ಬಹುಪಯೋಗಿ ದ್ರಾಕ್ಷಿ ಬೆಳೆ : ರೈತನ ಬದುಕು ಮಾಡುತ್ತೆ ಹಸನು

ಕೈಗೆಟುಕದವರಿಗೆ ದ್ರಾಕ್ಷಿ ಹುಳಿ ಎಂಬ ಗಾದೆ ಮಾತಿದೆ. ಆದ್ರೆ ದ್ರಾಕ್ಷಿ ಬೆಳೆಯಲು ಆರಂಭಿಸಿದರೆ ಬಾಳು ಸಿಹಿಯಾಗುತ್ತೆ ಕೂಡ.
ದ್ರಾಕ್ಷಿ ಹಣ್ಣು
ದ್ರಾಕ್ಷಿ ಹಣ್ಣು

ಕೈಗೆಟುಕದವರಿಗೆ ದ್ರಾಕ್ಷಿ ಹುಳಿ ಎಂಬ ಗಾದೆ ಮಾತಿದೆ. ಆದ್ರೆ ದ್ರಾಕ್ಷಿ ಬೆಳೆಯಲು ಆರಂಭಿಸಿದರೆ ಬಾಳು ಸಿಹಿಯಾಗುತ್ತೆ ಕೂಡ.
ದ್ರಾಕ್ಷಿ ಹಣ್ಣು ಬೆಳೆದು ಲಾಭ ಮಾಡಿಕೊಂಡವರು ಇದ್ದಾರೆ ಹಾಗೆಯೇ ಕೈ ಸುಟ್ಟುಕೊಂಡಿರುವವರು ಇದ್ದಾರೆ. ಹಾಗಂತ ಯಾವುದೇ ಬೆಳೆಯಲ್ಲಿ ಯಾವಾಗಲೂ ಲಾಭವನ್ನೇ, ಇಲ್ಲವೇ ಯಾವಾಗಲೂ ನಷ್ಟವನ್ನೇ ನಿರೀಕ್ಷಿಸಲು ಸಾಧ್ಯವಿಲ್ಲ. ಲಾಭ ನಷ್ಟ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ದ್ರಾಕ್ಷಿ ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಉಷ್ಣ ಹವಾಮಾನ ಸೇರಿದಂತೆ ಎಲ್ಲಾ ರೀತಿಯ ವಾತಾವರಣಗಳಲ್ಲೂ ದ್ರಾಕ್ಷಿ ಬೆಳೆಯಬಹುದಾಗಿದೆ. ಇದು ವಿಟೇಸಿಯಾ ಎಂಬ ಜಾತಿಗೆ ಸೇರಿದ ಹಣ್ಣಿನ ಬೆಳೆಯಾಗಿದೆ. ಇದು ಬೇಸಿಗೆಯಲ್ಲಿ ಕಟಾವಿಗೆ ಬರುವ ಬೆಳೆಯಾಗಿದೆ. ದ್ರಾಕ್ಷಿ ಬೆಳೆಗೆ ಹೆಚ್ಚಿನ ಉಷ್ಣಾಂಶದ ಅಗತ್ಯವಿದೆ. ಶೀತ ವಾತವರಣದಿಂದ ಹಣ್ಣಿಗೆ ರೋಗ ತಗಲುವ ಸಾಧ್ಯತೆಯಿರುತ್ತದೆ. ಹಿಮ ಹಾಗೂ ಚಳಿಗಾಲದಲ್ಲಿ ದ್ರಾಕ್ಷಿಗೆ ರೋಗ ಹರಡುವ ಸಾಧ್ಯತೆಯಿರುತ್ತದೆ. ಮತ್ತೆ ಮಳೆಗಾಲ ದ್ರಾಕ್ಷಿ ಬೆಳೆಗೆ ಯೋಗ್ಯವಲ್ಲ.

ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರಾಸ್ಪರಸ್  ಅಂಶ ಸಮೃದ್ಧವಾಗಿದ್ದೂ ಸುಲಭವಾಗಿ ಜೀರ್ಣವಾಗುವುದರಿಂದ ಈ ಹಣ್ಣನ್ನು ತಿನ್ನಲು ಹೆಚ್ಚಾಗಿ ಬಳಸುತ್ತಾರೆ. ದ್ರಾಕ್ಷಿ ಹಣ್ಣಿನಲ್ಲಿ ಶೇ. 20 ರಷ್ಟು ಸಕ್ಕರೆ ಅಂಶವಿರುತ್ತದೆ. ದ್ರಾಕ್ಷಿ ಉತ್ಪಾದನೆಯ ಶೇ.80 ರಷ್ಟು ಹಣ್ಣನ್ನು ವೈನ್ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಇನ್ನು 10 ರಷ್ಟು ಹಣ್ಣನ್ನು ಜ್ಯೂಸ್ ಮತ್ತಿತರ ಉದ್ದೇಶಗಳಿಗೆ ಬಳಸಲಾಗುತ್ತೆ. ಶೇ. 10 ರಷ್ಟು ಹಣ್ಣನ್ನು ಒಣದ್ರಾಕ್ಷಿಗಾಗಿ ತಯಾರಿಕೆಗೆ ಉಪಯಾಗಿಸಲಾಗುತ್ತದೆ.

ಲಾಭದಾಯಕ ವಾಣಿಜ್ಯ ಬೆಳೆಯಾದ ದ್ರಾಕ್ಷಿಯನ್ನು ಇತ್ತೀಚೆಗೆ ದೇಶಾದ್ಯಂತ ಬೆಳೆಯಲಾಗುತ್ತಿದೆ. ಜೊತೆಗೆ ದ್ರಾಕ್ಷಿ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದರಿಂದ ಸಾಮಾನ್ಯವಾಗಿ ರೈತರು ಇದರೆಡೆಗೆ ಆಕರ್ಷಿತರಾಗುತ್ತಿದ್ದಾರೆ.ಮಾರ್ಚ್ ಏಪ್ರಿಲ್ ತಿಂಗಳಲ್ಲಿ ದ್ರಾಕ್ಷಿ ಕಟಾವಿನ ಸಮಯ ಆಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದ್ರಾತ್ರಿ ಹಣ್ಣು ಮಾರುಕಟ್ಟೆಗೆ ಬರುತ್ತದೆ. ದ್ರಾಕ್ಷಿ ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭ ಹೆಚ್ಚಿಸಲು ಹಾಗೂ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ವಂಚನೆಯಿಂದ ತಪ್ಪಿಸಲು ಅವರಿಗೆ ಉತ್ತಮ ಜ್ಞಾನದ ಅವಶ್ಯಕತೆಯಿದೆ.

ರಷ್ಯಾದ ಕ್ಸಾಸ್ಪಿಯನ್ ಸಮುದ್ರದ ಸಮೀಪವಿರುವ ಆರ್ಮೇನಿಯಾ ದ್ರಾಕ್ಷಿ ಬೆಳೆಯ ಮೂಲ ಸ್ಥಳ ಎಂದು ನಂಬಲಾಗಿದೆ. 13ನೇ ಶತಮಾನದಲ್ಲಿ ಇರಾನ್ ಮತ್ತು ಆಪ್ಘಾನಿಸ್ತಾನದ ದಾಳಿಕೋರರಿಂದ ಭಾರತಕ್ಕೆ ಈ ದ್ರಾಕ್ಷಿ ಬೆಳೆಯನ್ನು ಪರಿಚಯಿಸಲಾಯಿತು.

ಪ್ರಪಂಚದಲ್ಲಿ ದ್ರಾಕ್ಷಿ ಉತ್ಪಾದಿಸುವ ಮೊದಲ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಇಟಲಿ, ಫ್ರಾನ್ಸ್, ಸ್ಪೇನ್, ಯುಎಸ್ ಎ, ಟರ್ಕಿ, ಚೀನಾ ಮತ್ತು ಅರ್ಜೆಂಟಿನಾ ದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ವಿಶ್ವಾದ್ಯಂತ ಪ್ರತಿ ವರ್ಷ 57.40 ಟನ್ ದ್ರಾಕ್ಷಿ ಬೆಳೆಯಲಾಗುತ್ತದೆ. ಅದರಲ್ಲಿ ಭಾರತ 1.21 ಟನ್ ಹಣ್ಣನ್ನು ಉತ್ಪಾದಿಸುತ್ತದೆ. ಭಾರತದಲ್ಲಿ  ಶೇ. 1.2 ಪ್ರಮಾಣದ ಭೂಮಿಯಲ್ಲಿ ಶೇ. 2.8 ರಷ್ಟು ಪ್ರಮಾಣದ ದ್ರಾಕ್ಷಿ ಬೆಳೆಯಲಾಗುತ್ತದೆ. ಒಟ್ಟಿ ಉತ್ಪಾದನೆಯ ಶೇ.80 ರಷ್ಟು ಹಣ್ಣುನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಬೆಳೆಯುತ್ತವೆ.

ಇನ್ನು ಪಂಜಾಬ್, ಆಂದ್ರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶ, ಮಿಜೋರಾಂ, ಜಮ್ಮು ಕಾಶ್ಮೀರದಲ್ಲೂ ಕೂಡ ದ್ರಾಕ್ಷಿ ಬೆಳೆಯಲಾಗುತ್ತದೆ. ಕರ್ನಾಟಕದ ಕೋಲಾರ ಮತ್ತು ಬಿಜಾಪುರ ದ್ರಾಕ್ಷಿ ಬೆಳೆಯುವ ಪ್ರಮುಖ ಜಿಲ್ಲೆಗಳಾಗಿವೆ. ಭಾರತದಲ್ಲಿ ಪ್ರಮುಖವಾಗಿ ಥಾಂಫ್ಸನ್, ಬೆಂಗಳೂರು ಬ್ಲೂ, ಅನಾಬ್ ಇ ಸಾಹಿಬ್, ಶೇರಡ್ ಸೀಡ್ ಲೆಸ್, ಪರ್ಲೆಟ್, ಗುಲಾಬ್ ಮತ್ತು ಬೋಕ್ರಿ ಎಂಬ ತಳಿಯ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ.

ಭಾರತದಲ್ಲಿ ಬೆಳೆಯುವ ಸೀಡ್ ಲೆಸ್ ದ್ರಾಕ್ಷಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ತಾಜಾ ದ್ರಾಕ್ಷಿ ರಫ್ತಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾರತ ಐರೋಪ್ಯ ದೇಶಗಳಾದ ಯು.ಕೆ, ಜರ್ಮನಿ, ಸಿಂಗಾಪೂರ, ನೆದರ್ಲ್ಯಾಂಡ್, ಗೆ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ರಫ್ತು ಮಾಡುತ್ತದೆ. ಭಾರತದ ಸೀಡ್ ಲೆಸ್ ದ್ರಾಕ್ಷಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ದೇಶದಲ್ಲಿ ಬೆಳೆಯುವ ಪ್ರಮಾಣವೂ ಏರಿಕೆಯಾಗುತ್ತಿದೆ. ದ್ರಾಕ್ಷಿಯನ್ನು ವೈನ್ ತಯಾರಿಕೆಯಲ್ಲಿ ಬಳಸುವುದರಿಂದ ಸರ್ಕಾರ ಹೆಚ್ಚಿನ ಬೆಂಬಲ ಹಾಗೂ ಸೂಕ್ತ ವ್ಯವಸ್ಥೆ ಮಾಡಿದರೆ ಜಾಗತಿಕ ಮಟ್ಟದಲ್ಲಿ ವೈನ್ ಉದ್ಯಮವನ್ನು ಇಂಪ್ರೂವ್ ಮಾಡಬಹುದಾಗಿದೆ.

ಸದ್ಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಹೀಗಾಗಿ ದ್ರಾಕ್ಷಿ ಅದರ ಉತ್ಪನ್ನಗಳ ರಪ್ತು ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೇ ದ್ರಾಕ್ಷಿ ಬೆಳೆಗಾರ ಆರ್ಥಿಕ ನಷ್ಟ ಅನುಭವಿಸಲಿದ್ದಾನೆ. ಇನ್ನು ದ್ರಾಕ್ಷಿಯನ್ನು ತಾಜಾ ಆಗಿರಿಸುವ ಪ್ರೀ ಕೂಲಿಂಗ್ ವ್ಯವಸ್ಥೆ ಉತ್ತಮವಾಗಿಲ್ಲದ ಕಾರಣ ರಪ್ತು ಪ್ರಮಾಣದಲ್ಲಿ ಇತರ ದೇಶಗಳಿಗಿಂತ ಭಾರತ ಹಿಂದುಳಿದಿದೆ.
ದ್ರಾಕ್ಷಿ ಬೆಳೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದನ್ನು ಮನ ಗಂಡಿರುವ ಸರ್ಕಾರ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.  ರೈತರು ಬೆಳೆದ ದ್ರಾಕ್ಷಿಯ  ಪ್ರೀ ಕೂಲಿಂಗ್, ಪ್ಯಾಕೆಜಿಂಗ್, ಸಂಗ್ರಹ ಮತ್ತು ಸಾಗಣೆ, ಬೆಲೆಗಳ  ಮಾಹಿತಿ, ಮಾರ್ಗದರ್ಶನದ ಬಗ್ಗೆ ತರಭೇತಿ ನೀಡಲು ಸಹಕಾರ ಸಂಘಗಳಿಗೆ ಸೂಚಿಸಿದೆ.

ಮಳೆಗಾಲದಲ್ಲಿ ದ್ರಾಕ್ಷಿ ಗಿಡ ನೆಡುವ ಆಗಿಲ್ಲ. ಮಳೆಗಾಲ ಕಳೆದ ನಂತರ ಗಿಡ ನಾಟಿ ಪ್ರಕ್ರಿಯೆ ಆರಂಭಿಸಬೇಕು. ಸಾಮಾನ್ಯವಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಾಟಿ ಆರಂಭಿಸಿದರೆ, ಕರ್ನಾಟಕದಲ್ಲಿ  ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದ್ರಾಕ್ಷಿ ಗಿಡ ನೆಡುತ್ತಾರೆ.ನಾಟಿ ಹಾಕಿದ 10 -15 ದಿನಗಳಲ್ಲಿ ಗಿಡ ಬೆಳೆಯಲು ಆರಂಭಿಸುತ್ತದೆ. ಈ ವೇಳೆ ದ್ರಾಕ್ಷಿ ಬಳ್ಳಿಯನ್ನು ಹಬ್ಬಿಸುವ ಅವಶ್ಯಕತೆಯಿರುತ್ತದೆ. ಬಳ್ಳಿ ನೆಟ್ಟ ಪ್ರತಿ ಮೂರು ದಿನಕ್ಕೊಮ್ಮೆ ನೀರು ಹಾಯಿಸಬೇಕು. ದ್ರಾಕ್ಷಿ ಗಿಡಕ್ಕೆ ಹೆಚ್ಚಿನ ತೇವಾಂಶದ ಅಗತ್ಯವಿರುತ್ತದೆ.
ಇನ್ನು ದ್ರಾಕ್ಷಿ ಬಳ್ಳಿ ಬೆಳೆಯುತ್ತಾ ಹೋದಂತೆ ಅದನ್ನು ಮೇಲಕ್ಕೆ ಹಬ್ಬಿಸಲು ಚಪ್ಪರದ ಅವಶ್ಯಕತೆಯಿರುತ್ತದೆ. ಈ ಬಳ್ಳಿ ಹಬ್ಬಿಸಲು ಬೆಳೆಗಾರರು ವಿವಿಧ ಪದ್ಧತಿಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಬೋವರ್ ಪದ್ದತಿ ಪ್ರಮುಖವಾದದ್ದು. ಭಾರತದಲ್ಲಿ  ಶೇ.80 ರಷ್ಟು ಬೆಳೆಗಾರರು ದ್ರಾಕ್ಷಿ ಬಳ್ಳಿಯನ್ನು ಹಬ್ಬಿಸಲು ಬೋವರ್ ಪದ್ಧತಿ ಅನುಸರಿಸುತ್ತಾರೆ. ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವ ದ್ರಾಕ್ಷಿಗೆ ಈ ಬೋವರ್ ಪದ್ಧತಿ ಹೆಚ್ಚು ಅನುಕೂಲ. ಗಿಡಗಳಿಗೆ ಉತ್ತಮ ಗಾಳಿ ಬೆಳಕಿನ ಅವಶ್ಯಕತೆಯಿರುವುದರಿಂದ ಈ ಬೋವರ್ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸುತ್ತಾರೆ.

ಕಟಾವಿನ ಸಂದರ್ಭದಲ್ಲಿ ಅಕಾಲಿಕ ಮಳೆಯಾದರೇ ದ್ರಾಕ್ಷಿ ಬೆಳೆಗಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಬೇಸಿಗೆ ಆರಂಭದಲ್ಲೆ ದ್ರಾಕ್ಷಿ ಕಟಾವು ಮಾಡುವುದು ಉತ್ತಮ. ಇನ್ನು ಕಟಾವಿನ ನಂತರ ಪ್ಯಾಕಿಂಗ್ ಮಾಡುವುದು ಪ್ರಮುಖ ಹಂತ. ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಪ್ಯಾಕಿಂಗ್ ಮಾಡಲಾಗುತ್ತದೆ. ಮರದ ಬಾಕ್ಸ್, ಪ್ಲಾಸ್ಟಿಕ್ ಬಕೆಟ್,ಇಲ್ಲವೇ ಬಿದಿರಿನ ಬಾಕ್ಸ್ ಗಳಲ್ಲಿ ದ್ರಾಕ್ಷಿಯನ್ನು ಪ್ಯಾಕಿಂಗ್ ಮಾಡಲಾಗುತ್ತದೆ. ನಂತರ ಅದನ್ನು ಮಾರುಕಟ್ಟೆಯಲ್ಲಿ ಹಣ್ಣಿನ, ತಳಿ, ಬಣ್ಣ, ಗಾತ್ರಕ್ಕೆ ಅನುಗುಣವಾಗಿ ಅದರ ಬೆಲೆ ನಿರ್ಧರಿತವಾಗುತ್ತದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com