ನೇಪಾಳದ ಪಶುಪತಿನಾಥನಿಗೆ ಪೂಜೆ ಸಲ್ಲಿಸುವ ಅರ್ಚಕರು ದಕ್ಷಿಣ ಭಾರತದವರೇ ಆಗಿರಬೇಕು ಏಕೆ ಗೊತ್ತಾ?

ಪಶುಪತಿನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸುವವರು ಮಾತ್ರ ಭಾರತೀಯರು.
ಪಶುಪತಿನಾಥ ದೇವಾಲಯ
ಪಶುಪತಿನಾಥ ದೇವಾಲಯ

ನೇಪಾಳದ ಬಾಗ್ಮತಿ ನದಿ ದಂಡೆಯ ಮೇಲಿರುವ ಪಶುಪತಿನಾಥ ದೇವಾಲಯ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಒಂದು. 

ಪಶುಪತಿನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸುವವರು ಮಾತ್ರ ಭಾರತೀಯರು. ಹೌದು ಇಂದಿಗೂ ಸಹ ಪಶುಪತಿನಾಥ ದೇವಾಲಯದಲ್ಲಿ ಭಾರತೀಯ ಸಂಪ್ರದಾಯದಂತೆ ಅಥವಾ ಸನಾತನ ಧರ್ಮದ ಸಂಪ್ರದಾಯದ ಪ್ರಕಾರವಾಗಿಯೇ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇದಕ್ಕೆ ಕಾರಣ ಜಗದ್ಗುರು ಶಂಕರಾಚಾರ್ಯರು.

ನೇಪಾಳದಲ್ಲಿರುವ ಪಶುಪತಿನಾಥ ದೇವಾಲಯದ ಪೂಜಾ ಕೈಂಕರ್ಯಗಳ ವಿಧಾನ, ನಿಯಮಾವಳಿಗಳನ್ನು ಬರೆದಿದ್ದಾರೆ. ಶಂಕರಾಚಾರ್ಯರು ರೂಪಿಸಿರುವ ನಿಯಮಾವಳಿಗಳ ಪ್ರಕಾರ ಪಶುಪತಿನಾಥ ದೇವಾಲಯಕ್ಕೆ ಇಂದಿಗೂ ಸಹ ದಕ್ಷಿಣ ಭಾರತದ ಅರ್ಚಕರನ್ನೇ ನೇಮಕ ಮಾಡಲಾಗುತ್ತಿದ್ದು, ಅದರಲ್ಲೂ ಕರ್ನಾಟಕದ ಅರ್ಚಕರೇ ಪೂಜೆ ಸಲ್ಲಿಸಲು ಅರ್ಹರಾಗಿದ್ದಾರೆ.

ಶಂಕರಾಚಾರ್ಯರು ನಿಯಮಾವಳಿಗಳಲ್ಲಿ ದಕ್ಷಿಣದಲ್ಲಿ ಜನಿಸಿದ ಪಂಚ ದ್ರಾವಿಡ ಬ್ರಾಹ್ಮಣರಿಂದ ಪಶುಪತಿನಾಥನಿಗೆ ಪೂಜೆಯಾಗಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ನೇಪಾಳದ ರಾಜವಂಶ ಇದನ್ನು ಅಂದಿನಿಂದಲೂ ಪಾಲಿಸಿಕೊಂಡು ಬಂದಿದ್ದು, ಅಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರವೂ ಇದೇ ನಿಯಮಾವಳಿ ಮುಂದುವರೆದುಕೊಂಡುಬಂದಿದೆ.

ಇಡೀ ವಿಶ್ವದ ಶಿವಭಕ್ತರನ್ನು ಒಂದು ಮಾಡುವ ಉದ್ದೇಶದಿಂದ ಶಂಕರಾಚಾರ್ಯರು ಇಂತಹದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಭಾರತದ ಅರ್ಚಕರು ನೇಪಾಳದಲ್ಲಿ ಪೂಜೆ ಸಲ್ಲಿಸುವುದು ಮಾತ್ರವಲ್ಲದೇ ಭಾರತದ ಬದ್ರಿ ಕ್ಷೇತ್ರದಲ್ಲಿ ನೇಪಾಳಿಗರೂ ಪೂಜೆ ಸಲ್ಲಿಸಲು ನೇಪಾಳಿ ಅರ್ಚಕರನ್ನು ನೇಮಕ ಮಾಡುವುದಕ್ಕೂ ಶಂಕರಾಚಾರ್ಯರು ಅನುವು ಮಾಡಿಕೊಟ್ಟಿದ್ದರು.

ದೇವಸ್ಥಾನದ ಮುಖ್ಯ ಪುರೋಹಿತರು ಹಾಗೂ ಅವರ ಸಹಪುರೋಹಿತರನ್ನು ದಕ್ಷಿಣ ಭಾರತದಿಂದ ಅಂದರೆ ಕರ್ನಾಟಕದಿಂದಲೇ ನೇಮಕ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕರಾವಳಿ ಕರ್ನಾಟಕದಿಂದಲೇ ನೇಮಿಸಲಾಗುತ್ತದೆ. ಈ ಅರ್ಚಕರು ಶಂಕರಾಚಾರ್ಯರಿಂದ ಸ್ಥಾಪಿತವಾದ ದಕ್ಷಿಣಾಮ್ನಾಯ ಪೀಠವಾದ ಶೃಂಗೇರಿಯ ಜಗದ್ಗುರುಗಳ ಶ್ರೀವಿದ್ಯಾ ಪೂಜಾಪದ್ಧತಿಯನ್ನು ಅನುಸರಿಸುತ್ತಾರೆ. ಇದು ಅನಾದಿಕಾಲದಿಂದಲೂ ಅನೂಚಾನಾಗಿ ನಡೆದು ಬಂದ ಸಂಪ್ರದಾಯವಾಗಿದೆ.

ಪಶುಪತಿನಾಥನಿಗೆ ನಾಲ್ವರು ಅರ್ಚಕರು. ಹಿಂದೆ ತೆಲುಗು, ಮರಾಠಿ ಬ್ರಾಹ್ಮಣರು ಅಲ್ಲಿ ಸೇವೆಗಿದ್ದರು. ಬಳಿಕ ಸೌಕೂರು ನರಸಿಂಹ ಅಡಿಗರು ಮೊದಲಬಾರಿಗೆ ಕರ್ನಾಟಕದಿಂದ ಪಶುಪತಿಯ ಸೇವೆಗೆ ನೇಮಕವಾದರು. ನಿಧಾನವಾಗಿ ಮರಾಠಿ, ತೆಲುಗು ಅರ್ಚಕರಲ್ಲಿ ಒಬ್ಬೊಬ್ಬರ ಸ್ಥಾನ ತೆರವಾಗಿ ಇದೀಗ ಕನ್ನಡಿಗರೇ ಅಲ್ಲಿ ನೇಮಕವಾಗುತ್ತಿದ್ದಾರೆ. ಪಗೋಡಾ ಮಾದರಿಯ ಈ ದೇವಸ್ಥಾನದ ಗರ್ಭಗುಡಿ 5 ಮುಖದ ಶಿವಲಿಂಗವನ್ನು ಹೊಂದಿದೆ. ಇದು ಮನುಷ್ಯನಷ್ಟೇ ಎತ್ತರವಾಗಿದೆ. 5 ಮುಖಗಳು ಶಿವನ 5 ರೂಪಗಳಾದ ಸದ್ಯೋಜಾತ, ಈಶಾನ, ತತ್ಪುರುಷ, ಅಘೋರ ಮತ್ತು ವಾಮದೇವನ ಪ್ರತೀಕವಾಗಿದೆ. ಇದು ಈಶ್ವರ ಎಲ್ಲಾ ಜೀವರಾಶಿಗಳ ಆದಿದೇವರು ಎನ್ನುವ ಸಂದೇಶವನ್ನು ಸಾರುತ್ತದೆ. ಈ ದೇಗುಲದಲ್ಲಿ ವೇದ ಮತ್ತು ತಾಂತ್ರಿಕ ಆಚರಣೆಗಳು ಒಟ್ಟೊಟ್ಟಿಗೆ ನಡೆಯುವುದು ವಿಶೇಷ. ಬುದ್ಧಪೂರ್ಣಿಮೆಯಂದು ಲಿಂಗವನ್ನು ಬುದ್ಧನಾಗಿ ಪೂಜಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com