'ಶಾರದಾ ಸರ್ವಜ್ಞಪೀಠ'ದ ದಕ್ಷಿಣದ ಬಾಗಿಲನ್ನು ತೆರೆದಿದ್ದ ಶಂಕರರು: ಆ ವಿದ್ಯಾಲಯದ ಬಗ್ಗೆ ಮತ್ತೆ ದಕ್ಷಿಣದಿಂದಲೇ ಜಾಗೃತಿ ಶುರು!

ಸರ್ವಜ್ಞಪೀಠದ ನಾಲ್ಕು ದಿಕ್ಕುಗಳಲ್ಲಿ ದಕ್ಷಿಣದ ಬಾಗಿಲು ತೆಗೆದಿಲ್ಲವೆಂಬ ವಿಚಾರ ತಿಳಿದಾಗ ದಕ್ಷಿಣದವರಿಗೆ ಬಂದಿದ್ದ ಅಪಕೀರ್ತಿಯನ್ನು ತೊಡೆಯಲು ಆದಿ ಶಂಕರಾಚಾರ್ಯರು ಕಾಶ್ಮೀರಕ್ಕೆ ಹೋದರು ಎನ್ನುತ್ತಾರೆ
'ಶಾರದಾ ಸರ್ವಜ್ಞಪೀಠ'ದ ದಕ್ಷಿಣದ ಬಾಗಿಲನ್ನು ತೆರೆದಿದ್ದ ಶಂಕರರು: ಭಾರತದ ಶ್ರೇಷ್ಠ ವಿದ್ಯಾಲಯದ ಬಗ್ಗೆ ಮತ್ತೆ ದಕ್ಷಿಣದಿಂದಲೇ ಜಾಗೃತಿ ಶುರು!
'ಶಾರದಾ ಸರ್ವಜ್ಞಪೀಠ'ದ ದಕ್ಷಿಣದ ಬಾಗಿಲನ್ನು ತೆರೆದಿದ್ದ ಶಂಕರರು: ಭಾರತದ ಶ್ರೇಷ್ಠ ವಿದ್ಯಾಲಯದ ಬಗ್ಗೆ ಮತ್ತೆ ದಕ್ಷಿಣದಿಂದಲೇ ಜಾಗೃತಿ ಶುರು!
ಆದಿ ಶಂಕರಾಚಾರ್ಯರು ವೈದಿಕ ಧರ್ಮದ ಪುನರುದ್ಧಾರಕ್ಕಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಚಿಕ್ಕವಯಸ್ಸಿನಲ್ಲಿಯೇ ವೇದಾಧ್ಯಯನ, ಶಾಸ್ತ್ರಪಾಂಡಿತ್ಯ, ವೈದಿಕ, ಅವೈದಿಕ ದರ್ಶನಗಳು ಮುಂತಾದವುಗಳ ಬಗ್ಗೆ ಅಪಾರ ಜ್ಞಾನವನ್ನು ಸಂಪಾದಿಸಿದರು. ತಮ್ಮ ತಲಸ್ಪರ್ಶಿ ಅಧ್ಯಯನಗಳ ಮೂಲಕ ಗ್ರಂಥರಚನೆಗಳನ್ನು ಮಾಡಿದರು. ಮಾಧವ ಕವಿಯು ಶಂಕರರು ಸರ್ವಜ್ಞಪೀಠಾರೋಹಣ ಮಾಡಿರುವುದು ಅವರಿಗೆ ಸರ್ವಶಾಸ್ತ್ರಗಳ ಬಗ್ಗೆ ಅಪಾರ ಪಾಂಡಿತ್ಯವಿತ್ತು ಎಂಬುದಕ್ಕೆ ಸಾಕ್ಷಿಯೆಂದಿದ್ದಾರೆ. ಸರ್ವಜ್ಞಪೀಠದ ಬಗ್ಗೆ ತಿಳಿದಾಗ ಅಂದರೆ ನಾಲ್ಕು ದಿಕ್ಕುಗಳಲ್ಲಿ ದಕ್ಷಿಣದ ಬಾಗಿಲು ತೆಗೆದಿಲ್ಲವೆಂಬ ವಿಚಾರ ತಿಳಿದಾಗ ದಕ್ಷಿಣದವರಿಗೆ ಬಂದಿದ್ದ ಅಪಕೀರ್ತಿಯನ್ನು ತೊಡೆಯಲು ಅವರು ಕಾಶ್ಮೀರಕ್ಕೆ ಹೋದರು ಎನ್ನುತ್ತಾರೆ. 
ಈ ಸಂದರ್ಭದಲ್ಲಿ ಶಂಕರರು ಪಂಡಿತರಿಂದ ತೊಂದರೆಯನ್ನು ಅನುಭವಿಸುತ್ತಾರೆ. ಇದು ಸರ್ವಜ್ಞಪೀಠದ ವಾತಾವರಣದಲ್ಲಿ ಕೂಡ ಅಸೂಯಪರರಿದ್ದರು ಎಂಬುದನ್ನು ತೋರಿಸುತ್ತದೆ. ಆದರೆ ವೈದಿಕ ಧರ್ಮದ ಪುನರುತ್ಥಾನಕ್ಕಾಗಿಯೇ ಬಂದ ಆಚಾರ್ಯ ಶಂಕರರಿಗೆ ಇದು ಅಸಹಜವೇನಲ್ಲ. ಮುಂದೆ ವಾದಿಗಳು ಶಂಕರರನ್ನು ಗೌರವಿಸಿ ಪೀಠಾರೋಹಣಕ್ಕೆ ಅನುವು ಮಾಡಿಕೊಟ್ಟಾಗ ಸಾಕ್ಷಾತ್ ಸರಸ್ವತಿಯೇ ಅಶರೀರವಾಣಿಯಿಂದ ಕೆಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಅವುಗಳಿಗೆ ಕೂಡ ಸಮರ್ಪಕವಾಗಿ ಉತ್ತರಿಸುವ ಶಂಕರರು ಸರಸ್ವತಿಯನ್ನೂ ನಿರುತ್ತರಳನ್ನಾಗಿಸುತ್ತಾರೆ. ಈ ಸಂದರ್ಭ ಅಥವಾ ಘಟನೆಯು ಮಂದಿರದಲ್ಲಿ ಶಾರದೆಯು ಸಾಕ್ಷಾತ್ತಾಗಿ ನೆಲೆಸಿದ್ದಳು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಹೀಗಾಗಿಯೇ ಶಾರದಾ ಮಂದಿರದಲ್ಲಿ ಮತ್ತು ವಿಗ್ರಹದಲ್ಲಿ ಜೀವಂತಿಕೆಯ ಅನುಭವಗಳನ್ನು ದಾಖಲಿಸಿರುವ ವಿವರಗಳು ನಮಗೆ ದೊರೆಯುತ್ತವೆ. 
ಇಂತಹ ಖ್ಯಾತಿಯನ್ನು ಹೊಂದಿರುವ ಶಾರದಾ ಪೀಠ ಜ್ಞಾನಿಗಳಿಗೆ ಪಂಡಿತರಿಗೆ ಆಕರ್ಷಣೀಯ ಕೇಂದ್ರವಾಗಿತ್ತು.  ದೇಶ ವಿದೇಶಗಳಿಂದ ಇಲ್ಲಿಗೆ ವಿದ್ಯಾರ್ಜನೆಗಾಗಿ ಬರುತ್ತಿದ್ದರು. ಇತಿಹಾಸವು ತಿಳಿಸುವಂತೆ ಶಾರದಾ ಪೀಠವಿರುವ ಪ್ರದೇಶ ಮತ್ತು ಸುತ್ತಮುತ್ತ ಬೌದ್ಧ ವಿಹಾರಗಳಿದ್ದುದ್ದಕ್ಕೆ  ದಾಖಲೆಗಳಿಗಳಿವೆ. 631 ರಲ್ಲಿ ಹ್ಯುಯನ್ ತ್ಸಾಂಗ್ ಕಾಶ್ಮೀರಕ್ಕೆ ಬಂದಾಗ ಅಲ್ಲಿನ ದೊರೆಯು ಅವನನ್ನು ಎದುರುಗೊಂಡು ಅವನ ಅಧ್ಯಯನಕ್ಕೆ ಬೇಕಾದ ಅನುಕೂಲತೆಗಳನ್ನು ಕಲ್ಪಿಸಿಕೊಡುತ್ತಾನೆ. ಸೂತ್ರಗಳು ಮತ್ತು ಶಾಸ್ತ್ರಗಳನ್ನು ಕಲಿಯಲು ಬಂದಿದ್ದ ಅವನಿಗೆ ದೊರೆಯು ಇಪ್ಪತ್ತು ಮಂದಿ ಬರಹಗಾರರನ್ನು ಒದಗಿಸಿಕೊಡುತ್ತಾನೆ. ಆತ ತನಗೆ ಬೇಕಾದ ಗ್ರಂಥಗಳ ಪ್ರತಿ ಮಾಡಿಸಿಕೊಂಡು ಹೋಗುತ್ತಾನೆ ಎಂದು ಇದರಿಂದ ತಿಳಿದುಬರುತ್ತದೆ.
ಹತ್ತನೇ ಶತಮಾನದಲ್ಲಿ ಬರುವ ಪರ್ಷಿಯನ್ ಪ್ರವಾಸಿ ಆಲ್ಬೆರುನಿ ಶಾರದಾ ಮಂದಿರವನ್ನು ವರ್ಣಿಸುವುದರ ಜೊತೆಗೆ ಮಂದಿರವನ್ನು ಸೋಮನಾಥೇಶ್ವರ, ಥಾಣೇಶ್ವರ ಮತ್ತು ಮುಲ್ತಾನಿನ ದೇವಾಲಯಗಳಿಗೆ ಹೋಲಿಸುತ್ತಾನೆ. ಪ್ರಸ್ತುತ ಶಾರದಾ ಪೀಠವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. 2005 ರ ಭೂಕಂಪನದಿಂದಾಗಿ ಮಂದಿರದ ಬಹುಭಾಗ ನಷ್ಟವಾಗಿ ಮಂಟಪವೊಂದು ಮಾತ್ರ ಉಳಿದಿದೆ. ಇದೇ ಗರ್ಭಗೃಹವೇ ಅಥವಾ ಬೇರೆ ಭಾಗವೇ ಎಂದು ಖಚಿತವಾಗಿ ಈ ವರೆಗೆ ತಿಳಿದಿಲ್ಲ. ಆದರೂ ಅದು ಶಾರದಾ ಪೀಠ ಎನ್ನುವ ಕಾರಣದಿಂದ ನಮಗೆ ಪೂಜನೀಯವಾಗಿದೆ. ದಕ್ಷಿಣ ಭಾರತದವರಿಗೆ ಶಾರದಾ ಪೀಠ, ಶಂಕರಾಚಾರ್ಯರು ಆರೋಹಣ ಮಾಡಿದ ಸರ್ವಜ್ಞಪೀಠವೆನ್ನುವ ಭಾವನೆಯಿಂದ ಪವಿತ್ರ ಕ್ಷೇತ್ರವಾಗುತ್ತದೆ. ಕಾಶ್ಮೀರದವರಿಗೆ ಶಾರದಾ ದೇಶ, ಶಾರದಾ ಲಿಪಿ, ಶಾರದಾ ಗ್ರಾಮ, ಶಾರದಾಮಂದಿರ, ಕುಲದೇವತೆ ಹೀಗೆ ಕಣಕಣದಲ್ಲಿ ಬೆರೆತುಹೋದ ಪುಣ್ಯ ಭೂಮಿಯಾಗಿ ಪೂಜನೀಯಳಾಗುತ್ತಾಳೆ. ಒಟ್ಟಾರೆಯಾಗಿ ಆ ಸನ್ನಿಧಿಗೆ ಹೋಗಲು ಎಲ್ಲರ ಮನಸ್ಸೂ ತುಡಿಯುತ್ತಿದೆ. ಆ ಕಾಲವು ತ್ವರಿತವಾಗಿ ಬರಲಿ ಎನ್ನುವ ಉತ್ಸಾಹದಿಂದ ಮುಂದುವರಿಯುವ ಕಾಲ ಸನ್ನಿಹಿತವಾಗಿದೆ. ಭಾರತದಲ್ಲಿ ಒಂದಷ್ಟು ಸಮಾನ ಮನಸ್ಕರು ಶಾರದಾ ಪೀಠದ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಸಂಶೋಧನೆಯನ್ನು ಪ್ರಾರಂಭಿಸಿದ್ದೇವೆ.
ಶಾರದಾ ಪೀಠದ ಗತವೈಭವವನ್ನು ಪುನಃ ಕಟ್ಟಿಕೊಡುವುದು ಮೂಲ ಉದ್ದೇಶ. ಶಾರದೆಯ ಕೃಪೆಯಿಂದ ಪೂರ್ವದ ವೈಭವದೊಡನೆ ಶಾರದೆಯು ಅಲ್ಲಿ ನೆಲೆಸಲಿ ಎನ್ನುವ ಉದ್ದೇಶದಿಂದ ಸಂಶೋಧನೆಯು ಮುಂದುವರಿಯುತ್ತಿದೆ. ಈ ಮಹತ್ಕಾರ್ಯ ಸಫಲವಾಗಲು ಹಲವಾರು ಆಯಾಮಗಳಿಂದ ಅಧ್ಯಯನ ನಡೆಸಬೇಕಿದೆ. ಇದಕ್ಕೆ ಭಾರತ ಸರ್ಕಾರದ ನೆರವೂ ಬೇಕಿದೆ.  ಶಾರದಾ ಪೀಠದ ಬಗ್ಗೆ ಅರಿಯುವುದೆಂದರೆ ಅಖಂಡ ಭಾರತವನ್ನು ಅರಿತಂತೆಯೇ. ಈ ನಿಟ್ಟಿನಲ್ಲಿ ಸಂಶೋಧನೆ ಮಾಡಿದರೆ ಮಾತ್ರ ಸಾಲದು, ಜನರಲ್ಲಿ ಅರಿವೂ ಮೂಡಬೇಕು ಎನ್ನುವ ಉದ್ದೇಶದಿಂದ ಸೆ.22 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಂಕರಮಠದಲ್ಲಿ ನವದುರ್ಗಾ ಟ್ರಸ್ಟ್ ಫಾರ್ ಇಂಡಲಾಜಿಕಲ್ ಸ್ಟಡೀಸ್ ಅಂಡ್ ರಿಸರ್ಚ್ ನಿಂದ ಶಾರದಾ ಸರ್ವಜ್ಞಪೀಠ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾದ ಗೌರಿಶಂಕರ್, ಖ್ಯಾತ ಅಂಕಣಕಾರರು, ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ, ಕಾಶ್ಮೀರ ಶಾರದಾ ಪೀಠದ ಕುರಿತು ಸಂಶೋಧನೆ ಮಾಡಿರುವ ಡಾ.ಬಿ.ಆರ್ ಭಾರತಿ, ಸೇವ್ ಶಾರದಾ ಸಮಿತಿಯ ಅಧ್ಯಕ್ಷರಾದ ರವೀಂದರ್ ಪಂಡಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- ಡಾ.ಬಿ.ಆರ್ ಭಾರತೀ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com