ಮಿಡಿದ ಹೃದಯ

ಮಲೆನಾಡಿನ ಹೊಳೆಯಂಚಿಗಿರುವ ಅಪ್ಪೆ ಮರಗಳೆಷ್ಟೋ...
ಅಪ್ಪೆ ಮಾವು
ಅಪ್ಪೆ ಮಾವು

ಮಲೆನಾಡಿನ ಹೊಳೆಯಂಚಿಗಿರುವ ಅಪ್ಪೆ ಮರಗಳೆಷ್ಟೋ ನೆರೆ ಬಂದಾಗ ಉರುಳಿ ಹೋಗಿವೆ. ಅಡಕೆ ತೋಟದಲ್ಲಿನ ಮರಗಳು ಕೊಡಲಿಯೇಟು ತಿಂದು ಧರೆಗುರುಳಿವೆ. ಹೀಗೆ ಅವಸಾನದ ಅಂಚಿಗೆ ತಲುಪಿರುವ ಅಪ್ಪೆ ಮಿಡಿಯ ತಳಿಗಳನ್ನು ಸಂರಕ್ಷಣೆಗೆ ಮುಂದಾಗಿದ್ದಾರೆ ಈ ವಿದ್ಯಾರ್ಥಿಗಳು...

ಅಪ್ಪೆ ಮಿಡಿಯ ಉಪ್ಪಿನಕಾಯಿ ಎಂದರೆ ಯಾರ ಬಾಯಲ್ಲಿ ನೀರೂರುವುದಿಲ್ಲ? ಅದರ ರುಚಿಯೇ ಅಂಥದ್ದು, ಸವಿಗೆ ಶರಣಾದರೆ ಆಗಾಗ ಚಪ್ಪರಿಸಬೇಕು ಎಂದು ಅನಿಸದೇ ಇರದು.

ಜೀರಿಗೆ ಪರಿಮಳ ಹೊಂದಿದ ಅನಂತ ಭಟ್ಟನ ಅಪ್ಪೆ, ಬಿದ್ರಳ್ಳಿ ಅಪ್ಪೆ, ಕಡಬಾಳ ಅಪ್ಪೆ, ಕಂಚಿ ಅಪ್ಪೆ, ಕಾಶಿ ಮಾವು ಇಂತಹ ಎಷ್ಟೋ ಅಪ್ಪೆ ಮರಗಳಲ್ಲಿ ಕಾಯಿ ಎಷ್ಟೇ ಬರಲು, ಅವುಗಳ ಘಮ ಘಮ ಸ್ವಾದಿಷ್ಟ ಪರಿಮಳ ಮೂಗಿಗೆ ಬಡಿದರೆ ಸಾಕು, ಬಾಯಿ ಜೊಲ್ಲು ಸುರಿಸೋದು ನಿಕ್ಕಿ. ಆದರೆ, ಈಗ ಅಂತಹ ಅಪ್ಪೆ ತಳಿಗಳು ಅವಸಾನದ ಅಂಚಿಗೆ ಬಂದು ತಲುಪಿರುವುದು ನಿಜಕ್ಕೂ ಬೇಸರದ ಸಂಗತಿ.

ಸಾದಾ ಮಾವಿನ ಮಿಡಿಗೆ 100ಕ್ಕೆ 100ದಿಂದ 200ರವರೆಗೆ ಇದ್ದರೆ, ಜೀರಿಗೆ ಸುವಾಸನೆಯುಕ್ತ 100 ಮಿಡಿಗೆ 500 ಮೇಲ್ಪಟ್ಟು ದರವಿದೆ. ಆದರೆ, ಇಂದು ಎಷ್ಟು ಕೊಟ್ಟರೂ ಅಂಥ ಮಿಡಿ ದೊರೆಯುತ್ತಿಲ್ಲ.

ಕಾರಣ ಒಂದನೆಯದಾಗಿ ಮರಗಳ ನಾಶ. ಮತ್ತೊಂದು ಕಾರಣ ಇದ್ದ ಮರಗಳಲ್ಲೂ ಫಲ ಬಿಡುವುದು ಅತ್ಯಂತ ಕಡಿಮೆ ಪ್ರಮಾಣದಲ್ಲಿ.

ಸಂರಕ್ಷಣೆಗೆ ಯತ್ನ


ಶಿರಸಿಯ ಅರಣ್ಯ ಮಹಾವಿದ್ಯಾಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಅಪ್ಪೆ ಮರಗಳ ತಳಿ ಉಳಿಸಿ ಬೆಳೆಸುವಲ್ಲಿ ಮಾಡಿದ ಪ್ರಯತ್ನ ಮಾತ್ರ ಆಶಾಭಾವ ಹುಟ್ಟಿಸುವಂಥದ್ದು. ವಿದ್ಯಾರ್ಥಿಗಳಿಗೆ ಅರಣ್ಯ, ಅರಣ್ಯೋತ್ಪನ್ನಗಳ ಬಗ್ಗೆ ಇರುವ ಕಾಳಜಿ ಗಮನಿಸಿದರೆ ಮುಂದೊಂದು ದಿನ ಇವರು ಮರಳುಗಾಡಾಗುತ್ತಿರುವ ಮಲೆನಾಡನ್ನು ರಕ್ಷಿಸುತ್ತಾರೆಂಬ ಭರವಸೆ ಮೂಡುವುದು ಸಹಜ.

ಪೋಷಣೆ


ವಿದ್ಯಾರ್ಥಿಗಳು ಆರಂಭದಲ್ಲಿ ಹಳ್ಳಿಗಳ ಕಡೆ ಸಾಗಿ ಮಾವಿನ ಮರಗಳ ಅಡಿಯಲ್ಲಿ ಬಿದ್ದ ಯಾವುದೇ ಜಾತಿಯ ಮಾವಿನ ಗೊರಟೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಆರಿಸಿಕೊಂಡು ಬಂದರು. ನಂತರ ತಮ್ಮ ಕಾಲೇಜಿನ ಆವರಣದಲ್ಲಿ ಮಡಿ ಮಾಡಿ ಮೊಳಕೆ ಬರುವಂತೆ ಮಾಡಿದರು. ಸ್ವತಃ ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ಮಣ್ಣು ತುಂಬಿ ಅದರಲ್ಲಿ ಮೊಳಕೆ ಬಂದ ಗೊರಟೆಗಳನ್ನು ನೆಟ್ಟು ವರ್ಷಾನುಗಟ್ಟಲೆ ಪೋಷಿಸಿದ್ದಾರೆ. ಸಸಿಗಳು ಒಂದಡಿ ಬೆಳೆದ ಬಳಿಕ ಕಸಿ ಕಟ್ಟಿದರು.

ಅಲೆದಾಟ


ಸಾಧಾರಣವಾಗಿ ಶಿರಸಿಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳೆಲ್ಲ ಬಯಲು ಸೀಮೆಯವರೇ ಆಗಿದ್ದಾರೆ. ಬೆರಳೆಣಿಕೆಯಲ್ಲಿರುವವರು ಮಾತ್ರ ಸ್ಥಳೀಕರು. ಅದು ಹೇಗೋ ಅಪ್ಪೆ ಮಿಡಿಯ ಗಮ್ಮತ್ತನ್ನು ಬಲ್ಲ ವಿದ್ಯಾರ್ಥಿಗಲು ಅದರ ಜಾಡು ಹಿಡಿದು ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಹೀಗೆ ಮಲೆನಾಡನ್ನೆಲ್ಲ ಜಾಲಾಡಿ ಸುಮಾರು 80 ಅಪ್ಪೆ ಮರದ ತಳಿಗಳನ್ನು ಕಲೆ ಹಾಕಿದರು. ಮಾತ್ರವಲ್ಲ. ಅಂಥ ಅಪ್ಪೆ ಮರಗಳ ಕುಡಿಗಳನ್ನು ತಂದು ಕಸಿ ಕಟ್ಟಿದರು.

ತಮ್ಮ ಕಾಲೇಡಿನ ಮತ್ತೊಂದು ವಿಭಾಗವಾದ ಮಳಗಿಯಲ್ಲಿನ ಪಾಲಿ ಹೌಸ್‌ನಲ್ಲಿ ಸಾವಿರಾರು ಸಾದಾ ಮಾವಿನ ಗೊರಟೆ ಸಸಿಗಳನ್ನು ತಯಾರಿಸಿ ಅದಕ್ಕೆ ಕಸಿ ಕಟ್ಟಿ ಮಗುವಿನಂತೆ ಪೋಷಿಸಿದ್ದಾರೆ. 80 ವಿಭಿನ್ನ ತಳಿಗಳು 80 ವಿಧವಾದ ಸುಗಂಧವನ್ನೇ ಬೀರುತ್ತವೆ. ಅದೇ ರೀತಿಯಾಗಿ ಹಲಸಿನ ತಳಿವರ್ಧನೆ ಮಾಡುವ ಸಾಹಸಕ್ಕೂ ಕೈ ಹಾಕಿದ್ದಾರೆ.

ಇದೇ ರೀತಿ ಹಲಸು, ಚಿಕ್ಕು, ಶ್ರೀಗಂಧ ಇನ್ನೂ ಅನೇಕಾನೇಕ ವೆರೈಟಿಯ ಹಣ್ಣು ತಳಿ ವೃದ್ಧಿಗೆ ಕಸಿ ಮಾಡುವ ಮೂಲಕ ಒಂದು ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿ ಮುಖಂಡ ಚರಣ್ ಅವರನ್ನು ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com