ಸಸ್ಯಕ್ಕೂ ಹಾಸ್ಪಿಟಲ್!

ಸಸ್ಯಕ್ಕೂ ಹಾಸ್ಪಿಟಲ್!
Updated on: 

ಸಸ್ಯಗಳ ನಾಡಿಮಿಡಿತ ಇವರಿಗೆ ಚನ್ನಾಗಿ ಗೊತ್ತು. ಆ ಕಾರಣಕ್ಕಾಗಿಯೇ ಡಾ.ಎಸ್.ಶಂಕರ್ ಭಟ್ 'ಪ್ಲಾಂಟ್ ಡಾಕ್ಟರ್‌'. ಸತತ 15 ವರ್ಷ ಸಸ್ಯರೋಗ ತಜ್ಞರಾಗಿ, ಹಸಿರು ಸೇವೆಗೆ ಅರ್ಪಿಸಿಕೊಂಡವರು. ಈಗ ನಿವೃತ್ತಿಯಾಗಿದೆ. ಆ ನಿವೃತ್ತಿ ದಾಖಲೆಗಷ್ಟೇ. ಅವರ ಸೇವೆ ಮುಂದುವರಿದಿದೆ. ಅವರ ನಂತರ ಪ್ರೊ.ಜಿಆರ್. ಜನಾರ್ದನ ಕೇಂದ್ರದ ಮುಖ್ಯಸ್ಥರಾಗಿದ್ದ, ಹಾಲಿ ಕಾನೂನು ಮತ್ತು ಪಶುಸಂಗೋಪನಾ ಸಚಿವರಾಗಿರುವ ಟಿ.ಬಿ.ಜಯಚಂದ್ರ ಸಹಕಾರದಿಂದ ಈ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೈತರಿಗೆ ತಮ್ಮ ಬೆಳೆಯಲ್ಲಿ ಬರುವ ರೋಗಗಳ ಬಗ್ಗೆ ವೈಜ್ಞಾನಿಕ ತಪಾಸಣೆ ಮತ್ತು ಸಮಗ್ರ ರೋಗ ಹತೋಟಿ ಕ್ರಮಗಳನ್ನು ಈ ಕೇಂದ್ರ ಉಚಿತವಾಗಿ ತಿಳಿಸಿಕೊಡುತ್ತಿದೆ. ಕೇಂದ್ರದ ಸಸ್ಯ ತಜ್ಞರು ಪ್ರತಿ ಶನಿವಾರ ರೈತರ ಜಮೀನುಗಳಿಗೆ ಭೇಟಿ ನೀಡಿ, ರೈತರೊಂದಿಗೆ ಸಂವಾದಿಸುತ್ತಾರೆ. ಸಲಹೆ-ಸೂಚನೆ ನೀಡುತ್ತಾ ಬಂದಿದ್ದಾರೆ.

ನಿಯಂತ್ರಣ ಕ್ರಮ
ವಿವಿಧ ಬಗೆಯ ಧಾನ್ಯಗಳು, ಎಣ್ಣೆ ಕಾಳುಗಳು, ಹಣ್ಣು, ತರಕಾರಿ ಮತ್ತು ಕನಕಾಂಬರ, ಸೇವಂತಿ, ಹತ್ತಿ, ಬದನೆ, ಮೆಣಸಿನ ಕಾಯಿ, ಬತ್ತ, ರಾಗಿ, ಜೋಳ, ಆಲೂಗಡ್ಡೆ, ತೊಟದ ಬೆಳೆಗಳಲ್ಲಿ ಕಂಡುಬರುವ ರೋಗಗಳನ್ನು ತಪಾಸಣೆಗೆ ಒಳಪಡಿಸಿ, ರೋಗಾಣುಗಳನ್ನು ಪತ್ತೆ ಮಾಡಿ, ನಿಯಂತ್ರಣ ಕ್ರಮ ತಿಳಿಸುತ್ತಾರೆ. ಇದರ ಜತೆಗೆ ಸಾವಯುವ ಕೃಷಿ, ಉತ್ತಮ ಬಿತ್ತನೆ ಬೀಜಗಳು, ವಿವಿಧ ತಳಿಗಳು, ಬೀಜ ಪರೀಕ್ಷೆ, ಜೈವಿಕ ಗೊಬ್ಬರ, ಎರೆಹುಳುವಿನ ಗೊಬ್ಬರ, ಅಣಬೆ ಬೇಸಾಯ, ಜೈವಿಕ ಕ್ರಿಮಿನಾಶಕ, ರಾಸಾಯನಿಕ ಕೀಟನಾಶಗಳ ಪ್ರಮಾಣ ಮತ್ತು ಬಳಕೆ ವಿಧಾನಗಳು, ಕೃಷಿ ಉಪಕರಣಗಳು ಮತ್ತಿತರ ಮಾಹಿತಿ ನೀಡಲಾಗುತ್ತಿದೆ.

ನಾನಾ ಕಾರ್ಯಕ್ರಮ
ಈ ಕೇಂದ್ರದ ಕೃಷಿಕರಿಗೆ ಹಲವು ಕಾರ್ಯಕ್ರಮ ಜಾರಿ ಮಾಡಿದೆ. ಬೆಳೆಗಳಲ್ಲಿ ಕಂಡುಬರುವ ರೋಗಗಳನ್ನು ನಿಖರವಾಗಿ ಪತ್ತೆ ಹಚ್ಚುವುದು ಮತ್ತು ಅವುಗಳ ಹತೋಟಿ, ಕೃಷಿಯಲ್ಲಿ ಜೈವಿಕ ರಸಗೊಬ್ಬಗಳ ಮತ್ತು ಕ್ರಿಮಿನಾಶಕಗಳ ಬಳಕೆ, ಹಸಿರೆಲೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ, ಕೀಟ ಬಾಧೆ ಮತ್ತು ನಿಯಂತ್ರಣ, ಅಣಬೆ ಬೇಸಾಯದ ಕ್ರಮಗಳು ಮತ್ತು ಉಪಯೋಗಳ, ಉತ್ತಮ ಬೀಜಗಳ ಮಹತ್ವ ಮತ್ತು ಹೈಬ್ರಿಡ್ ಬೀಜಗಳು ಮತ್ತು ಹೆಚ್ಚುವರಿ ಇಳುವರಿ ಪಡೆಯುವ ವಿಧಾನ, ಅಧನಿಕ ಕೃಷಿ ಉಪಕರಗಳು, ಮಣ್ಣು ಪರೀಕ್ಷೆಯ ವಿಧಾನಗಳು ಮತ್ತು ಲವಣಾಂಶಗಳ ಕೊರತೆಯಿಂದ ಬರುವ ಸಸ್ಯ ರೋಗಗಳು, ರಾಸಾಯನಿಕ ಕ್ರಿಮಿನಾಶಕಗಳ ವಿಧಗಳು ಮತ್ತು ಬಳಕೆಯ, ಪರಿಸರಸ್ನೇಹಿ ಕೃಷಿ ವಿಧಾನಗಳನ್ನು ಕೇಂದ್ರವು ತಿಳಿಸಿಕೊಡುತ್ತದೆ.

ಈ ಕೇಂದ್ರದ ಜತೆಗೆ ಸಂಚಾರಿ ಕ್ಲಿನಿಕ್ ಆರಂಭಿಸಲು ಅನುಮತಿ ನೀಡವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯವೇ ಇರುವಾಗ ಸಾಂಪ್ರದಾಯಿಕ ವಿವಿಯೊಂದು ಈ ಕೆಲಸ ಮಾಡುತ್ತಿರುವುದು ವಿಶೇಷ. ಇದಕ್ಕಾಗಿಯೇ ಇಸಿಐಎಲ್ ಎಂಬ ಸಂಸ್ಥೆ ತನ್ನ ಸಾಮಾಜಿಕ ಚಟುವಟಿಕೆಯ ಭಾಗವಾಗಿ ಮಣ್ಣು ಪರೀಕ್ಷೆಗೆ ಅನುಕೂಲವಾದ ಪ್ರಯೋಗಾಲಯ ಇರುವ ಸಂಚಾರಿ ವಾಹನವನ್ನು ಕೊಡುಗೆಯಾಗಿ ನೀಡಲು ಮುಂದೆ ಬಂದಿದೆ. ಈ ವಾಹನ ಬಂದಲ್ಲಿ ಪ್ರತಿ ಶನಿವಾರ ರೈತರ ಜಮೀನುಗಳಿಗೆ ಹೋಗಲು ಅನುಕೂಲವಾಗುತ್ತದೆ ಎನ್ನುತ್ತಾರೆ ಕೇಂದ್ರದ ಮುಖ್ಯಸ್ಥರಾದ ಪ್ರೊ.ಜಿ.ಆರ್.ಜನಾರ್ದನ. ಮಾಹಿತಿಗೆ ದೂ. 0821-2419763

-ಅಂಶಿ ಪ್ರಸನ್ನ ಕುಮಾರ್
ಚಿತ್ರ: ಎಸ್.ಮಂಜುನಾಥ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com