ಕಾರ್ತಿಕ ಮಾಸದ ಸೋಮವಾರದ ಮಹತ್ವ

ಹಿಂದೂಗಳಲ್ಲಿ ಕಾರ್ತಿಕ ಮಾಸ ಶ್ರೇಷ್ಠ ಮಾಸವಾಗಿದೆ. ದೀಪಾವಳಿ ನಂತರ ಪ್ರಾರಂಭವಾಗುವ ಕಾರ್ತಿಕ ಮಾಸವನ್ನು ಚಳಿಗಾಲದ ಮಾಸ ಪ್ರಾರಂಭವಾಗಿರುವುದರ ಸಂಕೇತವಾಗಿಯೂ ಗುರುತಿಸಲಾಗುತ್ತದೆ.
ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ತುಳಸಿ ಪೂಜೆ(ಸಂಗ್ರಹ ಚಿತ್ರ)
ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ತುಳಸಿ ಪೂಜೆ(ಸಂಗ್ರಹ ಚಿತ್ರ)
ಹಿಂದೂಗಳಲ್ಲಿ ಕಾರ್ತಿಕ ಮಾಸ ಶ್ರೇಷ್ಠ ಮಾಸವಾಗಿದೆ. ದೀಪಾವಳಿ ನಂತರ ಪ್ರಾರಂಭವಾಗುವ ಕಾರ್ತಿಕ ಮಾಸವನ್ನು ಚಳಿಗಾಲದ ಮಾಸ ಪ್ರಾರಂಭವಾಗಿರುವುದರ ಸಂಕೇತವಾಗಿಯೂ ಗುರುತಿಸಲಾಗುತ್ತದೆ. 
ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದ ನಂತರ ಪ್ರಾರಂಭವಾಗುವ ಕಾರ್ತಿಕ ಮಾಸದಲ್ಲಿ ಅನೇಕ ಧಾರ್ಮಿಕ ಆಚರಣೆಗಳು ನಡೆಯುವ ಸಂಪ್ರದಾಯವಿದೆ. ಕಾರ್ತಿಕ ಮಾಸದ ಸೋಮವಾರಗಳನ್ನು ಅತ್ಯಂತ ಪವಿತ್ರ, ಮಂಗಳಕರ ದಿನವೆಂಬ ನಂಬಿಕೆ ಇದ್ದು ಶಿವನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ. 
ಪುರಾಣಗಳ ಪ್ರಕಾರ ಕಾರ್ತಿಕ ಮಾಸದ ವ್ರ‍ತಾಚರಣೆಗೆ ವಿಶೇಷ ಮಹತ್ವವಿದ್ದು, ಕಾರ್ತಿಕ ಮಾಸ ವ್ರತಾಚರಣೆಯಿಂದ ಹಿಂದಿನ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗಿದೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಅಭ್ಯುದಯ, ಸಂಪತ್ತು, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದ್ದು, ಲೌಕಿಕ ಬಯಕೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಎಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ. 
ಕಾರ್ತಿಕ ಮಾಸದಲ್ಲಿ ಸಾಮಾನ್ಯವಾಗಿ ತುಳಸಿ ಗಿಡದ ಎದುರು ದೀಪಗಳನ್ನಿಟ್ಟು ಪೂಜೆ ಮಾಡುವ ಸಂಪ್ರದಾಯದ ಆಚರಣೆಯ ಹಿಂದೆ ಒಂದು ಪೌರಾಣಿಕ ಕಥೆ ಚಾಲ್ತಿಯಲ್ಲಿದೆ. ಅದೇನೆಂದರೆ, ಕ್ಷೀರಸಾಗರವನ್ನು ಮಥಿಸಿದಾಗ ಆವಿರ್ಭಾವಗೊಂಡ ಲಕ್ಷ್ಮಿಯ ಸಹೋದರಿ ತುಳಸಿ. ತುಳಸಿ ವಿಷ್ಣುವನ್ನು ವರಿಸಬೇಕೆಂಬ ಇಚ್ಛೆ ಹೊಂದಿರುತ್ತಾಳೆ. ಆದರೆ ಶಾಪಕ್ಕೆ ಗುರಿಯಾಗಿ ಗಿಡವಾಗಿ ಜನ್ಮ ಪಡೆಯುತ್ತಾಳೆ. ಆದರೆ ವಿಷ್ಣು ತುಳಸಿಯ ಇಚ್ಛೆಯನ್ನು ಮನ್ನಿಸಿ, ತಾನು ಸಾಲಿಗ್ರಾಮದ ರೂಪದಲ್ಲಿರಬೇಕಾದರೆ ತುಳಸಿ ತನಗೆ ಅತ್ಯಂತ ಪ್ರಿಯವಾದದ್ದಾಗಿರುತ್ತದೆ ಎಂಬ ವರ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಸಾಲಿಗ್ರಾಮಕ್ಕೆ ತುಳಸಿ ಅರ್ಪಿಸುವುದು ಶ್ರೇಷ್ಠವಾಗಿದ್ದು, ಕಾರ್ತಿಕ ಮಾಸದ ಶುಕ್ಲ ದ್ವಾದಶಿಯ ದಿನದಂದು ತುಳಸಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 
ಕಾರ್ತಿಕ ಮಾಸದ ಮತ್ತೊಂದು ವಿಶೇಷವೆಂದರೆ ಆಶಾಢ ಶುಕ್ಲ ಏಕಾದಶಿಯಂದು ನಿದ್ರೆಗೆ ಜಾರುವ ವಿಷ್ಣು, ಕಾರ್ತಿಕ ಶುಕ್ಲ ಏಕಾದಶಿಯ ದಿನದಂದು ಎಚ್ಚರವಾಗುತ್ತಾನೆ ಎಂಬ ನಂಬಿಕೆ ಇದೆ. ಇದರೊಂದಿಗೆ ಕಾರ್ತಿಕ ಮಾಸದ ಪೌರ್ಣಮಿಯಂದು ಶಿವ ತ್ರಿಪುರಾಸುರನನ್ನು ವಧೆ ಮಾಡಿದ್ದಕ್ಕಾಗಿಯೂ ಸಹ ಕಾರ್ತಿಕ ಮಾಸ ವಿಶೇಷ ಮಹತ್ವ ಪಡೆದುಕೊಂಡಿದೆ. ಇವೆಲ್ಲದರೊಂದಿಗೆ ಗಂಗಾ ನದಿ ಎಲ್ಲಾ ನದಿಗಳಿಗೂ, ಕಾಲುವೆಗಳಿಗೂ ಹರಿದು ಗಂಗಾ ನದಿಯಷ್ಟೆ ಅವುಗಳನ್ನೂ ಪವಿತ್ರಗೊಳಿಸುವ ಮಾಸ ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಪೂರ್ತಿ 30 ದಿನಗಳ ಕಾಲ ಕಾರ್ತಿಕ ಪುರಾಣವನ್ನು ಪಾರಾಯಣ ಮಾಡಲಾಗುತ್ತದೆ. 
ಚಳಿಗಾಲವಾದ ಕಾರ್ತಿಕ ಮಾಸದಲ್ಲಿ ಮುಂಜಾನೆ ತಣ್ಣೀರಿನ ಸ್ನಾನ ಮಾಡುವ ಪದ್ಧತಿಯೂ ಇದ್ದು, ಈ ರೀತಿ ಮಾಡುವುದರಿಂದ ಚಳಿಗಾಳವನ್ನು ಎದುರಿಸುವುದು ಸುಲಭವಾಗುತ್ತದೆ ಎಂಬ ವೈಜ್ಞಾನಿಕ ಕಾರಣಗಳನ್ನೂ ಕಾರ್ತಿಕ ಮಾಸ ವ್ರತಾಚರಣೆಗೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com