ಎಮು ಆದ್ಮಿ!

ಇದೇನ್ರಿ ಕೋಳಿ ಮೊಟ್ಟೆ 4 ರಿಂದ 5ಕ್ಕೆ ಸಿಗುತ್ತದೆ, ಕೋಳಿಯ ಬೆಲೆಗಿಂತ ಹೆಚ್ಚೇ ಹೇಳುತ್ತಿದ್ದಾರಲ್ಲ...
ಎಮು ಆದ್ಮಿ!
Updated on: 

ಇದೇನ್ರಿ ಕೋಳಿ ಮೊಟ್ಟೆ 4 ರಿಂದ 5ಕ್ಕೆ ಸಿಗುತ್ತದೆ, ಕೋಳಿಯ ಬೆಲೆಗಿಂತ ಹೆಚ್ಚೇ ಹೇಳುತ್ತಿದ್ದಾರಲ್ಲ ಎಂದು ಆಶ್ಚರ್ಯವಾಗುತ್ತಿದೆಯೇ?
ಇದು ಕೂಡ ಕೋಳಿ ಮೊಟ್ಟೇನೆ. ಆದರೆ, ಇದು ಕೋಳಿಯ ಜಾತಿಗೆ ಸೇರಿದ ಆಸ್ಟ್ರೇಲಿಯಾ ಮೂಲದ ಎಮು ಪಕ್ಷಿಯ ಮೊಟ್ಟೆ. ಇಂಥ 'ಎಮು' ಲೋಕ ಹೊಕ್ಕವರು ಹರಿಹರದ ರಾಘವೇಂದ್ರ.
ವೃತ್ತಿಯಲ್ಲಿ ರಾಘವೇಂದ್ರ ಹೈನುಗಾರಿಕೆ ಮೆಡಿಕಲ್ ರೆಪ್. ಆದರೆ, ಅದರಿಂದ ಜೀವನದಲ್ಲಿ ಬೇರೇನೂ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿದು ಪರ್ಯಾಯ ಉದ್ಯೋಗವಾಗಿ ಎಮು ಸಾಕುತ್ತಿದ್ದಾರೆ. ಪರ್ಯಾಯ ಉದ್ಯೋಗದ ಹಾದಿ ಕಂಡುಕೊಳ್ಳುವಾಗ ಕೋಳಿ ಫಾರಂ ಅಥವಾ ಡೈರಿ ಮಾಡಬೇಕು ಎಂದು ಯೋಚಿಸಿದರು. ಆದರೆ, ಆ ಕ್ಷೇತ್ರಗಳಲ್ಲಿ ಲಾಭ ಮತ್ತು ಬೇಡಿಕೆ ಕಡಿಮೆ ಇದೆ ಎಂದು ತಿಳಿದು ವಿಭಿನ್ನವಾಗಿ ಮಾಡಬೇಕು ಎಂದು ಚಿಂತಿಸಿದರು. ಇಂಗ್ಲೆಂಡಿನಲ್ಲಿರುವ ಗೆಳೆಯ ಶಂಭುಲಿಂಗರೊಂದಿಗೆ ಚರ್ಚಿಸಿದಾಗ ಗೆಳೆಯನ ಸಲಹೆ, ಸೂಚನೆ ಮೇರೆಗೆ ಎಮು ಪಕ್ಷಿಯ ಸಾಕಣೆಗೆ ನಿರ್ಧರಿಸಿದರು.

ಅಧ್ಯಯನ
ಎಮು ಪಕ್ಷಿಗೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಸ್ಥಳೀಯ ಮಾರುಕಟ್ಟೆ ಇರುವುದನ್ನು ಕಂಡುಕೊಂಡರು. ನಂತರ ಎಮು ಸಾಕಣೆ ಬಗ್ಗೆ ತಿಳಿಯಲು ಅನೇಕ ಫಾರಂಗಳಿಗೆ ಭೇಟಿ ನೀಡಿ, ಅಧ್ಯಯನ ಮಾಡಿದರು. ಸುಮಾರು ರು. 10 ಲಕ್ಷ ಬಂಡವಾಳ ಹೂಡಿ, ಒಂದು ಎಕರೆ ಭೂಮಿಯಲ್ಲಿ ಎಮು ಪಕ್ಷಿಯ ಸಾಕಣೆ ಕೇಂದ್ರ ತೆರೆದರು. 28 ಪಕ್ಷಿಗಳನ್ನು ರು. 10 ಸಾವಿರಕ್ಕೆ 1ರಂತೆ ಖರೀದಿಸಿದರು. ಈ ಮೂರು ವರ್ಷದಿಂದ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆಹಾರ ಕ್ರಮ ಹೇಗೆ?
ಎಮು ಪಕ್ಷಿಯ ಆಹಾರ ಕ್ರಮವೇ ಬಲು ವಿಚಿತ್ರ. ಇದುವೆಜ್ ಮತ್ತು ನಾನ್‌ವೆಜ್‌ಗಳೆರಡನ್ನೂ ಸವಿಯುವ ಪಕ್ಷಿ. ಸಸ್ಯಜನ್ಯ ಆಹಾರವಾದ ಮೆಕ್ಕೆಜೋಳ, ರಾಗಿ, ಅಕ್ಕಿ ನುಚ್ಚು, ಸೌತೆಕಾಯಿ, ಮೂಲಂಗಿ ಜತೆಗೆ ಸಣ್ಣ ಕೀಟಗಳು, ಸಣ್ಣ ಮರಳು, ಕಲ್ಲು, ಕಬ್ಬಿಣದ ತುಣಕುಗಳು ತಿನ್ನುತ್ತದೆ. ಮುಂಜಾನೆಯ ಇಬ್ಬನಿ ಸೇವಿಸುವುದು ಇದರ ಮತ್ತೊಂದು ಪ್ರಮುಖ ಲಕ್ಷಣ.
ಗಂಡು, ಹೆಣ್ಣು ಪಕ್ಷಿ ನೋಡಲು ಒಂದೇ ರೀತಿಯಲ್ಲಿ ಕಾಣುತ್ತವೆ. ಮೂಗು ಬಹು ಮಡಿಕೆ ಹೊಂದಿರುತ್ತವೆ. ಹೆಣ್ಣು ಮೊಟ್ಟೆ ಇಡುವುದಕ್ಕೆ ಪ್ರಾರಂಭಿಸಿದರೆ ಗಂಡು ಮೊಟ್ಟೆಗೆ ಕಾವಲು ನೀಡುತ್ತದೆ. ಗಂಡು ಜನವರಿಯಲ್ಲಿ ಮೊಟ್ಟೆಯನ್ನು ಮರಿ ಮಾಡಿಸುವ ಕಾರ್ಯಕ್ಕೆ ಮುಂದಾಗುತ್ತದೆ. ಆ ವೇಳೆ ಗಂಡು ಎಮು ಆಹಾರ, ನೀರು ಕುಡಿಯುವುದು ಮತ್ತು ಮಲ ವಿಸರ್ಜನೆ ನಿಲ್ಲಿಸುತ್ತದೆ.

ಮಾಂಸ ಬಲು ರುಚಿ
ಇದರ ಮಾಂಸ ತುಂಬಾ ರುಚಿ. ಆದರೆ, ಬೆಲೆ ಮಾತ್ರ ಸಿಕ್ಕಾಪಟ್ಟೆ ಜಾಸ್ತಿ. ಒಂದು ಕೆಜಿ ಮಾಂಸಕ್ಕೆ ರು. 350. ಅದು ಕೂಡ ಕೊಲೆಸ್ಟೆರಾಲ್‌ಲೆಸ್. ಅಂದರೆ ಎಮುವಿನಲ್ಲಿ 100 ಗ್ರಾಂಗೆ 85 ಗ್ರಾಂ ಕೊಬ್ಬಿಲ್ಲದ ಮಾಂಸ ಪಡೆಯಬಹುದು. ಈ ಮಾಂಸವನ್ನು ಅಮೆರಿಕದಲ್ಲಿ ಕೆಂಪು ಮಾಂಸ (ರೆಡ್‌ಮೀಟ್) ಎಂದು ಕರೆಯುವರು.

ಟೋಪಿ ತಯಾರಿಕೆ
ಎಮು ಪಕ್ಷಿಯ ರೆಕ್ಕೆಗಳನ್ನು ಅಲಂಕಾರಿಕವಾಗಿಯೂ ಟೋಪಿಗಳ ತಯಾರಿಕೆಯಲ್ಲಿ ಬಳಸುವರು. ಇದರ ದೇಹದಿಂದ ತೆಗೆದ ಕೊಬ್ಬಿನಂಶದಿಂದ ಎಣ್ಣೆ ತಯಾರಿಸಲಾಗುತ್ತದೆ. ಅಲ್ಲದೆ, ಔಷಧಿಗಳ ತಯಾರಿಕೆಯಲ್ಲೂ ಎಮುವಿನ ಮೊಟ್ಟೆ ಬಳಸಲಾಗುತ್ತದೆ. ರಾಘವೇಂದ್ರ ಅವರ ಸಂಪರ್ಕಕ್ಕಾಗಿ ಮೊ. 7829202077.

- ವಿಶ್ವನಾಥ ಮಲೇಬೆನ್ನೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com