ಪ್ರಧಾನಿ ಮೋದಿ ಭೇಟಿ ನೀಡಿದ್ದ ಭುವನೇಶ್ವರದ ಲಿಂಗರಾಜ ದೇವಾಲಯದ ವಿಶೇಷತೆಗಳೇನು ಗೊತ್ತಾ?

ಒರಿಸ್ಸಾದ ರಾಜಧಾನಿ ಭುವನೇಶ್ವರ ದೇಗುಲಗಳ ನಗರಿ. ಇಲ್ಲಿನ ಅನೇಕ ದೇವಾಲಯಗಳು ವಾಸ್ತು ಶಿಲ್ಪದಿಂದ ಮಹತ್ವ, ಪ್ರಸಿದ್ಧಿ ಪಡೆದಿವೆ. ಈ ಪೈಕಿ ಲಿಂಗರಾಜ ದೇವಾಲಯವೂ ಒಂದು.
ಲಿಂಗರಾಜ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಲಿಂಗರಾಜ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಪ್ರಧಾನಿ ನರೇಂದ್ರ ಮೋದಿ ಏ.16 ರಂದು ಒಡಿಶಾದ (ಒರಿಸ್ಸಾ) ಭುವನೇಶ್ವರದ ಲಿಂಗರಾಜ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ದೇವಾಲಯಕ್ಕೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ನಂತರ ಭೇಟಿ ನೀಡಿದ ಎರಡನೇ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಮೋದಿ ಭೇಟಿ ನೀಡಿದ್ದ ಲಿಂಗರಾಜ ದೇವಾಲಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಭುವನೇಶ್ವರದ ಪ್ರಸಿದ್ಧ ದೇವಾಲಯಗಳಲ್ಲಿ ಪ್ರಮುಖವಾದದ್ದಾಗಿದೆ. 
ಒರಿಸ್ಸಾದ ರಾಜಧಾನಿ ಭುವನೇಶ್ವರ ದೇಗುಲಗಳ ನಗರಿ. ಇಲ್ಲಿನ ಅನೇಕ ದೇವಾಲಯಗಳು ವಾಸ್ತು ಶಿಲ್ಪದಿಂದ ಮಹತ್ವ, ಪ್ರಸಿದ್ಧಿ ಪಡೆದಿವೆ. ಈ ಪೈಕಿ ಲಿಂಗರಾಜ ದೇವಾಲಯವೂ ಒಂದು. ಒಡಿಶಾದ ಅತಿ ದೊಡ್ಡ ದೇವಾಲಯಗಳ ಪೈಕಿ ಒಂದಾಗಿರುವ ಲಿಂಗರಾಜ್ ದೇವಾಲಯಕ್ಕೆ ಸುಮಾರು 1000 ವರ್ಷಗಳ ಇತಿಹಾಸವಿದ್ದು, ಯಾತ್ರಿಗಳು ಮತ್ತು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. 
ಪೌರಾಣಿಕ ಹಿನ್ನೆಲೆ
ಬ್ರಹ್ಮ ಪುರಾಣಗಳಲ್ಲಿಯೂ ಉಲ್ಲೇಖವಾಗಿರುವ ಭುವನೇಶ್ವರ ಪವಿತ್ರ ಪುಣ್ಯಕ್ಷೇತ್ರವಾಗಿದ್ದು, ಕೋಟಿ ಶಿವಲಿಂಗಗಳು ಪ್ರತಿಷ್ಠಾಪಿಸಲ್ಪಟ್ಟ ಏಕಾಮ್ರ ಕ್ಷೇತ್ರವೆಂದು ಬ್ರಹ್ಮ ಪುರಾಣೆ ಹೇಳಿದೆ. ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಲಿಂಗರಾಜ ದೇವಾಲಯ ಮೊದಲು ನಿರ್ಮಾಣಗೊಂಡಿದ್ದು ರಾಜ ಯಯಾತಿ ಕೇಸರಿ ಆಡಳಿತಾವಧಿಯ 7 ನೇ ಶತಮಾನದಲ್ಲಿ. ರಾಜ ಯಯಾತಿ ಕೇಸರಿ ತನ್ನ ರಾಜಧಾನಿಯನ್ನು ಜೈಪುರದಿಂದ ಭುವನೇಶ್ವರಕ್ಕೆ ವರ್ಗಾವಣೆ ಮಾಡಿದ ನಂತರ 10 ನೇ ಶತಮಾನದಲ್ಲಿ ನೃಪತಿ ಕೇಸರಿ ಕಟ್ಟ್‌ಕ್ ನ್ನು ರಾಜಧಾನಿಯನ್ನಾಗಿಸಿಕೊಳ್ಳುವವರೆಗೂ ಭುವನೇಶ್ವರ ಕೇಸರಿ ರಾಜರ ರಾಜಧಾನಿಯಾಗಿ ಮುಂದುವರೆದಿತ್ತು.
ಭುವನೇಶ್ವರದ ದೇವಾಲಯಗಳ ಪೈಕಿ ಪರಶುರಾಮೇಶ್ವರ ದೇವಾಲಯವೇ ಅತ್ಯಂತ ಪುರಾತನ ದೇವಾಲಯವಾಗಿದ್ದು, ಪರಶುರಾಮೇಶ್ವರ ದೇವಾಲಯದ ನಂತರ ಲಿಂಗರಾಜ ದೇವಾಲಯ ಎರಡನೇ ಅತ್ಯಂತ ಪುರಾತನ ದೇವಾಲಯವಾಗಿದೆ. ಅತ್ಯಂತ ವಿಸ್ತಾರವಾದ ಪ್ರದೇಶದಲ್ಲಿ ಲಿಂಗರಾಜ ದೇವಾಲಯವನ್ನು ನಿರ್ಮಿಸಲಾಗಿದ್ದು, ನಟ ಮಂದಿರ, ಭೋಗ ಮಂದಿರಗಳನ್ನು ನಂತರದ ದಿನಗಳಲ್ಲಿ ನಿರ್ಮಿಸಲಾಗಿದೆ. 
ಪುರಾಣಗಳ ಪ್ರಕಾರ ಲಿಂಗರಾಜ ದೇವಾಲಯವಿರುವ ಏಕಾಮ್ರ ತೀರ್ಥಕ್ಷೇತ್ರ ತನ್ನ ಸಾನ್ನಿಧ್ಯವಿರುವುದನ್ನು ಶಿವ ಪ್ರಕಟಿಸಿದ ಕ್ಷೇತ್ರವಾಗಿದೆ. ಒಮ್ಮೆ ದನಗಾಹಿ ಮಹಿಳೆ ವೇಷದಲ್ಲಿ ಏಕಾಮ್ರ ಕ್ಷೇತ್ರವನ್ನು ಸಂದರ್ಶಿಸಲು ಬರುತ್ತಾಳೆ ಪಾರ್ವತಿ ದೇವಿ. ದನಗಾಹಿ ವೇಷದಲ್ಲಿದ್ದ ಪಾರ್ವತಿ ದೇವಿಯನ್ನು ನೋಡಿದ ಕೃತ್ತಿ ಹಾಗೂ ವಾಸ ಎಂಬ ಇಬ್ಬರು ದಾನವರು ಆಕೆಯನ್ನು ವಿವಾಹವಾಗಲು ಬಯಸುತ್ತಾರೆ. ಆದರೆ ಪಾರ್ವತಿ ತನ್ನನ್ನು ಹೆಗಲ ಮೇಲೆ ಹೊತ್ತು ಹೋಗುವಂತೆ ಇಬ್ಬರಿಗೂ ಹೇಳುತ್ತಾಳೆ, ಹೀಗೆ ಹೊತ್ತೊಯ್ಯುತ್ತಿರಬೇಕಾದರೆ ಪಾರ್ವತಿ ದೇವಿ ಇಬ್ಬರೂ ರಾಕ್ಷಸರನ್ನು ಸಂಹರಿಸುತ್ತಾಳೆ. ಸಂಹರಿಸಿದ ನಂತರ ರೌದ್ರಾವತಾರ ತಾಳಿದ ಪಾರ್ವತಿಯ ಬಾಯಾರಿಕೆಯನ್ನು ನೀಗಿಸಲು ಸಾಕ್ಷಾತ್ ಶಿವ ಬಿಂದು ಸರಸ್ (ಬಿಂದು ಸಾಗರ) ಎಂಬ ಸರೋವರವನ್ನು ಸೃಷ್ಟಿಸಿ, ಪಾರ್ವತಿಯೊಂದಿಗೆ ಕೃತ್ತಿವಾಸ ಅಥವಾ ಲಿಂಗರಾಜನಾಗಿ ನೆಲೆನಿಲ್ಲುತ್ತಾನೆ ಎಂಬ ಪ್ರತೀತಿ ಇದೆ. 
ಲಿಂಗರಾಜ ದೇವಾಲಯದಲ್ಲಿ 22 ವಿಧದ ಪೂಜೆಗಳು ನಡೆಯಲಿದ್ದು, ವರ್ಷಕ್ಕೊಮ್ಮೆ ಲಿಂಗರಾಜ ಉತ್ಸವ ಮೂರ್ತಿಯನ್ನು ಬಿಂದು ಸಾಗರ ಸರೋವರದ ಮಧ್ಯಭಾಗದಲ್ಲಿರುವ ಜಲಮಂದಿರಕ್ಕೆ ತಂದು ಪೂಜೆ ನೆರವೇರಿಸಲಾಗುವುದು ದೇವಾಲಯದ ವಿಶೇಷತೆಗಳಲ್ಲಿ ಒಂದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com