ದೀಪಾವಳಿ ಎಂದರೇನು, ಎಷ್ಟು ದಿನಗಳ ಹಬ್ಬ, ದೀಪಗಳಿಗೇನು ಮಹತ್ವ?

ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ, ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ.

Published: 12th November 2020 09:52 PM  |   Last Updated: 14th November 2020 10:12 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : Online Desk

ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ, ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ.

ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. 

ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ.

ದೀಪಾವಳಿ ಎನ್ನುವುದು ವಿಶೇಷವಾಗಿ ಋತು ಉತ್ಸವ. ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನು, ಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು, ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ. ಹೀಗಾಗಿ ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತದೆ. ಪ್ರಕೃತಿಯಲ್ಲಿ ನಾವು ಲಕ್ಷ್ಮಿ ದೇವಿಯನ್ನು ಕಾಣುತ್ತೇವೆ. ನಾವು ಯಾವುದೇ ಪ್ರದೇಶದಲ್ಲಿ ಜೀವಿಸುತ್ತಿರಲಿ, ಆಯಾ ಪರಿಸರದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಭಗವಂತನ ಕೃಪೆ, ಲಕ್ಷ್ಮಿಯ ಲೀಲಾವಿಲಾಸ ಎಂದು ಭಾವಿಸಿ ನಾವು ಋತುಗಳ ಹಬ್ಬವನ್ನು ಆಚರಿಸುತ್ತೇವೆ. 

ದೀಪಗಳ ತುದಿ ಸರ್ವತೋಮುಖವಾಗಿದೆ, ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ.ಆದರೆ ದೀಪದ ಗಮನ ಊರ್ದ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸು ಕೂಡ ಸದಾ ಊರ್ದ್ವಗಾಮಿಯಾಗಿರಬೇಕು, ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿದೆ. 

ವೇದಗಳ ಕಾಲದಲ್ಲಿ, ಎಲ್ಲವೂ ಕೂಡ ಋತೋತ್ಸವಗಳೇ, ದೀಪಾವಳಿಗೆ ಯಕ್ಷರಾತ್ರಿ ಎಂದು ಕರೆಯುತ್ತೇವೆ, ವೇದದಲ್ಲಿ ಬರುವ ಶ್ರೀಸೂಕ್ತದಲ್ಲಿ ಮಣಿನಾಸಹ ಎಂಬುದಿದೆ, ಅಂದರೆ ಲಕ್ಷ್ಮಿಯನ್ನು ಇಲ್ಲಿ ಯಕ್ಷನ ತಂಗಿಯಾಗಿ ಕಾಣಲಾಗುತ್ತದೆ. ಯಕ್ಷರು ನಮಗೆ ಹಣವನ್ನು ಕೊಡುವಂತವರು.ರಾತ್ರಿ ಕಾಲದಲ್ಲಿ ಯಕ್ಷರನ್ನು ಪೂಜೆ ಮಾಡಲಾಗುತ್ತದೆ. ಕುಬೇರ ಯಕ್ಷರ ಅಧಿಪತಿ. ಕುಬೇರನನ್ನು ಮತ್ತು ಅವನ ತಂಗಿಯಾದ ಲಕ್ಷ್ಮಿ ಇವರಿಬ್ಬರನ್ನು ಪೂಜಿಸಿ ಧನಸಂಪತ್ತಿನೊಂದಿಗೆ ಬಾ ಎಂದು ಭಕ್ತಿಯಿಂದ ಆರಾಧಿಸುತ್ತೇವೆ ಎನ್ನುತ್ತಾರೆ ವಿಭು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ, ಸಂಸ್ಕೃತ ಮತ್ತು ಸಂಗೀತ ವಿದುಷಿ, ತರಬೇತಿ ತಜ್ಞರು, ಸಂಸ್ಕೃತಿ ಚಿಂತಕರಾದ ಡಾ ಆರತಿ ವಿ.ಬಿ.

ಇದನ್ನು ಕಾರ್ತಿಕ ದೀಪೋತ್ಸವ ಎಂದು ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ. ಹೀಗಾಗಿ ದೀಪಗಳ ಆವಳಿ ಅಂದರೆ ಸಾಲು ಸಾಲು ದೀಪಗಳನ್ನು ಬೆಳಗಿ ಕತ್ತಲೆಯನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಾವಳಿ ಕಳೆದ ನಂತರ ಚಳಿಗಾಲ ಆರಂಭವಾಗುತ್ತದೆ. 

ದೀಪಾವಳಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಹಬ್ಬ. ಭಾರತದ ಮೇಲೆ ಆಕ್ರಮಣಕಾರರು ದಾಳಿ ಮಾಡಿದ ಮೇಲೆ ಭೂಭಾಗ ತುಂಡು ತುಂಡಾಗಿ ಹೋಯಿತು. ಮೊದಲು ಆಫ್ಘಾನಿಸ್ತಾನದಿಂದ ಬರ್ಮಾವರೆಗೆ, ಶ್ರೀಲಂಕಾ, ಕಾಂಬೋಡಿಯಾ,ವಿಯೆಟ್ನಾಂ ಅವೆಲ್ಲವೂ ಕೂಡ ಸಾಂಸ್ಕೃತಿಕ ಭಾರತದ ಭಾಗವಾಗಿತ್ತು. ಅಲ್ಲೆಲ್ಲ ಕೂಡ ದೀಪಾವಳಿಯ ಕಾರ್ತಿಕೋತ್ಸವವನ್ನು ಬೇರೆ ಬೇರೆ ತರದಲ್ಲಿ ಆಚರಣೆ ಮಾಡುತ್ತಾರೆ.

ಜೈನರಿಗೆ ಇದು ಮೋಕ್ಷ್ಮ ಲಕ್ಷ್ಮಿ ಪೂಜೆ. ಇಡೀ ವರ್ಷ ಅವರು ಧನಲಕ್ಷ್ಮಿ ಪೂಜೆ ಮಾಡುತ್ತಾರೆ. ದೀಪಾವಳಿ ಹಿಂದಿನ ದಿನ ಮೋಕ್ಷ್ಮಲಕ್ಷ್ಮಿ ಪೂಜೆ ಮಾಡುತ್ತಾರೆ. ವೈರಾಗ್ಯದ ದೃಷ್ಟಿಯಿಂದ ದಾನ, ಉಪವಾಸ ಮಾಡುತ್ತಾರೆ. ನಮ್ಮಲ್ಲಿ ದೀಪಾವಳಿ ಅಮಾವಾಸ್ಯೆ ದಿನ ಕೇದಾರೇಶ್ವರ ವ್ರತ ಮಾಡುತ್ತೇವೆ. ಕೆಲವರು ಕೇದಾರ ಗೌರಿ ವ್ರತ ಮಾಡುತ್ತಾರೆ. ಶಿವನ ವ್ರತವೇ ಕೇದಾರ ವ್ರತವಾಗಿರುತ್ತದೆ.

ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆಯಿರುತ್ತದೆ. 

ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಒಟ್ಟಿನಲ್ಲಿ ಇದು ಈ ದೇಶದಲ್ಲಿ ಹುಟ್ಟಿರುವ ಮೂಲತಃ ಭಾರತೀಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು ಸಿಖ್ಖರು, ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ. 

 

Stay up to date on all the latest ಭವಿಷ್ಯ-ಆಧ್ಯಾತ್ಮ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp