

ರಾಜ್ಯದ ಹೆಚ್ಚಿನೆಲ್ಲಾ ಪ್ರದೇಶಗಳಲ್ಲಿ ಆರಾಮವಾಗಿ ಬೆಳೆಸಬಹುದಾದಂತಹ ಲಾಭದಾಯಕ ತೋಟಗಾರಿಕಾ ಹಣ್ಣಿನ ಬೆಳೆಗಳಲ್ಲಿ ಪೇರಳೆಯೂ ಒಂದು. ಸಾಮಾನ್ಯವಾಗಿ ಎಲ್ಲೆಡೆಯೂ ಬೆಳೆಯಲಾಗುತ್ತದೆ. ಪೇರಳೆ ಮೂಲತಃ ಅಮೆರಿಕದ ಉಷ್ಣವಲಯದ ಬೆಳೆ. ತಿನ್ನಲು ಹಾಗೂ ಸಂಸ್ಕರಿತ ಉತ್ಪನ್ನ ತಯಾರಿಸಲು ಇದು ಬಳಕೆಯಾಗುತ್ತದೆ. ಇದರ ಆರೋಗ್ಯಕರ ಗುಣ ಅಗಣಿತ.
ರೈತನು ಯಾವಾಗಲೂ ಒಂದೇ ಬೆಳೆಗೆ ಅಂಟಿಕೊಂಡಿರಬಾರದು. ಆಹಾರ ಬೆಳೆಗಳಾದ ಭತ್ತ, ರಾಗಿ, ಜೋಳ, ಗೋಧಿ ಮುಂತಾದವುಗಳನ್ನು ಮಾತ್ರ ಬೆಳೆದರೆ ಅವನು ಅಭಿವೃದ್ಧಿ ಹೊಂದಿದ ರೈತನಾಗುವುದು ಅಸಾಧ್ಯ. ತನ್ನ ಹೊಲದಲ್ಲಿ ವೈವಿಧ್ಯಮಯ ಬೆಳೆಗಳನ್ನು ಕೂಡಿಸಿಕೊಂಡು ಅಭಿವೃದ್ಧಿಪಡಿಸಿದರೆ ಮಾತ್ರ ಅವನ ಆರ್ಥಿಕ ಸ್ಥಿತಿಗತಿ ಅಭಿವೃದ್ಧಿಯಾಗಲು ಸಾಧ್ಯ. ಇದನ್ನು ಪುಷ್ಟೀಕರಿಸುವ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇದೆ. ಕೃಷಿಕ ಇಂದು ಸ್ವಲ್ಪವಾದರೂ ಸಂಪಾದನೆಯ ರುಚಿ ಕಾಣದಿದ್ದರೆ ಕೃಷಿ ಕ್ಷೇತ್ರದಲ್ಲಿ ಬೆಳೆಯಲು ಅಸಾಧ್ಯ.
ಉತ್ತಮ ಆದಾಯ ತಂದು ಕೊಡುವ ತೋಟಗಾರಿಕಾ ಬೆಳೆಗಳನ್ನು ಬೆಳೆಸಿದಾಗ ಮಾತ್ರ ಗಳಿಕೆಯ ಮಾರ್ಗ ಗೊತ್ತಾಗುತ್ತದೆ. ಕೃಷಿಕ ಜ್ಞಾನ ಸಂಪನ್ನನಾದದ್ದು ತೋಟಗಾರಿಕಾ ಬೆಳೆಗಳಿಗೆ ಪರಿವರ್ತನೆಯಾದ ಮೇಲೆ ಎನ್ನಬಹುದು. ನಮ್ಮ ಮುಂದೆ ಆಯ್ಕೆಗೆ ಹಲವಾರು ತೋಟಗಾರಿಕಾ ಬೆಳೆಗಳು ಇವೆ. ಎಲ್ಲವೂ ಎಲ್ಲಾ ಪ್ರದೇಶಕ್ಕೂ ಹೊಂದಾಣಿಕೆಯಾಗುವುದಿಲ್ಲ. ದ್ರಾಕ್ಷೆ , ದಾಳಿಂಬೆ ಮುಂತಾದ ಬೆಳೆಗಳಿಗೆ ಕೆಲವು ನಿರ್ದಿಷ್ಟ ಪ್ರದೇಶಗಳು ಮಾತ್ರ ಹೊಂದಿಕೆಯಾದರೆ ಮತ್ತೆ ಕೆಲವಕ್ಕೆ ಬೇರೆಯೇ ಹವಾಮಾನ ಉಳ್ಳ ಪ್ರದೇಶಗಳು ಆಗಬೇಕು. ಕಾಶ್ಮೀರದ ಸೇಬು ಕಾಶ್ಮೀರದಲ್ಲಿ ಮಾತ್ರ ಚೆನ್ನಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತದೆ. ಕೆಲವೊಂದು ಬೆಳೆಗಳು ಸಾಂಪ್ರದಾಯಿಕ ಪ್ರದೇಶಗಳಲ್ಲಿ ಹೊಂದಿಕೊಂಡು ಉತ್ತಮ ಇಳುವರಿಯನ್ನು ನೀಡಿದ ನಿದರ್ಶನಗಳೂ ಇವೆ.
ಬಯಲು ಸೀಮೆಯ ಧಾರವಾಡ, ಬೆಳಗಾವಿ ಮುಂತಾದ ಪ್ರದೇಶಗಳಲ್ಲಿ ಪೇರಳೆ ಕೃಷಿ ಇದ್ದು, ರೈತರು ಇದರಿಂದ ಉತ್ತಮ ಆದಾಯವನ್ನು ಪಡೆಯುತ್ತಾರೆ. ಇದು ಕೇವಲ ಆ ಪ್ರದೇಶ ಮಾತ್ರವಲ್ಲ, ರಾಜ್ಯದ ಎಲ್ಲಾ ಪ್ರದೇಶಗಳಲ್ಲೂ ಬೆಳೆಸಲ್ಪಡುತ್ತದೆ. ಇತ್ತೀಚೆಗೆ ಮೊಳಕಾಲ್ಮೂರು ಹಾನಗಲ್‌ನ ಯುವ ಪ್ರಗತಿಪರ ಕೃಷಿಕ ಎಂ.ಟಿ.ರಮೇಶ್‌ರವರು 5 ಎಕ್ರೆ ಅಲಹಾಬಾದ್ ಸಫೇದ್ ತಳಿಯ ಪೇರಳೆಯನ್ನು ಬೆಳೆದಿದ್ದರು. ಅವರು ಹೇಳುವಂತೆ ಪ್ರತಿ ವರ್ಷವೂ ಎರೆಡೆರಡು ಬೆಳೆ ಪಡೆಯುತ್ತಾರೆ. ಪ್ರತಿ ಬೆಳೆಯನ್ನು ತಲಾ ರೂ.50,000ಕ್ಕೆ ಗುತ್ತಿಗೆ ನೀಡುತ್ತಾರೆ. ಇದು ಕೇವಲ ರಮೇಶ್‌ರವರ ಅನುಭವ ಮಾತ್ರವಲ್ಲ. ಪೇರಳೆ ಬೆಳೆಸಿದವರಿಗೆ ಅದರ ಲಾಭದಾಯಕತೆ ಗೊತ್ತು.
ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪೇರಳೆ ಗಿಡವನ್ನು ಬೆಳೆಸುತ್ತಿದ್ದಾರೆಯೇ ಹೊರತು ಅದರ ವಿಸ್ತೃತ ಬೇಸಾಯ ಕಡಿಮೆ. ಪೇರಳೆ ಬೆಳೆಯ ಮುಂದಿನ ಭವಿಷ್ಯ ಮತ್ತು ಇದರ ಮೌಲ್ಯವರ್ಧನೆಯ ಅವಕಾಶಗಳನ್ನು ಮನಗಂಡು ಜಲಗಾಂವ್‌ನ ಜೈನ್ ಇರಿಗೇಶನ್ ಸಂಸ್ಥೆಯ ಫಾರ್ಮ್ ಫ್ರೆಶ್ ವಿಭಾಗವು ಇದರ ರಸ ಸಂಸ್ಕರಣೆಯನ್ನು ಮಾಡುತ್ತಿದೆ. ಇಲ್ಲಿ ವಿಸ್ತೃತ ಪೇರಳೆ ಬೇಸಾಯದ ಬಗ್ಗೆ ಸಂಶೋಧನೆಗಳು ನಡೆಸುತ್ತಿದ್ದು, ಅತೀ ಕಡಿಮೆ ಅಂತರದೊಳಗೆ ಪೇರಳೆ ಬೆಳೆಸುವ ತಾಂತ್ರಿಕತೆಯನ್ನು ಸಹ ಕೈಗೊಂಡು ಯಶಸ್ವಿಯಾಗಿದೆ.
ಮೊದಲೇ ಹೇಳಿದಂತೆ ರೈತರ ಹೊಲವು ಯಾವಾಗಲೂ ಬಹು ಬಗೆಯ ಬೆಳೆಗಳಿಂದ ನಿರಂತರ ಆದಾಯವನ್ನು ವರ್ಷದುದ್ದಕ್ಕೂ ತಂದುಕೊಡುವಂತಹ ಬಹು ಬಗೆಯ ಬೆಳೆಗಳಿಂದ ತುಂಬಿರಬೇಕು. ಆಗ ಮಾತ್ರ ಅವನು ಕೃಷಿಯಲ್ಲಿ ಏನಾದರೂ ಸಂಪಾದನೆ ಮಾಡಿಕೊಳ್ಳಲು ಸಾಧ್ಯ. ಅಡಿಕೆ ತೋಟ ಇರಲಿ, ತೆಂಗಿನ ತೋಟವಿರಲಿ, ಅದೇ ರೀತಿಯಲ್ಲಿ ಆಹಾರ ಬೆಳೆಗಳಾದ ಗೋಧಿ, ಜೋಳ, ನೆಲಕಡಲೆ ಯಾವುದೇ ಇರಲಿ ಜೊತೆಗೆ ಅಳಿದುಳಿದ ಭೂಮಿಯಲ್ಲಿ ಇತರ ಮೂಲದ ಆದಾಯ ತಂದುಕೊಡಬಲ್ಲ ಹಣ್ಣಿನ ಬೆಳೆಗಳನ್ನು ಬೆಳೆಸುವುದು ಸೂಕ್ತ. ಈ ನಿಟ್ಟಿನಲ್ಲಿ ಒಂದು ಉತ್ತಮ ಅವಕಾಶ ಪೇರಳೆ ಬೆಳೆಯದ್ದಾಗಿರುತ್ತದೆ.
ಒಂದು ಗಿಡದಿಂದ 25 ಕಿಲೋಗೂ ಹೆಚ್ಚಿನ ಇಳುವರಿಯನ್ನು ಅತಿ ಕಡಿಮೆ ಖರ್ಚಿನಲ್ಲಿ ಪಡೆಯಬಹುದಾದ ಬೆಳೆ ಇದು. ಗಿಡವೊಂದರಿಂದ ರೂ. 200ಕ್ಕೂ ಹೆಚ್ಚಿನ ಆದಾಯವನ್ನು ಇದರಲ್ಲಿ ಪಡೆಯಲು ಸಾಧ್ಯ. ಪೇರಳೆಯ ಕುರಿತಂತೆ ನಮ್ಮ ದೇಶದಲ್ಲಿ ಈಗ ಬೇರೆ ಬೇರೆ ಸಂಶೋಧನೆಗಳು ನಡೆಯುತ್ತಿದ್ದು ರೈತರಿಗೆ ಬೆಳೆಸಲು ಅನುಕೂಲವಾಗುವ ಲಾಭದಾಯಕ ತಳಿಗಳನ್ನು ಲಭ್ಯವಾಗಿಸಿದೆ. ದೇಶದ್ಯಾಂತ ಬೇರೆ ಬೇರೆ ಸಂಶೋಧನಾ ಕೇಂದ್ರಗಳಲ್ಲಿ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಪ್ರಪ್ರಥಮವಾಗಿ ಪೂನಾದ ಗಣೇಶ್‌ಖಿಂಡ್ ಫ್ರುಟ್ ರಿಸರ್ಚ್ ಸ್ಟೇಶನ್‌ನಲ್ಲಿ ಲಕ್ನೋ-49 ಅಥವಾ ಸರದಾರ್ ಎಂಬ ಉತ್ತಮ ತಳಿಯನ್ನು ರೈತರು ಬೆಳೆಸಲು ಅನುಕೂಲವಾಗುವಂತೆ ಬಿಡುಗಡೆಗೊಳಿಸಲಾಯಿತು.
ನಂತರ ವಿವಿಧ ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾನಿಲಯಗಳು ಈ ಬಗ್ಗೆ ಸಂಶೋಧನೆ ನಿರತವಾಗಿ ಬೇರೆ ಬೇರೆ ತಳಿಗಳನ್ನು ಗುರುತಿಸಿ ಕೊಟ್ಟಿವೆ. ಇಂದು ನಮ್ಮ ದೇಶದಲ್ಲಿ ಪೇರಳೆ ಎಂಬುದು ನಾಲ್ಕನೆ ಅತಿ ದೊಡ್ಡ ಹಣ್ಣಿನ ಬೆಳೆಯಾಗಿ ಗುರುತಿಸಲ್ಪಟ್ಟಿದೆ. ಬಿಹಾರ, ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ವಿಸ್ತೃತವಾಗಿ ಪೇರಳೆ ಬೆಳೆ ಬೆಳೆಯಲಾಗುತ್ತದೆ. ಬಿಹಾರವು ಪೇರಳೆ ಬೆಳೆಯುವ ಅತಿ ದೊಡ್ಡ ರಾಜ್ಯವಾದರೆ, ನಂತರ ಮಹಾರಾಷ್ಟ್ರ, ಬಳಿಕ ಆಂಧ್ರಪ್ರದೇಶ, ಆನಂತರ ಒರಿಸ್ಸಾ, ನಂತರದ ಸ್ಥಾನ ಕರ್ನಾಟಕದ್ದು. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಪೇರಳೆಯ ಉತ್ಪಾದನೆ ಎಂಬುದು ನಗಣ್ಯ ಪ್ರಮಾಣದಲ್ಲಿ ಇದ್ದುದು ಈಗ 30,000 ಟನ್‌ಗೂ ಅಧಿಕ ಉತ್ಪಾದನೆಯಾಗುತ್ತಿದೆ.
ಉತ್ತರಾಂಚಲದಲ್ಲಿ ಅತ್ಯಧಿಕ ಇಳುವರಿಯೂ, ಬಿಹಾರದಲ್ಲಿ ಅತ್ಯಧಿಕ ಬೆಳೆ ಪ್ರದೇಶವೂ ಇದೆ ಮತ್ತು ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಹಣ್ಣನ್ನು ಪಡೆಯಲು ಸಾಧ್ಯವಿದೆ ಎಂಬುದು ಸಂಶೋಧನೆಯಲ್ಲಿ ಕಂಡು ಬಂದ ಸಂಗತಿ. ಪೇರಳೆಯಲ್ಲಿ ಸುಮಾರು 150ಕ್ಕೂ ಹೆಚ್ಚಿನ ತಳಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕೆಲವು ಉತ್ತಮ ಗುಣಮಟ್ಟದ ತಳಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕೆಲವು ಸಾಮಾನ್ಯ ಗುಣಮಟ್ಟದ ಹಣ್ಣನ್ನು ನೀಡುವವು ಇವೆ. ಕೆಲವು ಹಣ್ಣುಗಳ ಬೀಜಗಳು ದೊಡ್ಡದಿರುತ್ತವೆ. ಮತ್ತೆ ಕೆಲವು ಬಹಳ ಸಣ್ಣದಿರುತ್ತವೆ. ಕೆಲವು ಹಣ್ಣಿನ ತಿರುಳು ಬಿಳಿ, ಮತ್ತೆ ಕೆಲವು ಹಳದಿ, ಮತ್ತೆ ಕೆಲವು ಕೆಂಪು ಈಗೆ ವೈವಿಧ್ಯಮಯ ತಿರುಳಿನ ಬಣ್ಣವನ್ನು, ಹಾಗೆಯೇ ಸಾಮಾನ್ಯವಾಗಿ ಏಕಪ್ರಕಾರದ ಪರಿಮಳವನ್ನು ಹೊಂದಿರುತ್ತದೆ. ಪೇರಳೆಯು ಮರವಾಗಿ ಬೆಳೆದರೆ ಮರವೆಂದು ಕರೆದರೂ ತಪ್ಪಾಗಲಾರದು.
ಆದರೆ ಸರಿಯಾಗಿ ಇದನ್ನು ಸವರುತ್ತಾ ಬೆಳೆಸಿದರೆ ಸಾಧಾರಣ ಮಟ್ಟಿನ ಪೊದರಾಗಿ ಬೆಳೆ ಬೆಳೆಸುತ್ತಾ ಇರಬಹುದು. ಸುಮಾರು 3ರಿಂದ 10 ಮೀಟರ್ ಎತ್ತರದ ತನಕ ಬೆಳೆಯುತ್ತದೆ. ಕೆಲವು ಸ್ಥಳೀಯ ತಳಿಗಳು ಇದನ್ನು ಮೀರಿದ್ದೂ ಇದೆ. ಗಿಡಗಳನ್ನು ಆಗಾಗ ಸವರುತ್ತಿದ್ದು, ಹೊಸ ಗೆಲ್ಲುಗಳು, ಹೊಸ ಚಿಗುರುಗಳಿಂದ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು. ಸಾಮಾನ್ಯವಾಗಿ ಪೇರಳೆಯಲ್ಲಿ ಮೊಟ್ಟೆಯಾಕಾರದ ಮತ್ತು ದುಂಡಗಿನ ಎರಡು ಜಾತಿಯ ಹಣ್ಣುಗಳನ್ನು ಗುರುತಿಸಬಹುದು. ಪೇರಳೆಗೆ ತಾಯಿ ಬೇರು ಕಡಿಮೆ. ತಾಯಿ ಬೇರುಗಳು ಬೀಜದಿಂದ ಸಸ್ಯಾಭಿವೃದ್ಧಿ ಹೊಂದಿದ ಸಸ್ಯಗಳಲ್ಲಿ ಮಾತ್ರ ಇರುತ್ತದೆ. ಸಾಮಾನ್ಯವಾಗಿ ಮರದ ಕಾಂಡದ 120ಸೆಂ.ಮೀ.ನಿಂದ 360ಸೆಂ.ಮೀ. ಸುತ್ತಳತೆಯೊಳಗೆ ಆಹಾರ ಸಂಗ್ರಹಿಸುವ ಬೇರುಗಳ ಸಾಂಧ್ರತೆ ಇರುತ್ತದೆ.
ಇದು ಬಿಳಿಯಾದ ಆಕರ್ಷಕ ಹೂಗಳನ್ನು ಬಿಡುತ್ತದೆ. ಹೂಗಳು ಸುಮಾರು 2ರಿಂದ 3ಸೆಂ.ಮೀ. ಸುತ್ತಳತೆಯಲ್ಲಿರುತ್ತದೆ. ಹೂಗಳನ್ನು ಹಾರುದುಂಬಿಗಳು ಪರಾಗಸ್ಪರ್ಶ ಮಾಡಿ ಕಾಯಿ ಕಚ್ಚಿಸುತ್ತವೆ. ಇದರಲ್ಲಿ ಗಂಡು ಹೆಣ್ಣು ಹೂಗಳಿರುತ್ತದೆ. ಪೇರಳೆಯನ್ನು ವೈಜ್ಞಾನಿಕವಾಗಿ ಸೀಡಿಯಂ ಸಸ್ಯವರ್ಗದಲ್ಲಿ ಗುರುತಿಸಲಾಗಿದೆ. ಇದರಲ್ಲಿ ಸೀಡಿಯಂ ಅಕ್ಯುಟಾಂಗುಲಂ, ಸೀಡಿಯಂ ಅರಾಕಾ, ಸೀಡಿಯಂ, ಅರಾಕಾ ಪ್ಲೊರಿಡಾ, ಸೀಡಿಯಂ ಕಟೆಲ್ಲಿಯಾನಮ್, ಸೀಡಿಯಂ ಚಿನೇನಿಸಿಸ್, ಸೀಡಿಯಂ ಕುಜ್ಜಾವಿಲ್ಲಿಸ್, ಸೀಡಿಯಂ ಫ್ರೆಡ್ರಿಸ್ಥಾಲಿಯಾನಮ್, ಸೀಡಿಯಂ ಗಿನೆನ್ಸೀ, ಸೀಡಿಯಂ ಮೊಂಟಾನಮ್, ಸೀಡಿಯಂ ಪುಮಿಲಮ್ ಎಂಬ ಬೇರೆ ಬೇರೆ ಸಸ್ಯವರ್ಗಗಳಿದ್ದು ಇವು ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ, ಫೈಝಾಬಾದ್ ಬಸ್ತಿಯ ತೋಟಗಾರಿಕಾ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಸಂಸ್ಥೆಯಲ್ಲಿ, ಶಹರಾನ್‌ಪುರದ ತೋಟಗಾರಿಕಾ ಪ್ರಯೋಗ ಮತ್ತು ತರಬೇತಿಯಲ್ಲಿ ಲಭ್ಯವಿದೆ.
ಪೇರಳೆಯಲ್ಲಿ ಅದರ ರುಚಿ, ಸಿಪ್ಪೆಯ ದಪ್ಪ, ತಿನ್ನಲು ಮೃದುತ್ವ, ಆಕಾರಗಳಿಂದಾಗಿ ಬೇರೆ ಬೇರೆ ಹೆಸರುಗಳು ಬಂದಿವೆ. ಕೆಲವು ತಳಿಗಳು ಬೇಗನೇ ಹಣ್ಣಾಗುವವುಗಳಾದರೆ, ಮತ್ತೆ ಕೆಲವು ದೀರ್ಘಕಾಲದ ತನಕ ಹಣ್ಣಾಗಿಯೂ ಕೆಡದಿರುವಂತದ್ದಿವೆ. ಕೆಲವು ತೂಕದಲ್ಲಿ ದೊಡ್ಡದಿರುವಂತವು ಗಳಿವೆ. ಮತ್ತೆ ಕೆಲವು ಟಿ.ಎಸ್.ಎಸ್. ಅಂಶವು ಹೆಚ್ಚಿರುವಂತದ್ದಿದೆ. ನಮ್ಮ ದೇಶದಲ್ಲಿ ಅಲ್ಲದೆ ವಿದೇಶಗಳಲ್ಲೂ ಸಹ ಪೇರಳೆಯ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿದೆ.
ಪೇರಳೆಯಲ್ಲಿ ಲಭ್ಯವಿರುವ ತಳಿಗಳು ಮತ್ತು ಗುಣಗಳು
ಅಲಹಾಬಾದ್ ಸಫೇದ್: ಇದು ಉತ್ತರ ಪ್ರದೇಶದ ಬಹು ಮುಖ್ಯ ಪೇರಳೆ ತಳಿಯಾಗಿದೆ. ಗಿಡವು ಆರೋಗ್ಯಕರವಾಗಿ ಎತ್ತರವಾಗಿ ಬೆಳೆಯುತ್ತದೆ. ಹೆಚ್ಚು ಮತ್ತು ಉದ್ದದ ಗೆಲ್ಲುಗಳನ್ನು ಬಿಡುತ್ತದೆ. ಎಲೆಗಳು ಉದ್ದವಾಗಿ, ಅಗಲವಾಗಿರುತವೆ. ಕಾಯಿಗಳು ಸಾಮಾನ್ಯವಾಗಿ 150ರಿಂದ 200 ಗ್ರಾಂ.ನಷ್ಟು ತೂಗುತ್ತದೆ. ಹಣ್ಣಾದಾಗ ದುಂಡಗೆ ಮತ್ತು ಮೃದುವಾದ ಹಳದಿ ಬಣ್ಣದಿಂದ ಒಳಗೊಂಡಿರುತ್ತದೆ. ಹಣ್ಣಾದಾಗ ಉತ್ತಮ ಪರಿಮಳವನ್ನು ನೀಡುತ್ತದೆ. ಐದು ವರ್ಷ ಕಳೆದ ಗಿಡವೊಂದರಿಂದ ವರ್ಷಕ್ಕೆ ಸುಮಾರು 50 ಕಿಲೋದಷ್ಟು ಇಳುವರಿ ಪಡೆಯಬಹುದು.
ಅನಕಾಪಲ್ಲಿ: ಇದು ತಿರುಳು ಕೆಂಪಗೆ ಇರುವಂತಹ ಮಧ್ಯಮ ಗಾತ್ರದ ತಳಿ. ಬೀಜಗಳು ಮೃದುವಾಗಿರುತ್ತದೆ ಮತ್ತು ಹೆಚ್ಚು ಇರುತ್ತವೆ. ಹೊರ ತೊಗಟೆಯು ಗುಲಾಬಿ ಹಳದಿ ಬಣ್ಣದಲ್ಲಿರುತ್ತದೆ ಮತ್ತು ಸಣ್ಣ ಸಣ್ಣ ಕೆಂಪು ಬೊಟ್ಟುಗಳನ್ನು ಒಳಗೊಂಡಿರುತ್ತದೆ. ಇದರ ಸಂಗ್ರಹ ಗುಣ ಉತ್ತಮವಾಗಿರುತ್ತದೆ. ಆಪ್ಪಲ್ ಕಲರ್: ಇದೂ ಸಹ ಅಲಹಾಬಾದ್ ಮೂಲದ ತಳಿಯಾಗಿರುತ್ತದೆ. ಇದು ಹೆಚ್ಚು ಇಳುವರಿ ಕೊಡುವ ತಳಿಗಳಲ್ಲಿ ಗುರುತಿಸಲ್ಪಟ್ಟಿಲ್ಲ. ಆದರೆ ಇದರ ಬಣ್ಣ ಮತ್ತು ಹಣ್ಣಿನ ರುಚಿಯಿಂದ ಇದು ಗುರುತಿಸಲ್ಪಟ್ಟ ತಳಿಯಾಗಿದೆ. ಕಾಯಿಯು 80ರಿಂದ 120 3ಗ್ರಾಂ. ನಷ್ಟು ತೂಗುತ್ತದೆ.
ಬನಾರಸಿ ಸುರಕ್ಷಾ: ಇದರ ಮರವು ಎತ್ತರವಾಗಿ ಬೆಳೆಯುತ್ತದೆ. ಅಗಲವಾಗಿ ಹಬ್ಬುತ್ತದೆ. ಎಲೆಗಳು ಉದ್ದವಾಗಿರುತ್ತದೆ ಮತ್ತು ಹಣ್ಣು ನಯವಾದ ಮೇಲ್ಮೈಯನ್ನು ಒಳಗೊಂಡಿದೆ. ಬಂಗಾರದ ಹಳದಿ ಬಣ್ಣದ ಸಿಪ್ಪೆ ಮತ್ತು ಒಳ ತಿರುಳು ಗುಲಾಬಿ ಬಣ್ಣದಲ್ಲಿರುತ್ತದೆ. ಕಾಯಿ 70ರಿಂದ 80 ಗ್ರಾಂ. ತೂಗುತ್ತದೆ, ಬೀಜವು ಗಟ್ಟಿಯಾಗಿರುತ್ತದೆ.
ಬರುಯಿಪುರ್: ಇದೂ ಸಹ ಒಂದು ಉತ್ತಮ ವಾಣಿಜ್ಯ ಬೇಸಾಯಕ್ಕೆ ಹೊಂದಬಲ್ಲ ಪಶ್ಚಿಮ ಬಂಗಾಲ ಮೂಲತ ತಳಿ. ಮರವು ಸಾಮಾನ್ಯ ಎತ್ತರದ್ದಾಗಿದ್ದು, ವಿಶಾಲವಾಗಿ ಹಬ್ಬುವಂತಹ ಗುಣವನ್ನು ಪಡೆದಿದೆ. ಕಾಯಿಗಳು ದುಂಡಗಿ ರುತ್ತದೆ. ಹೊರ ತೊಗಟೆ ಹಳದಿ ಬಣ್ಣವೂ, ತಿರುಳು ಬಿಳಿ ಬಣ್ಣದಲ್ಲಿ ಇದ್ದು ಸಾಮಾನ್ಯ ಮಟ್ಟಿಗೆ ಸಂಗ್ರಹ ಯೋಗ್ಯ ತಳಿಯಾಗಿದೆ. ಬೇಹತ್ ಕೊಕನಟ್: ಇದು ಉತ್ತರ ಪ್ರದೇಶದ ಶಹರಾನ್‌ಪುರದ ಬೇಹತ್ ಎಂಬ ಹಳ್ಳಿಯಿಂದ ಸಂಗ್ರಹಿಸಿದ ತಳಿಯಾಗಿದ್ದು, ಮರವು ಎತ್ತರವಾಗಿದೆ.
ಹೆಚ್ಚು ಗೆಲ್ಲುಗಳನ್ನು ಬಿಡುತ್ತದೆ.ಇದರ ಕಾಂಡವು ದಟ್ಟ ಕಂದು ಬಣ್ಣದಲ್ಲಿ ಇರುತ್ತದೆ. ಎಲೆಗಳು ದೊಡ್ಡದಾಗಿ, ಗೆಲ್ಲುಗಳು ಉದ್ದವಿರುತ್ತವೆ. ಕಾಯಿ ಮೊಟ್ಟೆಯಾಕಾರದಲ್ಲಿದ್ದು ಸಾಮಾನ್ಯ ಗಾತ್ರದ ಕಾಯಿಯಾಗಿ ರುತ್ತದೆ. ಬಹಳ ಸಿಹಿ ಮತ್ತು ಹೆಚ್ಚು ಸಮಯ ಕಾಯ್ದಿರಿಸಲು ಯೋಗ್ಯವಾದ ತಳಿ.
ಚಿತ್ತಿದಾರ್: ಇದೂ ಸಹ ಎತ್ತರದ ತಳಿಯಾಗಿದ್ದು ಅಗಲಕ್ಕೆ ಗೆಲ್ಲುಗಳನ್ನು ಬಿಟ್ಟು ಬೆಳೆಯುವಂತಹ ತಳಿ. ಕಾಯಿ ಸಣ್ಣದಾದರೂ ಹೆಚ್ಚು ಸಮಯ ಸಂಗ್ರಹಿಸಲು ಯೋಗ್ಯವಾದಂತಹ ತಳಿ.
- ವಿಶ್ವನಾಥ್. ಎಸ್