ಆಫ್ರಿಕನ್ ಜೋಳದತ್ತ ಕೋಲಾರ ರೈತರ ಒಲವು

ಬರಗಾಲಪೀಡಿತ ಕೋಲಾರ ಜಿಲ್ಲೆಯ ರೈತರಿಗೆ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆ ಅವರ...
ಕೋಲಾರ ಜಿಲ್ಲಾಧಿಕಾರಿ, ಡಾ.ಕೆ.ವಿ.ತ್ರಿಲೋಕ ಚಂದ್ರ
ಕೋಲಾರ ಜಿಲ್ಲಾಧಿಕಾರಿ, ಡಾ.ಕೆ.ವಿ.ತ್ರಿಲೋಕ ಚಂದ್ರ
ಕೋಲಾರ/ಬೆಂಗಳೂರು: ಬರಗಾಲಪೀಡಿತ ಕೋಲಾರ ಜಿಲ್ಲೆಯ ರೈತರಿಗೆ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆ ಅವರ ರಕ್ಷಕವಾಗಿದೆ. ಇದನ್ನು ಸಂಕ್ಷಿಪ್ತವಾಗಿ ಎಟಿಎಂ ಎಂದು ಕರೆಯಬಹುದು. ಕೋಲಾರದ ಗ್ರಾಮೀಣ ಆರ್ಥಿಕತೆ ಸಂಕಷ್ಟಕ್ಕೆ ತಲುಪಿದರೂ ಕೂಡ ಈ ಎಟಿಎಂ ನಿಜಕ್ಕೂ ರೈತರಿಗೆ ಹಣ ತರುತ್ತದೆ. ಅದುವೇ ಆಫ್ರಿಕನ್ ಟಾಲ್ ಮೈಜ್(ಆಫ್ರಿಕಾದ ಮೆಕ್ಕೆಜೋಳ).
ಈ ಬೆಳೆ ನಿಯಮಿತ ಮತ್ತು ಭರವಸೆಯ ಆದಾಯವನ್ನು ರೈತರಿಗೆ ನೀಡುವುದಲ್ಲದೆ ದನ ಕರುಗಳಿಗೆ ದಿನನಿತ್ಯ ಮೇವು ಪೂರೈಸುತ್ತದೆ. ಈ ಜೋಳಕ್ಕೆ ಕಡಿಮೆ ನೀರು ಸಾಕು. ವರ್ಷಪೂರ್ತಿ ಬೆಳೆಯುವ ಬೆಳೆ ಮೇವಿಗೆ ಕೂಡ ಉಪಯೋಗವಾಗುತ್ತದೆ.
ಸ್ಥಳೀಯ ರೈತರ ಸಹಾಯದಿಂದ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಮತ್ತು ಕೋಲಾರ ಜಿಲ್ಲಾಡಳಿತ ಆಫ್ರಿಕನ್ ಮೆಕ್ಕೆಜೋಳವನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದು ಉತ್ತಮ ಆದಾಯ ತರುತ್ತಿದೆ.
ಕೋಲಾರ ತಾಲ್ಲೂಕಿನ ದೊಡ್ಡಹಸಹಳ್ಳ ಗ್ರಾಮದ ಅನೇಕ ರೈತರಲ್ಲಿ ಒಬ್ಬರು ಸುರೇಶ್. ಅವರು ಸ್ಥಳೀಯ ಹಾಲು ಸಹಕಾರಿ ಒಕ್ಕೂಟದ ಜೊತೆ ಆಫ್ರಿಕನ್ ಮೆಕ್ಕೆಜೋಳವನ್ನು ಬೆಳೆಯಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಹಿಂದೆ ನಾನು ಟೊಮೆಟೊ ಅಥವಾ ಬೇರೆ ತರಕಾರಿ ಬೆಳೆಯುತ್ತಿದ್ದೆ. ಆದರೆ ಅವುಗಳಿಂದ ನಿಶ್ಚಿತ ಆದಾಯವಿಲ್ಲ. ಆದರೆ ವರ್ಷಪೂರ್ತಿ ಬೆಳೆಯಬಹುದಾದ ಜೋಳದಿಂದ ಪ್ರತಿ ಋತುವಿನಲ್ಲಿ ಒಂದೂವರೆ ಲಕ್ಷ ಆದಾಯ ನಿರೀಕ್ಷಿಸುತ್ತೇನೆ ಎನ್ನುತ್ತಾರೆ.
ಅನಿಶ್ಚಿತ ಮಳೆ, ಬೆಂಬಲ ಬೆಲೆ ಸರಿಯಾಗಿ ಸಿಗದಿರುವುದರಿಂದ ನಮಗೆ ಸಾಕಾಗಿ ಹೋಗಿದೆ.ಹಾಗಾಗಿ ಮೆಕ್ಕೆಜೋಳವನ್ನು ಬೆಳೆಯಲು ನಿರ್ಧರಿಸಿದೆ. ಈಗ ಸ್ಥಳೀಯ ಡೈರಿಗೆ ಮೆಕ್ಕೆಜೋಳವನ್ನು ಹಸುಗಳ ಮೇವಿಗೆ ನೀಡಿ ಎಕ್ರೆಗೆ 50,000 ಆದಾಯ ತರುವ ಭರವಸೆಯಿದೆ ಎನ್ನುತ್ತಾರೆ ಸುರೇಶ್. ಕಂಬಳ್ಳಿ ಗ್ರಾಮದ ರೈತ ಎಂ.ವೆಂಕಟೇಶ್ ಕೂಡ ಈ ಬೆಳೆ ಬೆಳೆಯುತ್ತಾರೆ. ಈ ಮುಂಚೆ ವಿಶೇಷವಾಗಿ ಬೇಸಿಗೆಯಲ್ಲಿ ಹಸುಗಳಿಗೆ ಮೇವು ಸಿಗುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ.
ಈ ಮೊದಲು ಆಂಧ್ರ ಅಥವಾ ತಮಿಳು ನಾಡಿನಿಂದ ಮೇವುಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತಿತ್ತು. ಅದು ಬೆಲೆಯೂ ಅಧಿಕವಾಗುತ್ತಿತ್ತು. ಪ್ರತಿ ಕಿಲೋ ಒಣ ಮೇವಿಗೆ 10ರಿಂದ 15 ರೂಪಾಯಿಯಾಗುತ್ತಿತ್ತು. ಆದರೆ ಇದೀಗ ಇಲ್ಲಿನ ರೈತರೇ ಮೆಕ್ಕೆ ಜೋಳ ಬೆಳೆಯುವುದರಿಂದ ಕಡಿಮೆ ಹಣಕ್ಕೆ ಮೇವು ಪಡೆಯಬಹುದು. 
ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ. ಚೆನ್ನಕೇಶವ, ಒಣ ಮೇವಿನಿಂದ ಜಾನುವಾರುಗಳಿಗೆ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತವೆ.  ಹಾಲು ಸಿಗುವುದು ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ.
ಕೆಎಂಎಫ್ ನ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸ ಗೌಡ, ಕಳೆದ ನವೆಂಬರ್ ನಿಂದ ರಾಜ್ಯ ಪಶು ಸಂಗೋಪನಾ ಇಲಾಖೆ ಮತ್ತು ಕೆಎಂಎಫ್ ಸುಮಾರು 70,000 ಎಟಿಎಂಗಳ ಮಿನಿ ಕಿಟ್ ಗಳನ್ನು ವಿತರಿಸಿತ್ತು. ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು  ಅದರ ಪ್ರಕಾರ ಜಿಲ್ಲೆಯ ಪಶುಗಳಿಗೆ ಬೇಕಾಗುವ ಮೇವುಗಳನ್ನು ರೈತರು ಬೆಳೆಯಬೇಕು. ಜಿಲ್ಲೆಯ ರೈತರೇ ಬೆಳೆದ ಮೇವುಗಳಿಂದ ಹಾಲಿನ ಗುಣಮಟ್ಟ ಕೂಡ ಉತ್ತಮವಾಗಿದೆ ಎನ್ನುತ್ತಾರೆ.
ಕೋಲಾರ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಇಂತಹ ಯೋಜನೆಗಳು ಮುಖ್ಯವಾಗಿವೆ. ಇದರಿಂದ ರೈತರಿಗೆ, ಜಾನುವಾರಗಳಿಗೆ ಬಹಳ ಪ್ರಯೋಜನವಾಗಿದೆ. ಹಾಲಿನ ಒಕ್ಕೂಟದ ಆದಾಯ ಕೂಡ ಹೆಚ್ಚಾಗಿದೆ ಎನ್ನುತ್ತಾರೆ. 
ನಮ್ಮ ರಾಜ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೇವು ಕೃಷಿಯನ್ನು ಜಾರಿಗೆ ತರಲಾಗಿದೆ. ಇದು ಇತರ ಜಿಲ್ಲೆಗಳ ರೈತರಿಗೂ ಮಾದರಿಯಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com