ಭಾರತದ 29 ನಗರಗಳು ದುರ್ಬಲ, ಭೂಕಂಪನ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ!

ರಾಜಧಾನಿ ದೆಹಲಿ ಸೇರಿದಂತೆ ಭಾರತದ 29 ಪ್ರಮುಖ ನಗರಗಳಿಗೆ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವೇ ಇಲ್ಲ ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಭಾರತದ 29 ಪ್ರಮುಖ ನಗರಗಳಿಗೆ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವೇ ಇಲ್ಲ ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.

ರಾಜಧಾನಿ ದೆಹಲಿ ಸೇರಿದಂತೆ ಭಾರತದ 9 ರಾಜಧಾನಿ ನಗರಗಳಿಗೆ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದ್ದು, ಈ 29 ನಗರಗಳಲ್ಲಿ ಕೆಲವು ಅಲ್ಪ  ಪ್ರಮಾಣದಲ್ಲಿ ದುರ್ಬಲವಾಗಿದ್ದರೆ, ಮತ್ತೆ ಕೆಲವು ಮಧ್ಯಮ ದುರ್ಬಲ, ಇನ್ನೂ ಕೆಲವು ನಗರಗಳು ತೀರಾ ದುರ್ಬಲವಾಗಿವೆ ಎಂದು ತಿಳಿದುಬಂದಿದೆ.

ಪ್ರಮುಖ ವಿಚಾರವೆಂದರೆ ಭೂಕಂಪನ ತಡೆಯಲಾಗದ ಮತ್ತು ತೀರಾ ದುರ್ಬಲವಾಗಿರುವ ನಗರಗಳು ಬಹುತೇಕ ಹಿಮಾಲಯ ತಪ್ಪಲಿನಲ್ಲಿದ್ದು, ಹಿಮಾಲಯ ಪರ್ವತ ಶ್ರೇಣಿ ವಿಶ್ವದಲ್ಲೇ ಅತೀ ಹೆಚ್ಚು ಭೂಕಂಪನ ಸಂಭವಿಸುವ  ಪ್ರದೇಶಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಭೂಕಂಪನ ಪೀಡಿತ ಪ್ರದೇಶಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿದ್ದು, ಈ ಪೈಕಿ ರಾಜಧಾನಿ ದೆಹಲಿ, ಬಿಹಾರದ ಪಾಚ್ನಾ, ಜಮ್ಮು ಮತ್ತು ಕಾಶ್ಮೀರದ  ಶ್ರೀನಗರ, ನಾಗಾಲ್ಯಾಂಡ್ ನ ಕೊಹಿಮಾ, ಪುದುಚೇರಿ, ಅಸ್ಸಾಂನ ಗುವಾಹತಿ, ಸಿಕ್ಕಿಂನ ಗ್ಯಾಂಗ್ಟಕ್, ಹಿಮಾಚಲ ಪ್ರದೇಶದ ಶಿಮ್ಲಾ, ಉತ್ತರಾಖಂಡ್ ನ ಡೆಹ್ರಾಡೂನ್, ಮಣಿಪುರದ ಇಂಫಾಲ ಮತ್ತು ಚಂಡೀಘಡ ಜಿಲ್ಲೆಗಳು ಝೋನ್ 4  ಮತ್ತು ಝೋನ್ 5 ಅಡಿಯಲ್ಲಿ ಬರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದ ವಿವಿಧ ಪ್ರದೇಶಗಳಲ್ಲಿ ಸಂಭವಲಿಸಿರುವ ಭೂಕಂಪನಗಳ ಆಧಾರದ ಮೇರೆಗೆ ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ಝೋನ್ 2 ಯಿಂದ ಝೋನ್ 5 ವರೆಗೆ ಐದು ವಿಭಾಗಗಳಾಗಿ ವಿಂಗಡಿಸಿದ್ದು, ಝೋನ್-2 ಮತ್ತು  ಝೋನ್ 3 ಪ್ರದೇಶಗಳು ಅಲ್ಪ ಪ್ರಮಾಣದ ದುರ್ಬಲ ಪ್ರದೇಶಗಳ ಅಡಿಯಲ್ಲಿ ಬರುತ್ತವೆ. ಝೋನ್ 4 ಮತ್ತು ಝೋನ್ 5 ಪ್ರದೇಶಗಳ ತೀರಾ ದುರ್ಬಲ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪೈಕಿ ಸಂಪೂರ್ಣ ಈಶಾನ್ಯ ಭಾರತ,  ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಗುಜರಾತ್ ನ ರಣ್ ಮರುಭೂಮಿ, ಉತ್ತರ ಬಿಹಾರದ ಕೆಲ ಭಾಗಗಳು, ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳು ಝೋನ್ 5 ಅಂದರೆ ತೀರಾ  ದುರ್ಬಲ ಪ್ರದೇಶಗಳ ಅಡಿಯಲ್ಲಿ ಬರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ದಕ್ಷಿಣ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಸಿಕ್ಕಿಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲ ಭಾಗಗಳು ಝೋನ್ 4 ಅಡಿಯಲ್ಲಿ ಬರಲಿದ್ದು, ಇವು ಮಧ್ಯಮ ದುರ್ಬಲ ಪ್ರದೇಶಗಳಾಗಿವೆ ಎಂದು  ತಿಳಿದುಬಂದಿದೆ. 2011ರಲ್ಲಿ ಭುಜ್ ನಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಸುಮಾರು 20000 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಭುಜ್ ಹಾಗೂ ಚಂಡೀಗಢ, ಅಂಬಾಲಾ, ಅಮೃತಸರ್, ಲೂಧಿಯಾನಾ ಮತ್ತು ರೂರ್ಕಿ  ಪ್ರದೇಶಗಳನ್ನು ಝೋನ್-4 ಮತ್ತು ಝೋನ್ 5 ಆಗಿ ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರದ ನಿರ್ದೇಶಕ ವಿನೀತ್ ಗಾಹ್ಲಾತ್ ಹೇಳಿದ್ದಾರೆ.

ಕರ್ನಾಟಕ ಎಷ್ಟು ಸುರಕ್ಷಿತ?
ಇನ್ನು ವರದಿಯಲ್ಲಿ ದಕ್ಷಿಣ ಭಾರತದ ನಗರಗಳ ಕುರಿತು ವರದಿಯಾಗಿಲ್ಲ. ಹೀಗಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಗರಗಳು ಭೂಕಂಪನ ಸುರಕ್ಷಿತ ಪ್ರದೇಶಗಳು ಅಥವಾ ಅಲ್ಪ ಭೂಕಂಪನ ಪೀಡಿತ ಪ್ರದೇಶಗಳು ಎಂದು ಹೇಳಲಾಗುತ್ತಿದೆ.

ಮಾರ್ಚ್ ವೇಳೆಗೆ 31 ಹೊಸ ಭೂಕಂಪನ ಮಾಪನ ಕೇಂದ್ರಗಳ ಸ್ಥಾಪನೆ: ಕೇಂದ್ರ ಸರ್ಕಾರ
ಇದೇ ವೇಳೆ ಮುಂದಿನ ವರ್ಷ ಮಾರ್ಚ್ ತಿಂಗಳ ವೇಳೆಗೆ ದೇಶದ 31 ಕಡೆಗಳಲ್ಲಿ 31 ಹೊಸ ಭೂಕಂಪನ ಮಾಪನ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಎಂ ರಾಜೀವನ್ ಹೇಳಿದ್ದಾರೆ.  ದೇಶದಲ್ಲಿ ಪ್ರಸ್ತುತ 84 ಭೂಕಂಪನ ಮಾಪನ ಕೇಂದ್ರಗಳಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com