ಒಂಟಿ ಕೃಷಿಕನ ಯಶೋಗಾಥೆ

ಕೃಷಿ ಎಂಬುದು ಆತ್ಮಹತ್ಯೆಗೆ ದಾರಿ ಎಂಬಂತಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ ರೈತ...
ಕರಿಯಪ್ಪ ಕೊಪ್ಪದ
ಕರಿಯಪ್ಪ ಕೊಪ್ಪದ
Updated on

ಕೃಷಿ ಎಂಬುದು ಆತ್ಮಹತ್ಯೆಗೆ ದಾರಿ ಎಂಬಂತಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ ರೈತ ಆಶಾಕಿರಣದಂತೆ ಕಾಣುತ್ತಿ ದ್ದಾನೆ. ಎಲ್ಲಾ ರೈತರಿಗೆ ಇರುವ ಸಮಸ್ಯೆಗಳು ಈತನಿಗೂ ಇವೆ. ಹಾಗೆ ನೋಡಿದರೆ ಕೊಂಚ ಹೆಚ್ಚೇ ಇವೆ. ಏಕೆಂದರೆ, ಈತನ ಕೃಷಿಭೂಮಿಯ ಪ್ರಮಾಣ ತೀರಾ ಕಡಿಮೆ. ಕೆಲಸ ಮಾಡಲು ಜನ ಇಲ್ಲ. ಯಂತ್ರಗಳಿಂದ ಕೆಲಸ ಮಾಡಿಸಲು ಹಣ ಇಲ್ಲ. ಹೀಗಿದ್ದರೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಬಡ ರೈತ ಕರಿಯಪ್ಪ ಕೊಪ್ಪದ ಸ್ವಾವಲಂಬಿ. ತನ್ನ 1 ಎಕರೆ 10 ಗುಂಟೆ ಜಮೀನನ್ನು ಕೇವಲ ತನ್ನ ಕೈಗಳಿಂದ ಬಿತ್ತಿ ಬೆಳೆಯುತ್ತಿ ದ್ದಾನೆ. ಮನಸ್ಸೊಂದಿದ್ದರೆ ಮಾರ್ಗವು ಉಂಟು ಎಂಬ ಮಾತಿಗೆ ಈತ ಜೀವಂತ ನಿದರ್ಶನ.

ಜಾನುವಾರುಗಳು ಕೃಷಿಗೆ ಆಧಾರ ಸ್ತಂಭ. ಅವಿಲ್ಲದಿದ್ದರೆ ಯಂತ್ರಗಳಾದರು ಬೇಕು ಎಂಬಂತಾಗಿರುವ ಈ ದಿನಗಳಲ್ಲಿ, ಎತ್ತುಗಳ ಸಹಾಯವನ್ನೇ ಪಡೆಯದೇ ಇಲ್ಲೊಬ್ಬ ರೈತ ಯಶಸ್ವಿ ಕೃಷಿ ನಡೆಸಿದ್ದಾನೆ. ಕೇವಲ ತನ್ನ ಕೈಗಳಿಂದಲೇ ಕೃಷಿಯ ಎಲ್ಲಾ ಕೆಲಸಗಳನ್ನು ಮಾಡುವುದು ಈತನ ವಿಶೇಷ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ತಿಮ್ಮಾಪುರ ಗ್ರಾಮದ ಕರಿಯಪ್ಪ ಕೊಪ್ಪದ ಅಂಥ ಸಾಧಕ ರೈತ.

ಯಾವುದೇ ಜಾನುವಾರು ಅಥವಾ ಅತ್ಯಾಧುನಿಕ ಕೃಷಿ ಉಪಕರಣಗಳನ್ನು ಬಳಸದೇ, ತನ್ನ ತೋಳಿನ ಶಕ್ತಿಯಿಂದಲೇ ಕೃಷಿ ಚಟುವಟಿಕೆಗಳನ್ನು ನಡೆಸುವ ಕರಿಯಪ್ಪ ಸಮೃದ್ಧ ಬೆಳೆಯನ್ನು ತೆಗೆಯುತ್ತಿದ್ದಾನೆ. ಸಾಧಿಸುವ ಛಲವೊಂದಿದ್ದರೆ ಕೈಗಳಿಂದಲೇ ಕೃಷಿ ನಡೆಸಬಹುದು ಎಂಬುದನ್ನು ಸಾಣಿಸಿ ತೋರಿಸಿದ್ದಾನೆ.

ಬಡ ಕುಟುಂಬ ಕರಿಯಪ್ಪನದು ಬಡ ಕುಟುಂಬ. ತಂದೆ ಬದುಕಿದ್ದಾಗ ಕೂಲಿನಾಲಿ ಮಾಡುವ ಮೂಲಕ ಜೀವನ ಸಾಗುತ್ತಿತ್ತು. ತಂದೆಯ ಮರಣಾ ನಂತರ ಪಿತ್ರಾರ್ಜಿತವಾಗಿ ತನ್ನ ಪಾಲಿಗೆ ಬಂದ 1 ಎಕರೆ 10 ಗುಂಟೆ ಜಮೀನಿನಲ್ಲಿ ಕೃಷಿ ಕೈಗೊಳ್ಳಬೇಕಾದ ಸಂದರ್ಭ ಬಂದಾಗ, ಕರಿಯಪ್ಪ ಕೊಂಚ ಎದೆಗುಂದಿದ್ದ. ಏಕೆಂದರೆ, ಆತನ ಹತ್ತಿರ ಎತ್ತು-ಚಕ್ಕಡಿಗಳಾಗಲಿ, ಕೃಷಿ ಉಪಕರಣಗಳಾಗಲಿ ಇದ್ದಿಲ್ಲ.

ಆದರೆ, ಸಮಸ್ಯೆಗೆ ಆತ ಬಲುಬೇಗ ಪರಿಹಾರ ಕಂಡುಕೊಂಡ. ಬೇರೆಯವರ ಹೊಲದಲ್ಲಿ ಕೂಲಿ ಮಾಡುವುದಕ್ಕಿಂತ ಸ್ವಂತ ಹೊಲದಲ್ಲಿ ಇನ್ನಷ್ಟು ಶ್ರಮ ಹಾಕುವುದು ಮೇಲು ಎಂದು ನಿರ್ಧರಿಸಿದ. ಕಷ್ಟ ಅಂದುಕೊಂಡಿದ್ದೆಲ್ಲ ಕ್ರಮೇಣ ಕರಗುತ್ತ ಹೋಯಿತು.

ಕೈಯೇ ಉಪಕರಣ ತನ್ನ ಪುಟ್ಟ ಹೊಲದಲ್ಲಿ ಕರಿಯಪ್ಪ ಹೆಚ್ಚಾಗಿ ಬೆಳೆಯುವುದು ಭತ್ತವನ್ನು. ಇಡೀ ಜಮೀನನ್ನು ಆತ ಹಸನುಗೊಳಿಸುವುದು ಸಲಿಕೆಗಳ ಸಹಾಯದಿಂದ. ನಂತರ ಬಾಯಿಗುದ್ದಲಿಯಿಂದ ಸಾಲು ಮಾಡಿ ಭತ್ತದ ಬೀಜವನ್ನು ಕೈಯಿಂದ ಬಿತ್ತುತ್ತಾನೆ. ಬಿತ್ತಿದ ಸಾಲುಗಳನ್ನು ಮುಚ್ಚಲು ಕಟ್ಟಿಗೆಯ ಕೊರಡಿನ ಮೇಲೆ ಕಲ್ಲು ಇಟ್ಟುಕೊಂಡು, ಅದನ್ನು ಕೈಯಿಂದ ಎಳೆಯುವ ಮೂಲಕ ಮಣ್ಣು ಮುಚ್ಚುತ್ತಾನೆ. ಮುಂದೆ ಭತ್ತ ಮೊಳಕೆ ಬಂದು ಬೆಳೆಯತೊಡಗಿದ ನಂತರ ಕೈಗಳಿಂದಲೇ ಎಡೆಕುಂಟೆಯನ್ನು ಎಳೆಯುವ ಮೂಲಕ ಭತ್ತದ ಮಧ್ಯದಲ್ಲಿರುವ ಕಳೆಯನ್ನು ತೆಗೆಯುತ್ತಾನೆ. ಕೈಯಿಂದಲೇ ಕಟಾವು ಕಟಾವಿನ ಸಮಯದಲ್ಲಿ ತಾನೇ ಕೈಯಿಂದ ಭತ್ತವನ್ನು ಕೊಯ್ಲು ಮಾಡಿ ಹೊಲದಲ್ಲೇ ರಾಶಿ ಮಾಡಿ ಕಾಳುಗಳನ್ನು ಬೇರ್ಪಡಿಸುತ್ತಾನೆ.

ಸಾಮಾನ್ಯವಾಗಿ ಇಷ್ಟೆಲ್ಲಾ ಕೃಷಿ ಚಟುವಟಿಕೆ ನಡೆಸಲು ಕನಿಷ್ಟ ಎರಡು ಎತ್ತುಗಳು ಹಾಗೂ ಹತ್ತಾರು ಕೂಲಿಕಾರ್ಮಿಕರು ಬೇಕು. ಕೂಲಿಗಾಗಿಯೇ ಕನಿಷ್ಟ ನಾಲ್ಕರಿಂದ ಐದು ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ, ಕರಿಯಪ್ಪ ಯಾರೊಬ್ಬರ ಸಹಾಯಲ್ಲದೇ ಯಾವುದೇ ಹಣ ಖರ್ಚು ಮಾಡದೇ ಕೇವಲ ದೈಹಿಕ ಶ್ರಮದಿಂದ ವರ್ಷಕ್ಕೆ ಸುಮಾರು 35ರಿಂದ 40 ಚೀಲ ಭತ್ತ ಬೆಳೆಯುತ್ತಿದ್ದಾನೆ.

`ಒಂದು ಜೊತಿ ಎತ್ತಿಗೆ 20ರಿಂದ 30 ಸಾವಿರ ರೂಪಾಯಿ ಬೇಕ್ರಿ. ನಮ್ಮಂತಹ ಬಡುವ್ರು ಎಲ್ಲಿಂದ ತರದ್ರೀ ಸಾಹೇಬ್ರ? ನನಗ ವಯಸ್ಸು ನಲವತ್ತೈ ದು. ರಟ್ಟಿಗಟ್ಟಿ ಇರೋಗಂಟ ಕೆಲಸ ಮಾಡ್ತೀನ್ರೀ. ಇನ್ನೊಬ್ಬರ ಹಂಗಿನ್ಯಾಗ ನಾವ್ಯಾರ್ ಬದಕ ಬೇಕ್ರಿ?' ಎಂಬು ದು ಆತನ ಪ್ರಶ್ನೆ.
ಇದ್ದ ಪುಟ್ಟ ಭೂಮಿಯಲ್ಲಿ ಹಸಿರು ಉಕ್ಕಿಸುತ್ತಾ ಬದುಕು ಕಟ್ಟಿಕೊಂಡಿರುವ ಕರಿಯಪ್ಪ ನಮ್ಮ ರೈತರನ್ನು ಕಾಡುವ ಹಲವಾರು ಸಮಸ್ಯೆಗಳಿಗೆ ಜೀವಂತ ಪರಿಹಾರ. ಆತನ ಹೊಲದಲ್ಲಿ ಹಸಿರಿನಿಂದ ನಳನಳಿಸುವ ಬೆಳೆಯೇ ಈ ಮಾತಿಗೆ ಸಾಕ್ಷಿ.


ವ್ಯತ್ಯಾಸ ಹೇಗಿದೆ ನೋಡಿ. ಬಹುತೇಕ ರೈತರು ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆಯುವುದರ ಬಗ್ಗೆಯೇ ಹೆಚ್ಚು ಗಮನಹರಿಸುವುದು ಸಾಮಾನ್ಯ. ಒಂದು ವೇಳೆ ಸೌಲಭ್ಯದಕ್ಕಿದರೂ, ಅವನ್ನು ಸರಿಯಾಗಿ ಬಳಸಿಕೊಂಡವರ ಸಂಖ್ಯೆ ಇನ್ನೂ ಕಡಿಮೆ. ಇಂಥ ರೈತರ ನಡುವೆ ಸಾಲವಿಲ್ಲದ ಸರದಾರನಾಗಿ ಕರಿಯಪ್ಪ ಕೊಪ್ಪದ ಕೃಷಿ ಬದುಕು ನಡೆಸುತ್ತಿರುವುದು ಆದರ್ಶಪ್ರಾಯ.
-ಲಿಂಗರಾಜ ಕುಮ್ಮೂರ, ಸೂಡಂಬಿ ಗ್ರಾ.ಪಂ. ಅಧ್ಯಕ್ಷ

-ಮಂಜುನಾಥ್ ಜಿ. ಅಡ್ಮನಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com