ಅನ್ನ-ಜ್ಞಾನ, ಸದ್ಭಕ್ತಿಯ ಕ್ಷೇತ್ರ, ಹೊರನಾಡು ಅನ್ನಪೂರ್ಣೇಶ್ವರಿ

ಅನ್ನಪೂರ್ಣೇಶ್ವರಿ ಬೇಡಿದ್ದನ್ನು ಕರುಣಿಸುವ ತಾಯಿ. ಸಂತಾನ, ಆರೋಗ್ಯ, ವ್ಯವಹಾರಗಳಲ್ಲಿ ಯಶಸ್ಸು ಇತ್ಯಾದಿಗಳನ್ನು ಕರುಣಿಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ...
ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯ
ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯ

ಹಚ್ಚ ಹಸಿರಿನಿಂದ ಕಂಗ್ಗೊಳಿಸುವ ಸಸ್ಯ ಶ್ಯಾಮಲೆ, ಜಲಲ ಜಲಧಾರೆ. ಅನಂತ ಪ್ರಕೃತಿಯ ಅನನ್ಯತೆಗೆ ಸಾಕ್ಷಿಯೆಂಬಂತೆ ತೋರುವ ಕಣಿವೆ ಕಂದರ ಘಟ್ಟಗಳು. ಈ ಪರಿಯ ಪರಿಸರದ ನಡುವೆ ಶ್ರೀ ಅನ್ನಪೂರ್ಣೆಶ್ವರಿ ದೇವಿ ನೆಲೆಸಿದ್ದಾಳೆ. ಅನ್ನಪೂರ್ಣೆ ಚತುರ್ಭುಜೆ. ಮೇಲಿನ ಎರಡೂ ಕೈಗಳಲ್ಲಿ ಶಂಖಚಕ್ರ, ಇನ್ನೊಂದು ಕೈಯಲ್ಲಿ ಶ್ರೀಚಕ್ರ, ನಾಲ್ಕನೇ ಕೈಯಲ್ಲಿ ಗಾಯತ್ರಿ.

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ ಅನ್ನದಾನದ ಆತಿಥ್ಯಕ್ಕೆ ಹೆಸರುವಾಸಿ. ಅನ್ನಪೂಣೇಶ್ವರಿ ಕ್ಷೇತ್ರದ ಅಧಿದೇವತೆ. ಅನ್ನಪೂರ್ಣೆಶ್ವರಿ ಸನ್ನಿಧಿಗೆ ಬರುವ ಪ್ರತಿಯೊಬ್ಬ ಭಕ್ತನೂ ಇಲ್ಲಿ ‘ಪ್ರಸಾದ’ ಸ್ವೀಕರಿಸುವುದು ಈ ಕ್ಷೇತ್ರದ ವಿಶೇಷ. ಹೊರನಾಡು ಅನ್ನಪೂಣೇಶ್ವರಿ ಬೇಡಿದ್ದನ್ನು ಕರುಣಿಸುವ ತಾಯಿ ಎಂಬ ನಂಬಿಕೆಯಿಂದ ಭಕ್ತರು ನಾನಾ  ಬಗೆಯ ಹರಕೆ ಮಾಡಿಕೊಳ್ಳುತ್ತಾರೆ. ಸಂತಾನ, ಆರೋಗ್ಯ, ವ್ಯವಹಾರಗಳಲ್ಲಿ ಯಶಸ್ಸು ಇತ್ಯಾದಿಗಳನ್ನು ಕರುಣಿಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ. ಬೇಡಿದ್ದು ದಕ್ಕಿದಾಗ ಹರಕೆ ತೀರಿಸಲು ಮತ್ತೆ ಬರುತ್ತಾರೆ.

ದೂರದ ಗರ್ಭಗುಡಿಯ ನಂದಾದೀಪದ ಬೆಳಕಿನಲ್ಲಿ ದರ್ಶನ ಕೊಡುವ ಇತರ ದೇವಿಯರಂತಲ್ಲ ಹೊರನಾಡ ಅನ್ನಪೂರ್ಣೇಶ್ವರಿ. ತೀರಾ ಹತ್ತಿರದಿಂದ ದೇವಿಯ ದರ್ಶನ ಲಭ್ಯ. ಆರು ಅಡಿ ಎತ್ತರದ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆಯಾದದ್ದು 1973ರಲ್ಲಿ . ತಮಿಳುನಾಡಿನ ಶಂಕೋಟೆಯಿಂದ ತಂದು ಸ್ಥಾಪಿಸಲಾಯಿತು. ಮೂರ್ತಿಯ ಕೆಳಭಾಗದಲ್ಲಿ ಮೂಲದೇವಿಯಿದ್ದಾಳೆ. ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರ್ಶನ ಭಾಗ್ಯ ಲಭ್ಯ. ದಿನಕ್ಕೆ ಮೂರು ಸಲ ಮಹಾ ಮಂಗಳಾರತಿ. ಮಾತಾನ್ನಪೂರ್ಣೇಶ್ವರಿಯ ‘ಅನ್ನಪೂರ್ಣ ಸದನ’

ಹೊರನಾಡು ಕ್ಷೇತ್ರವನ್ನು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅನ್ನಪೂರ್ಣೇಶ್ವರಿ ತಾಯಿಯ ಕೃಪೆಗೆ ಪಾತ್ರರಾದವರಿಗೆ ಜೀವನದ ಉದ್ದಕ್ಕೂ ಅನ್ನ ಸಿಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹೀಗಾಗಿ  ವರ್ಷವಿಡೀ ಲಕ್ಷಾಂತರ ಭಕ್ತರು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ. ಅನ್ನಪೂಣೇಶ್ವರಿಯ ಕೃಪೆ ಇದ್ದರೆ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಹೊರನಾಡು ಸುತ್ತ ಮುತ್ತಲಿನ ಗ್ರಾಮಗಳ ರೈತರಲ್ಲಿದೆ. ಹೀಗಾಗಿ ಅವರು ವರ್ಷಕ್ಕೊಮ್ಮೆ ತಾವು ಬೆಳೆದ ಭತ್ತ, ಅಡಿಕೆ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಉತ್ಪನ್ನಗಳನ್ನು ತಾಯಿಯ ಸನ್ನಿಧಿಗೆ ಕಾಣಿಕೆ ರೂಪದಲ್ಲಿ ತಂದು ಒಪ್ಪಿಸುವ ಸಂಪ್ರದಾಯವಿದೆ.

ಕ್ಷೇತ್ರಕ್ಕೆ ಹೋಗುವ ಮಾರ್ಗ

ಬೆಂಗಳೂರಿನಿಂದ ಹೊರನಾಡು 330 ಕಿಮೀ ದೂರ. ಶೃಂಗೇರಿಯಿಂದಾದರೆ 75 ಕಿಮೀ. ಚಿಕ್ಕಮಗಳೂರಿನಿಂದ ಬರೋಬ್ಬರಿ 100 ಕಿಮೀ. ರೈಲು ಸಂಪರ್ಕವಿಲ್ಲ . ಬಸ್ಸಲ್ಲೇ ಹಾದಿ ಸವೆಸಬೇಕು.

ಅತಿಥಿ ಗೃಹಗಳು
ದೇವಸ್ಥಾನದ ಸಿಬ್ಬಂದಿ ಅತ್ಯಂತ ಸ್ನೇಹಪರರು. ಕ್ಷೇತ್ರದಲ್ಲಿ ಉಳಿಯಲು ಬಯಸುವ ಭಕ್ತರಿಗಾಗಿ 200 ಸುಸಜ್ಜಿತ ಕೊಠಡಿಗಳ ಅತಿಥಿ ಗೃಹವಿದೆ. ಕೊಠಡಿ ನಿರ್ವಹಣೆಗೆ 120 ರೂ ಶುಲ್ಕ ನೀಡಬೇಕು. ಕೊಠಡಿ ಸಿಕ್ಕದಿದ್ದವರು ದೇವಸ್ಥಾನದ ಆವರಣದಲ್ಲೇ ಮಲಗಲು ಅವಕಾಶವಿದೆ. ಅಲ್ಲಿನ ಸಿಬ್ಬಂದಿ ಭಕ್ತರಿಗೆ ಹಾಸಲು ಮತ್ತು ಹೊದೆಯಲು ಅಗತ್ಯ ಪರಿಕರಗಳನ್ನು ನೀಡುತ್ತಾರೆ. ‘ಚಂಡಿಕಾ ಹೋಮ’ ಈ ಕ್ಷೇತ್ರದ ವಿಶೇಷ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಂದ ಭಕ್ತರು ಚಂಡಿಕಾ ಹೋಮ ನಡೆಸಲು ಬರುತ್ತಾರೆ.

ಪ್ರಸಾದ
ರುಚಿಕಟ್ಟು ಹಾಗೂ ಸ್ವಾದಿಷ್ಟ. ಅವಲಕ್ಕಿ, ಮಜ್ಜಿಗೆ, ಕಾಫಿ ಬೆಳಗಿನ ಉಪಾಹಾರಕ್ಕಾದರೆ, ಮಧ್ಯಾಹ್ನದ ಭೋಜನಕ್ಕೆ ಅನ್ನ, ಸಾರು, ಚಿತ್ರಾನ್ನ ಹಾಗೂ ಪಾಯಸ. ಊಟದ ಕೊನೆಗೆ ಹೊಟ್ಟೆ ತಂಪೆನಿಸಲು ಮಜ್ಜಿಗೆ. ರಾತ್ರಿಯೂ ಸ್ವಾದಿಷ್ಟ ಭೋಜನ. ಅಡುಗೆ ಕೋಣೆ ಆಧುನಿಕ ಸೌಲಭ್ಯಗಳಿಂದ ಸಜ್ಜುಗೊಂಡಿದೆ.

- ವಿಶ್ವನಾಥ್.ಎಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com