ಸಿಂಹಾಸನಪುರಿಯ ಹಾಸನಾಂಬೆ: ಕಳ್ಳರನ್ನು ಕಲ್ಲಾಗಿಸಿದ ಶಕ್ತಿ ದೇವತೆಯ ಹಿನ್ನೆಲೆ

ಹಾಸನ ಎಂಬ ಹೆಸರು ಸಿಂಹಾಸನ ಪುರಿ ಎಂಬ ಹೆಸರಿನಿಂದ ಬಂದಿರುವ ಐತಿಹ್ಯವಿದೆ.
ಹಾಸನಾಂಬೆ
ಹಾಸನಾಂಬೆ
ಹಾಸನ ಎಂದರೆ ತಕ್ಷಣ ನೆನಪಾಗುವುದು ಬೇಲೂರು ಹಳೇಬೀಡಿನ ವಿಶ್ವವಿಖ್ಯಾತ ಶಿಲ್ಪಕಲೆ. ಹೊಯ್ಸಳರ ವಾಸ್ತುಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಹಾಸನ ಪ್ರಖ್ಯಾತವಾಗಿದೆ. ಹಾಸನ ಎಂಬ ಹೆಸರು ಸಿಂಹಾಸನ ಪುರಿ ಎಂಬ ಹೆಸರಿನಿಂದ ಬಂದಿರುವ ಐತಿಹ್ಯವಿದೆ. ಈ ಪ್ರದೇಶಕ್ಕೆ ಹಾಸನ ಎಂಬ ಹೆಸರು ಬರಲು ಮತ್ತೊಂದು ಕಾರಣ ಜಿಲ್ಲೆಯ ಅಧಿದೇವತೆ, ಶಕ್ತಿ ದೇವತೆ ಹಾಸನಾಂಬೆ. 
ಸಪ್ತಮಾತೃಕೆ ಎಂದು ಕರೆಯಲ್ಪಡುವ ಹಾಸನಾಂಬೆಯ ದೇವಾಲಯ ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ವಿಶಿಷ್ಠ ಪದ್ಧತಿಯಿಂದ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ದೀಪಾವಳಿ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಪ್ರವಾಸಿಗರು ಹಾಸನಾಂಬೆಯ ದೇವಾಲಯಕ್ಕೆ ಭೇಟಿ ನೀಡಿ ಅಪರೂಪದ ದೇವಿಯ ದರ್ಶನ ಮಾಡುತ್ತಾರೆ. 
ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರು ಇದ್ದಿದ್ದಕ್ಕೆ ಕಾರಣ ಹುಡುಕುತ್ತಾ ಹೊರಟರೆ, ಮಹಾಭಾರತದ ಕಾಲಘಟ್ಟದ ಪುಟಗಳು ತೆರೆದುಕೊಳ್ಳುತ್ತವೆ. ಮಹಾಭಾರತದ ಅರ್ಜುನನ ಮೊಮ್ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ. ಆಗ ಈ ಸ್ಥಳಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ನಂತರ ಸಿಂಹಾಸನಪುರ ಆಡು ಮಾತಿನಿಂದ ಹಾಸನ ಎಂದಾಗಿದೆ ಎಂದು ನಂಬಲಾಗಿದೆ.  ಇನ್ನು ಪುರಾಣಗಳಲ್ಲೂ ಸಿಂಹಾಸನಪುರಿ ಅಂದರೆ ಹಾಸನದ ಬಗ್ಗೆ ಉಲ್ಲೇಖಗಳಿದ್ದು  ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ನೆಲೆಸಲು ನಿರ್ಧರಿಸಿದ ಕ್ಷೇತ್ರವೇ ಸಿಂಹಾಸನಪುರಿ ಅಂದರೆ ಹಾಸನ ಎಂದು ವರ್ಣಿಸಲಾಗಿದೆ. ಅವರುಗಳಲ್ಲಿ ವೈಷ್ಣವಿ, ಕುಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗು ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿ ನಗರ ಮಧ್ಯ ಭಾಗದ ದೇವಿಗೆರೆಯ ಬಳಿನೆಲೆಸಿದರು ಎನ್ನಲಾಗಿದೆ. 
ಹಾಸನಾಂಬ ದೇವಾಲಯವನ್ನು ಪಾಳೇಗಾರರ ಕಾಲದಲ್ಲಿ (12ನೆಯ ಶತಮಾನ) ನಿರ್ಮಿಸಲಾಗಿದ್ದು ಹಾಸನಾಂಬೆ ದೇವಿಯು ಹುತ್ತದ ರೂಪದಲ್ಲಿ ನೆಲೆಸಿರುವುದನ್ನು ಕಾಣಬಹುದು. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕುಂಭಗಳಿಗೆ ಹೆಣ್ಣು ದೇವತೆಗಳಂತೆ ಮುಖವಾಡಗಳನ್ನು ಮಾಡಿ ಅಲಂಕರಿಸಲಾಗಿದೆ. ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಗರ್ಭಗುಡಿಯಲ್ಲಿ ಉರಿಯುವುದು. ಹಾಗೆ ದೇವಿಗೆ ಮುಡಿಸಿದ ಹೂ ಬಾಡಿರುವುದಿಲ್ಲ. ಇಟ್ಟ ಅನ್ನ ಹಳಸಿರುವುದಿಲ್ಲ. ಇದು ಹಾಸನಾಂಬೆ ದೇವಿಯ ವಿಶೇಷ ಮಹಿಮೆ ಹಾಗೂ ದೇವಾಲಯದಲ್ಲಿ ನಡೆದು ಬಂದಿರುವ ಪ್ರತೀತಿ. ಮತ್ತೊಂದು ಸಂಗತಿ ಎಂದರೆ ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ದೇವಿಯ ದರ್ಶನ ಮಾಡಲು ಭಕ್ತರಿಗೆ ಅವಕಾಶ ಇರುವುದಿಲ್ಲ. ಹಾಗೊಂದು ವೇಳೆ ಬಾಗಿಲು ತೆರೆದ ಕೂಡಲೇ ದೇವಿಯ ದರ್ಶನ ಮಾಡಿದರೆ  ಅದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಜನರ ನಂಬಿಕೆಯಾಗಿದೆ. ಆ ಕಾರಣಕ್ಕೆ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಸಂಪ್ರದಾಯ ರೂಢಿಯಲ್ಲಿದೆ. 
ಹಾಸನಾಂಬೆ ದೇವಾಲಯದ ಬಗ್ಗೆ ಮತ್ತೊಂದು ಸ್ವಾರಸ್ಯಕರವಾದ ಸಂಗತಿ ಇದೆ. ಒಮ್ಮೆ ದೇವಿಯ ಆಭರಣಗಳನ್ನು ಅಪಹರಿಸುವ ಉದ್ದೇಶದಿಂದ ನಾಲ್ಕು ಜನ ಕಳ್ಳರು ಒಳ ನುಗ್ಗಿ ಆಭರಣಗಳಿಗೆ ಕೈ ಹಾಕಿದಾಗ ಕುಪಿತಳಾದ ದೇವಿ, ನಾಲ್ಕು ಮಂದಿ ಕಳ್ಳರಿಗೆ ಕಲ್ಲಾಗಿ ಹೋಗಿ ಎಂದು ಶಾಪ ಕೊಟ್ಟಳು. ಅದರ ಪರಿಣಾಮವಾಗಿ ಅ ನಾಲ್ಕು ಜನ ಕಳ್ಳರು ಕಲ್ಲಾದರು. ಇಲ್ಲಿ ಕಳ್ಳತನ ಮಾಡಲು ಬಂದು ಕಲ್ಲಾದವರಿಗೂ ಗುಡಿ ನಿರ್ಮಿಸಲಾಗಿದ್ದು, ಕಳ್ಳಪ್ಪನ ಗುಡಿ ಎಂದೇ ಪ್ರಸಿದ್ಧಿ ಪಡೆದಿದೆ. 
ಹಾಸನಾಂಬೆ ದೇವಾಲಯದ ದ್ವಾರವನ್ನು ಪ್ರವೇಶ ಮಾಡಿದರೆ ಕೂಡಲೇ ಸಿದ್ದೇಶ್ವರಸ್ವಾಮಿ ದೇವಾಲಯ ಇದ್ದು. ಈಶ್ವರ ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ಇನ್ನು ದೇವಾಲಯದ ಆವರಣದಲ್ಲಿ 101 ಲಿಂಗವನ್ನು ಒಂದೇ ಸಲ ನೋಡುವ ಅವಕಾಶ ದೊರೆಯುತ್ತದೆ. ಈ ಗುಡಿಯ ಮೇಲ್ಭಾಗದಲ್ಲಿ 4 ಅಡಿ ಎತ್ತರದ ಇನ್ನೊಂದು ಮಹಾಲಿಂಗವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com