ಕುಜ ದೋಷ ಪರಿಹಾರ ಸೂತ್ರಗಳು

ಪೌರ್ಣಮಿ, ಅಮಾವಾಸ್ಯೆ ಮತ್ತು ಗ್ರಹಣ ಕಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಸಮಯದಲ್ಲಿ ಜನಿಸಿದವರು ಕುಜ ದೋಷಕ್ಕೆ ತುತ್ತಾಗುತ್ತಾರೆ.
ಕುಜ ದೋಷ
ಕುಜ ದೋಷ
Updated on
ಮದುವೆ ಎಂಬುದು ಮನುಷ್ಯನ ಜೀವನವನ್ನೇ ಬದಲಿಸುವ ಕಾಲ ಘಟ್ಟ. ಇದು ಎರಡು ಜೀವಗಳು ಸಮ್ಮಿಳಿತಗೊಳ್ಳುವ ಸೂಕಾರ್ಯ. ಇಲ್ಲಿ ಸ್ವಲ್ಪ ಎಡವಿದರೂ ಜೀವನ ಪರ್ಯಂತ ದುಃಖ ಪಡಬೇಕಾಗುತ್ತದೆ. ಇಂಥದರಲ್ಲಿ ಕುಜದೋಷ ಎಷ್ಟಿದೆ ಎಂದು ಇಬ್ಬರ ಜಾತಕವನ್ನು (ವಧು-ವರ) ಕೂಲಂಕಷವಾಗಿ ಪರಿಶೀಲಿಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರಲು ಸಹಾಯವಾಗುತ್ತದೆ.
ದಾಂಪತ್ಯ ಯೋಗ ನಿರ್ಧರಿಸುವಾಗ ವಧು-ವರರ ದಿನಾದಿಕೂಟಗಳನ್ನು ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ, ಜನ್ಮ ಜಾತಕದಲ್ಲಿ ಬರುವ ಕುಜದೋಷ, ವಿಷಕನ್ಯಾಯೋಗವನ್ನು ಪರಿಶೀಲಿಸಿ ವಿವಾಹವನ್ನು ನಿರ್ಧರಿಸಬೇಕಾಗಿರುವುದರಿಂದ ಈ ಕುಜದೋಷ ನೋಡಬೇಕು.
ಕುಜ ದೋಷಗಳು ಬರಲು ಕಾರಣ:
ಜನನ ಕಾಲದಲ್ಲಿ ಗ್ರಹಗಳು, ಉಪಗ್ರಹಗಳು, ಉಲ್ಕಶಿಲೆಗಳು, ಧೂಮಕೇತುಗಳು ಮತ್ತು ಯಾವುದಾದರೊಂದು ಕ್ಷುದ್ರವಸ್ತು ಸೂರ್ಯನಿಗೆ ಅಡ್ಡಬಂದಾಗ ಸಂಕ್ರಮಣ ಏರ್ಪಟ್ಟು ಸೂರ್ಯನಿಂದ ಎರಕ ಹೊಯ್ಯುವ ನಭೋಕಿರಣಗಳು ವಕ್ರಸ್ಥಿತಿಯಲ್ಲಿ ಪೃಥ್ವಿಯ ಮೇಲೆ ಬಿದ್ದಾಗ, ಜ್ಯೋತಿಷ್ಯಶಾಸ್ತ್ರದ ರೀತ್ಯ ತನ್ನ ಜನ್ಮಕುಂಡಲಿಯಲ್ಲಿ ಕುಜ (ಅಂಗಾರಕ) ಮತ್ತು ಶನಿಗ್ರಹಗಳು ಅಷ್ಟಮ ಸ್ಥಾನಕ್ಕೆ ಬಂದಾಗ, ನಿವಾಸ ಮತ್ತು ಪರಿಸರದ ನೈರ್ಮಲ್ಯ ಕೆಟ್ಟು ವಾಸ್ತು ದೋಷಗಳು ಉದ್ಭವಿಸಿದರೆ, ಕುಲದೇವರನ್ನು ಪೂಜಿಸುವುದು ಮರೆತರೆ, ಪೌರ್ಣಮಿ ಅಮಾವಾಸ್ಯೆ ಮತ್ತು ಗ್ರಹಣ ಕಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಸಮಯದಲ್ಲಿ ಜನಿಸಿದವರು ಕುಜ ದೋಷಕ್ಕೆ ತುತ್ತಾಗುತ್ತಾರೆ. 
ಯಾವಾಗ ಹೇಗೆ?
ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಬರುವ ಕುಜದೋಷ ಹಾಗೂ ಎರಡನೆಯದಾಗಿ ವಿವಾಹ ಸಮಯದ ಲಗ್ನಕುಂಡಲಿಯಲ್ಲಿ ದೋಷಯುತ ಮಂಗಳನಿರದಂತೆ ಎಚ್ಚರವಹಿಸಬೇಕು. ಮೂರನೆಯದಾಗಿ ಸ್ತ್ರೀಯ ಪ್ರಥಮ ರಜೋದರ್ಶನ ಕಾಲದಲ್ಲಿ ಸ್ಪಷ್ಟ ಲಗ್ನ ಕುಂಡಲಿಯಲ್ಲಿ ಕುಜದೋಷ ಅತಿ ಮಹತ್ವದ್ದು.
ಕುಜದೋಷ, ಮಂಗಳ ದೋಷ, ಅಂಗಾರಕ ದೋಷ ಎಂದರೆ ಎಲ್ಲವೂ ಒಂದೇ ಅರ್ಥ. ಕುಜನು ಲಗ್ನ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ ಮತ್ತು ವ್ಯಯ ಅಂದರೆ ಕುಜನ 1,2,4,5,7,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಹಾಗೂ ಈ ದೋಷವನ್ನು ಲಗ್ನದಿಂದ, ಚಂದ್ರನಿಂದ ಹಾಗೂ ಶುಕ್ರನಿಂದ ಸಹ ನೋಡಲಾಗುತ್ತದೆ. ಲಗ್ನವು ನಿರ್ದಿಷ್ಟ ಸಮಯದ, ವಿಶೇಷ ನಿರ್ದಿಷ್ಟ ಬಿಂದುವಾಗಿರುವುದರಿಂದ ಲಗ್ನದಿಂದ ನೋಡಬೇಕು. ಚಂದ್ರನು ಮನೋಕಾರಕನಾದ್ದರಿಂದ ಮತ್ತು ಲಗ್ನದ ನಂತರ ಇದನ್ನು ವಿಚಾರಿಸುವುದರಿಂದ ಚಂದ್ರನಿಂದ ನೋಡಲಾಗುತ್ತದೆ ಮತ್ತು ಶುಕ್ರನು ವೀರ್ಯ ಮತ್ತು ಕಳತ್ರ ಕಾರಕನಾದ್ದರಿಂದ ಆತನಿಂದ ಕುಜದೋಷ ಅವಲೋಕಿಸುವುದು ಯುಕ್ತಿಕರ.
ಆದರೆ, ಲಗ್ನಕ್ಕೆ ವಿಶೇಷ ಬಲವಿರುವುದರಿಂದ ಮಂಗಳ ದೋಷವನ್ನು ಲಗ್ನದಿಂದ ನೋಡುವುದು ಹೆಚ್ಚು ಫಲದಾಯಕ.
ಸೂಕ್ತ ಸಮಯ
ಈ ಕುಜದೋಷ ಉಂಟಾಗುವುದಕ್ಕೂ ಸಮಯವುಂಟು. ಕುಜ ಬಲಿಷ್ಠನಿದ್ದರೆ ಅಥವಾ ಮಾರಕನಾಗಿದ್ದರೆ 28ನೇ ವಯಸ್ಸಿನಿಂದ 32ನೇ ವಯೋಧರ್ವುದವರೆಗೆ ತನ್ನ ಇಷ್ಟ- ಅನಿಷ್ಟಾದಿ ಫಲಗಳನ್ನು ಕೊಡುವನು. ಅಂದಿನ ಗೋಚಾರ ಸ್ಥಾನ ಮತ್ತು ಅಷ್ಟಕವರ್ಗ ಬಿಂದುಗಳನ್ನು ಗಮನಿಸಬೇಕು. ಇದರೊಂದಿಗೆ ದಶಾಕಾಲ ಬಹಳ ಮಹತ್ವದಾಗಿದೆ. ಈ ಅನಿಷ್ಟ ಫಲಗಳು ದಶಾಕಾಲದಲ್ಲೇ ಹೆಚ್ಚಾಗಿ ನೀಡುತ್ತಾನೆ. ಒಬ್ಬೊಬ್ಬರ ಜಾತಕದಲ್ಲಿ ಕುಜದಶಾ ಬರದೇ ಹೋಗಬಹುದುದು. ಆಗ ಕುಜನ ಅನಿಷ್ಟ ಫಲಗಳು ಕಡಿಮೆಯಾಗುತ್ತದೆ.
ವಿವಾಹ ಸಮಯದಲ್ಲಿ ವಧು- ವರರ ಸಾಲಾವಳಿಗೆ ತೆಗೆದುಕೊಂಡಾಗ ಗಂಡಿನ ಜಾತಕದಲ್ಲಿ (ವರ) ಕುಜನ 2,5,7ನೇ ಭಾವಗಳಲ್ಲಿ ಕುಜನಿದ್ದರೆ ಬಲಿಷ್ಠ ಕುಜದೋಷ. ಗಂಡಿನ ಜಾತಕದಲ್ಲಿ ಹೆಚ್ಚು ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದರೆ ವಿವಾಹ ಮಾಡಬಹುದು. ಆದರೆ, ಗಂಡಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಹೆಚ್ಚಿನ ಕುಜದೋಷವಿದ್ದರೆ ವಿವಾಹ ಮಾಡಬಾರದು.
ಕುಜದೋಷ ಯಾವಾಗ ಇಲ್ಲ?
ಕಟಕ ಮತ್ತು ಸಿಂಹ ಲಗ್ನದವರಿಗೆ ಕುಜದೋಷವಿಲ್ಲ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಷಾಢಾ, ಉತ್ತರಾಷಾಢಾ, ಶ್ರವಣ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜದೋಷವಿಲ್ಲ.
ವಧು-ವರರಿಬ್ಬರ ಜಾತಕದಲ್ಲಿ ಕುಜದೋಷವಿದ್ದರೆ ಕುಜದೋಷ ಪರಿಹಾರವಾಗುತ್ತದೆ. ಶನಿ 4,6,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಕುಜ ದೋಷ ಬರುವುದಿಲ್ಲ.
ಪಂಚಮಹಾಪುರುಷ ಯೋಗದಲ್ಲಿ ರುಚಿಕಯೋಗವಿದ್ದರೆ ಕುಜದೋಷವಿಲ್ಲ.
ರವಿ, ಚಂದ್ರ, ಕುಜ ಉಚ್ಚರಾಶಿಗಳಲ್ಲಿದ್ದರೆ ಹಾಗೂ ಕುಜನು ಶನಿರಾಹು, ರವಿಯ ಯುತಿಯಲ್ಲಿದ್ದರೂ ಕುಜದೋಷವಿಲ್ಲ.
ದೋಷ ಪರಿಹಾರ
* ಶುದ್ಧ ಪಾತ್ರೆಯಲ್ಲಿ ನೀರನ್ನು ಕಾಯಿಸಿ ಪೌರ್ಣಮಿಯ ಪ್ರಾತಃಕಾಲ 8-15 ರಿಂದ 8-45 ನಿಮಿಷಗಳ ಕಾಲಮಾನದಲ್ಲಿ ಸೂರ್ಯನ ಕಿರಣಗಳು ಬೀಳುವಂತೆ ಹೊರಗಿನ ವರಾಂಡದಲ್ಲಿ ಇಟ್ಟು ತಣ್ಣಗಾದ ನಂತರ ಶುದ್ಧ ಪಾತ್ರೆಯಲ್ಲಿ ಶೇಖರಿಸಿ 9 ದಿನಗಳ ಕಾಲ ದಿನಕ್ಕೆ ಮೂರು ಹೊತ್ತು ಒಂದು ಗ್ಲಾಸ್ ನೀರನ್ನು ಸೇವಿಸಿ ಒಂದು
ಬಾಳೆಹಣ್ಣು ತಿನ್ನುವುದು. ಅದೇ ನೀರಿನಿಂದ ಸಂಜ್ಞಾ ಸಮಯದಲ್ಲಿ ನಿವಾಸದಲ್ಲಿ ಬೇವಿನ ಸೊಪ್ಪಿನಿಂದ ಪ್ರೋಕ್ಷ ಮಾಡುವುದು.
* ಮನೆಯ ಯಜಮಾನ ಮತ್ತು ನೂತನ ದಂಪತಿಯು ನಿವಾಸದಲ್ಲಿ 3 ಪೌರ್ಣಮಿಗಳಂದು ಮಲಗಬಾರದು.ಈ ಪರ್ವಕಾಲದಲ್ಲಿ ಮದ್ಯಪಾನ ಮತ್ತು ಮಾಂಸಾಹಾರ ಸೇವಿಸಬಾರದು. ನಿವಾಸದಲ್ಲಿ ಹಬ್ಬದ ವಾತಾವರಣ ಇರಬೇಕು.
* ಪ್ರಾತಃಕಾಲ ನಿವಾಸದ ಪ್ರಧಾನ ಬಾಗಿಲನ್ನು ಕೆಂಪು ಗುಲಾಬಿ ಹೂವುಗಳಿಂದ ಪೂಜಿಸಿ; ನಂತರ ಹಲವು ಹೂವುಗಳ ದಳಗಳನ್ನು ಬಿಡಿಸಿ ತಮ್ಮ ಶುದ್ಧ ಕೈಯಲ್ಲಿ ಇಟ್ಟು ಸೂರ್ಯನ ಕಿರಣಗಳನ್ನು ಬೀಳಿಸಿ ನಂತರ ತಮ್ಮ ದೇವರ ಮೇಲೆ ಹಾಕುವುದು.
4) ಮೂರು ಶನಿವಾರ ಅಥವಾ ಮಂಗಳವಾರದಂದು ಪ್ರಾತಃಕಾಲ 7.45ಕ್ಕೆ ದೇವರ ಕೋಣೆಯಲ್ಲಿ ಎರಡು ದೀಪಗಳನ್ನು ಬೆಳಗಿಸಿ ನಂತರ ಸೂರ್ಯನಿಗೆ ನಮಸ್ಕರಿ ಸೂರ್ಯನು ಕೆಂಪು ವರ್ಣಕ್ಕೆ ಬರುವವರೆಗೆ ನೋಡಿ ನಂತರ ದೇವರ ಕೋಣೆಯಲ್ಲಿರುವ ದೀಪಗಳ ಪ್ರಜ್ವಲನಾ ಕಿರಣಗಳನ್ನು ನೋಡಿದಾಗ ಕಂಡರಿಯದ ಕೆಂಪು ವರ್ಣಕ್ಕೆ ತಿರುಗುತ್ತವೆ. ಹಲವು ಸಲ ಪ್ರಯತ್ನಿಸುವುದು ನಂತರ ಹತ್ತಿರದಲ್ಲಿರುವ ನವಗ್ರಹಗಳಿಗೆ ಪೂಜೆ ಸಲ್ಲಿಸಿ ಅಂದು ಸಂಜೆ ಉಪವಾಸ ವ್ರತ ಆಚರಿಸಿ, ವಸ್ತ್ರದಾನ ಮಾಡುವುದು.
- ವಿಶ್ವನಾಥ್.ಎಸ್ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com