ದೇಶ

ನಿಮ್ಮ ಹಕ್ಕಿನಿಂದ ಇತರರ ಹಕ್ಕಿಗೆ ಧಕ್ಕೆಯಾಗಬಾರದು: ಶಾಹೀನ್ ಬಾಗ್ ಪ್ರತಿಭಟನಾಕಾರರಿಗೆ ಸುಪ್ರೀಂ ಮಧ್ಯಸ್ಥಿಕೆದಾರರು

Lingaraj Badiger

ನವದೆಹಲಿ: ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಇಬ್ಬರು ಮಧ್ಯಸ್ಥಿಕೆದಾರರು ಬುಧವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರತಿಭಟನೆ ನಡೆಸುವ ನಿಮ್ಮ ಹಕ್ಕನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿಹಿಡಿದಿದೆ. ಆದರೆ ಇದರಿಂದ ಇತರರ ಹಕ್ಕಿಗೆ ಧಕ್ಕೆಯಾಗಬಾರದು ಎಂದು ಹೇಳಿದ್ದಾರೆ.

ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಬೇರೆಕಡೆ ಸ್ಥಳಾಂತರಿಸುವುದಕ್ಕಾಗಿ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿದೆ. ಈ ಇಬ್ಬರು ವಕೀಲರು ಇಂದು ಶಾಹೀನ್ ಬಾಗ್ ಗೆ ಭೇಟಿ ನೀಡಿ ಪ್ರತಿಭಟನಾ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು.

ಪ್ರತಿಭಟನೆ ಮಾಡುವ ಹಕ್ಕು ನಿಮಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದೇ ರೀತಿ ಬೇರೆಯವರಿಗೂ ಈ ರಸ್ತೆ ಬಳಸುವ ಮತ್ತು ಇಲ್ಲಿನ ಅಂಗಡಿಗಳನ್ನು ತೆರೆಯುವ ಹಕ್ಕು ಇದೆ. ಹೀಗಾಗಿ ಪ್ರತಿಭಟನಾ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ಮನವಿ ಮಾಡಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಾಧನಾ ರಾಮಚಂದ್ರನ್ ಅವರು, ನಾವು ಒಟ್ಟಿಗೆ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ. ನಾವು ಪ್ರತಿಯೊಬ್ಬರ ಸಮಸ್ಯೆಯನ್ನು ಕೇಳುತ್ತೇವೆ ಎಂದು ಭರವಸೆ ನೀಡಿದರು.

ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ 67 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅವರಿಗೆ ಪ್ರತಿಭಟನೆ ಮಾಡುವ ಹಕ್ಕು ಇದೆ ಎಂದು ಕೋರ್ಟ್ ಹೇಳಿದೆ.

SCROLL FOR NEXT