ಸಮ್ಮೇಳನದ ಆಹ್ವಾನ ಪತ್ರಿಕೆ(ಸಾಂದರ್ಭಿಕ ಚಿತ್ರ)
ಸಮ್ಮೇಳನದ ಆಹ್ವಾನ ಪತ್ರಿಕೆ(ಸಾಂದರ್ಭಿಕ ಚಿತ್ರ)

'ಪುರಾಣಗಳ' ಪರೀಕ್ಷಾಕಾಲ: ಸತ್‍ಸಂದೇಶದ ಬಗ್ಗೆ ಇಸ್ಕಾನ್ ಸಮ್ಮೇಳನ

'ಮಹಾಪುರಾಣ'ಗಳ ಸಂದೇಶದ ಬಗ್ಗೆ ಸಮ್ಮೇಳನ ಭಾರತಾದ್ಯಂತದ 70ಕ್ಕೂ ಹೆಚ್ಚು ಸಂಖ್ಯೆಯ ಪ್ರಸಿದ್ಧ ವಿದ್ವಾಂಸರು ಮಹಾಪುರಾಣಗಳ ಅನುಸಂಧಾನ ನಡೆಸುವ ಅಪೂರ್ವ ಕಾರ್ಯಕ್ರಮ...

ಹಿಂದೂ ಭಾರತದ ದೇವರುಗಳಲ್ಲಿ ಬ್ರಹ್ಮ., ವಿಷ್ಣು, ಶಿವ, ಗಣಪತಿ, ಸರಸ್ವತಿ, ಲಕ್ಷ್ಮಿ, ದುರ್ಗೆ ಇವರೆಲ್ಲ ಸೃಷ್ಟಿ, ಪಾಲನೆ, ಮೋಕ್ಷ, ವಿಘ್ನ ನಿವಾರಣೆ, ಜ್ಞಾನವರ್ಧನೆ, ಸಂಪದಭಿವೃದ್ಧಿ, ಅಸುರ ಸಂಹಾರ - ಇವುಗಳ ಕರ್ತಾರರೆಂದು ವೈದಿಕ ಪುರಾಣ ಪ್ರಸಿದ್ಧರು.

‘ಮೃತ್ಯು ಲೋಕವೆಂಬುದು ಕರ್ತಾರನ ಕಮ್ಮಟವಯ್ಯ’ ಎನ್ನುತ್ತದೆ, ವಚನ ಸಾಹಿತ್ಯದ ಸುಪರಿಚಿತ ಉಕ್ತಿ. ಪುರಾಣಗಳ ಋಷಿಗಳು, ಮಾತ್ರವಲ್ಲ, ಮಹಾ ಅಸುರರು ಕೂಡ ಕಠಿಣ ತಪಸ್ಸು ಮಾಡಿ ಕಣ್ಮುಂದೆ ಕರೆಸಿಕೊಂಡು ವರಗಳನ್ನು ಬೇಡಿ ತಥಾಸ್ತು ಅನ್ನಿಸಿಕೊಂಡು ಅನುಗ್ರಹಿತರಾಗುತ್ತಿದ್ದುದು ಬಹುತೇಕ ಶಿವ ಅಥವಾ ವಿಷ್ಣುವಿನಿಂದ.

ಹನುಮಂತ, ಸುಬ್ರಹ್ಮಣ್ಯ, ನಾಗ, ಒಟ್ಟಾಗಿ ನವಗ್ರಹರು -ವಿಶೇಷವಾಗಿ ಶನಿ ಮತ್ತು ವಿರಳವಾಗಿ ಸೂರ್ಯ - ಇವರೆಲ್ಲ ಕೂಡ ಮಂದಿರಗಳಲ್ಲಿ ಪೂಜೆಗೊಳ್ಳುವ ದೇವರುಗಳು.

ಶ್ರೀರಾಮ, ವೆಂಕಟೇಶ್ವರ, ಶ್ರೀಕೃಷ್ಣ, ವಿಶ್ವನಾಥ, ಜಗನ್ನಾಥ, ಮೀನಾಕ್ಷಿ, ಕಾಮಾಕ್ಷಿ, ರಾಮೇಶ್ವರ,  ಮಂಜುನಾಥೇಶ್ವರ, ಶ್ರೀಕಂಠೇಶ್ವರ, ಮೂಕಾಂಬಿಕಾ, ರಂಗನಾಥ, ಅನಂತ ಪದ್ಮನಾಭ, ಶಾರದಾಂಬೆ ಇತ್ಯಾದಿ ದೇವರುಗಳ ಪ್ರಸಿದ್ಧ ಕ್ಷೇತ್ರಗಳು ದೇಶದ ಮಹಿಮಾನ್ವಿತ ಮಹಾ ಯಾತ್ರಾ ಕೇಂದ್ರಗಳಾಗಿವೆ.

‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಅಂದರೆ ‘ಒಂದೇ ಪರಮತತ್ವದ ನಾನಾ ರೀತಿ ವರ್ಣನೆ’ ಎನ್ನುವ ‘ಜಗದೇಕ ದೇವ’ ಸಿದ್ಧಾಂತ ವೇದೋಕ್ತವಾಗಿದ್ದರೂ ಅದಕ್ಕೆ ಅನುಸಾರವಾಗಿ ಏಕದೇವ ಉಪಾಸನೆಯ ಬದ್ಧತೆ ಇಲ್ಲದ ಕಾರಣಕ್ಕೆ ಹಿಂದೂ ಭಾರತದಲ್ಲಿ ಇಷ್ಟ ದೇವತಾ ಪೂಜೆಯ ಮೂಲಭೂತ ಸ್ವಾತಂತ್ರ್ಯ ಬೇರೂರಿದೆ. ನಾಸ್ತಿಕತೆಯ ಸ್ವಾತಂತ್ರ್ಯವೂ ಇದೆ. ‘ಲೋಕಾಃ ಸಮಸ್ತಾ ಸುಖಿನೋ ಭವಂತು’ ಎನ್ನುವ ವಿಶ್ವವಿಶಾಲ ದೃಷ್ಟಿಯ ಧರ್ಮದಲ್ಲಿ ಇಷ್ಟದೇವ ಪೂಜೆಯ ಸ್ವಾತಂತ್ರ್ಯವಿದೆ; ಎಲ್ಲರಿಗೂ ಪೂಜೆಯ ಮೂಲಭೂತ ಹಕ್ಕು ಇಲ್ಲದಿರುವ ವಿಪರ್ಯಾಸವೂ ಗಂಭೀರವಾಗಿದೆ. ಇಲ್ಲಿ ವಿಧಿ, ನಿಷೇಧ, ಆಚರಣೆಗಳಿಗೆ ಪುರಾಣಗಳದೇ ಮಾರ್ಗದರ್ಶನ. ತಾವೇ ವೇದಾಧ್ಯಯನ ಮಾಡಿ ತತ್ವದರ್ಶನ ದೊರಕಿಸಿಕೊಳ್ಳಲು ಶಕ್ತಿಯಿಲ್ಲದ ಜನ ಸಾಮಾನ್ಯರಿಗಾಗಿ ಋಷಿಗಳು ವೇದೋಪನಿಷತ್ತುಗಳ ಸಾರವನ್ನು ಪುರಾಣ ಕಥನಗಳಾಗಿಸಿದರೆಂದು ಪುರಾಣಜ್ಞರ ಅಭಿಮತ.

ಪುರಾಣಜ್ಞರ ಪ್ರಕಾರ ವಿಷ್ಣು, ಮತ್ಸ್ಯ, ವಾಯು ಮತ್ತಿತರ ಹೆಸರಿನ ಪುರಾಣಗಳಲ್ಲಿ ವ್ಯಕ್ತವಾಗಿರುವಂತೆ ಪುರಾಣದ ಪ್ರಮುಖ ಲಕ್ಷಣಗಳೆಂದರೆ ಸೃಷ್ಟಿ-ಮರುಸೃಷ್ಟಿಗಳ ಕಥನ; ದೇವ ದೇವತೆ - ಋಷಿ ಮುನಿಗಳ ಜನ್ಮ -ಕರ್ಮ ವೃತ್ತಾಂತ ; ಯುಗ - ಮಹಾಯುಗ - ಮನ್ವಂತರ ಕಾಲ ಪರಿವರ್ತನೆಯ ಪರಿಕಲ್ಪನೆ ;  ಮತ್ತು ಸೂರ್ಯ-ಚಂದ್ರ ವಂಶಗಳ ಚಕ್ರಾಧಿಪತ್ಯಗಳ ಇತಿವೃತ್ತ.

ಕತೆಗೆ ಕಾಲಿಲ್ಲ ಎನ್ನುವ ಗಾದೆಯೇ ಇದೆ. ಪಂಚತಂತ್ರದಂಥ ಪ್ರಾಣಿಗಳ, ಪಕ್ಷಿಗಳ ಕಥೆಗಳು, ನೀತಿಕತೆಗಳು, ದೈವಭೂತಗಳ ಪವಾಡಗಳ, ದುಷ್ಟ ನಿಗ್ರಹ - ಶಿಷ್ಟ ಅನುಗ್ರಹದ ಕತೆಗಳು ಇವೆಲ್ಲ ಕಲ್ಪನಾ ಪ್ರಧಾನವಾದವುಗಳು; ಚಾರಿತ್ರಿಕತೆ ಅಥವಾ ವೈಜ್ಞಾನಿಕತೆಯ ಹಂಗಿಲ್ಲ. ಪುರಾಣ ಕಥಾ ಲೋಕದಲ್ಲಂತೂ ಗಿರಿ, ಶಿಖರ, ನದಿ, ಮೀನು, ಮೊಸಳೆ, ಹಂದಿ, ಹಾವು, ಆನೆ, ಕೋತಿಗಳು ಕೂಡ ವ್ಯಕ್ತಿತ್ವವುಳ್ಳ ಪಾತ್ರಗಳೇ. ಈಗಿನ ವಿಮರ್ಶಕ ದೃಷ್ಟಿಯಲ್ಲಿ ಪುರಾಣ ಕಥೆಗಳು ಹೇಗೆ ನೋಡಿದರೂ ಅಸಂಗತ ಕತೆಗಳೇ. ನಮಗೆ ಅಸಂಬದ್ಧ, ಅತಾರ್ಕಿಕ ಅನೈತಿಕ ಎನಿಸುವ ಸಂಗತಿಗಳೂ ಕಡಿಮೆಯೇನಿಲ್ಲ.

ಮಹಾಕವಿ - ನಾಟಕಕಾರ ಕಾಳಿದಾಸನ ಒಂದು ಪ್ರಸಿದ್ಧ ಉಕ್ತಿ ಉಲ್ಟಾ ಅನ್ವಯವಾಗುವ ಸಂದರ್ಭದಲ್ಲಿದ್ದೇವೆ. ‘ಪುರಾಣ ಮಿತ್ಯೇವ ನ ಸಾಧು ಸರ್ವಂ’ ಅಂದರೆ ‘ಪುರಾಣದ್ದೆಲ್ಲ (ಹಿಂದಿನದ್ದು / ಪುರಾತನದ್ದು) ಸರಿಯಾದದ್ದೆಂದಲ್ಲ’ ಎನ್ನುವುದು ‘ಹೊಸತು’ಗಳ ಪರವಾಗಿ ಕಾಳಿದಾಸ ಹೇಳಿದ್ದ ಉಕ್ತಿ. ಈಗ ಮುಂದುವರಿದು ‘ಪುರಾಣಮಿತ್ಯೇವ ಅಸಾಧು ಸರ್ವಂ’ ಅಂದರೆ ಪುರಾಣದ್ದೆಲ್ಲವನ್ನೂ ತ್ಯಜಿಸುವ ಟ್ರೆಂಡ್ ಬಂದಿದೆ.

ಎಲ್ಲವನ್ನೂ ಅವುಗಳ ಪ್ರಯೋಜನವೇನೆಂದು ಪ್ರಶ್ನಿಸುವ ಈ ಕಾಲದ ಮನೋಧರ್ಮದವರು ಪುರಾಣಗಳ ಕುರಿತ ಧಾರ್ಮಿಕ ನಂಬಿಕೆ - ಶ್ರದ್ಧೆ ಹೊರತು ಬೇರೆ ಪ್ರಸ್ತುತತೆಯನ್ನು ತಿಳಿಯದೆ ಒಪ್ಪರು.

ಇದೇ ಹಿಂದೂ ಭಾರತದ ಪ್ರಾಚೀನ ಯೋಗಜ್ಞಾನ ಈಗ ಅಂಗೀಕೃತ ಜಾಗತಿಕ ವಿದ್ಯೆಯಾಗಿದೆ. ವೇದ ಉಪನಿಷತ್ತುಗಳಿಗೆ ಜಾಗತಿಕ ವಿದ್ವಾಂಸರ ಮನ್ನಣೆ ಶತಮಾನಗಳ ಹಿಂದೆಯೇ  ದೊರಕಿತ್ತು. ಆದರೂ ಆಂಗ್ಲ ಪದ್ಧತಿಯ ಶಿಕ್ಷಣ ಪಡೆದ ಮೊದಲ ತಲೆಮಾರುಗಳ ಭಾರತೀಯರಿಗೆ ಬಹುತೇಕ ವಿದೇಶಿ ವಿದ್ವಾಂಸರ ಓದಿನ ಮೂಲಕವೇ ಪ್ರಾಚೀನ ಭಾರತದ ವಿದ್ವತ್ತಿನ ಪರಿಚಯವಾಯಿತೆನ್ನುವುದು ಹಿಂದೂ ವೈದಿಕ ಭಾರತ ಮರೆಯಲಾಗದ ಸತ್ಯ.

ಋಷಿ ಪರಂಪರೆಯು ‘ಗೊಡ್ಡು ಪುರಾಣ’, ‘ಮೂಢನಂಬಿಕೆಗಳ ಮೂಟೆ’ ಎನಿಸಿ ಮೂಲೆ ಪಾಲಾಗಿರುವ ಈಗಿನ ಸಂದರ್ಭದಲ್ಲೂ ಈ ಕಾಲಧರ್ಮಕ್ಕೆ ಸಂಬಂಧಗೊಳ್ಳಬಹುದಾದಂಥ ಕಾಲಾತೀತ ಸಂದೇಶಗಳು ಪುರಾಣ ಕತೆಗಳಲ್ಲಿ ತುಂಬಿಕೊಂಡಿವೆ ಎಂದು ತಿಳಿದವರಿದ್ದಾರೆ. ಅವರಿಂದ ಈಗ ಆಗಬೇಕಾದ ಮಹಾಕಾರ್ಯವೆಂದರೆ  ಪುರಾಣಗಳ ಮಹಿಮೆಯ ವೈಭವೀಕರಣ ಅಥವಾ ಆರಾಧನೆಯ ಸಂಭ್ರಮಕ್ಕಿಂತ ಪ್ರತಿಯೊಂದು ಮಹಾಪುರಾಣದಲ್ಲಿರುವ ಕಾಲಾತೀತ ಸಂದೇಶ ಮತ್ತು ಲೌಕಿಕ-ವ್ಯಾವಹಾರಿಕ ಜ್ಞಾನಾಂಶವನ್ನು ಸರ್ವ ಜನರಿಗೂ ತಿಳಿಯಪಡಿಸುವುದು.

ಪ್ರಾಚೀನ ಮಹಾಗ್ರಂಥಗಳ ಜ್ಞಾನ ಪ್ರಸಾರ ಭಾರತೀಯ ವಿದ್ಯಾಭವನದ ಧ್ಯೇಯೋದ್ಧೇಶಗಳಲ್ಲೊಂದು. ಅದಕ್ಕನುಗುಣವಾಗಿ ಭಾರತೀಯ ವಿದ್ಯಾಭವನದ ಬೆಂಗಳೂರು ಕೇಂದ್ರ ಮತ್ತು ಇಸ್ಕಾನ್ ಬೆಂಗಳೂರು ಸಹಯೋಗದೊಂದಿಗೆ ಇದೇ 23ರಿಂದ 27ರ ತನಕ ಬೆಂಗಳೂರು ಹರೇಕೃಷ್ಣ ಗಿರಿಯ ಮೇಲಿರುವ ಇಸ್ಕಾನ್ ಬೆಂಗಳೂರಿನ ಮಲ್ಟಿವಿಶನ್ ಥಿಯೇಟರ್‍ನಲ್ಲಿ ದಿನವಿಡೀ ಮಹಾಪುರಾಣಗಳ ಸಂದೇಶ ರಾಷ್ಟ್ರೀಯ ಸಮಾವೇಶ ನಡೆಯುತ್ತದೆ.

ಇದು ಭಾರತಾದ್ಯಂತದ 70ಕ್ಕೂ ಹೆಚ್ಚು ಸಂಖ್ಯೆಯ ಪ್ರಸಿದ್ಧ ವಿದ್ವಾಂಸರು ಮಹಾಪುರಾಣಗಳ ಅನುಸಂಧಾನ ನಡೆಸುವ ಅಪೂರ್ವ ಕಾರ್ಯಕ್ರಮ ಎನ್ನಲಾಗಿದೆ. ನೀವು ಎಲ್ಲೇ ಇದ್ದರೂ ಕಲಾಪ ವೀಕ್ಷಿಸಲು ಸಾಧ್ಯವಾಗುವಂತೆ ಸಮಾವೇಶದ ಎಲ್ಲಾ ಅಧಿವೇಶನಗಳ ನೇರ ವೆಬ್ ಕಾಸ್ಟ್ ಪ್ರಸಾರ ವ್ಯವಸ್ಥೆ ಮಾಡಲಾಗಿದೆಯಂತೆ.                


(www.intlarts.org)
ಪುರಾಣಗಳ ಸತ್‍ಸಂದೇಶವನ್ನು ಪ್ರಸರಿಸುವ  ಈ ಸಮಾವೇಶದ ಉದ್ದೇಶ ಸಾರ್ಥಕಗೊಳ್ಳಲೆಂದು ಹಾರೈಕೆ.

ಶ್ರೀಜಯ ಮೊಗೇರಿ

Related Stories

No stories found.

Advertisement

X
Kannada Prabha
www.kannadaprabha.com