ಗಣೇಶನ ಬಗ್ಗೆ ನಿಮಗೆ ಗೊತ್ತಿಲ್ಲದ ನಿಗೂಢ ಸಂಗತಿಗಳು

ಮನುಷ್ಯನ ಇಂದ್ರಿಯಗಳಿಗೂ ಗಣಪತಿಗೂ ಇರುವ ಸಂಬಂಧದ ಬಗೆಗಿನ ಸ್ವಾರಸ್ಯವೇನೆಂದರೆ, ದೇಹದ ಷಟ್ ಚಕ್ರಗಳಲ್ಲಿ ಗಣಪತಿ ಮೂಲಾಧಾರ ಕ್ಷೇತ್ರದಲ್ಲಿರುವ ಶಕ್ತಿ.
ಗಣೇಶನ ಬಗ್ಗೆ  ನಿಮಗೆ ಗೊತ್ತಿಲ್ಲದ ನಿಗೂಢ ಸಂಗತಿಗಳು
ಸನಾತನ ಧರ್ಮ(ಹಿಂದೂ ಧರ್ಮ)ದಲ್ಲಿ ಯಾರು ಏನೇ ಪೂಜೆ, ಸಮಾರಂಭಗಳು ಮಾಡಿದರೂ ಮೊದಲ ಪೂಜೆ ಮಾತ್ರ ಗಣೇಶನಿಗೇ ಸಲ್ಲಸಲಾಗುತ್ತೆ. ಇದೇ ಕಾರಣದಿಂದ ನಮ್ಮ ಸಂಸ್ಕೃತಿಯಲ್ಲಿ ಗಣೇಶನನ್ನು ಅತಿ ಹೆಚ್ಚು ಪೂಜಿಸುವ ದೇವರು ಎಂದು ಹೇಳಬಹುದು.
ಆನೆಯ ತಲೆ(ಗಜ ಮುಖ) ಹೊಂದಿರುವ ಗಣಪತಿಯ ಬಗ್ಗೆ ಇರುವ ನಿಗೂಢ ಕಥೆಗಳು ಹಾಗೂ ಗಣಪತಿಯ ಶ್ರೀಮಂತಿಕೆ ಆತನನ್ನು ವಿಶ್ವಾದ್ಯಂತ ಪೂಜಿಸುವಂತೆ ಮಾಡಿವೆ. ಅಂತೆಯೇ ಗಣೇಶನ, ಗಣಪತಿಯ ಚಿತ್ರಣದ ಬಗ್ಗೆ ಇರುವ ನಿಗೂಢತೆಗಳ ಕುರಿತು ಕೆಲವೊಂದು ಮಾಹಿತಿ ಇಲ್ಲಿದೆ. 
ಮನೋವಿಜ್ಞಾನಿಗಳ ಪ್ರಕಾರ ಗಣಪತಿಯನ್ನು ನಿಗ್ರಹಿತ ಲೈಂಗಿಕತೆ(ಇಂದ್ರಿಯ ನಿಗ್ರಹ)ಕ್ಕೆ ಸಂಬಂಧಿಸಿದಂತೆ ವ್ಯಾಖ್ಯಾನಿಸುತ್ತಾರೆ. ಅಥವಾ ಗಣಪತಿಗೂ ಇಂದ್ರಿಯ ನಿಗ್ರಹಕ್ಕೂ ಸಂಬಂಧವಿದೆ ಎನ್ನುತ್ತಾರೆ. ಅಷ್ಟೇ ಅಲ್ಲದೇ ಆತನನ್ನು ಅತೀಂದ್ರಿಯ ಶಕ್ತಿಯ ಮೂಲ ಎಂದು ಹೇಳುತ್ತಾರೆ. ಗಣಪತಿಯನ್ನು ಜನಪದೊಂದಿಗೂ ಗುರುತಿಸಲಾಗುತ್ತದೆ. ಇನ್ನು ಯೋಗಿಗಳಂತೂ ಗಣೇಶನನ್ನು ಬ್ರಹ್ಮಾಂಡದ ಒಡೆಯ ಎಂದೇ ಪೂಜಿಸಿ, ಬ್ರಹ್ಮಾಂಡದ ಶಕ್ತಿಯೊಂದಿಗೆ ನಮ್ಮನ್ನು ಬೆಸೆಯುವ ಶಕ್ತಿ ಎಂದು ನಂಬಿದ್ದಾರೆ. 
ಎಲ್ಲಕ್ಕಿಂತ ಮಿಗಿಲಾಗಿ, ಸಾಮಾನ್ಯವಾಗಿ ಗಣಪತಿ ಎಂದರೆ ನಮಗೆ ತಕ್ಷಣವೇ ಹೊಳೆಯುವುದು, ಮಾರ್ಗದರ್ಶನ ನೀಡುವ ಶಕ್ತಿ ಎಂಬುದು, ಗಣಪತಿ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುವ ಮೊದಲ ಗುರು. ಗಣಪತಿ ನಮ್ಮೆಲ್ಲರನ್ನೂ ವಿಶ್ವದ ಶಕ್ತಿಯೊಂದಿಗೆ ಒಗ್ಗೂಡಿಸುವ ಶಕ್ತಿಯಾದ್ದರಿಂದ ಎಲ್ಲಾ ಧಾರ್ಮಿಕ ಕ್ರಿಯೆಗಳಲ್ಲೂ ಗಣಪತಿಗೇ ಮೊದಲ ಪೂಜೆ. ಆದರೆ ಗಣಪತಿಗೆ ಇಲಿ ವಾಹನವಾಗಿರುವುದು ಈ ಸೃಷ್ಟಿಯಲ್ಲಿ ಸಣ್ಣದು-ದೊಡ್ಡದು ಎಲ್ಲವನ್ನೂ ಸಮಾನ ಗೌರವದಿಂದ ಕಾಣಬೇಕು ಎಂಬ ಸಂದೇಶ ನೀಡುತ್ತದೆ.  ಇನ್ನು ಗಣೇಶನ ಹೆಸರೂ ಅಷ್ಟೇ ಸ್ವಾರಸ್ಯಕರವಾಗಿದೆ. ಗಣೇಶ ಎಂದರೆ ಗಣಗಳ ಈಶ, ಅಥವಾ ಗಣಗಳ ಪತಿ ಇಲ್ಲಿ ಗಣಗಳನ್ನು ಪ್ರಾಣಿಗಳೆಂದು ಪರಿಗಣಿಸಿದರೆ ಆನೆಯ ಮುಖ ಹೊಂದಿರುವ ಗಣೇಶ ಆನೆಯ ರೂಪದಲ್ಲಿ  ಪ್ರಾಣಿ ಗಣಗಳ ನಾಯಕನಾಗಿರುತ್ತಾನೆ.  ಆದರೆ ಇದು ಮೇಲ್ನೋಟಕ್ಕೆ ಮಾತ್ರ, ವಾಸ್ತವದಲ್ಲಿ ಪ್ರಾಣಿಗಳು ಸಂಸಾರದ ಪ್ರಪಂಚದಲ್ಲಿರುವ ವಿವಿಧ ರೀತಿಯ ಚೈತನ್ಯ, ಶಕ್ತಿಗಳನ್ನು ಪ್ರತಿನಿಧಿಸುತ್ತವೆ.ಈ ಹಿನ್ನೆಲೆಯಲ್ಲಿ ಗಣಪತಿ ಸಂಸಾರದ ಶಕ್ತಿಗಳನ್ನು ಒಗ್ಗೂಡಿಸಿ ಅದನ್ನು ಪಶುಪತಿ ಅಂದರೆ ಶಿವನಿಗೆ ಅರ್ಪಿಸುತ್ತಾನೆ. 
ಇನ್ನು ಗಣ ಎಂದರೆ ಸಂಸ್ಕೃತದ ಶಬ್ದಗಳು ಹಾಗೂ ಮಂತ್ರಗಳೂ ಆಗಿದ್ದು, ಶಬ್ದಗಳ ಮೂಲ ಓಂ ಆಗಿದ್ದು, ಓಂ ಸ್ವರೂಪದಲ್ಲೇ ಗಣಪತಿ ಸಂಸ್ಕೃತ ಶಬ್ದ ಹಾಗೂ ಮಂತ್ರಗಳನ್ನೂ ನಿಯಂತ್ರಿಸುತ್ತಾನೆ. ಇನ್ನು ಇದೇ ಗಣವನ್ನು ನಮ್ಮ ಪ್ರಾಣ ಹಾಗೂ ಇಂದ್ರಿಯಗಳಿಗೆ ಸಮೀಕರಿಸಿಕೊಂಡರೆ ಗಣೇಶ ಅವುಗಳನ್ನು ನಿಯಂತ್ರಿಸುವ ಮೂಲವಾದ ಆತ್ಮಶಕ್ತಿಯೂ ಹೌದು. ಮನುಷ್ಯನ ಇಂದ್ರಿಯಗಳಿಗೂ ಗಣಪತಿಗೂ ಇರುವ ಸಂಬಂಧದ ಬಗೆಗಿನ ಸ್ವಾರಸ್ಯವೇನೆಂದರೆ, ದೇಹದ ಷಟ್ ಚಕ್ರಗಳಲ್ಲಿ ಗಣಪತಿ ಮೂಲಾಧಾರ ಕ್ಷೇತ್ರದಲ್ಲಿರುವ ಶಕ್ತಿ. ಇದು ಭೂ ತತ್ವವನ್ನು ನಿಯಂತ್ರಿಸಿ ಕುಂಡಲಿನಿ ಶಕ್ತಿಯನ್ನು ಹಿಡಿದುಕೊಂಡಿರುತ್ತದೆ. ಆದ್ದರಿಂದ ಗಣಪತಿಗೆ ಮೂಲಾಧಾರ ಕ್ಷೇತ್ರಸ್ಥಿತ ಎಂಬ ವರ್ಣನೆ ಇದೆ. ಯೋಗಶಾಸ್ತ್ರದಲ್ಲಿ ತಿಳಿಸಿರುವಂತೆ ಈ ಮೂಲಾಧಾರ ಕ್ಷೇತ್ರದಿಂದ ಅಂದರೆ ಬೆನ್ನುಹುರಿಯಿಂದ ಕುಂಡಲಿನಿ ಶಕ್ತಿಯು ಜಾಗೃತವಾಗಿ ಮೇಲ್ಮುಖವಾಗಿ ಹರಿಯಲಾರಂಭಿಸುವುದು. ಇದಕ್ಕಾಗಿ ಮೊದಲು ಗಣೇಶನ ಉಪಾಸನೆ ಅರ್ಥಾತ್ ‘ಶುದ್ಧಿಕ್ರಿಯೆ’ ಅವಶ್ಯ. ಆರಂಭದ ಮೊದಲ ‘ 600 ’ ಪ್ರಾಣಾಯಾಮಗಳೇ ಗಣೇಶನ ಪೂಜೆ. ಇದರಿಂದ ಶರೀರದ ಎಲ್ಲಾ ಭಾಗಗಳು ಶುದ್ಧವಾಗುತ್ತವೆ. ಹೀಗೆ ಗಣೇಶನ ಅನುಗ್ರಹ ದೊರೆತ ಬಳಿಕವೇ ಕುಂಡಲಿನಿ ಶಕ್ತಿ ಮೇಲೇರತೊಡಗುತ್ತದೆ.
ಇದೇ ಗಣ ಎಂಬುದನ್ನು ಮನುಷ್ಯ ಮಾಡುವ ಕರ್ಮಗಳಿಗೆ ಸಮೀಕರಿಸಿಕೊಂಡರೆ, ಮನುಷ್ಯ ಮಾಡಿದ ಕರ್ಮಗಳಿಗೆ ಅನುಸಾರವಾಗಿ ಪ್ರತಿಫಲ ನೀಡುವ ದೇವತೆಯೂ ಸಹ ಗಣಪತಿಯೇ ಆಗಿದ್ದು ನಾವು ಯಾವುದೇ ಕೆಲಸ ಮಾಡುವುದಕ್ಕೂ ಮುನ್ನ ವಿಘ್ನ ನಿವಾರಕ ಗಣಪತಿಗೆ ಪೂಜೆ ಸಲ್ಲಿಸಿದರೆ ಅದು ನಿರ್ವಿಘ್ನವಾಗಿ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ. ಇವೆಲ್ಲದರ ಜೊತೆಗೆ ಗಣಪತಿ ಶಿವನ ಮಗನಾಗಿದ್ದು ಶಿವನ ಪ್ರತಿನಿಧಿಯೂ ಹೌದು. ಶಿವನನ್ನು ಪಶುಪತಿ ಎಂದೂ ಕರೆಯಲಾಗುತ್ತದೆ. ಶಿವ ಪಶುಪತಿಯಾದರೆ ಪಶುಗಳಲ್ಲಿ ಅಗ್ರಗಣ್ಯ ಗಣಪತಿಯಾಗಿದ್ದು ಪ್ರಪಂಚವನ್ನು ನಿಯಂತ್ರಿಸುತ್ತಿರುವ ತತ್ವ ಶಿವ ಸ್ವರೂಪಿಯಾಗಿದೆ. ಗಣೇಶ ಹಾಗೂ ಶಿವ ಇಬ್ಬರೂ ಓಂ ಸ್ವರೂಪಿಗಳೇ ಆಗಿರುವುದರಿಂದ ಗಣೇಶನನ್ನು ಪೂಜಿಸಿದರೆ ಅದು ಶಿವನನ್ನೂ ತಲುಪುತ್ತದೆ, ಶಕ್ತಿ ಸ್ವರೂಪಿಯಾದ  ಮಾತೆಯನ್ನೂ ತಲುಪುತ್ತದೆ ಎಂಬ ನಂಬಿಕೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com