ಭೂತಗಳಿಂದ ನಿರ್ಮಾಣವಾದ ಶಿವನ ದೇವಾಲಯ ಇರುವುದೆಲ್ಲಿ ಗೊತ್ತಾ?

ದೇವಸ್ಥಾನಗಳನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳೆಂದು ಪರಿಗಣಿಸಲಾಗುತ್ತದ್ದು, ಋಣಾತ್ಮಕ ಶಕ್ತಿಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು ನೀಡಬಲ್ಲಂತಹ ಪ್ರದೇಶ ಎಂಬ ನಂಬಿಕೆ ಇದೆ. ಆದರೆ ಅದೇ ಋಣಾತ್ಮಕ ಶಕ್ತಿಗಳ....
ಭೂತೋವಾಲ ಮಂದಿರ್
ಭೂತೋವಾಲ ಮಂದಿರ್
ದೇವಸ್ಥಾನಗಳನ್ನು ಧಾರ್ಮಿಕ ಶ್ರದ್ಧಾ ಕೇಂದ್ರಗಳೆಂದು ಪರಿಗಣಿಸಲಾಗುತ್ತದ್ದು, ಋಣಾತ್ಮಕ ಶಕ್ತಿಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು ನೀಡಬಲ್ಲಂತಹ ಪ್ರದೇಶ ಎಂಬ ನಂಬಿಕೆ ಇದೆ. ಆದರೆ ಅದೇ ಋಣಾತ್ಮಕ ಶಕ್ತಿಗಳ ಪ್ರತಿನಿಧಿಯಾಗಿರುವ ಭೂತಗಳು ಸಕಾರಾತ್ಮಕ ಶಕ್ತಿಯ ಪ್ರತೀಕವಾದ ದೇವಾಲಯಗಳನ್ನು ನಿರ್ಮಿಸಿವೆ ಎಂದರೆ ನಂಬಲು ಸಾಧ್ಯವೇ?
ಹೌದು ಇಂಥದ್ದೊಂದು ದೇವಾಲಯ ಉತ್ತರ ಪ್ರದೇಶದ ಹಾಪುರದ ದಟಿಯಾನ ಗ್ರಾಮದಲ್ಲಿದೆ. ಸ್ಥಳೀಯರ ಪ್ರಕಾರ ಈ ಶಿವನ ದೇವಾಲಯವನ್ನು ರಾತ್ರೋರಾತ್ರಿ ಭೂತಗಳೇ ನಿರ್ಮಾಣ ಮಾಡಿದ್ದು ಕನಿಷ್ಠ 1000 ವರ್ಷದ ಇತಿಹಾಸವಿದ್ದು ಭೂತೋವಾಲ ಮಂದಿರ್ ಎಂದೇ ಈ ದೇವಾಲಯಕ್ಕೆ ಹೆಸರು ಬಂದಿದೆ.
ಈ ದೇವಾಲಯ ಭೂತಗಳಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆಯಾದರೂ ಕೆಂಪು ಇಟ್ಟಿಗೆಗಳಿಂದಲೇ ಸಾಮಾನ್ಯವಾಗಿ ನಿರ್ಮಿಸಲಾಗುವ ರೀತಿಯಲ್ಲಿಯೇ ಇದೆ. ಭೂತಗಳು ರಾತ್ರೋರಾತ್ರಿ ದೇವಾಲಯವನ್ನು ನಿರ್ಮಿಸಿವೆಯಾದರೂ,  ದೇವಾಲಯದ ಶಿಖರದ ಭಾಗವನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲವಂತೆ. ಆದ್ದರಿಂದ ದೇವಾಲಯದ ಶಿಖರ ಭಾಗವನ್ನು ಮನುಷ್ಯರೇ ಪೂರ್ಣಗೊಳಿಸಿದ್ದಾರೆ.
ಗ್ರಾಮಸ್ಥರ ನಂಬಿಕೆಯ ಪ್ರಕಾರ ರಾತ್ರೋರಾತ್ರಿ ದೇವಾಲಯ ನಿರ್ಮಿಸುತ್ತಿದ್ದ ಭೂತಗಳು ಶಿಖರವನ್ನು ಪೂರ್ಣಗೊಳಿಸುವ ವೇಳೆಗೆ ಬೆಳಕಾಗಿತ್ತು. ಅವು ಆ ಜಾಗದಿಂದ ತೆರಳಬೇಕಿದ್ದರಿಂದ ಶಿಖರದ ಭಾಗ ಪೂರ್ಣಗೊಂಡಿಲ್ಲ, ಆದ್ದರಿಂದ ಇತ್ತೀಚೆಗಷ್ಟೇ ಅದನ್ನು ಗ್ರಾಮಸ್ಥರೇ ಪೂರ್ಣಗೊಳಿಸಿದ್ದಾರೆ. ಈಗ ದೇವಾಲಯದ ಒಳ ಭಾಗದಲ್ಲೂ ನವೀಕರಣ ಮಾಡಲಾಗಿದೆ.
ಇನ್ನು ಈ ದೇವಾಲಯವನ್ನು ಭೂತಗಳು ನಿರ್ಮಿಸಿದ್ದರಿಂದ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲವೇ ಎಂಬ ಪ್ರಶ್ನೆಗೂ ಗ್ರಾಮಸ್ಥರೇ ಉತ್ತರಿಸಿದ್ದು, ಭೂತಗಳು ನಿರ್ಮಿಸಿರುವ ದೇವಾಲಯದಿಂದ ಯಾವುದೇ ಸಮಸ್ಯೆಗಳು ಇಲ್ಲ. ಅದರಿಂದ ನಮಗೆ ಒಳ್ಳೆಯದೇ ಆಗಿದೆ. ಅತಿವೃಷ್ಟಿ-ಅನಾವೃಷ್ಟಿಯ ಸಂದರ್ಭದಲ್ಲಿ ಬೇರೆ ಊರಿನ ರೈತರೆಲ್ಲಾ ಸಮಸ್ಯೆ, ತೀವ್ರ ಸಂಕಷ್ಟ ಎದುರಿಸಿದರೆ ಈ ದೇವಾಲಯದ ಪ್ರಭಾವದಿಂದ ನಮಗೆ ಅಂತಹ ಸಮಸ್ಯೆಗಳು ಎದುರಾಗಿಲ್ಲ. ದೇವಾಲಯ ರೈತರನ್ನು, ಗ್ರಾಮಸ್ಥರನ್ನು ಸಂಕಷ್ಟದ ಪರಿಸ್ಥಿತಿಯಿಂದ ಕಾಪಾಡುತ್ತಿದೆ ಎಂದೇ ಈ ಗ್ರಾಮಸ್ಥರು ನಂಬಿ ಅತ್ಯಂತ ಭಕ್ತಿಪೂರ್ವಕವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com