ಚೈತ್ರ ನವರಾತ್ರಿಯ ಮಹತ್ವ, ಆಚರಣೆಯ ಹಿನ್ನೆಲೆ ಏನು ಗೊತ್ತಾ?

ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ವ್ಯಾಪಕವಾಗಿದೆ. ಚೈತ್ರ ನವರಾತ್ರಿಯನ್ನು ರಾಮ ನವರಾತ್ರಿ ಎಂದೂ ಹೇಳುತ್ತಾರೆ. ಇಲ್ಲಿನ ಶರನ್ನವರಾತ್ರಿ ಮಾದರಿಯಲ್ಲೇ ಉತ್ತರ ಭಾರತದಲ್ಲಿ ಚೈತ್ರಯನ್ನು ಶಕ್ತಿ ದೇವತೆಯ...
ಚೈತ್ರ ನವರಾತ್ರಿ
ಚೈತ್ರ ನವರಾತ್ರಿ
ತಲತಲಾಂತರದಿಂದಲೂ ಭಾರತ ವಿಭಿನ್ನ ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳನ್ನು ಹೊಂದಿರುವ ನೆಲೆವೀಡು. ಇಲ್ಲಿನ ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹೆಜ್ಜೆ-ಹೆಜ್ಜೆಗೂ ವಿಭಿನ್ನವಾಗಿರುತ್ತದೆ. ಅರ್ಥಾತ್ ದೇಶಾದ್ಯಂತ ಒಂದೇ ರೀತಿ ಇರುವುದಿಲ್ಲ. ಅದೇ ಭಾರತದ ವೈಶಿಷ್ಟ್ಯ ಹಾಗೂ ಸತ್ವ ಕೂಡ ಆಗಿದೆ.  
ದಕ್ಷಿಣ ಭಾರತದಲ್ಲಿ ಮೊನ್ನೆಯಷ್ಟೇ ಯುಗಾದಿಯನ್ನು ವೈಭವದಿಂದ ಆಚರಿಸಿದೆವು. ಯುಗಾದಿಯಲ್ಲೂ ಸೌರಮಾನ-ಚಾಂದ್ರಮಾನ ಎಂಬ ಎರಡು ತೆರನಾದ ಯುಗಾದಿಗಳಿದೆ. ದಕ್ಷಿಣ ಭಾರತದಲ್ಲಿ ಯುಗಾದಯನ್ನು ವ್ಯಾಪಕವಾಗಿ ಆಚರಿಸಿದರೆ, ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ವ್ಯಾಪಕವಾಗಿದೆ. ಚೈತ್ರ ನವರಾತ್ರಿಯನ್ನು ರಾಮ ನವರಾತ್ರಿ ಎಂದೂ ಹೇಳುತ್ತಾರೆ. ಇಲ್ಲಿನ ಶರನ್ನವರಾತ್ರಿ ಮಾದರಿಯಲ್ಲೇ ಉತ್ತರ ಭಾರತದಲ್ಲಿ ಚೈತ್ರಯನ್ನು ಶಕ್ತಿ ದೇವತೆಯ ಉಪಾಸನೆಗಾಗಿ ಆಚರಿಸಲಾಗುತ್ತದೆ. 
ಚೈತ್ರ ನವರಾತ್ರಿ ವಸಂತಕಾಲದಲ್ಲಿ ಬರುವುದರಿಂದ ಅದಕ್ಕೆ ವಸಂತ ನವರಾತ್ರಿ ಎಂಬ ಹೆಸರಿದ್ದು, ಚೈತ್ರ ಶುದ್ಧ ಪಾಡ್ಯ (ಯುಗಾದಿಯ ದಿನದಿಂದ) ಪ್ರಾರಂಭವಾಗಿ ಶ್ರೀರಾಮ ಜನಿಸಿದ ದಿನ ಚೈತ್ರ ಶುದ್ಧ ನವಮಿಯ ವರೆಗೂ ಚೈತ್ರ ನವರಾತ್ರಿಯ ಆಚರಣೆ ನಡೆಯುತ್ತದೆ. ಶರನ್ನವರಾತ್ರಿಯ ಆಚರಣೆಯ ರೀತಿಯಲ್ಲೇ ಚೈತ್ರ ಮಾಸದ ನವರಾತ್ರಿಯಲ್ಲೂ ಪ್ರತಿ ದಿನವೂ ಶಕ್ತಿ ದೇವತೆಗಳ ಆರಾಧನೆ ನಡೆಯಲಿದೆ. 
ಚೈತ್ರ ನವರಾತ್ರಿಗೂ ಅಯೋಧ್ಯೆಗೂ ಶ್ರೀ ರಾಮ ಜನ್ಮದ ನಂಟು ಮಾತ್ರವಲ್ಲದೇ, ಮತ್ತೊಂದು ಹಿನ್ನೆಲೆಯೂ ಇದೆ. ಅಯೋದ್ಯೆಯನ್ನು ಧ್ರುವಸಿಂಧು ಎಂಬ ಮಹಾರಾಜ ಆಳುತ್ತಿರುತ್ತಾನೆ. ಆತನಿಗೆ ಇಬ್ಬರು ಪತ್ನಿಯರು, ಮೊದಲ ಪತ್ನಿ ಮನೋರಮೆಯ ಮಗ ಸುದರ್ಶನ, ಎರಡನೇ ಪತ್ನಿ ಲೀಲಾವತಿಯ ಮಗ ಶತ್ರುಜಿತ್. ಧ್ರುವಸಿಂಹ ಬೇಟೆಯಾಡುವಾಗ ಅಕಾಲ ಮೃತ್ಯುವಿಗೆ ತುತ್ತಾಗುತ್ತಾನೆ. ಸಿಂಹಾಸನಾಧಿಕಾರಕ್ಕೆ ಇಬ್ಬರು ಪತ್ನಿಯರ ಮಕ್ಕಳ ನಡುವೆ ಪೈಪೋಟಿ ನಡೆಯುತ್ತದೆ. ಇದಕ್ಕಾಗಿ ಯುದ್ದವೂ ನಡೆಯುತ್ತದೆ. ಯುದ್ಧದಲ್ಲಿ ಸುದರ್ಶನ ಸೋತಿದ್ದರಿಂದ ಆತ ತನ್ನ ತಾಯಿ ಹಾಗೂ ಸೇವಕನೊಡನೆ. ಭರದ್ವಾಜ ಋಷಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ಸುದರ್ಶನ ಆಶ್ರಮದಲ್ಲಿರುವವರೊಬ್ಬರು ಹೇಳಿದ ಶಬ್ದವನ್ನು ತಪ್ಪಾಗಿ ಕೇಳಿಸಿಕೊಂಡು ಅದನ್ನೇ ಪದೇ ಪದೇ ಹೇಳಲು ಪ್ರಾರಂಭಿಸುತ್ತಾನೆ. ಅದು ಕ್ಲೀಂ ಎಂಬ ಶಬ್ದವಾಗಿದ್ದು, ದೇವಿಯ ಉಪಾಸನೆ ವೇಳೆ ಹೇಳಿಕೊಳ್ಳುವ ಬೀಜಾಕ್ಷರವಾಗಿರುತ್ತದೆ. ಹೀಗೆ ಸುದರ್ಶನ ತನಗೆ ಅರಿವಿಲ್ಲದಂತೆಯೇ ಕ್ಲೀಂ ಎಂಬ ಬೀಜಾಕ್ಷರ ಹೇಳುತ್ತಿದ್ದರಿಂದ ಆದಿ ಪರಾಶಕ್ತಿಯು ಸಂತುಷ್ಟಗೊಂಡು ಆತನಿಗೆ ಮರಳಿ ಕೋಲಸ ದೇಶ ಸಿಕ್ಕಿ ರಾಜನಾಗುತ್ತಾನೆ. ದೇವಿಯು ಕೃಪೆಯಿಂದ ತಾನು ಮತ್ತೆ ರಾಜನಾಗಿದ್ದರಿಂದ ದೇವಿಯನ್ನು 9 ದಿನಗಳ ಕಾಲ ಆರಾಧಿಸುತ್ತಾನೆ. ಆ ಆರಾಧನೆಯೇ ನವರಾತ್ರಿಯಾಗಿ ಆಚರಿಸಲ್ಪಡುತ್ತಿದೆ ಎಂಬುದು ಚೈತ್ರ ಮಾಸದ ನವರಾತ್ರಿಯ ಪೌರಾಣಿಕ ಹಿನ್ನೆಲೆಯಾಗಿದೆ. 
ಚೈತ್ರ ನವರಾತ್ರಿಯ ಆಚರಣೆ ವೇಳೆ ದುರ್ಗಿಯ ಆರಾಧನೆ ಶ್ರೇಷ್ಠ: 
ಚೈತ್ರ ಮಾಸದ ನವರಾತ್ರಿಯ ಆಚರಣೆಯಲ್ಲಿ 9 ದಿನಗಳು ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡಿದರೆ ಮನೋಭಿಲಾಷೆಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಉತ್ತರ ಭಾರತದಲ್ಲಿ (ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ) ಅನೇಕರು ಉಪವಾಸವಿದ್ದು, ದುರ್ಗೆಗೆ ನಮಿಸುತ್ತಾರೆ. ದಕ್ಷಿಣ ಭಾರತದಲ್ಲಿರುವ ಅನೇಕ ಜನರೂ ಸಹ ಚೈತ್ರ ನವರಾತ್ರಿಯ ವೇಳೆ ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com