ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡುವ ಬ್ರಹ್ಮ ಕುಂಡಿಕೆ
ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡುವ ಬ್ರಹ್ಮ ಕುಂಡಿಕೆ

ಕಾವೇರಿ ತೀರ್ಥೋದ್ಭವ: ನಾಡ ಜೀವನದಿಯ ಪೌರಾಣಿಕ ಹಿನ್ನೆಲೆ

ಭಾರತೀಯ ಹಿಂದೂ ಪುರಾಣಗಳಲ್ಲಿ ಪ್ರಾರ್ಥಿಸಲಾಗಿರುವ ಏಳು ಪುಣ್ಯನದಿಗಳಲ್ಲಿ ಕಾವೇರಿಯೂ ಒಂದು.

ಭಾರತೀಯ ಹಿಂದೂ ಪುರಾಣಗಳಲ್ಲಿ ಪ್ರಾರ್ಥಿಸಲಾಗಿರುವ ಏಳು ಪುಣ್ಯನದಿಗಳಲ್ಲಿ ಕಾವೇರಿಯೂ ಒಂದು. ಭಾರತವೆಂದಾಕ್ಷಣ ಗಂಗಾ ನದಿಯನ್ನು ಹೇಗೆ ವರ್ಣಿಸಲಾಗುತ್ತದೆಯೋ ಹಾಗೆಯೇ ದಕ್ಷಿಣ ಭಾರತದಲ್ಲಿ ಕಾವೇರಿಯನ್ನು ಪುಣ್ಯ ನದಿಯನ್ನಾಗಿ ವರ್ಣಿಸಲಾಗಿದ್ದು ದಕ್ಷಿಣ ಗಂಗೆ ಎಂದೇ ಪ್ರತೀತಿ ಇದೆ.

ಕಾವೇರಿ ನದಿಯ ಬಗ್ಗೆ ಅಗ್ನಿಪುರಾಣದಲ್ಲಿ ಉಲ್ಲೇಖವಿದ್ದು ತನ್ನಲ್ಲಿ ಮೀಯುವ ಅಸಂಖ್ಯಾತ ಯಾತ್ರಿಕರಿಂದ ಬಂದ ಪಾಪದ ಪರಿಹಾರ್ಥವಾಗಿ ಗಂಗೆಯೇ ವರ್ಷಕ್ಕೊಮ್ಮೆ ತುಲಾಸಂಕ್ರಮಣದಂದು ಕಾವೇರಿಯ ಉಗಮಸ್ಥಾನದಲ್ಲಿ ಮೀಯುತ್ತಾಳೆಂಬುದು ಜನರ ನಂಬಿಕೆಯಾಗಿದೆ. ಅಗ್ನಿ ಪುರಾಣದ ಪ್ರಕಾರ ಕವೇರ ಎಂಬ ರಾಜನಿಂದ ಈ ನದಿಗೆ ಕಾವೇರಿ ಎಂಬ ಹೆಸರು ಬಂದಿರುವುದು ತಿಳಿಯುತ್ತದೆ.

ಕವೇರ ರಾಜ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸನ್ನಾಚರಿಸುತ್ತಾನೆ. ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಕವೇರ ರಾಜನಿಗೆ ಇದ್ದ ಮೋಕ್ಷದ ಸಂಕಲ್ಪ ಈಡೇರುವುದಕ್ಕೂ ಮುನ್ನ ರಾಜ  ಬ್ರಹ್ಮನ ಮಗಳಾದ ವಿಷ್ಣುಮಾಯೆಯನ್ನು ತನ್ನ ಮಗಳಾಗಿಟ್ಟುಕೊಂಡು ಸಲಹಬೇಕೆಂದು ಬ್ರಹ್ಮ ರಾಜನಿಗೆ ಹೇಳುತ್ತಾನೆ. ಬ್ರಹ್ಮನ ಇಚ್ಛೆಯಂತೆ ಕವೇರ ರಾಜ ವಿಷ್ಣುಮಾಯೆಯನ್ನು ತನ್ನ ಅರಮನೆಯಲ್ಲಿ ಸಾಕುತ್ತಾನೆ. ವಿಷ್ಣುವಿನ ಅಂಶದವಳಾದ ವಿಷ್ಣುಮಾಯೆ ಬೆಳೆದು ದೊಡ್ಡವಳಾದ ಮೇಲೆ ತಪಸ್ಸು ಮಾಡಲು ಹಿಮಾಲಯ ಪರ್ವತಕ್ಕೆ ಹೋಗುತ್ತಾಳೆ.  ನಂತರ ಕವೇರ ರಾಜನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.  ಇತ್ತ ಹಿಮಾಲಯದಲ್ಲಿ ವಿಷ್ಣುಮಾಯೆ ತಪಸ್ಸನ್ನು ಮೆಚ್ಚಿ ವಿಷ್ಣು ಪ್ರತ್ಯಕ್ಷನಾಗುತ್ತಾನೆ.  ಅವಳಿಂದ ಜನಕ್ಕೆ ಉಪಯೋಗವಾಗಬೇಕೆಂಬ ಉದ್ದೇಶದಿಂದ ಅವಳು ಎರಡು ರೂಪಗಳನ್ನು ತಳೆಯುವಂತೆ-ಒಂದು ರೂಪದಲ್ಲಿ ಅವಳು ಸಹ್ಯ ಪರ್ವತದಲ್ಲಿ ನದಿಯಾಗಿ ಹುಟ್ಟಿ ಹರಿಯುವಂತೆ ಮತ್ತು ಇನ್ನೊಂದು ರೂಪದಲ್ಲಿ ಲೋಪಾಮುದ್ರೆಯೆಂಬ ಹೆಸರು ತಳೆದು ಅಗಸ್ತ್ಯ ಋಷಿಯ ಪತ್ನಿಯಾಗುವಂತೆ-ವಿಷ್ಣು ಅವಳಿಗೆ ವರ ನೀಡಿದ.

ವಿಷ್ಣುಮಾಯೆಗೆ ವಿಷ್ಣು ವರ ನೀಡಿದ ಸಮಯದಲ್ಲಿ ಅಗಸ್ತ್ಯ ಋಷಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಬ್ರಹ್ಮ ಅಗಸ್ತ್ಯನಿಗೆ ಪ್ರತ್ಯಕ್ಷನಾಗಿ, ಲೋಪಾಮುದ್ರೆಯನ್ನು ವಿವಾಹವಾಗುವಂತೆ ಅವನಿಗೆ ಹೇಳಿದ. ಬ್ರಹ್ಮನ ಅಣತಿಯಂತೆ ಅಗಸ್ತ್ಯರು ಲೋಪಾಮುದ್ರೆಯ ರೂಪ ತಳೆದಿದ್ದ ವಿಷ್ಣುಮಾಯೆಯಿದ್ದಲ್ಲಿಗೆ ಬಂದು ಆಕೆಯನ್ನು ವಿವಾಹವಾದರು.

ಅಗಸ್ತ್ಯ ಲೋಪಾಮುದ್ರೆಯನ್ನು ವಿವಾಹವಾದ ಸ್ವಲ್ಪ ಸಮಯದ ಅನಂತರ ಅವರಿಗೆ ದಕ್ಷಿಣ ಭಾರತದಲ್ಲಿ ನೀರಿನ ಕೊರತೆಯಿದೆಯೆಂದು ತಿಳಿಯಿತು. ಲೋಪಾಮುದ್ರೆ ನೀರಿನ ರೂಪ ತಾಳಿ ತನ್ನ ಕಮಂಡಲದಲ್ಲಿರುಂತೆ ಅಗಸ್ತ್ಯರು ಕೇಳಿಕೊಳ್ಳುತ್ತಾರೆ. ಅಗಸ್ತ್ಯರ ಸೂಚನೆಯಂತೆ ಲೋಪಾಮುದ್ರೆ ನೀರಿನ ರೂಪ ತಾಳಿ ಅಗಸ್ತ್ಯರ ಕಮಂಡಲವನ್ನು ಸೇರುತ್ತಾಳೆ. ಕಮಂಡಲವನ್ನು ಹಿಡಿದು ಸಹ್ಯ ಪರ್ವತಶ್ರೇಣಿಯ ಬ್ರಹ್ಮಗಿರಿಗೆ ಬಂದ ಅಗಸ್ತ್ಯರು ಕಮಂಡಲವನ್ನು ಕಲ್ಲಿನ ಮೇಲಿಟ್ಟು ಸ್ನಾನಕ್ಕಾಗಿ ಸ್ವಲ್ಪ ದೂರ ಹೋಗುತ್ತಾರೆ.  ಅದೇ ಸಮಯದಲ್ಲಿ ಬಿರುಗಾಳಿ ಬೀಸಿತು. ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲ ಮಗುಚಿಕೊಂಡಿತು. ಅದರಲ್ಲಿದ್ದ ನೀರು ಹರಿದು ವಿರಜಾ ನದಿಯ ನೀರನ್ನು ಸೇರಿಕೊಂಡು ಕಾವೇರಿ ತೀರ್ಥಕುಂಡಿಗೆಯಿಂದ ನದಿಯಾಗಿ ಹರಿಯಿತು. ನದಿಯಾಗಿ ಹರಿದ ಲೋಪಾಮುದ್ರೆ ವಿಷ್ಣುಮಾಯೆಯಾಗಿದ್ದಾಗ ಕವೇರ ಅವಳನ್ನು ಸಾಕಿದ್ದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂತು ಎನ್ನುತ್ತದೆ ಪುರಾಣ ಕಥೆಗಳು.

ಇನ್ನು ಸ್ಕಾಂದಪುರಾಣದಲ್ಲಿಯೂ ಸಹ ಕಾವೇರಿ ನದಿಯ ಹುಟ್ಟಿನ ಬಗ್ಗೆ ಕಥೆಗಳಿವೆ. ಒಂದು ಕಥೆಯ ಪ್ರಕಾರ ಭಾರತದ ಮಧ್ಯದಲ್ಲಿರುವ ವಿಂಧ್ಯಪರ್ವತ ಒಮ್ಮೆ ಸೂರ್ಯನ ಎತ್ತರಕ್ಕೇರಬೇಕೆಂದು ಬಯಸಿ ಬೆಳೆಯುತ್ತ ಸಾಗಿದ; ಸೂರ್ಯನ ಮತ್ತು ನಕ್ಷತ್ತಗಳ ದಾರಿಗೆ ಅಡ್ಡ ಬಂದ. ಅವುಗಳಿಂದ ಬರುವ ಬೆಳಕಿಗೂ ಅಡಚಣೆಯುಂಟಾಯಿತು. ಈ ಬೆಳವಣಿಗೆಯನ್ನು ತಡೆಹಿಡಿದು ಅವನನ್ನು ತಗ್ಗಿಸಲು ದೇವತೆಗಳು ಅಗಸ್ತ್ಯನ ಸಹಾಯವನ್ನು ಕೋರಿದರು. ಅಗಸ್ತ್ಯ ಒಪ್ಪಿ, ಅದಕ್ಕೆ ಅವಶ್ಯವಿದ್ದ ಆಧ್ಯಾತ್ಮಿಕ ಶಕ್ತಿಯನ್ನು ತನಗೆ ಕೊಡುವಂತೆ ಈಶ್ವರನನ್ನು ಕುರಿತು ತಪಸ್ಸು ಮಾಡಿದ ಈಶ್ವರನ ಅನುಗ್ರಹ ಲಭ್ಯವಾಯಿತು. ಇಷ್ಟಬಂದಲ್ಲಿ ದೇವತಾರ್ಚನೆ ಮಾಡಲು ಅವನೊಡನೆ ನೀರು ಯಾವಾಗಲೂ ಇರುವಂತೆ ವರ ನೀಡಿ,  ಅವನ ಕಮಂಡಲದಲ್ಲಿರುವಂತೆ ಕೈಲಾಸಪರ್ವತದಲ್ಲಿ ಹರಿಯುತ್ತಿದ್ದ ಕಾವೇರಿಗೆ ಆಜ್ಞಾಪಿಸಿದ. ಆಗ ಕಾವೇರಿ ನದಿ ಅಗಸ್ತ್ಯನ ಕಮಂಡಲವನ್ನು ಸೇರಿದಳು. ಅಗಸ್ತ್ಯ ಅದನ್ನು ಹಿಡಿದುಕೊಂಡು ಹಿಮಾಲಯ ಪ್ರದೇಶದಿಂದ ಭಾರತಕ್ಕೆ ಹೊರಟು ವಿಂಧ್ಯನ ಹತ್ತಿರ ಬಂದಾಗ ಆ ಪರ್ವತ ಅಗಸ್ತ್ಯನಿಗೆ ಭಕ್ತಿಯಿಂದ ಪೊಡಮಟ್ಟಿತು. ತಾನು ದಕ್ಷಿಣಭಾರತಕ್ಕೆ  ಶಾಂತ ಮನಸ್ಸಿನಿಂದ ಹೋಗಬೇಕಾಗಿರುವುದರಿಂದ ತಾನು ಹಿಂದಕ್ಕೆ ಬರುವವರೆಗೆ ವಿಂಧ್ಯ ಮೇಲಕ್ಕೇಳದೆ ನಮಸ್ಕಾರದ ಭಂಗಿಯಲ್ಲೇ ಇರಬೇಕೆಂದು ಅಗಸ್ತ್ಯ ಹೇಳಿ ದಕ್ಷಿಣಭಾರತಕ್ಕೆ ಹೋದ, ಅನಂತರ ಆತ ಉತ್ತರಭಾರತಕ್ಕೆ ಹಿಂದಿರುಗಲೇ ಇಲ್ಲ. ಈ ಕಾರಣದಿಂದ ವಿಂಧ್ಯ ಪರ್ವತ ಮಲಗಿದ ಸ್ಥಿತಿಯಲ್ಲೇ ಇದೆಯೆಂದು ಪುರಾಣದಲ್ಲಿ ಹೇಳಿದೆ. ಅಗಸ್ತ್ಯ ದಕ್ಷಿಣ ಭಾರತದಲ್ಲಿ ಸಹ್ಯ ಪರ್ವತದ ಬ್ರಹ್ಮಗಿರಿಗೆ ಬಂದು ಅಲ್ಲಿ ತಪಸ್ಸು ಮಾಡುತ್ತಿದ್ದ. ಆ ಸಮಯದಲ್ಲಿ ಸೂರಪದ್ಮನೆಂಬ ಒಬ್ಬ ಅಸುರ ತನ್ನ ತಪಶ್ಯಕ್ತಿಯಿಂದ ಅಲ್ಲಿ ಮಳೆ ಬೀಳುವುದನ್ನು ತಡೆ ಹಿಡಿದಿದ್ದ. ಇದರಿಂದ ಇಂದ್ರನಿಗೆ ಸಂಕಟವಾಯಿತು. ದಕ್ಷಿಣ ದೇಶದಲ್ಲಿ ಯಥೇಚ್ಛವಾಗಿ ನೀರಿರುವಂತೆ ಮಾಡಬೇಕೆಂದು ಗಣಪತಿಯನ್ನು ಪ್ರಾರ್ಥಿಸಿಕೊಂಡ. ಗಣಪತಿ ಕಾಗೆಯ ರೂಪವನ್ನು ತಾಳಿ ಬಂದು ಅಗಸ್ತ್ಯ ತನ್ನ ಪಕ್ಕದಲ್ಲಿ ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲವನ್ನು ಮಗುಚಿಹಾಕಿದ. ಅದರಲ್ಲಿದ್ದ ಕಾವೇರಿ ನದಿ ಕೂಡಲೇ ಅಲ್ಲಿಂದ ಹರಿಯ ತೊಡಗಿತು.

ಕಾವೇರಿ ನದಿ ಉಗಮಕ್ಕೆ ಸಂಬಂಧಿಸಿದಂತೆ ಹಲವು ಪೌರಾಣಿಕ ಹಿನ್ನೆಲೆ ಕಥೆಗಳಿದ್ದರೂ ಕಾವೇರಿ ದೇವತೆಯನ್ನು ಕೊಡಗರು ತಮ್ಮ ಕುಲದೇವತೆಯೆಂದು ನಂಬಿ ಪೂಜಿಸುತ್ತಾರೆ. ಕಾವೇರಿ ದೇವತೆಯ ವರದಿಂದ ಕೊಡಗಿನಲ್ಲಿ ವ್ಯವಸಾಯಕ್ಕೆ ಅಗತ್ಯವಾದ ಮಳೆಯಾಗುತ್ತದೆಂದೂ ಕೊಡಗಿನವರ ಮುಖ್ಯ ಆಹಾರಧಾನ್ಯವಾದ ಬತ್ತದ ಬೆಳೆ ಸಮೃದ್ದವಾಗಿ ಬೆಳೆಯುತ್ತದೆಂದೂ ಕೊಡಗಿನ ಜನ ನಂಬಿದ್ದಾರೆ. ಉಗಮದಿಂದ ಸಂಗಮದವರೆಗೂ ಕಾವೇರಿಯ ದಂಡೆಯ ಮೇಲೆ ಅನೇಕ ಪುಣ್ಯಕ್ಷೇತ್ರಗಳಿವೆ. ಮೊಟ್ಟಮೊದಲನೆಯ ಸ್ಥಳ ತಲಕಾವೇರಿ ವರ್ಷವಿಡೀ ಕಾವೇರಿನದಿಯಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿಸುವುದು ಪುಣ್ಯಕರವೆಂದು ಜನರು ನಂಬಿದ್ದರೂ ತುಲಮಾಸದಲ್ಲಿ ಕಾವೇರಿ ಸ್ನಾನ ಮಾಡುವುದರಿಂದ ಹೆಚ್ಚು ಪುಣ್ಯವುಂಟಾಗುತ್ತದೆಂಬುದು ಜನರಿಗೆ ಪುರಾಣದಿಂದ ಪ್ರಾಪ್ತವಾದ ನಂಬಿಕೆ. ತುಲಾಸಂಕ್ರಮಣದ ದಿವಸ ಕಾವೇರಿ ತೀರ್ಥ ಆ ಮುಹೂರ್ತಕ್ಕೆ ಸರಿಯಾಗಿ ತೀರ್ಥ ಕುಂಡಿಗೆಯಲ್ಲಿ ಉಕ್ಕಿ ಹರಿಯುತ್ತದೆ. ಆ ಸಮಯಕ್ಕೆ ಸರಿಯಾಗಿ ತೀರ್ಥಕುಂಡಿಗೆಯ ಇಬ್ಬದಿಗಳಲ್ಲಿ ನಿಂತಿರುವ ಅರ್ಚಕರು ತಾಮ್ರದ ತಂಬಿಗೆಗಳಲ್ಲಿ ತೀರ್ಥಕುಂಡಿಗೆಯ ತೀರ್ಥವನ್ನು ತುಂಬಿಸಿಕೊಂಡು ಅದರ ಮುಂದಿನ ಕೊಳದಲ್ಲಿ ಸ್ನಾನ ಮಾಡಲು ಇಳಿದು ನಿಂತ ಜನರ ಸಮೂಹದ ಮೇಲೆ ಎರಚುತ್ತಾರೆ. ಇಂದು ಅ.17 ರಂದು ತುಲಾಸಂಕ್ರಮಣ ಕಾವೇರಿ ತೀರ್ತೋದ್ಭವದ ಪರ್ವದಿನವಾಗಿದ್ದು  ಯತ್ರಾರ್ಥಿಗಳಿಂದ ವರ್ಷವಿಡೀ ಪಡೆದುಕೊಂಡ ಪಾಪವನ್ನು ತೊಳೆದುಕೊಳ್ಳಲು ಗಂಗೆಯೂ ಕಾವೇರಿಗೆ ಬಂದು ಆ ದಿನದಂದು ಮೀಯುವಳೆಂದು ಜನರ ನಂಬಿಕೆಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com