ಧನಕನಕ

ಧನಕನಕ
Updated on: 

ಮನೆಯಂಗಳವನ್ನೇ ಆದಾಯದ ಮೂಲವಾಗಿಸಬಹುದು. ಆ ಮೂಲಕ ಚೂರು- ಪಾರು ಕಾಸು ಸಂಪಾದಿಸಬಹುದು ಎಂಬುದಕ್ಕೆ ಈ ಮಹಿಳೆ ಉದಾಹರಣೆ.
ಮಲೆನಾಡಿನ ಮಹಿಳೆಯರು ವಾಣಿಜ್ಯ, ವ್ಯವಹಾರ, ಕೃಷಿಯಲ್ಲಿ ತೊಡಗುವುದು ವಿರಳ. ಕೂಲಿಯಾಳಾಗಿ ಅಥವಾ ಮನೆಯಲ್ಲಿ ಅಡುಗೆ ತಯಾರಿಸಿ ಬಡಿಸುವುದಕ್ಕೆ ಅವರ ಸಾಧನೆ ಸೀಮಿತವಾಗಿರುತ್ತದೆ. ಆದರೆ, ಈಗೀಗ ಮನೆಯಂಗಳಲ್ಲಿ ಪುಷ್ಪ ಕೃಷಿ ನಡೆಸುವುದು, ಕೋಳಿ- ಕುರಿ ಸಾಕಣೆಗಳಲ್ಲಿ ಕೆಲ ಮಹಿಳೆಯರು ತೊಡಗಿಕೊಂಡು ಆದಾಯ ಗಳಿಕೆಗೆ ಮುಂದಾಗುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೈರಾಪುರ ಗ್ರಾಮದ ಗೌರಿಹಳ್ಳದ ಸಾವಿತ್ರಿ ಕಳೆದ 3- 4 ವರ್ಷದಿಂದ ಮನೆಯಂಗಳದಲ್ಲಿ ಕನಕಾಂಬರ ಬೆಳೆಸಿದ್ದಾರೆ. ಹೂವು ಮಾರಿ ಆದಾಯ ಗಳಿಸುತ್ತಿದ್ದಾರೆ.
ಕೃಷಿ ಹೇಗೆ?
4 ವರ್ಷದ ಹಿಂದೆ ಸಂಬಂಧಿಕರ ಮನೆಯಿಂದ ಈ ಗಿಡದ ರೆಂಬೆ ತಂದು ಮನೆಯಂಗಳದಲ್ಲಿ ನೆಟ್ಟಿದ್ದರು. ಗಿಡದಿಂದ ಗಿಡಕ್ಕೆ 2 ಅಡಿ, ಸಾಲಿನಿಂದ ಸಾಲಿಗೆ 2 ಅಡಿ ಅಂತರದಂತೆ ಅಡಕೆ ನಡುವೆ ಅಂತರ್ ಬೆಳೆಯಾಗಿ ನಾಟಿ ಮಾಡಿದ್ದರು. ಸುಮಾರು 50 ಕನಕಾಂಬರ ಗಿಡಗಳಿವೆ. ಮಳೆಗಾಲದ ಆರಂಭದಲ್ಲಿ ಗಿಡದ ರೆಂಬೆ ಕತ್ತರಿಸುತ್ತಾರೆ. ಜುಲೈ- ಆಗಸ್ಟ್‌ನಲ್ಲಿ ಇವು ಚೆನ್ನಾಗಿ ಚಿಗುರುತ್ತಾ ಮತ್ತೆ ಬೆಳೆಯುತ್ತದೆ. ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಡಿಸೆಂಬರ್‌ನಿಂದ 4 ದಿನಕ್ಕೊಮ್ಮೆ ನೀರನ್ನು ನೀಡುತ್ತಾರೆ. ಜನವರಿ ಆರಂಭದಲ್ಲಿ ಕನಕಾಂಬರ ಹೂವು ಬಿಡಲಾರಂಭಿಸುತ್ತದೆ. ಬೇಸಿಗೆಯ ದಿನಗಳಲ್ಲಿ ಗಿಡಗಳಿಗೆ ಹಾನಿ ಮಾಡಬಾರದೆಂದು ಗಿಡದ ಬುಡಕ್ಕೆ ಒಣಗಿದ ಎಲೆ, ಬಿಳಿಹುಲ್ಲು ಹಾಕುತ್ತಾರೆ. ಇದರಿಂದ ಗಿಡಗಳ ಬುಡದಲ್ಲಿ ತೇವಾಂಶ ಉಳಿಯುತ್ತದೆ. ಹಾಗಾಗಿ ಇಳುವರಿ ಸರಾಸರಿ ಸಮ ಪ್ರಮಾಣದಲ್ಲಿ ಬರುತ್ತದೆ. ಇದನ್ನು ಸಾಮಾನ್ಯ ಕೃಷಿ ವಿಧಾನದಿಂದ ಬೆಳೆಯುವುದರಿಂದ ಹೆಚ್ಚಿನ ಖರ್ಚು ಬಾರದು. ರೋಗ ಬಾಧೆ, ಎಲೆ ಸುಳಿ ರೋಗ, ಕಾಂಡಕೊರಕ ಕಾಡಲ್ಲ.
ಲಾಭ ಹೇಗೆ?
ಜನವರಿ 2ನೇ ವಾರದಿಂದ ಮೇ ಅಂತ್ಯದವರೆಗೆ ಕನಕಾಂಬರದ ಸುಗ್ಗಿ. ಮೂರು ದಿನಕ್ಕೊಮ್ಮೆ ಹೂವು ಕಿತ್ತು ದಂಡೆ ಮಾಡಿ ಮಾರುತ್ತಾರೆ. ಬುಧವಾರ, ಭಾನುವಾರ ಸಾಲೂರಿನಿಂದ ಹೂವಿನ ದಲ್ಲಾಳಿ ಗ್ರಾಮಕ್ಕೆ ಬಂದು  ಖರೀದಿಸುತ್ತಾರೆ. ಗ್ರಾಮದಲ್ಲಿ 7- 8 ಮನೆಯ ಗೃಹಿಣಿಯರು ಹೂವಿನ ಕೃಷಿ ಕೈಗೊಂಡಿದ್ದಾರೆ. ಅವರು 50 ಕನಕಾಂಬರ ಹೂವಿನ ಗಿಡ ಬೆಳೆಸಿದ್ದಾರೆ. ಮೂರು ದಿನಕ್ಕೊಮ್ಮೆ ಸರಾಸರಿ 40 ದಂಡೆ (ಸುಮಾರು 40 ಮಾರು) ಹೂವು ಸಿಗುತ್ತದೆ. ಒಂದು ದಂಡೆಗೆ ರು. 5ರಂತೆ ಮಾರಾಟ. ಇದರಿಂದ ಮೂರು ದಿನಕ್ಕೊಮ್ಮೆ ರು. 200 ಆದಾಯ. ತಿಂಗಳಿಗೆ ಸರಾಸರಿ ರು. 2000 ಆದಾಯ ನಿಕ್ಕಿ. ಜನವರಿಯಿಂದ ಮೇ ಅಂತ್ಯದವರೆಗೆ 5 ತಿಂಗಳ ಅವಧಿಯಲ್ಲಿ ಸುಮಾರು ರು. 12 ಸಾವಿರ ಗಳಿಸುತ್ತಾರೆ. ಹೂವಿನ ಕೃಷಿಗೆ ಭೂಮಿ ಹದಗೊಳಿಸುವುದು, ಅತ್ಯಧಿಕ ಗೊಬ್ಬರ ಖರೀದಿ, ಔಷಧ ಸಿಂಪಡಣೆ, ಕೂಲಿಯಾಳುಗಳ ನಿರ್ವಹಣೆ ಇತ್ಯಾದಿ ಖರ್ಚು ಇಲ್ಲ. ಇದರಿಂದ ನಿಖರ ಆದಾಯ ಗಳಿಸುತ್ತಾರೆ. ಮಾಹಿತಿಗಾಗಿ ಮೊ. 9535543611 ಸಂಪರ್ಕಿಸಬಹುದು.

= ಎನ್.ಡಿ. ಹೆಗಡೆ ಆನಂದಪುರಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com