ಯಹೂದಿಗಳ ಇಸ್ರೇಲ್ ನಲ್ಲೂ ಉಂಟು ಯದುನಂದನ ಶ್ರ‍ಿಕೃಷ್ಣನ ಆರಾಧನೆ!

ಹೇಗೆ ಮಲೇಷ್ಯಾದ ಸುಲ್ತಾನರು ಶ್ರೀರಾಮನನ್ನು ಆರಾಧಿಸಿ, ರಾಮನ ತತ್ವಗಳನ್ನು ಪಾಲಿಸುತ್ತಾರೋ, ಮಲೇಷ್ಯಾಗೂ ಶ್ರೀರಾಮನಿಗೂ ಹೇಗೆ ನಂಟಿದೆಯೋ ಹಾಗೆಯೇ ಇಸ್ರೇಲ್ ಗೂ ಶ್ರೀ ಕೃಷ್ಣನಿಗೂ ನಂಟಿದೆ.
ಮಹಾಭಾರತದಲ್ಲಿ ಶ್ರೀ ಕೃಷ್ಣನ ವಿಶ್ವರೂಪ ದರ್ಶನ
ಮಹಾಭಾರತದಲ್ಲಿ ಶ್ರೀ ಕೃಷ್ಣನ ವಿಶ್ವರೂಪ ದರ್ಶನ
ಏಕಂ ಸತ್‌, ವಿಪ್ರಾಃ ಬಹುದಾವದಂತಿ ಎಂದಿದೆ ಪ್ರಾಚೀನ ಭಾರತ. ಅಂದರೆ ಇರುವುದೊಂದೇ ಸತ್ಯ, ಅದನ್ನು ಜನ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಎಂದು. ಇದು ಭಾರತ ಎಂದಿಗೂ ಬೋಧಿಸುತ್ತಾ ಬಂದಿರುವ ಅಂಶವಾಗಿದೆ. ಇದರೊಂದಿಗೆ ವಿಶ್ವದ ಸಮಸ್ತರನ್ನೂ ಅವರೊಂದಿಗೆ ಬೆರೆತು ಸದ್ಗುಣ ಸಂಪನ್ನರಾಗಿಸುವುದಕ್ಕಾಗಿ ಭಾರತದ ಋಷಿಗಳು ಕೃಣ್ವಂತೋ ವಿಶ್ವಮಾರ್ಯಂ ಎಂಬ ಉದ್ಘೋಷವನ್ನು ನೀಡಿದರು. ಅಂತೆಯೇ ಭಾರತದ ಶ್ರೇಷ್ಠ ಚಿಂತನೆಗಳು, ಸಂಸ್ಕೃತಿಗಳು ವಿಶ್ವದಾದ್ಯಂತ ಪಸರಿಸಿತ್ತು. ಮಲೇಷ್ಯಾದಲ್ಲಿ ಶ್ರೀರಾಮನ ಆರಾಧನೆ, ಇಂಡೋನೇಷ್ಯಾದಲ್ಲಿ ವಿಷ್ಣುವಿನ ಪೂಜೆ, ದೇವಸ್ಥಾನಗಳು ಇರುವುದು ಇದರ ಭಾಗವಾಗಿಯೇ ಎಂದರೆ ತಪ್ಪಾಗುವುದಿಲ್ಲ. 
ಹೇಗೆ ಮಲೇಷ್ಯಾದಲ್ಲಿ ಅಲ್ಲಿ ಪರಮಾಧಿಕಾರವನ್ನು ಹೊಂದಿರುವ ಸುಲ್ತಾನರು ಶ್ರೀರಾಮನನ್ನು ಆರಾಧಿಸಿ, ರಾಮನ ತತ್ವಗಳನ್ನು ಪಾಲಿಸುತ್ತಾರೋ, ಮಲೇಷ್ಯಾಗೂ ಶ್ರೀರಾಮನಿಗೂ ಹೇಗೆ ನಂಟಿದೆಯೋ ಹಾಗೆಯೇ ಇಸ್ರೇಲ್ ಗೂ ನಾವು ಜಗದ್ಗುರು ಎನ್ನುವ ಶ್ರೀ ಕೃಷ್ಣನಿಗೂ ನಂಟಿದೆ. ಮಲೇಷ್ಯಾದಲ್ಲಿ ರಾಮನನ್ನು ಪೂಜಿಸಿದಂತೆ ಇಸ್ರೇಲ್ ನಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುತ್ತಾರೆ. ಕೇವಲ ಇಸ್ರೇಲ್ ನಲ್ಲಿ ಮಾತ್ರ ಕೃಷ್ಣನ ಆರಾಧನೆ, ಆತನಿಗೆ ಪೂಜನೀಯ ಸ್ಥಾನದ ಕುರುಹುಗಳು ಸೀಮಿತವಾಗುವುದಿಲ್ಲ. ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಶ್ರೀಕೃಷ್ಣನ ಪೂಜನೀಯ ಭಾವನೆ, ಅಲ್ಲಿಗೂ ಶ್ರ‍ಿಕೃಷ್ಣನಿಗೂ ಇರಬಹುದಾದ ನಂಟಿನ ಬಗ್ಗೆಯೂ ಕುರುಹುಗಳಿವೆ, ಇದಕ್ಕೆ ಪೂರಕವಾಗಿ ಇರಾನಿನ ಸುಸ ಎಂಬ ಪ್ರದೇಶದಲ್ಲಿ ಪಾರ್ಥಿಯನ್ ಕಾಲಾವಧಿಯ( ಕ್ರಿ.ಪೂ 247- ಕ್ರಿ.ಶ.-224)  ಶ್ರೀ ಕೃಷ್ಣನ ವಿಗ್ರಹಗಳು ಪತ್ತೆಯಾಗಿವೆ! ಅಷ್ಟೇ ಅಲ್ಲದೇ ಪಾರ್ಥಿಯನ್ ಎಂಬುದಕ್ಕೂ ಕೃಷ್ಣನಿಗಿರುವ ಪಾರ್ಥಸಾರಥಿ ಎಂಬ ಹೆಸರಿಗೂ ಸಾಮ್ಯತೆ ಇದೆ. ಮಹಾಭಾರತದ ಯುದ್ಧದ ನಂತರ ಯಾದವರಲ್ಲಿ ಕೆಲವರು ಈಗಿನ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸೇರುವ ಇರಾನ್ ಇರಾಕ್ ಹಾಗು ಇಸ್ರೇಲ್ ಗಳಿಗೆ ವಲಸೆ ಹೋದರು ಎಂಬ ಪ್ರತೀತಿ ಇದಕ್ಕೆ ಪೂರಕವಾಗಿದೆ. ಇದು ಇರಾನಿನ ಕತೆಯಾದರೆ ಇರಾಕ್ 1979ರಕ್ಕು ಮೊಸುಲ್ ಸ್ಪ್ರಿಂಗ್ ಫೆಸ್ಟಿವಲ್ ಆಚರಣೆ ಸಂದರ್ಭದಲ್ಲಿ ಶ್ರ‍ಿ ಕೃಷ್ಣನನ್ನೇ ಹೋಲುವ ನವಿಲುಗರಿ, ಕೊಳಲು ನುಡಿಸುತ್ತಿರುವ ಕೃಷ್ಣ ಗರ್ಲ್ ಚಿತ್ರ ಹೊಂದಿದ್ದ ಸ್ಟ್ಯಾಂಪ್ ನ್ನು ಬಿಡುಗಡೆ ಮಾಡಿತ್ತು. 
ಮತ್ತೊಂದು ವಿಶೇಷ ಸಂಗತಿಯೆಂದರೆ ಇಸ್ರೇಲ್ ನಲ್ಲಿ ಕಿಶೋನ್ ನದಿ ಇದ್ದು,  ಬಾಲ್ಗಾದ್ ಎಂಬ ನಗರವೂ ಇದೆ. ಇದು ಪ್ರಾಚೀನ ಇಸ್ರೇಲ್ ನಲ್ಲಿ ಕಾನಾನ್ಯರ ನಗರವಾಗಿತ್ತು. ಪ್ರಾಚೀನ ಭಾರತದ ವೇದ ಸಂಸ್ಕೃತಿಗೂ ಇಸ್ರೇಲ್, ಇರಾನ್, ಈಜಿಪ್ಟ್ ಗಳಲ್ಲಿ ಇದ್ದ ಸಂಸ್ಕೃತಿಗಳಿಗೂ ಇರುವ ಸಂಬಂಧವನ್ನು ಅರಿತು ವಿವರಣೆ ನೀಡಲು ಯತ್ನಿಸಿದ್ದ  ಇತಿಹಾಸಕಾರ ಪ್ರೊಫೆಸರ್ ಪಿ.ಎನ್ ಓಕ್ ಇಸ್ರೇಲ್ ನ ಕಾನಾನ್ಯರು ಹಾಗೂ ಬಾಲ್ ಗಡ್ ನಗರಕ್ಕೂ ಭಾರತದಲ್ಲಿ ಅವತಾರ ಪುರುಷನೆಂದೇ ನಂಬಲಾಗುವ ಶ್ರೀಕೃಷ್ಣನಿಗೂ ಇರಬಹುದಾದ ನಂಟಿನ ಬಗ್ಗೆ ಹೇಳಿದ್ದಾರೆ. ಶ್ರೀ ಕೃಷ್ಣನನ್ನು ಉತ್ತರ ಭಾರತದ ಕನ್ಹಾ ಎಂದೂ ಹೇಳುತ್ತಾರೆ, ಆದ್ದರಿಂದ ಕನ್ಹಾನನ್ನು ಅತ್ಯಂತ ಇಷ್ಟಪಡುತ್ತಿದ್ದ ಜನರು ಕಾನಾನ್ಯರು ಹಾಗೂ ಕೃಷ್ಣನನ್ನು ಬಾಲಕೃಷ್ಣ, ಬಾಲೇಶ್ವರ ಎಂದೂ ಹೇಳುತ್ತಿದ್ದರು. ಶ್ರ‍ೀಕೃಷ್ಣನ ಈ ಹೆಸರು ಇಸ್ರೇಲ್ ನ ಬಾಲ್ಗಾದ್ ಹೆಸರಿನ ಅಪಭ್ರಂಶವೂ ಆಗಿರಬಹುದು ಎಂದು ಪಿಎನ್ ಓಕ್ ನಂಬಿದ್ದರು.  ಇವೆಲ್ಲದರ ಹೊರತಾಗಿ ಆ ಸಣ್ಣ ರಾಷ್ಟ್ರ ಯಹೂದಿಗಳ ನಾಡು ಇಸ್ರೇಲ್ ನಲ್ಲಿ ಇಂದಿಗೂ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಅಲ್ಲಿನ ಭಾರತೀಯರೊಂದಿಗೆ ಆಸಕ್ತಿಯುಳ್ಳ ಅಲ್ಲಿನ ಸ್ಥಳೀಯರೂ ಭಾಗವಹಿಸಿ 108 ಬಗೆಯ ತಿನಿಸುಗಳನ್ನು ಸಿದ್ಧಪಡಿಸಿ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪೂಜಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com