್ತು ಎಮ್ಮೆಗಳನ್ನು ಸಾಕುತ್ತಿರುವ ಬಸವರಾಜ ಅವರು ದಿನಕ್ಕೆ ಏನಿಲ್ಲವೆಂದರೂ ನಾಲ್ಕು ಸಾವಿರದಿಂದ ನಾಲ್ಕೂವರೆ ಸಾವಿರ ರುಪಾಯಿ ಎಣಿಸುತ್ತಿದ್ದಾರೆ. ಒಂದು ಎಮ್ಮೆಯಿಂದ ದಿನಕ್ಕೆ ಏನಿಲ್ಲವೆಂದರೂ ಐದು ಲೀಟರ್ ಹಾಲು ಉತ್ಪಾದನೆಯಾದರೂ ಇಪ್ಪತ್ತು ಎಮ್ಮೆಗಳಿಂದ ನೂರು ಲೀಟರ್ ಹಾಲು ಸಿಗುತ್ತದೆ. ಒಂದು ಲೀಟರ್ ಎಮ್ಮೆ ಹಾಲಿಗೆ 40 ದೊರೆಯುತ್ತದೆ. ಖರ್ಚು- ವೆಚ್ಚ ಹೋಗಿ ತಿಂಗಳಿಗೆ 60 ರಿಂದ 70 ಸಾವಿರ ಲಾಭ ಗಳಿಸಬಹುದು. ಅಲ್ಲದೆ, ಆರು ತಿಂಗಳಲ್ಲಿ 15- 20 ಟ್ರ್ಯಾಕ್ಟರ್ ಸಗಣಿ ಗೊಬ್ಬರವೂ ಉತ್ಪಾದನೆಯಾಗಿ ಕೃಷಿಗೆ ಸಹಾಯಕವಾಗಬಲ್ಲದು. ನೀವು ಕೂಡಾ ಎಮ್ಮೆ ಸಾಕಾಣಿಕೆಯಲ್ಲಿ ತೊಡಗಿ ಬಸವರಾಜ ಅವರ ತರಹ ಲಾಭ ಗಳಿಸುವ ಯೋಚನೆಯಲ್ಲಿದ್ದರೆ ಅವರ ಸಲಹೆ- ಸೂಚನೆ ಪಡೆಯಬಹುದು. ಮೊ. 9900896170.
-ಅನೂಪ್ ಜಾಗಿರದಾರ್