ಬೊನ್ಸಾಯ್ ಬಿನ್ನಾಣ

ಬೊನ್ಸಾಯ್ ಬಿನ್ನಾಣ
Updated on: 

ಇವು ಸಾಮಾನ್ಯ ಗಿಡಗಳಲ್ಲ. ಯಾಕೆಂದರೆ ಇಲ್ಲಿನ ಗಿಡಗಳು ಬರೀ ನೆರಳನ್ನು ಮಾತ್ರ ಕೊಡಲ್ಲ. ಭಾವನೆಗಳನ್ನು ಸುಮಧುರಗೊಳಿಸಲು ಸಹಕರಿಸುತ್ತವೆ. ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ. ಇಂಥದ್ದೊಂದು ಅಪರೂಪದ ವನ ಎಲ್ಲಿದೆ ಅಂತೀರಾ?
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಕಿಷ್ಕಿಂಧಾ ಮೂಲಿಕಾ ಬೋನ್ಸಾಯ್ ವನವಿದೆ. ಬೋನ್ಸಾಯ್ ಹುಟ್ಟಿದ್ದು ಚೀನಾದಲ್ಲಿ ಅಂತಾರೆ. ಆದರೆ, ನಮ್ಮ ರಾಮಾಯಣದಲ್ಲೂ ಕಿಷ್ಕಿಂಧ ವನದ ಉಲ್ಲೇಖ ಇರುವುದರಿಂದ ಇಲ್ಲೂ ಅದೇ ಹೆಸರನ್ನಿಡಲಾಗಿದೆ. ಒಂದೇ ಕಡೆ ನೂರಾರು ಕುಬ್ಜ ಗಿಡಗಳು ಕಾಣಸಿಗುವುದು ವಿಶೇಷ.

300 ಗಿಡ
ಆಶ್ರಮದ ಆವರಣದಲ್ಲಿ ಬೋನ್ಸಾಯ್ ಮಾತ್ರವಲ್ಲದೆ ರಾಶಿ, ನಕ್ಷತ್ರ, ಸಪ್ತರ್ಷಿ, ನವಗ್ರಹ, ಹರ್ಬಲ್ ಹಾಗೂ ಕ್ಯಾಕ್ಟಸ್ ವನಗಳೂ ಇವೆ. ವಿಶ್ವದ ನಾನಾ ಮೂಲೆಗಳಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಂದಿರುವ 300 ಬೋನ್ಸಾಯ್ ಗಿಡಗಳನ್ನು ವನದಲ್ಲಿ ಬೆಳೆಸಲಾಗಿದೆ. ಚಾಮುಂಡಿ ಬೆಟ್ಟದ ಹಿನ್ನೋಟದಲ್ಲಿ, ವಿಶ್ವ ಮ್ಯೂಸಿಯಂ, ಧರ್ಮ ಧ್ವಜ, ಮೂಲಿಕೇಶ್ವರ ಬಳಿ ಇರುವ ಬೋನ್ಸಾಯ್ ವನದ ದಕ್ಷಿಣ ಭಾಗದಲ್ಲಿ ನಿಂತು ನೋಡುವುದೇ ಆನಂದ.

ವಿದೇಶಿ ಗಿಡಗಳು
ಇಂಡೋನೇಷ್ಯಾ, ಚೀನಾ, ಮಲೇಷ್ಯಾ, ಫಿಲಿಪ್ಪೀನ್ಸ್, ಥೈವಾನ್, ಬರ್ಮಾ, ಆಸ್ಟ್ರೇಲಿಯಾ, ಮೆಕ್ಸಿಕೋ, ಪೋಲೋನೇಷ್ಯಾ, ವೆಸ್ಟ್‌ಇಂಡೀಸ್, ಬ್ರೆಜಿಲ್, ಸೌತ್ ಅಮೆರಿಕ, ಜಪಾನ್, ಆಫ್ರಿಕ ಮೊದಲಾದ ದೇಶಗಳಿಂದ ತಂದಿರುವ ಬೋನ್ಸಾಯ್ ಗಿಡಗಳನ್ನು ಇಲ್ಲಿ ಬೆಳೆಸಲಾಗಿದೆ.

ಮೆಚ್ಚುಗೆ
ಆಶ್ರಮಕ್ಕೆ ಭೇಟಿ ನೀಡುವ ದೇಶ- ವಿದೇಶಗಳ ಜನರು ಈ ಬೋನ್ಸಾಯ್ ವನ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಆಶ್ರಮದಲ್ಲಿ ಬೋನ್ಸಾಯ್ ವಿನ್ಯಾಸ ಮೇಳವೂ ನಡೆಯಿತು.

ಬೋನ್ಸಾಯ್ ಅಧ್ಯಾತ್ಮಕ್ಕೆ ಸಂಬಂಧಿಸಿದ್ದಾಗಿದ್ದು, ಔಷಧ ಗುಣ ಹೊಂದಿದೆ. ಮನುಷ್ಯನಲ್ಲಿ ಮೂಳೆ, ಮಾಂಸ ಖಂಡಗಳು ಹೇಗೆ ರಚಿತವಾಗಿವೆಯೋ ಅದೇ ರೀತಿ ಬೊನ್ಸಾಯ್ ಗಿಡವೂ ಅಧ್ಯಾತ್ಮದ ಪ್ರತೀಕ. ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಅದರಲ್ಲಿರುವ ಔಷಧಿ ಗುಣಗಳಿಂದ ಮನುಷ್ಯನ ರೋಗವನ್ನು ವಾಸಿ ಮಾಡುತ್ತದೆ. ಪ್ರತಿಯೊಬ್ಬರು ಒಂದೊಂದು ಬೊನ್ಸಾಯ್ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಆಲೋಚನೆ ಬದಲಾಗುತ್ತವೆ. ಮನಸ್ಸಿನಲ್ಲಿ ಶಾಂತಿ ಮೂಡಿ ಸೌಹಾರ್ದತೆ ಆವರಿಸುತ್ತದೆ. ಈ ಗಿಡ ನೋಡಲು ಸುಂದರವಾಗಿರುವುದರಿಂದ ಕಣ್ಣಿಗೆ ತಂಪಾಗುತ್ತದೆ.
- ಗಣಪತಿ ಸಚ್ಚಿದಾನಂದ ಸ್ವಾಮೀಜಿ

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com