ಯಾವ ಬೆರಳಿಗೆ ಯಾವ ಹರಳು ಧರಿಸಿದರೆ ಫಲ ಪ್ರಾಪ್ತಿ!

ರತ್ನಗಳ ಧಾರಣೆಯಿಂದ ನಮಗೆ ಶಾಂತಿ, ಆರೋಗ್ಯ, ಆಯುಷ್ಯ ಅಭಿವೃದ್ದಿಯನ್ನು ಖಂಡಿತವಾಗಿ ಪಡೆಯಬಹುದು...
ನವರತ್ನ
ನವರತ್ನ

ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ರತ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಭಾರತದ ಹಿಂದೂ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆಯೋ ಅಷ್ಟೇ ಪ್ರಾಮುಖ್ಯತೆಯನ್ನು ರತ್ನಗಳಿಗೆ ನೀಡಲಾಗಿದೆ. ರತ್ನಗಳಲ್ಲಿ ಮೂರು ಶ್ರೇಣಿಗಳಿವೆ. 1. ಪ್ರಾಣಿ ಜನ್ಯ ರತ್ನ, 2. ವನಸ್ಪತಿ ರತ್ನ, 3. ಖನಿಜ ಜನ್ಯ ರತ್ನ.

ಸಾಮಾನ್ಯವಾಗಿ ಇವುಗಳು ಮಾನವ ಸಮೂಹದ ಮೇಲೆ ಬಹಳ ಉಪಯುಕ್ತ ಪರಿಣಾಮ ಬೀರುತ್ತದೆ. ರತ್ನಗಳ ಧಾರಣೆಯಿಂದ ನಮಗೆ ಶಾಂತಿ, ಆರೋಗ್ಯ, ಆಯುಷ್ಯ ಅಭಿವೃದ್ದಿಯನ್ನು ಖಂಡಿತವಾಗಿ ಪಡೆಯಬಹುದು.

ಜಗತ್ತಿನ ಎಲ್ಲಾ ಜೀವರಾಶಿಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಸೃಷ್ಟಿಯ ನವಗ್ರಹಗಳು ಮಾನವನನ್ನು ನಾನಾ ವಿಧವಾಗಿ ಕಾಡಿ ಆಯಾಯಾ ವ್ಯಕ್ತಿಯ ಕರ್ಮಾನುಸಾರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಸಮಸ್ಯೆಗಳು ನಾನಾ ಬಗೆಯದಾಗಿರುತ್ತದೆ. ರೋಗರುಜಿನ, ವಿದ್ಯಾಭ್ಯಾಸ ಕಡಿತ, ವ್ಯಾಪಾರ ನಷ್ಟ, ಮದುವೆ ಸಮಸ್ಯೆ ಸಂತಾನ ಹೀನತೆ ಧನನಷ್ಟ ಸಾಲ ನೆಮ್ಮದಿ ಹಾಳು ಇದಕ್ಕೆ ಪರಹಾರವೇನು?

ಪ್ರಾಚೀನ ಕಾಲದಿಂದ ರಾಜ ಮಹಾರಾಜರುಗಳು ತಮ್ಮಲ್ಲಿ ಅಪೂರ್ವ ವಾದ ರತ್ನಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಇವರುಗಳು ಧರಿಸುತ್ತಿದ್ದ ಕಿರೀಟಗಳು, ಆಭರಣಗಳು, ಹಾರಗಳು, ಸಿಂಹಾಸನಗಳು ಮೈ ಮೇಲಿನ ವಸ್ತ್ರಗಳಲ್ಲಿ ಎಲ್ಲಾ ಕಡೆಗಳಲ್ಲಿ ರತ್ನಗಳಿಂದ ಅಲಂಕರಿಸಿಕೊಳ್ಳುತ್ತಿದ್ದರು. ಹಾಗೆಯೇ ಇಂದು ಪ್ರಸಿದ್ಧ ದೇವರುಗಳಿಗೆ ರತ್ನ ಖಚಿತ ಕಿರೀಟ ಮತ್ತು ಅತ್ಯಮೂಲ್ಯ ಬೆಲೆಬಾಳುವ ಅಪರೂಪದ ರತ್ನಗಳನ್ನು ಅಲಂಕಾರಕ್ಕಾಗಿ ತೋಡಿಸುವುದನ್ನು ನೋಡಿದ್ದೇವೆ. ವೇದ ಉಪನಿಷತ್ತು, ಪುರಾಣ, ಭಾಗವತ ಹೀಗೆ ಪ್ರಾಚೀನ ಗ್ರಂಥಗಳಲ್ಲಿ ರತ್ನಗಳ ಉಲ್ಲೇಖವಿದೆ.

ಭೂಗರ್ಭದಲ್ಲಿ ದೊರೆಯುವ ಮಾಣಿಕ್ಯ, ಪುಷ್ಯರಾಗ, ಗೋಮೇದಿಕಾ, ನೀಲ, ಕ್ಯಾಟ್ಸ್ ಐ, ವಜ್ರ, ಪಚ್ಚೆ ಹಾಗೆ ಸಮುದ್ರ ಗರ್ಭದಲ್ಲಿ ದೊರೆಯುವ ಮುತ್ತು, ಹವಳ ರತ್ನಗಳಿಂದ ಹೊರಡುವ ಕಂಪನ ತಮ್ಮದೇ ಆದ ತರಂಗಾತರಂಗಗಳನ್ನು ಹೊಂದಿರುತ್ತವೆ. ಇವುಗಳನ್ನು ಮನುಷ್ಯನು ತನ್ನ ಶರೀರಕ್ಕೆ ಧರಿಸಿದಾಗ ರತ್ನಗಳಿಂದ ಹೊಮ್ಮುವ ಕಿರಣಗಳು ಚರ್ಮ - ರಂಧ್ರಗಳ ಮೂಲಕ ರಕ್ತವನ್ನು ಸೇರಿ ಮೈ ಮನಸ್ಸುಗಳನ್ನು ಪ್ರಚೋದಿಸುತ್ತದೆ. ನಮ್ಮ ಶರೀರ ಕಂಪನ ತರಂಗಾತರಂಗಳಿಗೆ ಹೊಂದಿಕೊಳ್ಳುವ ರತ್ನಗಳನ್ನು ಧರಿಸಿದರೆ ಸರಿಯಾದ ದಿಕ್ಕಿನಲ್ಲಿ ಯೋಚಿಸುವ ಮತ್ತು ಕೆಲಸ ಮಾಡುವ ಬುದ್ಧಿ ಜಾಗೃತಗೊಳ್ಳುತ್ತದೆ.

ನಮ್ಮ ಜನ್ಮ ಲಗ್ನ ಹಾಗೂ ರಾಶಿಯನ್ನು ಸರಿಯಾಗಿ ತಿಳಿದು ಅದರಂತೆ ಧರಿಸಿದರೆ ಖಂಡಿತವಾಗಿಯೂ ಇದರ ಉಪಯೋಗವನ್ನು ಪಡೆಯಬಹುದು. ಇನ್ನೊಂದು ಮುಖ್ಯ ವಿಷಯವೇನೆಂದರೆ, ಯಾವ ರತ್ನವನ್ನು ಯಾವ ಬೆರಳಿಗೆ ಧರಿಸಬೇಕೆಂಬುದು ಸಹ ಮುಖ್ಯ, ಅದೇ ರೀತಿ ಧಾತುಗಳು(ಲೋಹ) ಆ ರತ್ನಕ್ಕೆ ಸಂಬಂಧಿಸಿದ ಗ್ರಹಗಳ ಮಂತ್ರವನ್ನು ಪ್ರತಿದಿನ ಕನಿಷ್ಠ 9 ಬಾರಿಯಾದರೂ ಪಠಿಸುವುದರಿಂದ ಇನ್ನೂ ಹೆಚ್ಚಿನ ಫಲ ಪಡೆಯಬಹುದು.

ಯಾವ ಬೆರಳಿಗೆ ಯಾವ ರತ್ನ ಧರಿಸಬೇಕು


* ಮೇಷ ರಾಶಿಗೆ ಕುಜ ಅಧಿಪತಿಯಾಗಿದ್ದು, ಈ ರಾಶಿಯವರು ಹವಳ ಪುಷ್ಯರಾಗ ಧರಿಸಬೇಕು. ತಾಮ್ರ ಅಥವಾ ಚಿನ್ನದಲ್ಲಿ ತೋರು ಅಥವಾ ಉಂಗುರ ಬೆರಳಿಗೆ ಧರಿಸಬೇಕು.

* ವೃಷಭ ರಾಶಿ ಅಧಿಪತಿ ಶುಕ್ರ. ಇವರು ವಜ್ರ ನೀಲವನ್ನು ಚಿನ್ನ, ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ಮಧ್ಯ ಅಥವಾ ಕಿರುಬೆರಳಿಗೆ ಧರಿಸಿಕೊಳ್ಳಬೇಕು.

* ಮಿಥುನ ರಾಶಿಗೆ ಅಧಿಪತಿ ಬುಧ. ಇವರು ಪಚ್ಚೆ(ತಿಳಿಹಳದಿ)ನೀಲವನ್ನು ಕಂಚು, ಬಂಗಾರ ಅಥವಾ ಬೆಳ್ಳಿಯಲ್ಲಿ ಕಿರು ಬೆರಳಿಗೆ ಧರಿಸಬೇಕು.

* ಕಟಕ ರಾಶಿಗೆ ಅಧಿಪತಿ ಚಂದ್ರ. ಇವರು ಮುತ್ತು ಅಥವಾ ಪುಷ್ಯರಾಗವನ್ನು ಬೆಳ್ಳಿ, ಚಿನ್ನದಲ್ಲಿ ತೋರು ಅಥವಾ ಉಂಗುರ ಬೆರಳಿಗೆ ಧರಿಸಿಕೊಳ್ಳಬೇಕು.

* ಸಿಂಹ ರಾಶಿಗೆ ಅಧಿಪತಿ ರವಿ. ಇವರು ಮಾಣಿಕ್ಯ, ಹವಳ ಅಥವಾ ಪುಷ್ಪರಾಗವನ್ನು ತಾಮ್ಮ, ಬೆಳ್ಳಿ ಅಥವಾ ಬಂಗಾರದಲ್ಲಿ ಉಂಗುರ ಬೆರಳಿಗೆ ಧರಿಸಿಕೊಳ್ಳಬೇಕು.

* ಕನ್ಯಾ ರಾಶಿಗೆ ಅಧಿಪತಿ ಬುಧ. ಇವರು ಪಚ್ಚೆ, ವಜ್ರವನ್ನು ಬಂಗಾರ, ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ಕಿರು ಬೆರಳಿಗೆ ಧರಿಸಿಕೊಳ್ಳಬೇಕು.

* ತುಲಾ ರಾಶಿಗೆ ಅಧಿಪತಿ ಶುಕ್ರ. ಇವರು ವಜ್ರ ಪಚ್ಚೆಯನ್ನು ಬಂಗಾರ, ಕಂಚು ಅಥವಾ ಬೆಳ್ಳಿಯಲ್ಲಿ ಮಧ್ಯ ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು.

* ವೃಶ್ಚಿಕ ರಾಶಿಗೆ ಅಧಿಪತಿ ಕುಜ. ಇವರು ಹವಳ ಅಥವಾ ಮಾಣಿಕ್ಯವನ್ನು ತಾಮ್ರ ಅಥವಾ ಬಂಗಾರದಲ್ಲಿ ಉಂಗುರ ಬೆರಳಿಗೆ ಧರಿಸಬೇಕು.

* ಧನು ರಾಶಿಗೆ ಅಧಿಪತಿ ಗುರು. ಪುಷ್ಯರಾಗ, ಮಾಣಿಕ್ಯ ಅಥವಾ ಹವಳವನ್ನು ಇವರು ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂನಲ್ಲಿ ತೋರುಬೆರಳಿಗೆ ಧರಿಸಿಕೊಳ್ಳಬೇಕು.

* ಮಕರ ರಾಶಿಗೆ ಅಧಿಪತಿ ಶನಿ. ಇವರು ನೀಲ ಅಥವಾ ಪಚ್ಚೆಯನ್ನು ಬೆಳ್ಳಿಯಲ್ಲಿ ಮಧ್ಯದ ಬೆರಳಿಗೆ ಧರಿಸಬೇಕು.

* ಕುಂಭ ರಾಶಿಗೆ ಅಧಿಪತಿ ಶನಿ. ಇವರು ನೀಲ, ವಜ್ರ ಅಥವಾ ಪಚ್ಚೆಯನ್ನು ಬೆಳ್ಳಿ, ಕಬ್ಬಿಣ ಅಥವಾ ಬಂಗಾರದಲ್ಲಿ ಮಧ್ಯದ ಬೆರಳಿಗೆ ಧರಿಸಿಕೊಳ್ಳಬೇಕು.

* ಮೀನ ರಾಶಿಯವರ ಅಧಿಪತಿ ಗುರು. ಪುಷ್ಯರಾಗ, ಹವಳ ಅಥವಾ ಮಾಣಿಕ್ಯವನ್ನು ಬಂಗಾರ ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ತೋರು ಬೆರಳು ಧರಿಸಿಕೊಳ್ಳಬೇಕು.

- ವಿಶ್ವನಾಥ್. ಎಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com