ಗಾಳಿ ಆಂಜನೇಯ ಸ್ವಾಮಿ ಮಹಿಮೆ ಗೊತ್ತಾ?

ಬೆಂಗಳೂರು ಮಹಾನಗರದ ಮೈಸೂರು ರಸ್ತೆ ಬಾಪೂಜಿ ನಗರದಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ...
ಗಾಳಿ ಆಂಜನೇಯ ಸ್ವಾಮಿ
ಗಾಳಿ ಆಂಜನೇಯ ಸ್ವಾಮಿ
Updated on

ಬೆಂಗಳೂರು ಮಹಾನಗರದ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಹನುಮಂತ ಕೇಸರಿ ಎಂಬ ನಾನಾ ಹೆಸರುಗಳಿಂದ ಕರೆಯಲ್ಪಡುವ ಹನುಮಂತ ವಾಯುಪುತ್ರನಾಗಿರುವುದರಿಂದ ಇಲ್ಲಿನ ಹನುಮ ದೇವಸ್ಥಾನಕ್ಕೆ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಭಕ್ತಿಯಿಂದ ದಿನನಿತ್ಯ ಪೂಜಿಸಲಾಗುತ್ತದೆ.

ಈ ದೇವಾಲಯವನ್ನು ಚೆನ್ನಪಟ್ಟಣದ ಶ್ರೀ ವ್ಯಾಸರಾಯರು 1425ರಲ್ಲಿ ಕಟ್ಟಿಸಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಮುಂದೆ ಸುಂದರ ಹಾಗೂ ಎತ್ತರವಾದ ಗೋಪುರವಿದೆ. ಈ ಕಲ್ಲು ಗೋಪುರದಲ್ಲಿ ಹಲವಾರು ದೇವತೆ ಹಾಗೂ ಮುದ್ರೆಗಳುಳ್ಳ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿಯಾಗಿದೆ. ಇಲ್ಲಿ ನವಗ್ರಹ, ಸತ್ಯನಾರಾಯಣ ಹಾಗೂ ಸೀತಾ ಲಕ್ಷ್ಮಣ ಸಹಿತನಾದ ಕಲ್ಯಾಣ ರಾಮನನ್ನು ಪ್ರತಿಷ್ಠಾಪಿಸಲಾಗಿದೆ. ವರ್ಷದಲ್ಲಿ ಎರಡು ಬಾರಿ ಇಲ್ಲಿ ಸ್ವಾಮಿಗೋ ಬ್ರಹ್ಮೋತ್ಸವ ಜರುಗುತ್ತದೆ. ಈ ಬ್ರಹ್ಮೋತ್ಸವನ್ನು 120 ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.

ಐತಿಹ್ಯ: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಈ ಮೊದಲು ಹಳ್ಳಿಗಳಿದ್ದವು. ಬೆಂಗಳೂರು ನಗರ ನಿರ್ಮಾಣಕ್ಕೂ ಮುನ್ನ ಇಲ್ಲಿ ದೇವಾಲಯವಿತ್ತು ಎಂಬುದನ್ನು ಈ ದೇವಾಲಯದ ಗರ್ಭಗೃಹದ ರಚನೆಯೇ ಸಾರುತ್ತದೆ. ಈ ಪ್ರದೇಶಕ್ಕೆ ಬ್ಯಾಟರಾಯನಪುರ ಎಂದು ಹೆಸರು ಬರಲು ಇಲ್ಲಿರುವ ರುಕ್ಮಿಣಿ, ಸತ್ಯಭಾಮಾ ಸಮೇತನಾದ ವೇಣುಗೋಪಾಲಸ್ವಾಮಿ ಕಾರಣವಂತೆ.

ದೇವಾಲಯದಲ್ಲಿ ಪುರಾತನವಾದ ಗರ್ಭಗುಡಿಯಲ್ಲಿ ಒಂದು ಕರವನ್ನು ಮೇಲೆತ್ತಿ ಅಭಯ ನೀಡುತ್ತಿರುವ ಮತ್ತು ಮತ್ತೊಂದು ಕರದಲ್ಲಿ ಗದೆ ಹಿಡಿದ ಎದುರು ಮುಖದ ಆಂಜನೇಯನ ಸುಂದರ ಮೂರ್ತಿಯಿದೆ.

ಬಾಪೂಜಿನಗರಕ್ಕೆ ಸಂಪ್ರದಾಯದ ಸೊಗಡಿದೆ. ನಗರದ ಆಧುನಿಕತೆಗೆ ತೆರೆದುಕೊಂಡಿರುವ ಈ ಬಡಾವಣೆಯು ಬ್ರಹ್ಮೋತ್ಸವದ ವೇಳೆ ಹಳ್ಳಿಯ ವಾತಾವರಣಕ್ಕೆ ತಿರುಗುತ್ತದೆ. ವಾಹನದಟ್ಟಣೆ, ಏರುತ್ತಿರುವ ಜನಸಂಖ್ಯೆಯ ಹೊರತಾಗಿಯೂ ಅದು ಉಸಿರಾಡುವುದು ತನ್ನತನವನ್ನು. ಉಸಿರು ಎನ್ನಲು ಕಾರಣ ಅಲ್ಲಿನ ಗಾಳಿ ಆಂಜನೇಯ ಸ್ವಾಮಿ.ಈ ದೇವಾಲಯಕ್ಕೆ ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ನಿರಂತರವಾಗಿ ಸಾವಿರಾರು ಭಕ್ತಾದಿಗಳು ಪೂಜೆ  ಸಲ್ಲಿಸುತ್ತಾರೆ.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ಇಲ್ಲಿನ ಜನ ನೂರಾರು ಸಂಖ್ಯೆಯಲ್ಲಿ ಬಂದು ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ದೇವರಿಗೆ ಪೂಜೆ ಮಾಡಿಸಿ ಇಲ್ಲಿ ನೀಡುವ ಆಂಜನೇಯ ಸ್ವಾಮಿ ಬಂಡಾರ ಹಾಗೂ ಫಲವನ್ನು ಮನೆಗೆ ತೆಗೆದುಕೊಂಡು ಹೋಗಿ ಮನೆಯ ಇತರೆ ಸದಸ್ಯರಿಗೆ ನೀಡುತ್ತಾರೆ. ಇದಲ್ಲದೆ ಇಲ್ಲಿಗೆ ಬರುವ ಜನರು ತಮ್ಮ ಕಷ್ಟವನ್ನು ದೂರಮಾಡುವಂತೆ ಹರಕೆ ಹೊತ್ತು, ಬಯಕೆ ಈಡೇರಿದ ಮೇಲೆ ಹರಕೆಯನ್ನು ತೀರಿಸುತ್ತಾರೆ.

ದೇಗುಲಕ್ಕೆ ದಾರಿ:
ಗಾಳಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆ, ಬಾಪೂಜಿನಗರ (ಬ್ಯಾಟರಾಯನ ಪುರ), ಬೆಂಗಳೂರು-560026.

ಮೆಜೆಸ್ಟಿಕ್-ಬಾಪೂಜಿನಗರದ ನಡುವಿನ ಅಂತರ 6.5 ಕಿಮಿ.ಇದ್ದು, ಹೋಗಲು ಕನಿಷ್ಟ ಎಂದರೂ 19 ನಿಮಿಷ ಬೇಕಾಗುತ್ತದೆ. ಮೆಜೆಸ್ಟಿಕ್ ಗೆ ಹೋಗಿ ಅಲ್ಲಿ ಫ್ಲಾಟ್ ಫಾರ್ಮ್ ನಂಬರ್ 19 ಕ್ಕೆ ಬಂದರೆ ಅಲ್ಲಿಂದ (ಬಿಎಂಟಿಸಿ) 222, 225, 248 ಬಸ್ ಗಳು ಹೋಗುತ್ತದೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com