ಶಕ್ತಿ ಕಳೆದುಕೊಂಡಿತ್ತು ಮಧುರೈ ಮೀನಾಕ್ಷಿ ದೇವಿಯ ವಿಗ್ರಹ!: ಅಲ್ಲಿ ಮತ್ತೆ ಪ್ರಾಣ ಪ್ರತಿಷ್ಠಾಪನೆ ಮಾಡಿದ ಯತಿಗಳು ಯಾರು ಗೊತ್ತಾ?

ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಮೀನಾಕ್ಷಿ ಅಮ್ಮನವರ ಶಕ್ತಿಯನ್ನು ಪುನರ್ ಸ್ಥಾಪಿಸಿದ ಇತಿಹಾಸವಿದೆ. ಆ ಘಟನೆಯಲ್ಲೊಂದು ಅಚ್ಚರಿ ಇದೆ.
ಮಧುರೈ ಮೀನಾಕ್ಷಿ (ಸಂಗ್ರಹ ಚಿತ್ರ)
ಮಧುರೈ ಮೀನಾಕ್ಷಿ (ಸಂಗ್ರಹ ಚಿತ್ರ)

ಮಧುರೈ ಮೀನಾಕ್ಷಿ ದೇವಾಲಯ, ಭಾರತದ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದು. ಮೀನಾಕ್ಷಿ ದೇವಾಲ ಎಂದೋಡೆ ಮನಸ್ಸು ಪುರಾಣ- ಇತಿಹಾಸಗಳತ್ತ ಧಾವಿಸುತ್ತದೆ. ಶಿವನು ಪಾರ್ವತಿಯನ್ನು ವಿವಾಹವಾದನಗರ ಮಧುರೈ ಎಂಬ ನಂಬಿಕೆ ಇದೆ. ಇದಕ್ಕೆ ಪೂರಕವಾಗಿ ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನವಿದೆ.

ಮೀನಾಕ್ಷಿ ದೇವಾಲಯಕ್ಕೆ ಅತಿ ಪುರಾತನ ಇತಿಹಾಸವಿದ್ದರೂ ಅದ್ಧೂರಿಯಾದ ದೇವಾಲಯವನ್ನು ನಿರ್ಮಿಸಿದ್ದು ಕ್ರಿ.ಶ ಶಕ 1600 ರಲ್ಲಿ ಹಾಗು ನಾವು ಇಂದು ನೋಡುತ್ತಿರುವ ದೇವಾಲಯಕ್ಕೆ ಈ ರೂಪ ನೀಡಿದ್ದು ನಾಯಕ್ ರಾಜವಂಶದವರು.

ಆದಿ ಶಂಕರರು ಶ್ರೀಚಕ್ರದ ಬೀಜಾಕ್ಷರಗಳನ್ನು ಬದಲಿಸಿ, ಉಗ್ರವಾಗಿದ್ದ ಶ್ರೀಚಕ್ರದ ಅಧಿದೇವತೆಯನ್ನು ಶಾಂತಗೊಳಿಸಿದ ತಾಣ ಎಂಬುದು ಮೀನಾಕ್ಷಿ ದೇವಾಲಯ ಎಂದರೆ ಮನಸ್ಸಿಗೆ ಬರುವ ಮತ್ತೊಂದು ವಿಷಯ. ಉಗ್ರ ಶಕ್ತಿಯ ಶ್ರೀಚಕ್ರಗಳಿದ್ದ ದೇವಾಲಯಗಳ ಪೈಕಿ ಅತಿ ಉಗ್ರ ಶ್ರೀಚಕ್ರ ಇದ್ದದ್ದು ಮಧುರೆಯ ಮೀನಾಕ್ಷಿ ದೇವಾಲಯದಲ್ಲಿ. ಶ್ರೀಚಕ್ರವನ್ನು ಸಾತ್ವಿಕ ಸ್ವರೂಪವಾಗಿ ಪರಿಷ್ಕರಿಸಲು ಶಂಕರಾಚಾರ್ಯರು ಮಧುರೆಯ ಮೀನಾಕ್ಷಿ ದೇವಾಲಯವನ್ನೇ ಆಯ್ಕೆ ಮಾಡಿಕೊಂಡರು.

ಸಂಖ್ಯಾಶಾಸ್ತ್ರ, ಅಕ್ಷರ ಶಾಸ್ತ್ರದ ಅನುಗುಣವಾಗಿ ಘೋರ ಮಂತ್ರಗಳನ್ನು (ಘೋರಾಕ್ಷರ) ತೆಗೆದು ತ್ರಿಕೋನಗಳ ಸಹಿತ ಸಾತ್ವಿಕ ಅಕ್ಷರಗಳನ್ನು ರಚಿಸಿ, ಸಾತ್ವಿಕ ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನು ನಿಗ್ರಹಿಸಿದರು. ಹಾಗೆಯೇ ಶಂಕರರು ಸ್ಥಾಪಿಸಿದ ದಕ್ಷಿಣಾಮ್ನಾಯಯ ಶೃಂಗೇರಿ ಶಾರದಾ ಪೀಠಕ್ಕೂ ಮಧುರೈ ಮೀನಾಕ್ಷಿ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆ. ದಕ್ಷಿಣಾಮ್ನಾಯಯ ಶೃಂಗೇರಿ ಪೀಠದ ಹಿಂದಿನ ಪೀಠಾಧಿಪತಿಗಳೊಬ್ಬರು ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಮೀನಾಕ್ಷಿ ಅಮ್ಮನವರ ಶಕ್ತಿಯನ್ನು ಪುನರ್ ಸ್ಥಾಪಿಸಿದ ಇತಿಹಾಸವಿದೆ. ಆ ಘಟನೆಯಲ್ಲೊಂದು ಅಚ್ಚರಿ ಇದೆ.

1817 – 1879 ವರೆಗೆ ಶೃಂಗೇರಿಯ ಪೀಠಾಧಿಪತಿಗಳಾಗಿದ್ದವರು ನೃಸಿಂಹ ಭಾರತಿ ಸ್ವಾಮಿಗಳು(VIII) ಇವರನ್ನು ವೃದ್ಧ ನೃಸಿಂಹ ಭಾರತಿ ಸ್ವಾಮಿಗಳೆಂದೂ ಕರೆಯುತ್ತಾರೆ. ಪ್ರಖಾಂಡ ವಿದ್ವಾಂಸರೂ, ನೃಸಿಂಹ ದೇವರ ಉಪಾಸಕರು, ತಪೋನಿಷ್ಠರೆಂದು ಪ್ರಸಿದ್ಧಿ ಗಳಿಸಿದ್ದರು. ಒಮ್ಮೆ ನೃಸಿಂಹ ಭಾರತಿ ಸ್ವಾಮಿಗಳು ಸಂಚಾರದಲ್ಲಿರಬೇಕಾದರೆ  ಮಧುರೈನ ಮೀನಾಕ್ಷಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಂಕರ ಮಠದ ಸಂರ್ಪದಾಯದಂತೆ ಮೀನಾಕ್ಷಿ ದೇವಾಲಯದ ಗರ್ಭ ಗುಡಿಗೆ ತೆರಳಿ ಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾರೆ. ಆದರೆ ಅಲ್ಲಿನ ಸ್ಥಳೀಯ ಅರ್ಚಕರು ನೃಸಿಂಹ ಭಾರತಿ ಸ್ವಾಮಿಗಳು ಮೀನಾಕ್ಷಿ ದೇವಿಗೆ ಪೂಜೆ ಸಲ್ಲಿಸುವುದನ್ನು ವಿರೋಧಿಸುತ್ತಾರೆ. ಮೀನಾಕ್ಷಿ ದೇವಾಲಯದ ಅರ್ಚಕರ ವರ್ತನೆಯಿಂದ ಅಸಮಾಧಾನಗೊಂಡ ನೃಸಿಂಹ ಭಾರತಿ ಸ್ವಾಮಿಗಳು ಮೀನಾಕ್ಷಿ ದೇವಾಲಯದ ಗರ್ಭಗುಡಿಯಲ್ಲಿದ್ದ ಮೀನಾಕ್ಷಿ ದೇವಿಯ ವಿಗ್ರಹದಲ್ಲಿದ್ದ ಶಕ್ತಿಯನ್ನು ಆಕರ್ಷಣೆ ಮಾಡಿ ಎರಡು ತೆಂಗಿನ ಕಾಯಿಗಳಲ್ಲಿ ಪ್ರತಿಷ್ಠಾಪಿಸುತ್ತಾರೆ. ಅಷ್ಟೇ ಅಲ್ಲದೆ ಮೀನಾಕ್ಷಿ ದೇವಿ ತಮ್ಮೊಂದಿಗೆ ಶೃಂಗೇರಿಗೆ ಬರಲು ಒಪ್ಪಿರುವುದಾಗಿ ತಿಳಿಸುತ್ತಾರೆ.  ನಂತರ ಅದನ್ನು ತೆಗೆದುಕೊಂಡು ದೇವಾಲಯದ ಹೊರಭಾಗದಲ್ಲಿದ್ದ ಗರುಡ ಸ್ಥಂಭದ ಬಳಿ ಇಟ್ಟು ಇನ್ನು ಮುಂದೆ ಮೀನಾಕ್ಷಿ ದೇವಿಗೆ ಪೂಜೆ ಸಲ್ಲಿಸಬೇಕೆಂದಿರುವವರು ಈ ಎರಡು ತೆಂಗಿನ ಕಾಯಿಗಳಿಗೆ ಪೂಜೆ ಸಲ್ಲಿಸಬಹುದು, ದೇವಾಲಯಕ್ಕೇ ಹೋಗಬೇಕಿಲ್ಲ ಎಂದು ಹೇಳುತ್ತಾರೆ. ಅಂದಿನಿಂದ ಸಾವಿರಾರು ಜನರು ನೃಸಿಂಹ ಭಾರತಿ ಸ್ವಾಮಿಗಳು ಪ್ರತಿಷ್ಠಾಪಿಸಿದ್ದ ತೆಂಗಿನ ಕಾಯಿಗಳಿಗೆ ಪೂಜೆ ಮಾಡಲು ಪ್ರಾರಂಭಿಸುತ್ತಾರೆ. ಕ್ರಮೇಣ ದೇವಾಲಯದ ಗರ್ಭಗುಡಿಯಲ್ಲಿದ್ದ ದೇವಿಯ ವಿಗ್ರಹ ನಿಸ್ತೇಜವಾಗಲು ಪ್ರಾರಂಭವಾಗುತ್ತದೆ ಅಷ್ಟೇ ಅಲ್ಲದೆ ದೇವಾಲಯದಲ್ಲಿ ಅಹಂಕಾರದಿಂದ ವರ್ತಿಸಿದ್ದ ಅರ್ಚಕರಿಗೆ ಸಂಕಷ್ಟ ಎದುರಾಗುತ್ತದೆ. ತಪ್ಪನ್ನು ಅರಿತ ಅರ್ಚಕರು ನೃಸಿಂಹ ಭಾರತಿ ಸ್ವಾಮಿಗಳಲ್ಲಿ ಕ್ಷಮೆ ಕೇಳುತ್ತಾರೆ. ಅರ್ಚಕರು ತಮ್ಮ ತಪ್ಪನ್ನು ತಿದ್ದಿಕೊಂಡಿದ್ದರ ಪರಿಣಾಮ ನೃಸಿಂಹ ಭಾರತಿ ಸ್ವಾಮಿಗಳು ಮೀನಾಕ್ಷಿ ದೇವಲಾಯದಲ್ಲಿದ್ದ ವಿಗ್ರಹಕ್ಕೆ ಮತ್ತೆ ಡುತ್ತಾರೆ. ಈ ಘಟನೆಯಾದ ಬಳಿಕ ಇಂದಿಗೂ ಸಹ ಶೃಂಗೇರಿಯಲ್ಲಿ ಪ್ರತಿದಿನ ಸಂಜೆ ನಡೆಯುವ ಚಂದ್ರಮೌಳೇಶ್ವರ ಪೂಜೆ ವೇಳೆ ಮೀನಾಕ್ಷಿ ಸುಂದರೇಶ್ವರ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com